ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿತ್ತು. ಆರಂಭದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, ಕ್ರಮೇಣವಾಗಿ ಮತಗಳ ಅಂತರ ಹೆಚ್ಚಿಸಿಕೊಂಡ ಕಾಂಗ್ರೆಸ್ ಜಯಭೇರಿ ಬಾರಿಸಿತು.

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿಯಿದ್ದ ಕ್ಷೇತ್ರದಲ್ಲಿ ಎರಡೂ ಪಕ್ಷದವರು ಬಿರು ಸಿನ ಪ್ರಚಾರ ನಡೆಸಿದ್ದರು.

ಕ್ಷೇತ್ರದ 241 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಶನಿವಾರ ನಡೆದ ಮತ ಎಣಿಕೆ ಸಂದರ್ಭದಲ್ಲಿ, ಮತಗಟ್ಟೆಗಳಿಗೆ ಅನು ಗುಣವಾಗಿ ಮತಯಂತ್ರಗಳನ್ನು ತೆರೆದು ಮತಗಳ ಎಣಿಕೆ ಮಾಡಲಾಯಿತು.

ಮೊದಲ ಸುತ್ತಿನ ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು 5,188 ಮತಗಳನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಅವರು 4,868 ಮತಗಳನ್ನು ಗಳಿಸಿದರು. ಈ ಸುತ್ತಿನಲ್ಲಿ ಬಿಜೆಪಿಗೆ 325 ಮತಗಳ ಮುನ್ನಡೆ ಸಿಕ್ಕಿತ್ತು. ರಡನೇ ಸುತ್ತಿನಲ್ಲಿಯೂ ಬಿಜೆಪಿಗೆ 814 ಮತಗಳ ಮುನ್ನಡೆ ಸಿಕ್ಕಿತ್ತು. ಮೂರನೇ ಸುತ್ತಿನಲ್ಲಿ 699 ಮತಗಳ ಅಂತರವಿತ್ತು.

ನಾಲ್ಕು ಹಾಗೂ ಐದನೇ ಸುತ್ತಿನಲ್ಲಿಯೂ ಬಿಜೆಪಿಗೆ ಮುನ್ನಡೆ ಲಭ್ಯವಾಗಿತ್ತು. ಆರನೇ ಸುತ್ತಿನಲ್ಲಿ ಮೊದಲ ಬಾರಿಗೆ ಅಂತರ ಹೆಚ್ಚಿಸಿಕೊಂಡಿದ್ದ ಕಾಂಗ್ರೆಸ್, 1,173 ಮತಗಳಿಂದ ಮುನ್ನಡೆ ಸಾಧಿಸಿತ್ತು. ಏಳನೇ ಸುತ್ತಿನಲ್ಲಿ ಪುನಃ ಬಿಜೆಪಿಗೆ ಮುನ್ನಡೆ ಸಿಕ್ಕಿತ್ತು.

ಎಂಟನೇ ಸುತ್ತಿನಲ್ಲಿ 6,948 ಮತ ಪಡೆಯುವ ಮೂಲಕ 2,156 ಮತಗಳ ಮುನ್ನಡೆ ಸಾಧಿಸಿದ ಕಾಂಗ್ರೆಸ್, ನಂತರ ತಿರುಗಿಯೂ ನೋಡಲಿಲ್ಲ. ನಿರಂತರ ವಾಗಿ 18ನೇ ಸುತ್ತು ಮುಗಿಯುವ ವರೆಗೂ ಕಾಂಗ್ರೆಸ್ ಭರ್ಜರಿ ಮುನ್ನಡೆ ಕಾಯ್ದುಕೊಂಡು, ಗೆಲುವು ತನ್ನದಾಗಿಸಿ ಕೊಂಡಿತು. ಬೆಳಿಗ್ಗೆ 7 ಗಂಟೆ ಸುಮಾರಿಗೆ ಕೇಂದ್ರದಲ್ಲಿ ಹಾಜರಿದ್ದ ಚುನಾವಣಾ ಧಿಕಾರಿಗಳು ಹಾಗೂ ಪಕ್ಷಗಳ ಚುನಾವಣೆ ಏಜೆಂಟರು, ಆಯೋಗದ ಮಾರ್ಗಸೂಚಿ ಅನ್ವಯ ಭದ್ರತಾ ಕೊಠಡಿಯನ್ನು ತೆರೆದರು. ಆರಂಭದಲ್ಲಿ ಅಂಚೆ ಹಾಗೂ ಸೇವಾ ಮತದಾರರ ಮತಗಳ ಎಣಿಕೆ ನಡೆಸಲಾಯಿತು.

ನಂತರ, ಭದ್ರತಾ ಕೊಠಡಿಯಿಂದ ಒಂದೊಂದೇ ಮತಯಂತ್ರಗಳನ್ನು 14 ಟೇಬಲ್ಗಳಿವೆ ರವಾನಿಸಲಾಯಿತು. ಪ್ರತಿಯೊಂದು ಟೇಬಲ್ನಲ್ಲಿದ್ದ ಸಿಬ್ಬಂದಿ, ಮಾರ್ಗಸೂಚಿ ಅನ್ವಯ ಮತ ಎಣಿಕೆ ಮಾಡಿ ಫಲಿತಾಂಶ ಹೊರಹಾಕಿದರು.

ಗೆದ್ದ ನಂತರ ಬಂದ ಪಠಾಣ: ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಬೆಳಿಗ್ಗೆಯೇ ಮತ ಎಣಿಕೆ ಕೇಂದ್ರಕ್ಕೆ ಲಗ್ಗೆ ಇಟ್ಟಿದ್ದರು. ಮತ ಎಣಿಕೆ ಪ್ರಕ್ರಿಯೆಯನ್ನು ಗಮನಿಸುತ್ತ, ತಮ್ಮ ಏಜೆಂಟರಿಂದ ಮತಗಳ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಮಾತ್ರ ಮತ ಎಣಿಕೆ ಮುಗಿಯು ವವರೆಗೂ ಕೇಂದ್ರದತ್ತ ಸುಳಿಯಲಿಲ್ಲ.

ಹುಬ್ಬಳ್ಳಿಯ ಹೋಟೆಲ್ವೊಂದರಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಕುಳಿತಿದ್ದ ಪಠಾಣ, ಅಲ್ಲಿಂದಲೇ ಮತ ಎಣಿಕೆ ಮಾಹಿತಿ ಪಡೆದುಕೊಂಡರು. ತಮಗೆ ಮುನ್ನಡೆ ಸಿಗುತ್ತಿದ್ದಂತೆ, ಹೋಟೆಲ್ ನಲ್ಲಿಯೇ ಸಂಭ್ರಮಾಚರಣೆ ಮಾಡಿದರು. ಗೆಲುವು ಖಾತ್ರಿಯಾಗುತ್ತಿದ್ದಂತೆ ಹುಬ್ಬಳ್ಳಿಯಿಂದ ಹೊರಟ ಅವರು, ಹಾವೇರಿಯ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಹಾಜರಾದರು.

ಮಾರ್ಗಮಧ್ಯೆಯೇ ಶಿಗ್ಗಾವಿ ಹಾಗೂ ಬಂಕಾಪುರದಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಪಠಾಣ ಭಾಗಿಯಾದರು. ಬಣ್ಣ ಎರಚಿದ್ದರಿಂದ, ಪಠಾಣ ಬಣ್ಣದಲ್ಲಿ ಮುಳುಗಿ ಗುರುತು ಸಿಗದಂತೆ ಕಂಡರು. ಮತ ಎಣಿಕೆ ಕೇಂದ್ರಕ್ಕೆ ಬಂದಾಗ ಕಾರ್ಯಕರ್ತರು, ಪಠಾಣ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ವಿಜಯೋತ್ಸವ ಆಚರಿಸಿದರು. ಬಳಿಕ, ಬೆಂಬಲಿಗರ ಜೊತೆ ಚುನಾವಣಾಧಿಕಾರಿ ಬಳಿ ತೆರಳಿ ಪ್ರಮಾಣ ಪತ್ರ ಸ್ವೀಕರಿಸಿ ಹೊರಟು ಹೋದರು.

ಸೋಲಿನ ಮುನ್ಸೂಚನೆ ಸಿಗುತ್ತಿದ್ದಂತೆ ಭರತ್ ಬೊಮ್ಮಾಯಿ, ತಮ್ಮ ಬೆಂಬಲಿಗರ ಜೊತೆ ಕೇಂದ್ರದಿಂದ ಕಾಲ್ಕಿತ್ತರು. ಕೇಂದ್ರದ ಹೊರಗಡೆ ಬೊಮ್ಮಾಯಿ ಅವರ ಕಾರು ಹೊರಟಿದ್ದಾಗ, ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಕೇಕೆ ಹಾಕಿದರು.

ಜನರ ನಡುವೆಯೇ ಪೊಲೀಸರು, ವಾಹನಕ್ಕೆ ದಾರಿ ಮಾಡಿಕೊಟ್ಟು ಮುಂದಕ್ಕೆ ಕಳುಹಿಸಿದರು.

ಬಿಜೆಪಿ ಚುನಾವಣೆ ಏಜೆಂಟರು ಒಬ್ಬೊಬ್ಬರಾಗಿ ಕೇಂದ್ರದಿಂದ ಹೊರಟರು. ಪ್ರವೇಶ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೆರೆದಿದ್ದರಿಂದ, ಏಜೆಂಟರು ಮುಂದಕ್ಕೆ ಹೋಗಲು ದಾರಿ ಇರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುತ್ತ, ದಾರಿಗೆ ಅಡ್ಡಿಪಡಿಸಿದರು. ಇದೇ ಸಂದರ್ಭದಲ್ಲಿ ಪೊಲೀಸರು, ಕಾರ್ಯಕರ್ತರನ್ನು ಲಘುಲಾಠಿಯಿಂದ ಚದುರಿಸಿ ಏಜೆಂಟರು ಹೋಗಲು ದಾರಿ ಮಾಡಿಕೊಟ್ಟರು.

ಜಿಲ್ಲಾಡಳಿತ ತಂಡಕ್ಕೆ ಅಭಿನಂದನೆ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆಯನ್ನು ಶಾಂತಿಯುತ ಹಾಗೂ ಅಚ್ಚುಕಟ್ಟಾಗಿ ನೆರವೇರಿಸಿದ ಹಾವೇರಿ ಜಿಲ್ಲಾಡಳಿತದ ತಂಡಕ್ಕೆ ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ಕಮಲರಾಮ್ ಮಿನಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಚುನಾವಣಾಧಿಕಾರಿಯಾದ ಸವಣೂರು ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ಸಹಾಯಕ ಚುನಾವಣಾಧಿಕಾರಿ ಸಂತೋಷ ಹಿರೇಮಠ, ಜಿ.ಪಂ. ಸಿಇಒ ಅಕ್ಷಯ್ ಶ್ರೀಧರ, ಎಸ್ಪಿ ಅಂಶುಕುಮಾರ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು, ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂಚೆ ಮತ; ಬಿಜೆಪಿಗೆ ಹೆಚ್ಚು: ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿಗೆ 348 ಹಾಗೂ ಕಾಂಗ್ರೆಸ್ಗೆ 169 ಮತಗಳು ಬಂದಿವೆ. ಎಣಿಕೆ ಸಂದರ್ಭದಲ್ಲಿ ನ್ಯೂನ್ಯತೆಗಳು ಕಂಡುಬಂದಿದ್ದರಿಂದ, 25 ಅಂಚೆ ಮತಗಳನ್ನು ತಿರಸ್ಕರಿಸಲಾಗಿದೆ. 527 ಅಂಚೆ ಮತಗಳನ್ನು ಮಾತ್ರ ಪರಿಗಣಿಸಲಾಗಿದೆ.

ಬಿಜೆಪಿ ಕ್ಷೇತ್ರಗಳಲ್ಲೇ ಕಾಂಗ್ರೆಸ್ಗೆ ಹೆಚ್ಚು ಮತ: ಬಿಜೆಪಿ ಸದಸ್ಯರು ಇರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿಯೇ ಈ ಬಾರಿ ಕಾಂಗ್ರೆಸ್ಗೆ ಹೆಚ್ಚು ಮತಗಳು ಬಂದಿವೆ. ಶಿಗ್ಗಾವಿ, ಸವಣೂರು ಹಾಗೂ ಬಂಕಾಪುರ ವ್ಯಾಪ್ತಿಯಲ್ಲಿಯೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಬೂತ್ ಮಟ್ಟದಲ್ಲಿ ‘ಕೈ’ ಭದ್ರ ಬುನಾದಿ

ಬಿಜೆಪಿ ಭದ್ರಕೋಟೆಯಾದ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದ ಕಾಂಗ್ರೆಸ್, ಉಪಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವ ಮುನ್ನವೇ ಕಾರ್ಯತಂತ್ರ ಶುರು ಮಾಡಿತ್ತು.

ಚುನಾವಣೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದರು. ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಸತೀಶ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ರಹೀಂಖಾನ್, ಲಕ್ಷ್ಮಿ ಹೆಬಾಳ್ಕರ್, ಯತೀಂದ್ರ ಸಿದ್ದರಾಮಯ್ಯ ಸಾಥ್ ನೀಡಿದ್ದರು. ಶಾಸಕರಾದ ಶ್ರೀನಿವಾಸ್ ಮಾನೆ ಸಹ ಕಾಲಿಗೆ ಚಕ್ರ ಕಟ್ಟಿಕೊಂಡು ಪಠಾಣ ಪರ ನಿಂತಿದ್ದರು.

ಮುಖಂಡರ ಜೊತೆ ಹೆಚ್ಚು ಓಡಾಡಿದ ಮಯೂರ್ ಜಯಕುಮಾರ್, ಸಾಮಾನ್ಯ ಕಾರ್ಯಕರ್ತರ ಜೊತೆಗೂಡಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿದರು. ಬೂತ್ ಮಟ್ಟದಲ್ಲಿ ಯುವಕರು ಹಾಗೂ ಮಹಿಳೆಯರ ತಂಡ ಕಟ್ಟಿದರು. ಮನೆ ಮನೆಗೆ ಕಳುಹಿಸಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿ ನೀಡಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್, ಬೂತ್ ಮಟ್ಟದಲ್ಲಿಯೇ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಯಿತು.

ಜಾತಿವಾರು ಮತಗಳ ಮೇಲೂ ಕಣ್ಣಿಟ್ಟಿದ್ದ ಕಾಂಗ್ರೆಸ್, ಆಯಾ ಜಾತಿ ನಾಯಕರನ್ನೇ ಕ್ಷೇತ್ರಕ್ಕೆ ಕರೆತಂದು ಜವಾಬ್ದಾರಿ ವಹಿಸಿತ್ತು. ಸಚಿವ ಸತೀಶ ಜಾರಕಿಹೊಳಿ ಹಾಗೂ ಆರ್.ವಿ. ತಿಮ್ಮಾಪುರ, ತಮ್ಮ ಸಮುದಾಯದ ಮುಖಂಡರ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದ್ದರು. ಯತೀಂದ್ರ ಸಿದ್ದರಾಮಯ್ಯ ಹಾಗೂ ಎಚ್.ಡಿ.ರೇವಣ್ಣ, ಕುರುಬ ಸಮುದಾಯದವರು ವಾಸವಿರುವ ಗ್ರಾಮಗಳಿಗೆ ಹೋಗಿ ಮತ ಕೋರಿದ್ದರು. ಮಠ, ದರ್ಗಾ, ದೇವಸ್ಥಾನಗಳಿಗೆ ಕಾಂಗ್ರೆಸ್ ನಾಯಕರ ತಂಡವೇ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಇದೆಲ್ಲವೂ ಗೆಲುವಿಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.

ಟಿಕೆಟ್ ವಿಚಾರವಾಗಿ ಉಂಟಾಗಿದ್ದ ಗೊಂದಲವನ್ನು ಸೂಕ್ಷ್ಮವಾಗಿ ಬಗೆಹರಿಸಿದ ಕಾಂಗ್ರೆಸ್ ವರಿಷ್ಠರು, ‘ಪಕ್ಷವನ್ನು ಗೆಲ್ಲಿಸಿದವರಿಗೆ ಸೂಕ್ತ ಸ್ಥಾನಮಾನ ಕೊಡುತ್ತೇವೆ’ ಎಂಬ ಭರವಸೆ ನೀಡಿದರು. ಇದೇ ಕಾರಣಕ್ಕೆ, ಆಕಾಂಕ್ಷಿಗಳೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ.

ಬಂಡಾಯ ಎದ್ದಿದ್ದ ಸೈಯದ್ ಅಜ್ಜಂಪೀರ ಖಾದ್ರಿ, ಸಿದ್ದರಾಮಯ್ಯ ಹಾಗೂ ಪಕ್ಷದ ಮೇಲಿನ ಅಭಿಮಾನದಿಂದ ನಾಮಪತ್ರ ವಾಪಸು ಪಡೆದಿದ್ದರು. ಒಳ ಒಪ್ಪಂದದ ಸುಳಿವು ಅರಿತಿದ್ದ ನಾಯಕರು, ಖಾದ್ರಿ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಖಾದ್ರಿ ದಿನಚರಿ ಮೇಲೆ ನಿಗಾ ವಹಿಸಿದ್ದ ನಾಯಕರು, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವಂತೆ ಸೂಚಿಸಿದ್ದರೆಂಬ ಮಾಹಿತಿಯೂ ಇದೆ.

ಜಿ.ಪಂ. ಸದಸ್ಯರ ಮಗ ಪಠಾಣ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್ನ ಯಾಸೀರ ಅಹಮದ್ ಖಾನ್ ಪಠಾಣ, ಅಖಂಡ ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಮೊಹಮ್ಮದ್ ಖಾನ್ ಪಠಾಣ ಅವರ ಮಗ.

ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಪಠಾಣ ಕುಟುಂಬ, ಕಾಂಗ್ರೆಸ್ ಪಕ್ಷದ ಕಟ್ಟಾಳು ಕುಟುಂಬ. ಬಿ.ಎ. ಪದವೀಧರ ಯಾಸೀರ, ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೂರು ಬಾರಿ ಚಾಂಪಿಯನ್ ಆಗಿದ್ದರು. ಯಾಸೀರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸಂಘಟನೆಯಲ್ಲಿ ತೊಡಗಿದ್ದರು.

ಕೆಪಿಸಿಸಿ ಕಿಸಾನ್ ಘಟಕದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಯಾಸೀರ್ ಕೆಲಸ ಮಾಡಿದ್ದರು. ಉದ್ಯಮ ಹಾಗೂ ಕೃಷಿಯಲ್ಲಿ ತೊಡಗಿರುವ ಯಾಸೀರ್ ಅವರ ಸಹೋದರಿ, ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿದ್ದರು.

ನೋಟಾಕ್ಕೆ ನಾಲ್ಕನೇ ಸ್ಥಾನ

ಚುನಾವಣೆಗೆ ನಿಂತಿದ್ದ ಯಾವುದೇ ಅಭ್ಯರ್ಥಿಯು ತಮಗೆ ಇಷ್ಟವಿಲ್ಲವೆಂದು ಹೇಳಿ 834 ಮಂದಿ ‘ನೋಟಾ’ ಮತ ಚಲಾಯಿಸಿದ್ದಾರೆ. ಈ ಮೂಲಕ ನೋಟಾಗೆ 4ನೇ ಸ್ಥಾನ ಗಳಿಸಿದೆ. ಮತಯಂತ್ರಗಳ ಮೂಲಕ 832 ಮಂದಿ ನೋಟಾ ಮತ ಚಲಾಯಿಸಿದ್ದಾರೆ. ಅಂಚೆ ಮತದ ಮೂಲಕ ಇಬ್ಬರು ನೋಟಾ ಚಲಾವಣೆ ಮಾಡಿದ್ದಾರೆ.

‘ಆಡಳಿತ ಯಂತ್ರ, ಹಣದಿಂದ ಗೆದ್ದ ಕಾಂಗ್ರೆಸ್’

‘ಸರ್ಕಾರದ ಆಡಳಿತ ಯಂತ್ರ ಹಾಗೂ ಹಣದಿಂದ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಸರ್ಕಾರ, ತನ್ನ ಒಂದೂವರೆ ವರ್ಷದ ಆಡಳಿತಕ್ಕೆ ಇದು ಪ್ರಮಾಣ ಪತ್ರವೆಂದು ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲೆಂದು ಆಶಿಸುತ್ತೇನೆ’ ಎಂದರು.

‘ಶಿಗ್ಗಾವಿ–ಸವಣೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಕ್ಷೇತ್ರದ ಜನರಿಗೆ ಒಳ್ಳೆದಾಗಲೆಂದು ಬಯಸುತ್ತೇನೆ. 10 ಸಚಿವರು, 40ಕ್ಕೂ ಹೆಚ್ಚು ಶಾಸಕರು, ಮಾಜಿ ಶಾಸಕರು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದರು. ಈ ಚುನಾವಣೆ, ಬೊಮ್ಮಾಯಿ ವರ್ಸಸ್ ರಾಜ್ಯ ಸರ್ಕಾರ ಎಂಬುದಾಗಿ ಬಿಂಬಿತವಾಗಿತ್ತು’ ಎಂದು ಹೇಳಿದರು.

‘ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಸರ್ಕಾರಕ್ಕೆ ಅನುಕೂಲ ಇರುತ್ತದೆ. ನಾವು ಕೂಡ ಒಂದು ಕಾಲದಲ್ಲಿ 17 ಉಪ ಚುನಾವಣೆಯಲ್ಲಿ 13 ಕ್ಷೇತ್ರ ಗೆದ್ದಿದ್ದೆವು. ಉಪ ಚುನಾವಣೆಯಲ್ಲಿ ಅಷ್ಟು ಸ್ಥಾನ ಗೆದ್ದ ನಂತರವೂ ನಮ್ಮ ಸರ್ಕಾರ ಕಳೆದುಕೊಂಡಿದ್ದೆವು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.