ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಶಶಿವಾಳ ಸುತ್ತ ಮತ್ತೆ ಗಣಿಗಾರಿಕೆ ಆತಂಕ

ಲೋಹದ ನಿಕ್ಷೇಪಗಳ ಅನ್ವೇಷಣೆ ನಡೆಸಲು ವೇದಾಂತ ಕಂಪನಿಗೆ ಗುತ್ತಿಗೆ
Published 26 ಜುಲೈ 2024, 4:40 IST
Last Updated 26 ಜುಲೈ 2024, 4:40 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಶಶಿವಾಳ ಗ್ರಾಮದ ಸುತ್ತ ಕೆಲ ವರ್ಷಗಳಿಂದ ಸ್ತಬ್ಧವಾಗಿದ್ದ ಗಣಿಗಾರಿಕೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

‘ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವಾಲಯ ನಡೆಸಿದ ಇ–ಟೆಂಡರ್‌ನಲ್ಲಿ, ಗ್ರಾಮದ ಸುತ್ತ ಪ್ರಮುಖ ಲೋಹದ ನಿಕ್ಷೇಪಗಳ ಅನ್ವೇಷಣೆ ನಡೆಸಲು ಟೆಂಡರ್‌ ಪಡೆಯಲಾಗಿದೆ’ ಎಂದು ವೇದಾಂತ ಕಂಪನಿಯು ಷೇರುಪೇಟೆಗೆ ನೀಡಿರುವ ಮಾಹಿತಿ ಗ್ರಾಮಸ್ಥರಲ್ಲಿ ಆತಂಕ ಮತ್ತು ಆಕ್ರೋಶ ಉಂಟು ಮಾಡಿದೆ.

ಶಶಿವಾಳ ಸೇರಿದಂತೆ ಅರಸೀಕೆರೆ ತಾಲ್ಲೂಕಿನ ಗೊಲ್ಲರಹಟ್ಟಿ ಮತ್ತು ಮಲ್ಲೇನಹಳ್ಳಿ ಬಳಿ ನಿಕಲ್‌, ಕ್ರೋಮಿಯಂ ಮತ್ತು ಪ್ಲಾಟಿನಂ ವರ್ಗಕ್ಕೆ (ಪಿಜಿಇ ಬ್ಲಾಕ್‌) ಸೇರಿದ ಲೋಹಗಳ ಗಣಿಗಾರಿಕೆಗೆ ಸ್ಥಳಾನ್ವೇಷಣೆಯ ಟೆಂಡರ್‌ ಅನ್ನು ಕಂಪನಿ ಪಡೆದಿದೆ.

ಗಣಿಗಾರಿಕೆಯು, ಲೋಹದ ನಿಕ್ಷೇಪಗಳ ಪರಿಶೋಧನೆ (ಜಿ4), ಪ್ರಾಥಮಿಕ ಪರಿಶೋಧನೆ (ಜಿ3), ಸಾಮಾನ್ಯ ಪರಿಶೋಧನೆ (ಜಿ 2) ಹಾಗೂ ಪರಿಪೂರ್ಣ ಪರಿಶೋಧನೆ (ಜಿ1) ಎಂಬ ಹಂತಗಳಲ್ಲಿ ನಡೆಯುತ್ತದೆ. ಕಂಪನಿ ಲೋಹದ ನಿಕ್ಷೇಪಗಳ ಪರಿಶೋಧನೆಯ ಅನ್ವೇಷಣೆ (ಜಿ4) ಟೆಂಡರ್ ಪಡೆದಿದೆ.

ಗ್ರಾಮಸ್ಥರ ವಿರೋಧ: ‘ನೂರಾರು ವರ್ಷಗಳಿಂದ ಇಲ್ಲಿಯೇ ಜೀವನ ನಡೆಸುತ್ತಿದ್ದೇವೆ. ಸ್ಥಳಾಂತರ ಕಷ್ಟ. ಭೂಮಿ ಬಿಡುವುದು ಯೋಚನೆ ಮಾಡಬೇಕಾದ ವಿಷಯ. 5–6 ವರ್ಷಗಳಿಂದ ಸರ್ವೆ ನಡೆಯುತ್ತಿತ್ತು. ಆದರೆ, ಗಣಿಗಾರಿಕೆಯ ಬದಲು ಬೇರೆ ಕಾರಣ ನೀಡುತ್ತಿದ್ದರು. 2 ವರ್ಷದ ಹಿಂದೆ ರಾಂಪುರ, ಗೊಲ್ಲರಹಟ್ಟಿ, ಮೇಲೆನಹಳ್ಳಿ ಗ್ರಾಮಸ್ಥರು ಪ್ರತಿಭಟಿಸಿದ ನಂತರ ಸರ್ವೆ ಸ್ಥಗಿತಗೊಳಿಸಿದ್ದರು’ ಎಂದು ಶಶಿವಾಳದ ಕೃಷಿಕ ಎಸ್‌.ಜಿ. ಪರಮೇಶ್ವರಪ್ಪ ತಿಳಿಸಿದರು.

‘ಇಲ್ಲಿಗೆ ಬರುವ ಅಧಿಕಾರಿಗಳು ಮ್ಯಾಪಿಂಗ್‌ ಎಂದು ಸುಳ್ಳು ಹೇಳುತ್ತಿದ್ದರು. ಬಂಗಾರದಂತಹ ಜಮೀನಿಗೆ ಪರಿಹಾರ ಬೇಕಾಗಿಲ್ಲ. ರಾಜ್ಯದ ಹೆಸರಾಂತ ಮಠಾಧೀಶರು ಕೊಟ್ಟ ಗ್ರಾಮ ಇದು. ಇಲ್ಲಿನ ಜಮೀನು ಬಿಟ್ಟು ಕೊಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಅವರು.

ಗಣಿಗಾರಿಕೆಗೆ ಸಂಬಂಧಿಸಿ ಅರಸೀಕೆರೆ ತಾಲ್ಲೂಕು ಕಚೇರಿಯಲ್ಲಿ 2018ರ ಡಿಸೆಂಬರ್‌ನಲ್ಲಿ ನಡೆದ ವಿಶೇಷ ಸಭೆಯಲ್ಲೂ ಗ್ರಾಮಸ್ಥರ ವಿರೋಧ ವ್ಯಕ್ತವಾಗಿತ್ತು.

ಸಭೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ, ‘ಜನ ಭೂಮಿ ಕೊಡೋಕೆ ಒಪ್ಪುತ್ತಿಲ್ಲ. ರೈತರ ವಿರೋಧವಿದೆ. ಹಾಗಾಗಿ ಸರ್ವೆ ಕಾರ್ಯ ನಿಲ್ಲಿಸಿ’ ಎಂದು ತಾಕೀತು ಮಾಡಿದ್ದರು.

‘ಗ್ರಾಮಸ್ಥರು ಜಮೀನು ಬಿಟ್ಟು ಕೊಡಲು ಸಿದ್ಧರಿಲ್ಲ. ನೀವು ಅವರ ಹೆಣದ ಮೇಲೆ ಸರ್ವೆ ಮಾಡುತ್ತೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮಕ್ಕಳಿಗೆ ಹಣ ಕೊಟ್ಟು ಹೋಗಲು ಆಗತ್ತದೆಯೇ? ಜಮೀನು ಇದ್ದರೆ ದುಡಿಯಬಹುದು. ಸರ್ಕಾರ ರೈತರ ಪರ ಇರಬೇಕು. ಭೂಮಿ ಉಳಿಸಲು ಹೋರಾಟ ಮಾಡಬೇಕು

– ನಾಗಪ್ಪ ಮಲ್ಲೇನಹಳ್ಳಿ ರೈತ

ದುಡ್ಡು ಎಷ್ಟಿದ್ದರೂ ತಿನ್ನಲು ಆಗುತ್ತದೆಯೇ? ಅನ್ನ ಆಹಾರ ಬೇಕು. ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದೇವೆ. ಪ್ರಾಣ ಬಿಟ್ಟರೂ ಜಮೀನು ಬಿಡುವುದಿಲ್ಲ

–ಕಲ್ಯಾಣಕುಮಾರ್ ಶಶಿವಾಳು ಗ್ರಾಮದ ರೈತ

ಶಶಿವಾಳ ಸುತ್ತಲಿನ ಗ್ರಾಮಗಳಲ್ಲಿ ಅದಿರುಗಳ ಬಗ್ಗೆ ಸರ್ವೆ ನಡೆಯುತ್ತಿದೆ. ವೇದಾಂತ ಕಂಪನಿಗೆ ಗುತ್ತಿಗೆ ನೀಡಿರುವ ಬಗ್ಗೆ ಮಾಹಿತಿ ಬಂದಿಲ್ಲ

–ಸಂತೋಷ್‌ಕುಮಾರ್ ಅರಸೀಕೆರೆ ತಹಶೀಲ್ದಾರ್‌

ಅಲ್ಪ ಪ್ರಮಾಣದ ನಿಕಲ್‌

‘ಶಶಿವಾಳ ಗ್ರಾಮದ ಸುತ್ತಲಿನ ಪ್ರದೇಶ ಒಂದು ಕಾಲದಲ್ಲಿ ಸಮುದ್ರದಿಂದ ಆವೃತವಾಗಿತ್ತು. ಸಮುದ್ರದ ತಳದಲ್ಲಿ ಹೊರಚಿಮ್ಮಿದ ಹೆಚ್ಚಿನ ಉಷ್ಣಾಂಶದ ಲಾವಾರಸದಿಂದ ಕೊಮಾಟಿಯೈಟ್‌ ಮತ್ತು ಬೆಸಾಲ್ಟ್‌ ಶಿಲೆಗಳು ಉಂಟಾದವು. ಇದೀಗ ಆ ಶಿಲೆಗಳು ಬೆಟ್ಟ ಶ್ರೇಣಿಗಳಾಗಿವೆ’ ಎನ್ನುವುದು ಭೂಗರ್ಭ ವಿಜ್ಞಾನಿಗಳ ಮಾತು. ಬೆಂಗಳೂರು ವಿಶ್ವವಿದ್ಯಾಲಯದ ಭೂಗರ್ಭ ವಿಜ್ಞಾನ ವಿಭಾಗದ ಪ್ರೊ.ಬಿ.ಸಿ ಪ್ರಭಾಕರ್ ನೇತೃತ್ವದ ತಂಡ ಈ ಭಾಗದಲ್ಲಿ ಅಧ್ಯಯನ ನಡೆಸಿದ್ದು ಸ್ಥೂಲ ಕಲ್ಲಿನ ಮಾದರಿ ವಿಶ್ಲೇಷಣೆ ಮಾಡಲಾಗಿದೆ. ‘ಸುಮಾರು 25 ಕಿ.ಮೀ. ಹರಡಿರುವ ಕಲ್ಲುಗಳಲ್ಲಿ ಕೆಲವೊಮ್ಮೆ ನಿಕಲ್‌ ತಾಮ್ರ ಸಿಗುವ ಸಾಧ್ಯತೆ ಇರುತ್ತದೆ. ಅಪರೂಪಕ್ಕೆ ಪ್ಲಾಟಿನಂ ಗುಂಪಿನ ಪ್ಲಾಟಿನಂ ಪಲಾಡಿಯಂ ರೋಡಿಯಂ ರುದೇನಿಯಂ ಆಸ್ಮಿಯಂ ಇರೀಡಿಯಂ ಅಂಶಗಳೂ ಸಿಗುವ ಸಾಧ್ಯತೆ ಇರುತ್ತದೆ’ ಎಂದು ವರದಿಯಲ್ಲಿ ತಿಳಿಸಿದೆ. ‘ಇಲ್ಲಿನ ಕೊಮಾಟಿಯೈಟ್‌ ಕಲ್ಲುಗಳಲ್ಲಿ ಸ್ವಲ್ಪ ಪ್ರಮಾಣದ ನಿಕಲ್‌ (ಶೇ 0.2–0.5) ಮತ್ತು ಕೊಬಾಲ್ಡ್‌ (ಶೇ 0.02–0.05) ಇರುವುದು ಗೊತ್ತಾಗಿದೆ. ಅದನ್ನು ಹೊರತುಪಡಿಸಿ ಪ್ಲಾಟಿನಂ ಅಂಶ ಅತಿ ಕಡಿಮೆ ಇದೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT