ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು | ನಿರಂತರ ಮಳೆ: ತರಕಾರಿ ಬೆಳೆಗೆ ಹೊಡೆತ

ಹೆಚ್ಚಿದ ತೇವಾಂಶ, ಬೆಳೆಗಳಿಗೆ ರೋಗ ಬಾಧೆ: ಬೆಳವಣಿಗೆ ಕುಂಠಿತ
Published 26 ಜುಲೈ 2024, 5:31 IST
Last Updated 26 ಜುಲೈ 2024, 5:31 IST
ಅಕ್ಷರ ಗಾತ್ರ

ಹಳೇಬೀಡು: ನಿರಂತರ ಮಳೆಯಿಂದ ಅಲ್ಪಾವಧಿ ಬೆಳೆಗಳು ಹಾಳಾಗುತ್ತಿದ್ದು, ಹಳೇಬೀಡು ಭಾಗದ ರೈತರು ತತ್ತರಿಸಿದ್ದಾರೆ. ಜಮೀನಿಗೆ ಇಳಿಯಲು ಅವಕಾಶ ಇಲ್ಲದಂತೆ ಮಳೆ ಸುರಿಯುತ್ತಿದ್ದು, ಕೃಷಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಕೃಷಿ ಚಟುವಟಿಕೆ ಸ್ಥಗಿತವಾಗಿದೆ.

ಹಳೇಬೀಡು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ಹೆಚ್ಚಿನ ತೇವಾಂಶದಿಂದ ಬೆಳೆ ಕುಂಠಿತವಾಗಿದೆ. ಮಳೆಯ ರಭಸವನ್ನು ಬೆಳೆ ತಡೆದುಕೊಳ್ಳುತ್ತಿಲ್ಲ. ನೀರು ನಿಲ್ಲದಂತಹ ಎತ್ತರದ ಜಮೀನಿನಲ್ಲಿಯೂ ಬೆಳೆ ಸೊರಗುತ್ತಿದೆ. ತರಕಾರಿಗೆ ಬೆಲೆ ಇದ್ದರೂ, ಫಸಲು ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.

‘ಟೊಮ್ಯಾಟೊ, ಮೆಣಸು, ಬಿನ್ಸ್, ಎಲೆಕೋಸು ಬೆಳೆಗಳಿಗೆ ಮಳೆಯಿಂದ ಹಾನಿಯಾಗಿದೆ. ಮೋಡ ಕಟ್ಟಿರುವುದರಿಂದ ನಾಟಿ ಮಾಡಿದ ಟೊಮ್ಯಾಟೊ ಮೇಲೇಳಲು ಸಾಧ್ಯವಾಗುತ್ತಿಲ್ಲ. ಬೆಳೆ ಇದ್ದರೂ ರೈತರಿಗೆ ಸಮರ್ಪಕ ಫಸಲು ದೊರಕದೇ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತ ಮತಿಘಟ್ಟ ನಾಗೇಗೌಡ ಸಮಸ್ಯೆ ಬಿಚ್ಚಿಟ್ಟರು.

‘ಮೆಣಸಿನ ಗಿಡದ ಸ್ಥಿತಿ ಹೇಳಲು ಅಸಾಧ್ಯವಾಗಿದೆ. ಮುದುರುಗುಡಿ ಹಾಗೂ ಕೊಳೆ ರೋಗ ಮಣಸಿನ ಬೆಳೆಯನ್ನು ಬಾಧಿಸುತ್ತಿದೆ. ಒಂದು ಎಕರೆ ಜಮೀನಲ್ಲಿ 10ಸಾವಿರ ಮೆಣಸಿನ ಗಿಡ ನಾಟಿ ಮಾಡಿದ್ದೇವೆ. ಪಕ್ಕದ ಜಮೀನಿನ ಕೃಷಿ ಪಂಪ್‌ಸೆಟ್‌ನಿಂದ ₹10ಸಾವಿರಕ್ಕೆ ನೀರು ಖರೀದಿ ಮಾಡಿ ಬೆಳೆಗಳಿಗೆ ಹರಿಸಲಾಗಿತ್ತು. ಕಳೆ ತೆಗೆಯಲು, ಗೊಬ್ಬರ ಹಾಕುವುದಕ್ಕೆ ಹಾಗೂ ಔಷಧ ಸಿಂಪಡಣೆ ಸೇರಿದಂತೆ ₹50ಸಾವಿರ ವೆಚ್ಚ ಮಾಡಲಾಗಿದೆ. ಇನ್ನೇನೂ ಹೂವಾಗಬೇಕು ಎನ್ನುವಷ್ಟರಲ್ಲಿ ಮಳೆ ಸುರಿಯುತ್ತಿದೆ. ಕುಡಿ ಮುದುರಿ, ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ಮೆಣಸಿನ ಗಿಡ ತೆಗೆದು ಬೇರೆ ಬೆಳೆ ಮಾಡುವುದಕ್ಕೂ ಮಳೆ ಬಿಡುವು ಕೊಡುತ್ತಿಲ್ಲ. ಮುಂದೇನೂ ಎಂಬ ಚಿಂತೆ ಕಾಡುತ್ತಿದೆ’ ಎಂದು ಹರುಬಿಹಳ್ಳಿಯ ರೈತ ಪುಟ್ಟೇಗೌಡ ಅಳಲು ತೊಡಿಕೊಂಡರು.

‘ಎಲೆಕೋಸಿನ ಗಿಡಗಳು ಗಡ್ಡೆ ಕಟ್ಟುವ ಮೊದಲೇ ನಿತ್ರಾಣ ಸ್ಥಿತಿಯಲ್ಲಿವೆ. ಗಡ್ಡೆ ಕಟ್ಟುವ ಪ್ರಕ್ರಿಯೆಗೆ ಪೂರಕ ವಾತಾವರಣದ ಕೊರತೆಯಿಂದ ಬೆಳೆ ಮುದುಡುತ್ತಿದೆ. ಅತಿಯಾದ ಮಳೆಗೆ ಬೀನ್ಸ್ ಬೆಳೆಯಂತೂ ತಡೆಯುವುದೇ ಇಲ್ಲ. ಅತಿ ಮಳೆ ಬಿದ್ದರೆ ಹೂವು ಉದುರುತ್ತದೆ. ಕಾಯಿ ಕಟ್ಟಿದರೂ ಬೆಳೆವಣಿಗೆಯಾಗದೇ ಕೊಳೆಯುತ್ತದೆ’ ಎಂದು ಹುಲಿಕೆರೆ ಸೋಮಶೇಖರ್ ತಿಳಿಸಿದರು.

ಹಳೇಬೀಡು ಸಮೀಪದ ಹರುಬಿಹಳ್ಳಿಯಲ್ಲಿ ನಿರಂತರ ಮಳೆಗೆ ಮರುಟಿರುವ ಮೆಣಸಿನ ಗಿಡಗಳನ್ನು ತೋರಿಸುತ್ತಿರುವ ರೈತ.
ಹಳೇಬೀಡು ಸಮೀಪದ ಹರುಬಿಹಳ್ಳಿಯಲ್ಲಿ ನಿರಂತರ ಮಳೆಗೆ ಮರುಟಿರುವ ಮೆಣಸಿನ ಗಿಡಗಳನ್ನು ತೋರಿಸುತ್ತಿರುವ ರೈತ.

ಕೃಷಿ ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಬೇಕು. ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡಬೇಕು. ರೈತರಿಗೆ ನಷ್ಟ ಪರಿಹಾರ ನೀಡಬೇಕು.

-ಪುಟ್ಟೇಗೌಡ ಹರುಬಿಹಳ್ಳಿ ರೈತ

ತರಕಾರಿ ಮೊದಲಾದ ತೊಟಗಾರಿಕೆ ಬೆಳೆಗಳಿಗೆ ರೋಗ ಕಾಣಿಸಿಕೊಂಡರೆ ನಮ್ಮನ್ನು ಸಂಪರ್ಕಿಸಿದರೆ ಬೆಳೆ ಪರಿಶೀಲಿಸಿ ಸೂಕ್ತ ಸಲಹೆ ಕೊಡಲಾಗುವುದು.

-ಸದಾಶಿವ ಕಂಬಾರ ಸಹಾಯಕ ತೋಟಗಾರಿಕಾ ಅಧಿಕಾರಿ

ಆಗ ಅತಿವೃಷ್ಟಿ ಈಗ ಅನಾವೃಷ್ಟಿ

ಕಳೆದ ವರ್ಷ ಮಳೆ ಇಲ್ಲದೇ ಬೆಳೆ ಕೈಹಿಡಿಯಲಿಲ್ಲ. ಈ ವರ್ಷ ಮಳೆ ಬಂತು ಎಂದು ಸಂತೋಷವಾಗಿದ್ದೆವು. ಆದರೆ ಅತಿವೃಷ್ಟಿಯಿಂದ ಫಸಲು ಕೈಗೆ ಸಿಗದಂತಾಗಿದೆ ಎಂದು ಅಪ್ಪಿಹಳ್ಳಿ ಅಶೋಕ ಅಳಲು ತೋಡಿಕೊಂಡರು ಮುಂಗಾರು ಹಂಗಾಮಿನ ಮುಸುಕಿನ ಜೋಳ ಹತ್ತಿ ಅಲಸಂದೆ ಸೂರ್ಯಕಾಂತಿ ಮೊದಲಾದ ಬೆಳೆಗಳಿಗೂ ಮಳೆ ಹೆಚ್ಚಾಗಿದೆ. ಹೊಲದಲ್ಲಿ ಬೆಳೆದ ಕಳೆ ತೆಗೆಯುವುದಕ್ಕೂ ಮಳೆ ಬಿಡುವು ಕೊಡುತ್ತಿಲ್ಲ ಎನ್ನುತ್ತಿದ್ದಾರೆ ರೈತರು. ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದ್ದು ಗೊಬ್ಬರ ಹಾಕಿ ಮಣ್ಣನ್ನು ಸಮಸ್ಥಿತಿಯಲ್ಲಿ ಇಡುವುದಕ್ಕೂ ಸಾಧ್ಯವಾಗುತ್ತಿಲ್ಲ. ತಗ್ಗಿನ ಜಮೀನಿನ ಪರಿಸ್ಥಿತಿಯಂತೂ ಹೇಳಲು ಅಸಾಧ್ಯವಾಗಿದೆ. ಎರೆಮಣ್ಣಿನ ಜಮೀನಿಗೆ ಕಾಲಿಟ್ಟರೆ ಮೊಳಕಾಲು ಉದ್ದವರೆಗೂ ಹೂತುಕೊಳ್ಳುತ್ತದೆ. ಜಮೀನಿಗೆ ಹೋಗಿ ಬರುವುದೇ ಕಷ್ಟವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT