ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ಕಾರಿನ ಎಂಜಿನ್‌ ಅಕ್ರಮ ಬದಲಾವಣೆ ಆರೋಪ: ಮಹೀಂದ್ರ ಕಂಪನಿಗೆ ₹75 ಸಾವಿರ ದಂಡ

Published 17 ಜನವರಿ 2024, 7:15 IST
Last Updated 17 ಜನವರಿ 2024, 7:15 IST
ಅಕ್ಷರ ಗಾತ್ರ

ಸಕಲೇಶಪುರ: ಸರ್ವೀಸ್‌ಗಾಗಿ ಬಿಟ್ಟಿದ್ದ ಹೊಸ ಕಾರಿನ ಎಂಜಿನ್‌ ಅನ್ನು ಬದಲಾಯಿಸಿದ ಆರೋಪ ಸಾಬೀತಾದ ಮೇರೆಗೆ ಮಹೀಂದ್ರ ಅಂಡ್‌ ಮಹೀಂದ್ರ ಕಂಪನಿಯ ಹಾಸನದ ಕರ್ನಾಟಕ ಏಜೆನ್ಸಿ ಶೋ ರೂಂಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹ 75 ಸಾವಿರ ದಂಡ ವಿಧಿಸಿದ್ದು, ಅದನ್ನು ಪರಿಹಾರವಾಗಿ ದೂರುದಾರ ಗ್ರಾಹಕ, ಪಟ್ಟಣದ ನಿವಾಸಿ ಕೆ.ಮೋಹನ ಕುಮಾರ್ ಅವರಿಗೆ ನೀಡಬೇಕೆಂದು ಆದೇಶಿಸಿದೆ.

ಸೇವಾ ನ್ಯೂನತೆಗಾಗಿ ₹50 ಸಾವಿರ, ಗ್ರಾಹಕರಿಗೆ ಮಾನಸಿಕ ವೇದನೆಗಾಗಿ ₹20 ಸಾವಿರ ಹಾಗೂ ದೂರಿನ ಖರ್ಚು ₹5 ಸಾವಿರ ಸೇರಿ ₹75 ಸಾವಿರವನ್ನು ನೀಡಬೇಕು ಎಂದು ಇತ್ತೀಚೆಗೆ ಆಯೋಗದ ಅಧ್ಯಕ್ಷೆ ಸಿ.ಎಂ.ಚಂಚಲಾ ಆದೇಶ ನೀಡಿದ್ದಾರೆ.

2019ರಲ್ಲಿ ದೂರುದಾರರು ಮಹೀಂದ್ರ ಎಕ್ಸ್‌ಯುವಿ 300 (KA46 M 6778) ಕಾರು ಖರೀದಿಸಿ, 2020ರ ಡಿಸೆಂಬರ್ 22ರಂದು ಸರ್ವೀಸ್‌ಗಾಗಿ ನೀಡಿದ್ದರು. ಟರ್ಬೋ ಚಾರ್ಜರ್‌ ಹಾಳಾಗಿದ್ದು, 15 ದಿನಗಳಲ್ಲಿ ರಿಪೇರಿ ಮಾಡಿಕೊಡಲಾಗುವುದು ಎಂದು ವ್ಯವಸ್ಥಾಪಕರು ಹೇಳಿದ್ದರು. ಮೂರು ತಿಂಗಳ ನಂತರ, ‌ಕಾರನ್ನು ನೀಡಿದ್ದರು. ಆದರೆ ವಾಹನದಲ್ಲಿ ಸಮಸ್ಯೆ ಕಂಡು ಬಂದಿತ್ತು. ಸ್ಥಳೀಯ ಮೆಕ್ಯಾನಿಕ್‌ನಿಂದ ಪರಿಶೀಲಿಸಿದಾಗ ಎಂಜಿನ್‌ ಬದಲಾಯಿಸಿದ್ದು ಕಂಡುಬಂದಿತ್ತು.

‘ವಾಹನ ಖರೀದಿಸಿದಾಗ ಎಂಜಿನ್‌ ನಂಬರ್ ETKZD38586 ಆಗಿತ್ತು. ರಿಪೇರಿ ಬಳಿಕ ‌ETMZA32327 ಆಗಿತ್ತು. ನನಗೆ ತಿಳಿಸದೆಯೇ ಎಂಜಿನ್‌ ಬದಲಿಸಿ ಕಂಪನಿಯು ವಂಚಿಸಿದೆ’ ಎಂದು ಮೋಹನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರು 360 ದಿನಗಳಿಂದ ಶೋರೂಂನಲ್ಲಿಯೇ ಇದೆ. ಬದಲಿ ವಾಹನವಿಲ್ಲದೆ ಸಮಸ್ಯೆ ಎದುರಿಸಿರುವೆ. ಪೊಲೀಸ್‌ ಠಾಣೆ, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಶೋ ರೂಂ ಭೇಟಿಗಾಗಿ ಸಮಯ, ಹಣ, ನೆಮ್ಮದಿ ಕಳೆದುಕೊಂಡಿದ್ದೇನೆ’ ಎಂದು ಅಲವತ್ತುಕೊಂಡರು.

‘ಶೋರೂಂ ಶಾಖಾ ವ್ಯವಸ್ಥಾಪಕ ಹೇಮಂತ್ ಹಾಗೂ ಸರ್ವೀಸ್ ವ್ಯವಸ್ಥಾಪಕ ಸಿರಿಲ್ ಫರ್ನಾಂಡೀಸ್‌ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT