ಹಾವೇರಿ: ‘ನಾವಿಬ್ಬರು– ನಮಗಿಬ್ಬರು’ ಎಂದುಕೊಂಡು ಖುಷಿಯಿಂದ ಬದುಕುತ್ತಿದ್ದ ದಂಪತಿಯವರು. ಮಗ– ಮಗಳ ಜೊತೆ ಕಾಲ ಕಳೆಯುತ್ತ ಕಷ್ಟಗಳನ್ನು ಮರೆಯುತ್ತಿದ್ದ ತಂದೆ– ತಾಯಿಯವರು. ಆದರೆ, ಗುರುವಾರ ಅವರ ಕುಟುಂಬವೇ ಕಂಗಾಲಾಗಿದೆ. ಸ್ನೇಹಿತರ ಜೊತೆ ನೀರು ನೋಡಲು ಹೋಗಿದ್ದ ಮಗ, ಮನೆಗೆ ವಾಪಸು ಬಾರದೇ ಅವಘಡ ನಡೆದು ಹೋಗಿದೆ.

ನಗರದ ಹಳೇ ಪಿ.ಬಿ. ರಸ್ತೆ ಬದಿಯ ಕಾಲುವೆಯಲ್ಲಿ ಸಂಭವಿಸಿದ್ದ ಅವಘಡದಲ್ಲಿ 9 ವರ್ಷದ ಬಾಲಕ ನಿವೇದನ್ ಗುಡಗೇರಿ ಅವರನ್ನು ಕಳೆದುಕೊಂಡ ತಂದೆ ಬಸವರಾಜ ಹಾಗೂ ತಾಯಿ ನಿರ್ಮಲಾ ಅವರ ಆಕ್ರಂದನ ಮುಗಿಲುಮುಟ್ಟಿತ್ತು.

ಪೊಲೀಸರು– ಅಗ್ನಿಶಾಮಕ ಕಾರ್ಯಾಚರಣೆ ಸಂದರ್ಭದಲ್ಲಿ ‘ಮಗ ಬದುಕಿ ಬರುತ್ತಾನೆ’ ಎಂದು ಕಾದು ಕುಳಿತಿದ್ದ ತಂದೆ–ತಾಯಿಗೆ, ‘ಮಗ ಇನ್ನಿಲ್ಲ’ ಎಂಬುದು ಗೊತ್ತಾಗುತ್ತಿದ್ದಂತೆ ಅಕ್ಷರಶಃ ನಲುಗಿ ಹೋದರು. ಜಿಲ್ಲಾಸ್ಪತ್ರೆ ಎದುರು ಸೇರಿದ್ದ ಕುಟುಂಬಸ್ಥರು ಹಾಗೂ ಸ್ನೇಹಿತರು, ತಂದೆ–ತಾಯಿಗೆ ಧೈರ್ಯ ಹೇಳಿ ಸಮಾಧಾನಪಡಿಸಿದರು. ತಂದೆ– ತಾಯಿ ಸಂಕಟ ಹಾಗೂ ಆಕ್ರಂದನ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿತು.

ಹಾಲು–ಬಿಸ್ಕತ್ ತಂದುಕೊಟ್ಟಿದ್ದ: ‘ಶಾಲೆಗೆ ಬೇಸಿಗೆ ರಜೆ ಇದ್ದಿದ್ದರಿಂದ ಬಾಲಕ ನಿವೇದನ್ ಮನೆಯಲ್ಲಿದ್ದ. ಬೆಳಿಗ್ಗೆ ಆತನನ್ನು ಎಬ್ಬಿಸಿದ್ದ ತಾಯಿ, ಹಾಲು–ಬಿಸ್ಕತ್ ತರಲು ಸಮೀಪದ ಅಂಗಡಿಗೆ ಕಳುಹಿಸಿದ್ದರು. ಈ ವೇಳೆಯೂ ಸಣ್ಣದಾಗಿ ಮಳೆ ಬರುತ್ತಿತ್ತು. ಅಂಗಡಿಗೆ ಹೋಗಿದ್ದ ಬಾಲಕ, ಹಾಲು–ಬಿಸ್ಕತ್ ತಂದು ತಾಯಿ ಕೈಗೆ ಕೊಟ್ಟಿದ್ದ’ ಎಂದು ಶಿವಾಜಿನಗರದ ನಿವಾಸಿಗಳು ಹೇಳಿದರು.

‘ಹಳೇ ಪಿ.ಬಿ.ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಬಗ್ಗೆ ತಿಳಿದುಕೊಂಡಿದ್ದ ಓಣಿಯ ಮೂವರು ಬಾಲಕರು, ನಿವೇದನ್ ಬಳಿ ಹೋಗಿದ್ದರು. ನೀರು ನೋಡಿಕೊಂಡು ಬರೋಣ ಬಾ ಎಂದು ಕರೆದಿದ್ದರು. ಅದಕ್ಕೆ ಒಪ್ಪಿದ್ದ ನಿವೇದನ್, ಮನೆಯಿಂದ ಹೊರಗೆ ಬಂದು ಅವರ ಜೊತೆ ಹೊರಟಿದ್ದ.’

‘ಗಿರಿಯಾಸ್ ಮಳಿಗೆ ಎದುರು ಕಾಲುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ರಸ್ತೆ ಪಕ್ಕದ ದೊಡ್ಡ ಆಲದ ಮರವನ್ನು ಕತ್ತರಿಸಲಾಗಿತ್ತು. ಅದರ ಕೆಲ ಅವಶೇಷಗಳು ಸ್ಥಳದಲ್ಲಿದ್ದವು. ಕಾಲುವೆ ಮೇಲ್ಭಾಗದ ಕೆಲ ಕಲ್ಲುಗಳನ್ನು ಕಿತ್ತಿಡಲಾಗಿತ್ತು. ರಸ್ತೆ ಹಾಗೂ ಕಾಲುವೆಯಲ್ಲಿ ರಭಸವಾಗಿ ನೀರು ಹರಿಯುತ್ತಿತ್ತು. ರಸ್ತೆ– ಕಾಲುವೆ ಗೋಚರಿಸುತ್ತಿರಲಿಲ್ಲ. ಶಿವಾಜಿನಗರ 3ನೇ ಕ್ರಾಸ್ ವೃತ್ತದಲ್ಲಿ ಹರಿಯುತ್ತಿದ್ದ ನೀರಿನ ಸಮೀಪದಲ್ಲಿ ನಿವೇದನ್ ಹಾಗೂ ಸ್ನೇಹಿತರು ಹೋಗಿದ್ದರು. ಅದನ್ನು ನೋಡಿದ್ದ ಸ್ಥಳೀಯರೊಬ್ಬರು, ಮನೆಗೆ ವಾಪಸು ಹೋಗುವಂತೆ ಬಾಲಕರಿಗೆ ತಾಕೀತು ಮಾಡಿದ್ದರು. ಆದರೆ, ಬಾಲಕರು ಹೋಗಿರಲಿಲ್ಲ’ ಎಂದರು.

‘ನಾಲ್ವರು ಬಾಲಕರು ನೀರಿನ ಬಳಿ ನಿಂತಿದ್ದರು. ಅದೇ ಸಂದರ್ಭದಲ್ಲಿ ನಿವೇದನ್ನ ಒಂದು ಚಪ್ಪಲಿ ಕಳಚಿ ನೀರಿನಲ್ಲಿ ಬಿದ್ದು ತೇಲಿಕೊಂಡು ಹೋಗುತ್ತಿತ್ತು. ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದ ನಿವೇದನ್, ಏಕಾಏಕಿ ಕಾಲುವೆಯೊಳಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ. ಗಾಬರಿಗೊಂಡ ಬಾಲಕರು, ಸ್ಥಳದಿಂದ ಓಡಿಹೋಗಿದ್ದರು. ಬಾಲಕ ಬಿದ್ದಿದ್ದನ್ನು ನೋಡಿದ್ದ ವ್ಯಕ್ತಿಯೊಬ್ಬರು, ಚೀರಾಡಿದ್ದರು. ನೀರು ಹೆಚ್ಚಿದ್ದರಿಂದ ಬಾಲಕನನ್ನು ರಕ್ಷಿಸಲು ಅವರಿಂದ ಸಾಧ್ಯವಾಗಲಿಲ್ಲ’ ಎಂದು ಹೇಳಿದರು.

ಪೈಪ್ಗೆ ಸಿಲುಕಿದ್ದ ಮೃತದೇಹ: ‘ಬಾಲಕನ ಪತ್ತೆಗಾಗಿ ಪೊಲೀಸರು–ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಬಾಲಕ ಬಿದ್ದ ಸ್ಥಳದಲ್ಲಿ ಯಾವುದೇ ಸುಳಿವು ಸಿಗಲಿಲ್ಲ. ನೀರು ಹರಿದು ಹೋಗುವ ಕಾಲುವೆಯ ಜಾಗದಲ್ಲೆಲ್ಲ ಹುಡುಕಾಡಿದರು. ಜೆಸಿಬಿ ಯಂತ್ರ ಬಳಸಿದರು. ಬಾಲಕ ಬಿದ್ದ ಸ್ಥಳದಿಂದ ಕೆಲ ದೂರದಲ್ಲಿದ್ದ ಕಾಲುವೆಯಲ್ಲಿ ಪೈಪ್ಗೆ ತಾಗಿಕೊಂಡು ಮೃತದೇಹ ಪತ್ತೆಯಾಯಿತು’ ಎಂದು ಅಗ್ನಿಶಾಮಕದ ದಳದ ಸಿಬ್ಬಂದಿ ಹೇಳಿದರು.

ನಿಂತುಹೋಗಿದ್ದ ಹೃದಯ ಬಡಿತ: ಕಾಲುವೆಯಿಂದ ಮೃತದೇಹ ಹೊರಗೆ ತೆಗೆಯಲಾಗಿತ್ತು. ಜೀವ ಇರಬಹುದೆಂದು ತಿಳಿದು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು, ‘ಘಟನಾ ಸ್ಥಳದಲ್ಲಿಯೇ ಬಾಲಕನ ಹೃದಯ ಬಡಿತ ನಿಂತಿದೆ. ಅಲ್ಲಿಯೇ ಆತ ಮೃತಪಟ್ಟಿದ್ದಾನೆ’ ಎಂದು ಘೋಷಿಸಿದರು.

‘ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆಂಬುಲೆನ್ಸ್ ಕಳುಹಿಸಲಾಗಿತ್ತು. ಘಟನಾ ಸ್ಥಳದಲ್ಲಿ ತ್ವರಿತವಾಗಿ ಬಾಲಕ ಪತ್ತೆಯಾದರೆ, ಆತನ ಜೀವ ಉಳಿಸಲು ವೈದ್ಯರ ತಂಡ ಸಜ್ಜಾಗಿತ್ತು. ಆದರೆ, ಬಾಲಕನನ್ನು ಆಸ್ಪತ್ರೆಗೆ ಕರೆತಂದಾಗ ಹೃದಯ ಬಡಿತ ನಿಂತಿತ್ತು. ಬಾಲಕನ್ನು ಉಳಿಸಲು ಆಗಲಿಲ್ಲವೆಂಬ ನೋವು ನಮ್ಮನ್ನು ಕಾಡುತ್ತಿದೆ’ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಪಿ.ಎಚ್.ಹಾವನೂರು ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನಾ ಸ್ಥಳ, ಜಿಲ್ಲಾಸ್ಪತ್ರೆ ಹಾಗೂ ಬಾಲಕನ ಮನೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಎಲ್ಲ ಕಡೆಯೂ ಪೊಲೀಸರು ಭದ್ರತೆ ಕೈಗೊಂಡಿದ್ದರು.

‘ಹೆಗ್ಗೇರಿ ಕೆರೆಗೆ ನೀರು: ಪರಿಶೀಲನೆ’

‘ಹಾವೇರಿ ಹೊರವಲಯದಲ್ಲಿರುವ ಜಮೀನುಗಳು ರಾಷ್ಟ್ರೀಯ ಹೆದ್ದಾರಿ ಹಾಗೂ ಕೆಲ ಬಡಾವಣೆಗಳಲ್ಲಿ ಸಂಗ್ರಹವಾದ ನೀರು ನಗರದೊಳಗೆ ನುಗ್ಗುತ್ತಿದೆ. ಈ ನೀರು ಹೆಗ್ಗೇರಿ ಕೆರೆಗೆ ಸರಾಗವಾಗಿ ಹರಿದುಹೋಗುವಂತೆ ಮಾಡಬೇಕಿದೆ. ಇದಕ್ಕಾಗಿ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.

ಜಿಲ್ಲಾಸ್ಪತ್ರೆ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಾಲಕ ಮೃತಪಟ್ಟಿದ್ದಕ್ಕೆ ನೋವಾಗಿದೆ. ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ. ಮುಂದೆ ಇಂಥ ಘಟನೆಗಳು ನಡೆಯದಂತೆ ಯಾವೆಲ್ಲ ಕ್ರಮ ಕೈಗೊಳ್ಳಬೇಕು ? ಎಂಬುದನ್ನು ಅಧಿಕಾರಿಗಳ ಜೊತೆ ಚರ್ಚಿಸುವೆ’ ಎಂದರು.

‘ರಾಜಕಾಲುವೆ ಒತ್ತುವರಿ: ಮನವಿ ಕೊಟ್ಟು ಸಾಕಾಗಿದೆ’

‘ಹಾವೇರಿಯಲ್ಲಿರುವ ಬಹುತೇಕ ರಾಜಕಾಲುವೆಗಳು ಒತ್ತುವರಿಯಾಗಿವೆ. ಇದರಿಂದಲೇ ಶಿವಾಜಿನಗರಕ್ಕೆ ನೀರು ನುಗ್ಗಿದೆ. ಒತ್ತುವರಿ ತೆರವು ಸಂಬಂಧ ಮನವಿ ಕೊಟ್ಟು ಸಾಕಾಗಿದೆ. ಇದುವರೆಗೂ ತೆರವು ಕಾರ್ಯಾಚರಣೆ ಆರಂಭವಾಗಿಲ್ಲ’ ಎಂದು 9ನೇ ವಾರ್ಡ್ ಸದಸ್ಯೆ ಚನ್ನಮ್ಮ ದೂರಿದರು.

ಜಿಲ್ಲಾಸ್ಪತ್ರೆ ಬಳಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಚಾಲಕ ಬಸವರಾಜ ಕುಟುಂಬ ಮೊದಲು ಅಶ್ವಿನಿ ನಗರದಲ್ಲಿತ್ತು. ಎರಡು ವರ್ಷಗಳ ಹಿಂದೆ ಶಿವಾಜಿನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದೆ. ಅವರ ಮಗನ ಸಾವಿನಿಂದ ನೋವಾಗಿದ್ದು ಮತ್ತೊಬ್ಬರ ಮಕ್ಕಳಿಗೆ ಈ ರೀತಿಯಾಗದಂತೆ ಹೋರಾಟ ಮುಂದುವರಿಸುವೆ’ ಎಂದರು.

ಸಹಾಯಕ್ಕೆ ಬಂದ ಚಾಲಕರು–ಸ್ಥಳೀಯರು

ಚಾಲಕ ಬಸವರಾಜ ಸಹೋದ್ಯೋಗಿ ಚಾಲಕರು–ಸ್ಥಳೀಯರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಅವರ ಮಗ ನೀರಿನಲ್ಲಿ ಕೊಚ್ಚಿಕೊಂಡು ಹೋದ ಸುದ್ದಿ ತಿಳಿಯುತ್ತಿದ್ದಂತೆ ಸಹೋದ್ಯೋಗಿ ಚಾಲಕರು ಹಾಗೂ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದರು. ಸಂಬಂಧಿಕರೂ ಸ್ಥಳಕ್ಕೆ ಬಂದಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ಬಾಲಕನಿಗಾಗಿ ಹುಡುಕಾಟ ನಡೆಸಿದರು.

ಮೃತದೇಹ ಸಿಗುತ್ತಿದ್ದಂತೆ ಚಾಲಕರು–ಸ್ನೇಹಿತರೇ ಆಂಬುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ನಂತರ ಶವಾಗಾರಕ್ಕೆ ಕೊಂಡೊಯ್ದರು. ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹವನ್ನು ಮನೆಗೆ ಕೊಂಡೊಯ್ದರು. ನಂತರ ತೋಟದಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.

‘ತಾಯಿಗೆ ಚಿಕಿತ್ಸೆ: ಆಂಬುಲೆನ್ಸ್ನಲ್ಲಿ ಬಂತು ಮಗನ ಶವ’

ಕಾರ್ಯಾಚರಣೆ ಸಂದರ್ಭದಲ್ಲಿ ಬಾಲಕನ ತಾಯಿ ನಿರ್ಮಲಾ ಅಸ್ವಸ್ಥಗೊಂಡಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಆಸ್ಪತ್ರೆಯ ಬೆಡ್ ಮೇಲಿರುವಾಗಲೇ ಆಂಬುಲೆನ್ಸ್ನಲ್ಲಿ ಮಗನ ಮೃತದೇಹ ಬಂದಿತ್ತು. ಈ ದೃಶ್ಯ ಕರುಳು ಹಿಡುವಂತಿತ್ತು. ಮಗ ಮೃತಪಟ್ಟ ಸುದ್ದಿ ತಿಳಿಯದ ತಾಯಿ ಬೆಡ್ ಮೇಲಿದ್ದರು. ಅವರ ಬಳಿ ಹೋಗಿದ್ದ ಪರಿಚಯಸ್ಥ ಮಹಿಳೆಯರು ‘ಮಗನಿಗೆ ಏನು ಆಗಿಲ್ಲ. ಬಾ’ ಎಂದು ಹೇಳಿ ಕೈ ಹಿಡಿದು ಆಸ್ಪತ್ರೆಯಿಂದ ಹೊರಗೆ ಕರೆತಂದು ಶವಾಗಾರದ ಬಳಿ ಕರೆದೊಯ್ದಿದ್ದರು. ‘ಮಗ ಇನ್ನಿಲ್ಲ’ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಪುನಃ ಕುಸಿದು ಬಿದ್ದು ಗೋಳಾಡಿದರು. ತಾಯಿಯ ಆಕ್ರಂಧನ ಮುಗಿಲುಮುಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.