ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು: ಇಬ್ಬಿಡು ಗ್ರಾಮ ಪಂಚಾಯಿತಿಗೆ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಎಚ್.ಎಸ್. ಅನಿಲ್ ಕುಮಾರ್
Published : 1 ಅಕ್ಟೋಬರ್ 2024, 6:55 IST
Last Updated : 1 ಅಕ್ಟೋಬರ್ 2024, 6:55 IST
ಫಾಲೋ ಮಾಡಿ
Comments

ಹಳೇಬೀಡು: ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಸಮರ್ಪಕವಾಗಿ ಸಂಪನ್ಮೂಲಗಳ ಬಳಕೆ ಮಾಡಿಕೊಂಡು ಮುನ್ನಡೆಯುತ್ತಿರುವುದರಿಂದ ಮಾದಿಹಳ್ಳಿ ಹೋಬಳಿಯ ಇಬ್ಬಿಡು ಗ್ರಾಮ ಪಂಚಾಯಿತಿಗೆ 2023–24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ದೊರಕಿದೆ. ಸತತ ಎರಡನೇ ಬಾರಿಗೆ ಈ ಗೌರವಕ್ಕೆ ಪಾತ್ರವಾಗಿದೆ.

ಅ.2ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ನಾಮಫಲಕ, ಪ್ರಮಾಣಪತ್ರ ಹಾಗೂ ₹5 ಲಕ್ಷ ಬಹುಮಾನ ಒಳಗೊಂಡಿದೆ.

16 ಹಳ್ಳಿಗಳನ್ನು ಹೊಂದಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8,088 ಜನಸಂಖ್ಯೆ ಇದೆ. 14 ಮಂದಿ ಚುನಾಯಿತ ಸದಸ್ಯರಿದ್ದಾರೆ. ಪ್ರತಿ ಕುಟುಂಬವೂ ಶೌಚಾಲಯ ಹೊಂದಿರುವುದರಿಂದ ಬಯಲು ಬಹಿರ್ದೆಸೆ ತೀರಾ ಕಡಿಮೆಯಾಗಿದೆ. ಗ್ರಾಮಗಳಲ್ಲಿ ಆರೋಗ್ಯಕರ ಪರಿಸರ ಸೃಷ್ಟಿಯಾಗುತ್ತಿದೆ. ಸ್ವಚ್ಛ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

‘ಪ್ರಶಸ್ತಿ ಆಯ್ಕೆಗೆ ಪ್ರತಿ ಗ್ರಾಮ ಪಂಚಾಯಿತಿಗೂ 500 ಪ್ರಶ್ನೆಗಳನ್ನು ಕೇಳಲಾಗಿತ್ತು. ಇಬ್ಬಿಡು ಗ್ರಾಮ ಪಂಚಾಯಿತಿಗೆ ಹಾಸನ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ 442 ಅಂಕ ಬಂದಿದ್ದು, ಪಂಚಾಯಿತಿಗೆ ಪ್ರಶಸ್ತಿ ಸಂದಿದೆ. ಸಾಮಾನ್ಯ ಸಭೆ, ವಾರ್ಡ್‌ ಸಭೆ, ಗ್ರಾಮ ಸಭೆಗಳನ್ನು ನಿಗದಿತ ಸಮಯಕ್ಕೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಕೈಗೊಂಡ ಕಾರ್ಯವೈಖರಿಯನ್ನು ಸಹ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ’ ಎಂದು ಪಿಡಿಒ ರವಿಕುಮಾರ್ ಹೇಳಿದರು.

‘ಅಧಿಕಾರಿಗಳು ಹಾಗೂ ನೌಕರ ವರ್ಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರಿಂದ ಪ್ರಶಸ್ತಿ ಬಂದಿದೆ. ತೆರಿಗೆ ವಸೂಲಿ ಹಾಗೂ ಸಮರ್ಪಕ ಲೆಕ್ಕಾಚಾರವನ್ನು ಕಚೇರಿ ಸಿಬ್ಬಂದಿ ನಿರ್ವಹಿಸಿದ್ದಾರೆ. ನೀರುಗಂಟಿ ಮೊದಲಾದ ನೌಕರರು ಸಮಯ ಮೀರಿ ಕೆಲಸ ಮಾಡಿದ್ದಾರೆ. ಗಾಂಧಿ ಗ್ರಾಮ ಪುರಸ್ಕಾರ ಇಬ್ಬಿಡು ಗ್ರಾಮ ಪಂಚಾಯಿತಿಯ ಸಣ್ಣ ನೌಕರರಿಂದ ಎಲ್ಲ ಸದಸ್ಯರು ಹಾಗೂ ಅಧಿಕಾರಿ ವರ್ಗಕ್ಕೆ ಸಲ್ಲುತ್ತದೆ. ಪಂಚಾಯಿತಿಯ ಗ್ರಾಮಗಳನ್ನು ಸಂಪೂರ್ಣ ಸ್ವಚ್ಛ ಗ್ರಾಮಗಳನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT