ಮಂಗಳವಾರ, 3 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಲೇಶಪುರ–ಸುಬ್ರಹ್ಮಣ್ಯ ಹೊಸ ರೈಲು ಮಾರ್ಗ ಸಮೀಕ್ಷೆ: ಸೋಮಣ್ಣ

Published 18 ಜುಲೈ 2024, 22:44 IST
Last Updated 18 ಜುಲೈ 2024, 22:44 IST
ಅಕ್ಷರ ಗಾತ್ರ

ಹಾಸನ: ‘ಸಕಲೇಶಪುರ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದಲ್ಲಿ ಪ್ರಯಾಣಕ್ಕೆ 3 ಗಂಟೆ ಕಾಲ ಬೇಕಾಗುತ್ತಿದೆ. ಈ ಅವಧಿಯನ್ನು ಕಡಿಮೆ ಮಾಡಲು ಹೊಸ ರೈಲು ಮಾರ್ಗಕ್ಕೆ ಸಮೀಕ್ಷೆ ನಡೆಸುವಂತೆ ಅನುಭವಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರ ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ನಗರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಮಂಗಳೂರಿನಲ್ಲಿ ಮಾತ್ರ ದೊಡ್ಡ ಬಂದರು ಇದೆ. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದ ಉನ್ನತೀಕರಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಮಂಗಳೂರು -ಬೆಂಗಳೂರು ಮಧ್ಯೆ ಹೊಸ ರೈಲು ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದ್ದು, ಶೀಘ್ರ ಸಂಚಾರ ಆರಂಭವಾಗಲಿದೆ’ ಎಂದರು.

‘ರೈಲ್ವೆ ಯೋಜನೆಗಳಿಗಾಗಿ ಜಿಲ್ಲೆಗೆ ₹11 ಸಾವಿರ ಕೋಟಿ ವ್ಯಯ ಮಾಡಬೇಕಾಗಿದ್ದು, ಅದರಲ್ಲಿ ರಾಜ್ಯ ಸರ್ಕಾರ ₹5,500 ಕೋಟಿ ಪಾಲು ಕೊಡಬೇಕು. ಆದರೆ ಇದುವರೆಗೂ ₹500 ಕೋಟಿ ಸಹ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ, ಪೂರ್ಣ ಪ್ರಮಾಣದ ಹಣವನ್ನು ಕೇಂದ್ರದಿಂದಲೇ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘2025-26 ರೊಳಗೆ ರಾಜ್ಯದ 58 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ, ತ್ರೀಸ್ಟಾರ್ ಮಾದರಿ ಸೇವೆ ನೀಡಲಾಗುವುದು. ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಗೃಹ, ಕ್ಯಾಂಟೀನ್ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುವುದು’ ಎಂದರು.

‘3 ತಿಂಗಳಿಗೊಮ್ಮೆ ಶಾಸಕರೊಂದಿಗೆ ಸಭೆ’

ಚಿಕ್ಕಮಗಳೂರು: ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮತ್ತು ಸಂಸದರನ್ನೊಳಗೊಂಡ ಸಲಹಾ ಸಮಿತಿ ರಚನೆ ಮಾಡಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ಎಲ್ಲಾ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (ಡಿಆರ್‌ಎಂ) ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಮ್ಮ ವ್ಯಾಪ್ತಿಯ ಜನಪ್ರತಿನಿಧಿಗಳನ್ನು ಕರೆದು ಸಲಹೆಗಳನ್ನು ಪಡೆದುಕೊಂಡರೆ ಜನರಿಗೆ ಇನ್ನಷ್ಟು ಅನುಕೂಲ ಆಗುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದು ಗುರುವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT