ಮಂಗಳವಾರ, 20 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಶಿಲ್ಪಕಲೆಗಳ ತವರೂರಲ್ಲಿ ತಬ್ಬಲಿಯಾದ ಭವನಗಳು

Published 15 ಜುಲೈ 2024, 7:53 IST
Last Updated 15 ಜುಲೈ 2024, 7:53 IST
ಅಕ್ಷರ ಗಾತ್ರ

ಹಾಸನ: ಶಿಲ್ಪಕಲೆಗಳ ತವರೂರು ಎಂದೇ ಖ್ಯಾತವಾಗಿರುವ ಜಿಲ್ಲೆಯಲ್ಲಿ ಅನೇಕ ಮಹನೀಯರು ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕಲೆಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಜಿಲ್ಲಾ ಕೇಂದ್ರದಲ್ಲಿ ರಂಗಮಂದಿರ, ಅಂಬೇಡ್ಕರ್ ಭವನ, ಕಲಾಭವನ, ಸಾಂಸ್ಕೃತಿಕ ಭವನ,  ಸ್ವಾತಂತ್ರ್ಯ ಹೋರಾಟಗಾರರ ಭವನಗಳಿವೆ.

ಆದರೆ ಕೆಲ ಭವನಗಳಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಪದೇ ಪದೇ ನವೀಕರಣ ಹೆಸರಿನಲ್ಲಿ ಹಣ ದುರುಪಯೋಗ, ಸಮಯಕ್ಕೆ ಸರಿಯಾಗಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಹಣ ಪಾವತಿ ವಿಳಂಬ ಸೇರಿದಂತೆ ಅನೇಕ ಸಮಸ್ಯೆಗಳಿವೆ.

ಜಿಲ್ಲಾ ಕೇಂದ್ರದಲ್ಲಿ ಹಾಸನಾಂಬ ಕಲಾಕ್ಷೇತ್ರ ಹಲವಾರು ಬಾರಿ ನವೀಕರಣಗೊಂಡಿದೆ. ಇತ್ತೀಚೆಗೆ ₹2 ಕೋಟಿ ವೆಚ್ಚದಲ್ಲಿ ನವೀಕರಣಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅಂದಿನ ಸರ್ಕಾರ ಕೇವಲ ₹ 52 ಲಕ್ಷ ಮಂಜೂರು ಮಾಡಿತ್ತು. ಈ ಸಂದರ್ಭದಲ್ಲಿ ಕಲಾಭವನದ ಒಳಗಿನ ದ್ವನಿ, ಬೆಳಕು ಸೇರಿದಂತೆ ಕೆಲ ಆಸನಗಳನ್ನು ಬದಲಾಯಿಸಿ ನವೀಕರಣ ಮಾಡಲಾಯಿತು. ಆದರೆ ಈ ಕಾಮಗಾರಿ ಕೈಗೊಂಡ ಕಂಪನಿಗೆ ₹ 40 ಲಕ್ಷ ಬಿಡುಗಡೆ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೇ ರೀತಿ ಅನೇಕ ಸಮಸ್ಯೆಗಳು ಕಲಾಭವನ, ರಂಗಮಂದಿರದ ಅಭಿವೃದ್ಧಿಗೂ ತೊಡಕಾಗಿದೆ.

ನಗರದಲ್ಲಿ ಅಂಬೇಡ್ಕರ್ ಭವನ, ಸಾಂಸ್ಕೃತಿಕ ಭವನ, ಕನ್ನಡ ಸಾಹಿತ್ಯ ಪರಿಷತ್ ಭವನಗಳು ಹಲವು ಸಮಾರಂಭಗಳಿಗೆ ವೇದಿಕೆಯಾಗಿವೆ. ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸುಮಾರು 1 ಸಾವಿರ ಆಸನಗಳ ವ್ಯವಸ್ಥೆ ಇದ್ದು, ನಾಟಕ ಪ್ರದರ್ಶನಕ್ಕೆ ₹4ಸಾವಿರದಿಂದ ₹8ಸಾವಿರದವರೆಗೆ ಬಾಡಿಗೆ ವಿಧಿಸಲಾಗುತ್ತದೆ. ಇಲ್ಲಿ ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ವರ್ಷದ ಎಲ್ಲ ತಿಂಗಳು ನಡೆಯುತ್ತದೆ. ಅದರಲ್ಲೂ ಅಕ್ಟೋಬರ್ ಹಾಗೂ ಜನವರಿ ತಿಂಗಳ ನಡುವೆ ಹೆಚ್ಚು ಕಾರ್ಯಕ್ರಮಗಳು ನಡೆಯುತ್ತದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ ಸುನಿಲ್.

ಖಾಸಗಿ ಶಾಲೆ ಹಾಗೂ ಇತರೆ ಸಮಾರಂಭಗಳಿಗೆ ₹ 18ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ಇಷ್ಟೆಲ್ಲ ಇದ್ದರೂ ಕಲಾಭವನದ ನಿರ್ವಹಣೆ, ಮೂಲಸೌಕರ್ಯ ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ ಎನ್ನುವ ಆರೋಪ ಜನರದ್ದಾಗಿದೆ.

ಹಾಸನಂಬ ಕಲಾಕ್ಷೇತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಳಪಡುತ್ತಿದ್ದು, ಇಲಾಖೆಯ ನಿರ್ದೇಶಕರನ್ನು ಪದೇ ಪದೇ ಬದಲಾಯಿಸುವುದು ಹಾಗೂ ನಿರ್ದಿಷ್ಟವಾದ ಇಲಾಖೆಯ ಅಧಿಕಾರಿಗಳನ್ನು ನೇಮಿಸದೇ ಇರುವುದು ಕಲಾಭವನ ಕಾರ್ಯ ಚಟುವಟಿಕೆ ಹಾದಿ ತಪ್ಪಲು ಪ್ರಮುಖ ಕಾರಣವಾಗಿದೆ ಎಂದು ಕಲಾವಿದರು ಆರೋಪಿಸಿದ್ದಾರೆ.

ನಾಟಕ ಪ್ರದರ್ಶನಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕಲಾಭವನದಲ್ಲಿ ಪ್ರದರ್ಶನಕ್ಕೆ ಕಡಿಮೆ ಬಾಡಿಗೆಯನ್ನು ವಿಧಿಸಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳನ್ನು ನಾಟಕ ಕಲಾವಿದರು ಹಾಗೂ ಇತರೆ ಸಾಂಸ್ಕೃತಿಕ ಕಲಾ ತಂಡಗಳು ಮನವಿ ಮಾಡಿದರೂ, ಪುರಸ್ಕಾರ ದೊರೆತಿಲ್ಲ.

ಜಾವಗಲ್ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಸಮುದಾಯಗಳ ಉಪಯೋಗಕ್ಕಾಗಿ ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಅಂಬೇಡ್ಕರ್ ಭವನವು ನಿರ್ವಹಣೆ ಕೊರತೆಯಿಂದ ಸಂಪೂರ್ಣವಾಗಿ ಶಿಥಿಲಗೊಂಡಿದೆ. ದಶಕವೇ ಕಳೆಯುತ್ತ ಬಂದರೂ, ಭವನವನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಯಾವುದೇ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಕ್ರಮ ಕೈಗೊಳ್ಳದೇ ಇರುವುದು ಗ್ರಾಮದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮದ ಗಾಂಧಿನಗರದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ಸಮುದಾಯದ ಕುಟುಂಬಗಳೇ ಹೆಚ್ಚಾಗಿದ್ದು, ಮದುವೆ, ನಾಮಕರಣ, ನಿಶ್ಚಿತಾರ್ಥ ಮೊದಲಾದ ಸಭೆ ಸಮಾರಂಭಗಳಲ್ಲಿ ಈ ಭವನ ಬಳಕೆಯಾಗುತ್ತಿತ್ತು.

ಚುನಾವಣೆಯ ಸಂದರ್ಭದಲ್ಲಿ ಈ ಭವನವನ್ನು ಮತಗಟ್ಟೆಯಾಗಿಯೂ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಹೀಗೆ ವಿವಿಧ ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿದ್ದ ಅಂಬೇಡ್ಕರ್ ಭವನವು ಸೂಕ್ತ ನಿರ್ವಹಣೆ ಇಲ್ಲದಂತಾಗಿದೆ. ಭವನದ ಮೇಲೆ ಗಿಡ ಗಂಟಿಗಳು ಬೆಳೆದು ಭವನದ ಗೋಡೆಗಳು ಬಿರುಕು ಬಿಟ್ಟಿದ್ದು, ಸಂಪೂರ್ಣ ಭವನವೇ ಕುಸಿಯುವ ಹಂತ ತಲುಪಿದೆ.

ಅನಾಹುತಗಳು ಸಂಭವಿಸುವ ಮೊದಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಭವನವನ್ನು ದುರಸ್ತಿಗೊಳಿಸುವ ಮೂಲಕ ಹಿಂದುಳಿದ ಸಮುದಾಯದವರ ಹಿತಾಸಕ್ತಿಯನ್ನು ಕಾಪಾಡಲು ಕಾರ್ಯನಿರ್ವಹಿಸಬೇಕಾಗಿದೆ ಎಂಬುದು ಗಾಂಧಿನಗರ ನಿವಾಸಿಗಳ ಮಾತು.

ಹಳೇಬೀಡು ಭಾಗದಲ್ಲಿ ಸರ್ಕಾರಿ ಸಮುದಾಯ ಭವನಗಳು ಸಮರ್ಪಕವಾಗಿಲ್ಲ. ಪರಿಶಿಷ್ಟ ಜನಾಂಗದ ಕಾಲೊನಿಗಳಲ್ಲಿ ಕಾಟಾಚಾರಕ್ಕಾಗಿ ಅಂಬೇಡ್ಕರ್ ಭವನ ನಿರ್ಮಿಸಲಾಗಿದೆ. ಹಳೇಬೀಡಿನ ಪರಿಶಿಷ್ಟ ಕಾಲೊನಿಯ 50 ವರ್ಷದ ಹಿಂದಿನ ಭವನದಲ್ಲಿ 10 ಜನ ಕೂರುವುದಕ್ಕೂ ಜಾಗ ಇಲ್ಲದಂತೆ ಕಿಷ್ಕಿಂಧೆಯಾಗಿದೆ.

ಹಳೇಬೀಡಿನ ಬೆಣ್ಣೆ ಗುಡ್ಡದಲ್ಲಿ 15 ವರ್ಷದ ಹಿಂದೆ ಆಗಿನ ರಾಜ್ಯ ಸದಸ್ಯ ಎಚ್.ಕೆ.ಜವರೇಗೌಡ ಅನುದಾನದಡಿ ನಿರ್ಮಾಣವಾದ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡಿಲ್ಲ. ಭವನದ ಚಾವಣಿ ಮಳೆ ಗಾಳಿಯ ಹೊಡೆತಕ್ಕೆ ಸಿಲುಕಿ ನಲುಗಿದೆ. ಬೆಣ್ಣೆಗುಡ್ಡದ ಭವನಕ್ಕೆ ಕಾಯಕಲ್ಪ ದೊರಕದಿದ್ದರೆ, ಪೋಲಿ ಪುಂಡರು ಅಡ್ಡೆಯಾಗುವ‌ ಸಾಧ್ಯತೆ ಇದೆ ಎಂಬ ಆತಂಕದ ನುಡಿ ಸ್ಥಳೀಯರಿಂದ ಕೇಳಿ ಬರುತ್ತಿದೆ.

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಸಂತೋಷ್‌ ಸಿ.ಬಿ., ಸಿದ್ದರಾಜು, ಎಚ್.ಎಸ್. ಅನಿಲ್‌ಕುಮಾರ್, ದೀಪಕ್‌ ಶೆಟ್ಟಿ.

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬದಲಾಯಿಸಿರುವ ಆಸನಗಳನ್ನು ಹೊರಗಡೆ ಸಂಗ್ರಹಿಸಿ ಇಡಲಾಗಿದೆ.
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬದಲಾಯಿಸಿರುವ ಆಸನಗಳನ್ನು ಹೊರಗಡೆ ಸಂಗ್ರಹಿಸಿ ಇಡಲಾಗಿದೆ.
ಚನ್ನರಾಯಪಟ್ಟಣದ ಸಾಂಸ್ಕೃತಿಕ ಭವನ
ಚನ್ನರಾಯಪಟ್ಟಣದ ಸಾಂಸ್ಕೃತಿಕ ಭವನ
ಇದ್ದೂ ಇಲ್ಲದಂತಾದ ಭವನಗಳು
ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚು ಕಲಾವಿದರಿದ್ದಾರೆ. ಮಳೆಗಾಲ ಹೊರತುಪಡಿಸಿದರೆ  ಬಹುತೇಕ ಪ್ರತಿ ಶುಕ್ರವಾರ ಪೌರಾಣಿಕ ನಾಟಕ ಪ್ರದರ್ಶನ ಇರುತ್ತದೆ. ಜೊತೆಗೆ ಸಾಮಾಜಿಕ ನಾಟಕೋತ್ಸವ ಇರುತ್ತದೆ. ಗುರುಕಲಾ ಸಂಘದ ವತಿಯಿಂದ ಪ್ರತಿವರ್ಷ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗುತ್ತದೆ. ಕಲಾವಿದರ ಒಕ್ಕೊರಲಿನ ಫಲವಾಗಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಸರ್ಕಾರದ ವತಿಯಿಂದ 8 ವರ್ಷಗಳ ಹಿಂದೆ ಸಾಂಸ್ಕೃತಿಕ ಭವನ ನಿರ್ಮಾಣವಾಯಿತು. ಆದರೆ ಪೌರಾಣಿಕ ನಾಟಕ  ಆಯೋಜಿಸಲು ಸೌಲಭ್ಯದ ಕೊರತೆ ಇದೆ.  ಹಾಗಾಗಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಸೀನರಿ ಅಳವಡಿಸಿ ನಾಟಕ ಪ್ರದರ್ಶಿಸಲಾಗುತ್ತಿದೆ. ಬಸ್ ನಿಲ್ದಾಣದ ಸಮೀಪ ಇರುವ ಖಾಸಗಿ ಜಾಗದಲ್ಲಿ ಪೌರಾಣಿಕ ನಾಟಕೋತ್ಸವ  ಆಯೋಜಿಸುವಂತಾಗಿದೆ ಎಂಬ ಕೊರಗು ಕಲಾವಿದರದ್ದು.
ಭವನ ದುರಸ್ತಿಗೆ ಕ್ರಮ ಕೈಗೊಳ್ಳಿ
ಜಾವಗಲ್‌ನ ಭವನದ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಭವನ ದುರಸ್ತಿಗೊಳಿಸುವ ಕೆಲಸ ಮಾಡಬೇಕಿದೆ. ಮೋಹನ್ ಕುಮಾರ್ ಭೀಮ್ ಆರ್ಮಿ ಸಂಚಾಲಕ ಭವನಗಳು ಮರೀಚಿಕೆ ಸರ್ಕಾರದ ಭವನಗಳ ಸೌಲಭ್ಯ ಗ್ರಾಮೀಣ ಜನರಿಗೆ ಮರೀಚಿಕೆಯಾಗಿದೆ. ಸಾಕಷ್ಟು ಹಳ್ಳಿಯ ಪರಿಶಿಷ್ಟ ಕಾಲೊನಿಗಳು ಇಂದಿಗೂ ಭವನ ಕಂಡಿಲ್ಲ. ಭವನ ಇದ್ದರೂ ಉಪಯೋಗಕ್ಕೆ ಬಾರದಂತಾಗಿವೆ.  ಲಿಂಗರಾಜು ಡಿಎಸ್ಎಸ್ ಜಿಲ್ಲಾ ಘಟಕ ಸಂಘಟನಾ ಸಂಚಾಲಕ ಅಭಿವೃದ್ಧಿಗೆ ಪ್ರಸ್ತಾವ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಸೌರ ದೀಪ ಅಳವಡಿಸುವುದು ಜನರೇಟರ್ ಮತ್ತು ಕುಡಿಯುವ ನೀರು ಸೇರಿ ಇನ್ನಿತರೆ ಸೌಲಭ್ಯ ಒದಗಿಸಲು ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಎಚ್.ಎಲ್. ಶಂಕರಮೂರ್ತಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನರಾಯಪಟ್ಟಣ. ಕಲಾಭವನ ನಿರ್ಮಿಸಿ ಮಾಧ್ಯಮಿಕ ಶಾಲಾ ಆವಣರದ ಸಾಂಸ್ಕೃತಿಕ ಭವನದಲ್ಲಿ ಪೌರಾಣಿಕ ನಾಟಕ ಪ್ರದರ್ಶಿಸಲು ಸೂಕ್ತ ಸವಲತ್ತುಗಳಿಲ್ಲ. ಕಲಾವಿದರ ಹಿತದೃಷ್ಟಿಯಿಂದ ಕಲಾಭವನ ನಿರ್ಮಿಸಿ ಸಾಮಾಜಿಕ ಪೌರಾಣಿಕ ನಾಟಕ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಎಚ್.ಎಲ್. ನರಸಿಂಹಮೂರ್ತಿ ಕಲಾವಿದ ಚನ್ನರಾಯಪಟ್ಟಣ ಅಗತ್ಯ ಸೌಲಭ್ಯ ಒದಗಿಸಿ ಚನ್ನರಾಯಪಟ್ಟಣದ ಅಂಬೇಡ್ಕರ್ ಭವನದಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಪೂರಕ ವ್ಯವಸ್ಥೆಗಳಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನಕ್ಕೆ ಸೂಕ್ತ ಸೌಲಭ್ಯ ಒದಗಿಸಬೇಕಿದೆ. ಗೋವಿಂದರಾಜು ಕಲಾವಿದ ಭವನ ನಿರ್ಮಾಣಕ್ಕೆ ಪ್ರಸ್ತಾವ 5 ವರ್ಷದ ಹಿಂದೆ ಅಂಬೇಡ್ಕರ್ ಭವನಕ್ಕೆ ₹ 50 ಲಕ್ಷ ಮಂಜೂರಾಗಿತ್ತು. ಜಾಗ ಇಲ್ಲದೇ ಹಣ ಸರ್ಕಾರಕ್ಕೆ ಹಿಂದಿರುಗಿತ್ತು. ಈಗ ಪಂಚಾಯಿತಿಯಿಂದ 100X100 ನಿವೇಶನ ಕೊಟ್ಟಿದ್ದಾರೆ. ಭವನ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಲಿಂಗರಾಜು ಹಳೇಬೀಡು ಸಹಾಯಧನ ಹೆಚ್ಚಿಸಿ 10 ದಿನದ ನಾಟಕೋತ್ಸವಕ್ಕೆ ₹ 25 ಲಕ್ಷ ಖರ್ಚಾಗುತ್ತದೆ. ದೇಣಿಗೆ ಮತ್ತು ಕಲಾವಿದರೇ ಹಣ ಹಾಕುತ್ತಿದ್ದೇವೆ. ಸರ್ಕಾರದಿಂದ ಪ್ರತಿ ತಂಡಕ್ಕೆ ₹ 30 ಸಾವಿರ ಕೊಟ್ಟರೇ ಸಾಕಾಗುವುದಿಲ್ಲ ಕಲಾಭವನದ ಬಾಡಿಗೆಯೇ ದಿನಕ್ಕೆ ₹ 15 ಸಾವಿರ ಕೊಡಬೇಕು. ಕಲಾವಿದರಿಗೆ ಸಹಾಯಧನ ಹೆಚ್ಚಿಸಬೇಕು. ರವಿಕುಮಾರ್ ಬಿದರೆ ಹಾಸನ ಜಿಲ್ಲಾ ಕಲಾವಿದರ ವೇದಿಕೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT