ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂ ವಿರೋಧಿ ಪ್ರವಚನ ಆರೋಪ: ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ

ಎಬಿವಿಪಿ ನೇತೃತ್ವದಲ್ಲಿ ಮಾಸ್ಟರ್ಸ್ ಕಾಲೇಜು ಎದುರು ಪ್ರತಿಭಟನೆ
Published : 23 ಸೆಪ್ಟೆಂಬರ್ 2024, 23:00 IST
Last Updated : 23 ಸೆಪ್ಟೆಂಬರ್ 2024, 23:00 IST
ಫಾಲೋ ಮಾಡಿ
Comments

ಹಾಸನ: ‘ರಾಷ್ಟ್ರವಿರೋಧಿ ಸಂಘಟನೆಯ ಕಾರ್ಯದರ್ಶಿಯಿಂದ ಹಿಂದೂ ವಿರೋಧಿ ಪ್ರವಚನವನ್ನು ಆಯೋಜಿಸಿದ್ದು, ಸಹಕರಿಸಿದ ಅಧ್ಯಾಪಕನನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿ ಎಬಿವಿಪಿ ಹಾಗೂ ಬಿಜೆಪಿ ಸದಸ್ಯರು ನಗರದ ಮಾಸ್ಟರ್ ಕಾಲೇಜಿನ ಎದುರು ಸೋಮವಾರ ಪ್ರತಿಭಟಿಸಿದರು.

‘ಮೂರು ದಿನಗಳ ಹಿಂದೆ ಕಾಲೇಜಿನಲ್ಲಿ ಜಮಾಅತೇ ಇಸ್ಲಾಮಿ ಹಿಂದ್ ಸಂಘಟನೆಯ ಮೊಹಮ್ಮದ್ ಕುಂಞಿ ಅವರಿಂದ ಪ್ರವಚನ ನಡೆಸಲಾಗಿತ್ತು’ ಎಂದು ಮೂಲಗಳು ತಿಳಿಸಿದ್ದು, ನಗರದ ವಾಹಿನಿಯೊಂದರಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಬಗ್ಗೆ ಕೆಲವು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದರಿಂದ ಎಬಿವಿಪಿ ಮುಖಂಡರು ಪ್ರತಿಭಟನೆ ನಡೆಸಿದರು. ‌

ಪ್ರತಿಭಟನೆಯುದ್ದಕ್ಕೂ ಸಂಘಟನೆಯವರು ಪ್ರವಚನ ನಡೆಸಿದವರ ಹೆಸರು ಹೇಳಲಿಲ್ಲ. ಕಾರ್ಯಕ್ರಮ ಆಯೋಜಿಸಿದ್ದ ಅಧ್ಯಾಪಕರ ಹೆಸರನ್ನು ಕಾಲೇಜಿನವರೂ ಬಹಿರಂಗಪಡಿಸಿಲ್ಲ. ವಿರೋಧ ಹೆಚ್ಚಾಗುತ್ತಿದ್ದಂತೆಯೇ ವಾಹಿನಿಯಲ್ಲಿದ್ದ ಸುದ್ದಿಯ ವಿಡಿಯೊವನ್ನು ಅಳಿಸಲಾಗಿದೆ.

ಪ್ರತಿಭಟನೆ ವೇಳೆ ಮಾತನಾಡಿದ ಸಂಘಟನೆಯ ಮುಖಂಡ ಶ್ರೀನಿವಾಸ್, ‘ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪ್ರವಚನಕ್ಕೆ ಕಾಲೇಜಿನ ಅಧ್ಯಾಪಕರು ಹಾಗೂ ಆಡಳಿತ ಮಂಡಳಿ ಸಹಕರಿಸಿದೆ. ಸಂಘಟಿಟಿದ ಅಧ್ಯಾಪಕನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಶಿವರಾತ್ರಿ, ಬಸವ ಜಯಂತಿ ಸೇರಿದಂತೆ ಹಿಂದೂ ಹಬ್ಬಗಳಿಗೆ ರಜೆ ನೀಡುವುದಿಲ್ಲ. ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಒಪ್ಪಿಗೆ ನೀಡುವುದಿಲ್ಲ. ಆದರೆ, ಕಾಲೇಜಿನ ಸೆಲ್ಲರ್‌ನಲ್ಲಿ ನಮಾಜ್ ಮಾಡಲು ಅವಕಾಶ ಸೇರಿದಂತೆ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡುತ್ತೀರಿ’ ಎಂದು ಆರೋಪಿಸಿದರು.

‘ಪ್ರವಚನ ಏರ್ಪಡಿಸಿದ ಅಧ್ಯಾಪಕರನ್ನು ವಜಾ ಮಾಡದಿದ್ದರೆ, ಹಿಂದೂ ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗದಂತೆ ಮಾಡಲಾಗುವುದು’ ಎಂದು ಬಿಜೆಪಿ ಮುಖಂಡ ವೇಣುಗೋಪಾಲ್ ಹೇಳಿದರು.

ದೇವಾಲಯಗಳ ಅರ್ಚಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಭಾರದ್ವಾಜ್, ರವಿ ಸೋಮು, ದರ್ಶನ್, ಲೋಕೇಶ್, ವಿಶಾಲ್ ಅಗರವಾಲ್, ರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

12 ವರ್ಷದಿಂದ ಕಾಲೇಜು ಯಾವುದೇ ಸಮುದಾಯಕ್ಕೂ ನೋವುಂಟು ಮಾಡಿಲ್ಲ. ಕೆಲ ದಿನದ ಹಿಂದೆ ಲೋಪವಾಗಿದ್ದು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು‌
ಗೌಡೇಗೌಡ ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT