ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನರಾಯಪಟ್ಟಣ: ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಚಿಂತನೆ

Published 14 ಜೂನ್ 2024, 12:36 IST
Last Updated 14 ಜೂನ್ 2024, 12:36 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಸ ಸಂಗ್ರಹಿಸಿ ಅದರಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದೇ ವಿಧಾನವನ್ನು ಅನುಸರಿಸಿ ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣದಲ್ಲಿಯೂ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶ ಇದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ತಾಲ್ಲೂಕಿನ ನಲ್ಲೂರು ಬಳಿ ಪುರಸಭೆಗೆ ಸೇರಿದ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ 2023-24ನೇ ಸಾಲಿಗೆ 15ನೇ ಹಣಕಾಸು ಯೋಜನೆಯಡಿ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ₹32.99 ಲಕ್ಷ ವೆಚ್ಚದಲ್ಲಿ ಖರೀದಿಸಿರುವ ಜೆಸಿಬಿ ಹಾಗೂ ಅಂಗವಿಕಲ ಫಲಾನುಭವಿಗೆ ನಾಲ್ಕು ಚಕ್ರದ ವಾಹನ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸದ್ಯ ನಲ್ಲೂರು ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಕಸದಿಂದ 350 ಟನ್ ರಸಗೊಬ್ಬರ ಉತ್ಪಾದನೆ ಮಾಡಿ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದಿಸುವ ಚಿಂತನೆ ಇದೆ. ಘನತ್ಯಾಜ್ಯ ವಿಲೇವಾರಿ ಘಟಕ 21 ಎಕರೆ ಪ್ರದೇಶದಲ್ಲಿದೆ. ಶ್ರವಣಬೆಳಗೊಳದಲ್ಲಿನ ಕಸವನ್ನು ನಲ್ಲೂರು ಘನ ತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಚನ್ನರಾಯಪಟ್ಟದಲ್ಲಿರುವ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳನ್ನು ಹಂತಹಂತವಾಗಿ ನಲ್ಲೂರು ಘಟಕಕ್ಕೆ ಕರೆತಂದು ಯಾವರೀತಿ ಕಸವಿಲೇವಾರಿ ಮಾಡಲಾಗುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಚನ್ನರಾಯಪಟ್ಟಣ ಪುರಸಭೆ ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿದೆ. ಪಟ್ಟಣದಲ್ಲಿ ₹3.25 ಕೋಟಿ ವೆಚ್ಚದಲ್ಲಿ ಪುರಭವನದ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ಹೆಚ್ಚುವರಿಯಾಗಿ ₹3 ಕೋಟಿ ಅಗತ್ಯ ಇದೆ. ಇದಲ್ಲದೇ 3 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಪಟ್ಟಣದ ಬಡಾವಣೆಗಳು ವಿಸ್ತಾರವಾದಂತೆ ಅದಕ್ಕನುಸಾರವಾಗಿ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗುವುದು. ಅಂದಾಜು ₹20 ಲಕ್ಷ ವೆಚ್ಚದಲ್ಲಿ ಮೂರು ಕಡೆ ಸುಲಭ್ ಶೌಚಾಲಯ ನಿರ್ಮಿಸಲಾಗುವುದು. ಎಸ್‍ಎಫ್‍ಸಿ ಯೋಜನೆಯಡಿ ₹6 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ಪಟ್ಟಣದಲ್ಲಿ 250 ಎಕರೆ ಸರ್ಕಾರಿ ಜಾಗ ಇದ್ದು, ಕೈಗಾರಿಕೆ ಸ್ಥಾಪಿಸಲು ಕಾಯ್ದಿರಿಸಲಾಗಿದೆ. ಒಂದು ವರ್ಷದಿಂದ ಅನುದಾನದ ಕೊರತೆ ಇದೆ. ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಅಭಿವೃದ್ದಿಗೆ ಒತ್ತು ನೀಡಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಪರಿಸರವಾದಿ ಸಿ.ಎನ್. ಅಶೋಕ್ ಮಾತನಾಡಿ, ನಲ್ಲೂರು ಗ್ರಾಮದ ಬಳಿ ಇರುವ ಘನ ತ್ಯಾಜ್ಯವಸ್ತುಗಳ ವಿಲೇವಾರಿ ಘಟಕ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಇದರ ಆವರಣದಲ್ಲಿ 1,500 ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಬಿ.ಎಂ. ಗೋವಿಂದರಾಜು, ಪುರಸಭಾ ಸದಸ್ಯರಾದ ಎಚ್.ಎನ್. ನವೀನ್, ರಾಧಾ, ಲಕ್ಷ್ಮಿ, ಸುಜಾತಾ, ರಾಣಿ, ಮುಖ್ಯಾಧಿಕಾರಿ ಕೆ.ಎನ್. ಹೇಮಂತ್, ಪುರಸಭೆಯ ಅಧಿಕಾರಿಗಳಾದ ಕಾವ್ಯಾ, ಶಾರದಮ್ಮ, ರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT