ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಂಬಳ: ವ್ಯರ್ಥವಾಗಿ ಹರಿಯುತ್ತಿರುವ ಕೆರೆ ನೀರು

ಅಧಿಕಾರಿಗಳ ನಿರ್ಲಕ್ಷ್ಯ: ನೀರು ಸರಿಯಾಗಿ ಸಿಗದೇ ಬೆಳೆ ಒಣಗುವ ಆತಂಕ
Published 19 ಜುಲೈ 2024, 4:44 IST
Last Updated 19 ಜುಲೈ 2024, 4:44 IST
ಅಕ್ಷರ ಗಾತ್ರ

ಡಂಬಳ: ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಪರಿಣಾಮ ಶಿಂಗಟಾಲೂರ ಏತ ನೀರಾವರಿ ಯೋಜನೆಯಡಿ ಬೃಹತ್ ಕಾಲುವೆ ಮೂಲಕ ಡಂಬಳದ ಕೆರೆಗೆ ಹಲವು ದಿನಗಳಿಂದ ನೀರು ಹರಿಸಲಾಗುತ್ತಿದೆ. ಆದರೆ, ಮದಗ (ಗೇಟ್) ಬೆಂಡ್‌ ಆಗಿರುವ ಪರಿಣಾಮ ನೀರು ಕೆರೆಯಲ್ಲಿ ಸಂಗ್ರಹವಾಗದೇ ಹಳ್ಳ ಮತ್ತು ಡಾಂಬರು ರಸ್ತೆಯಲ್ಲಿ ಹರಿದು ವ್ಯರ್ಥವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ಮಳೆ ಮತ್ತು ಕೆರೆಯ ನೀರು ನಂಬಿ ಈಗಾಗಲೇ ರೈತರು ಈರುಳ್ಳಿ, ಹತ್ತಿ, ಮೆಕ್ಕೆಜೋಳ ಸೇರಿದಂತೆ ಇನ್ನಿತರೆ ಧಾನ್ಯಗಳನ್ನು ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಈಗ ಸರಿಯಾಗಿ ನೀರು ಸಿಗದೇ ಬೆಳೆಗಳು ಒಣಗುವ ಆತಂಕ ಎದುರಾಗಿದೆ.

ಬೇಸಿಗೆ ಸಮಯದಲ್ಲಿ ಕೆರೆ ಖಾಲಿ ಇದ್ದರೂ ಗೇಟ್‌ ದುರಸ್ತಿ ಮಾಡಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಖಂಡನೀಯ. ಪ್ರತಿ ವರ್ಷ ಒಂದಿಲ್ಲ ಒಂದು ಸಮಸ್ಯೆ ಸೃಷ್ಟಿಯಾಗುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ.

‘ನಮ್ಮ ಭಾಗದಲ್ಲಿ ಮಳೆ ಆಗದಿದ್ದರೂ ಮಲೆನಾಡು ಭಾಗದಲ್ಲಿ ಜೋರು ಮಳೆಯಾದರೆ ತುಂಗಭದ್ರಾ ನೀರು ಹರಿದು ಬರುತ್ತದೆ. ಹಮ್ಮಿಗಿ ಬ್ಯಾರೇಜ್‌ನಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಮಾಡಿ ಡಂಬಳ, ಪೇಠಾಲೂರ, ಮುರಡಿ, ಬಸಾಪೂರ, ಜಂತಲಿಶಿರೂರ ಮುಂತಾದ ಗ್ರಾಮದ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಯ ಕಾಲುವೆ ಮೂಲಕ ಕೆರೆಗೆ ನೀರು ಭರ್ತಿ ಮಾಡಲಾಗುತ್ತದೆ. ಆದರೆ, ನಮ್ಮ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾಲುವೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮದಗ ಬೆಂಡ್ ಆದ ಪರಿಣಾಮ ನೀರು ಕೆರೆಯಲ್ಲಿ ಸಂಗ್ರಹವಾಗದೆ ಹಳ್ಳ ಮತ್ತು ಇತರೆ ಭಾಗದಲ್ಲಿ ವ್ಯರ್ಥವಾಗಿ ಹರಿಯುತ್ತಿದೆ’ ಎಂದು ಸ್ಥಳೀಯ ರೈತ ಮುದಿಯಪ್ಪ ಗದಗಿನ ತಿಳಿಸಿದ್ದಾರೆ.

‘ತೇವಾಂಶದ ಕೊರತೆ ಪರಿಣಾಮ ಬಿತ್ತಿದ ಬೀಜಗಳು ಮೊಳಕೆ ಒಡೆಯುತ್ತಿಲ್ಲ. ಸಮಸ್ಯೆ ಬಗೆಹರಿಸಿ, ನೀರಿನ ಸಂಗ್ರಹಕ್ಕೆ ಕ್ರಮವಹಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಕೆರೆಯ ಕಾಲುವೆ ದುರಸ್ತಿ ಮತ್ತು ಇತರೆ ನಿರ್ವಹಣೆಗೆ ಪ್ರತಿ ವರ್ಷ ಇಂತಿಷ್ಟು ಅನುದಾನ ಮೀಸಲಿಡಬೇಕು’ ಎಂದು ಆಗ್ರಹಿಸುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಬಂಡಿ.

ಡಂಬಳ ಕೆರೆಯ ಕೆರೆಯ ಗೇಟ್‌ ಅರ್ಧಭಾಗ ಬೆಂಡ್‌ ಆಗಿರುವ ಪರಿಣಾಮ ನೀರು ರಸ್ತೆಯಲ್ಲಿ ಹರಿಯುತ್ತಿರುವುದು
ಡಂಬಳ ಕೆರೆಯ ಕೆರೆಯ ಗೇಟ್‌ ಅರ್ಧಭಾಗ ಬೆಂಡ್‌ ಆಗಿರುವ ಪರಿಣಾಮ ನೀರು ರಸ್ತೆಯಲ್ಲಿ ಹರಿಯುತ್ತಿರುವುದು
ಮದಗ ಬೆಂಡ್‌ ಆದ ಪರಿಣಾಮ ನೀರು ಹಳ್ಳಕ್ಕೆ ಹೋಗುತ್ತಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಿ ರೈತರ ಜಮೀನುಗಳಿಗೆ ಸರಾಗವಾಗಿ ಕಾಲುವೆ ಮೂಲಕ ನೀರು ಹರಿಯುವಂತೆ ಮಾಡಲಾಗುವುದು
ಪ್ರವೀಣ ಪಾಟೀಲ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT