ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ದಶಕವಾದರೂ ಮಂಜೂರಾಗದ ಶಾಲೆ

Published 3 ಜುಲೈ 2024, 6:04 IST
Last Updated 3 ಜುಲೈ 2024, 6:04 IST
ಅಕ್ಷರ ಗಾತ್ರ

ಚಿಂಚೋಳಿ: ‘ಕಡ್ಡಾಯ ಶಿಕ್ಷಣ ನಮ್ಮ ಹಕ್ಕು. ಎಲ್ಲಾ ಕಡೆ ಸರ್ಕಾರಿ ಶಾಲೆ ಅವರ ತಾಂಡಾದಲ್ಲಿ ಇದ್ದರೆ, ನಮ್ಮ ತಾಂಡಾದಲ್ಲಿ ಏಕಿಲ್ಲ? ನಮಗೇಕೆ ಈ ಶಿಕ್ಷೆ’ ಎಂದು ತಾಲ್ಲೂಕಿನ ಐನಾಪುರ ಗ್ರಾ.ಪಂ. ವ್ಯಾಪ್ತಿಯ ಫತ್ತುನಾಯಕ ತಾಂಡಾದ ಪುಟಾಣಿ ಮಕ್ಕಳು ಪ್ರಶ್ನಿಸುತ್ತಿದ್ದಾರೆ.

ಶಿಕ್ಷಣ ಸಾರ್ವತ್ರಿಕರಣದ ಇಂದಿನ ದಿನಗಳಲ್ಲಿ ಪುಟ್ಟ ಮಕ್ಕಳು ಅಕ್ಷರ ಕಲಿಕೆಗೆ ಎರಡ್ಮೂರು ಕಿ.ಮೀ ದೂರ ತೆರಳುತ್ತಿರುವುದು ಶಿಕ್ಷಣ ಇಲಾಖೆಯ ಕುರುಡುತನಕ್ಕೆ ಸಾಕ್ಷಿಯಾಗಿದೆ.

‘ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಕಲಬುರಗಿಯಲ್ಲಿ ಆರಂಭವಾದ ಹೆಚ್ಚುವರಿ ಆಯುಕ್ತರ ಕಚೇರಿಯಿದ್ದರೂ ಈ ತಾಂಡಾಕ್ಕೆ ಸ್ವಂತ ಸರ್ಕಾರಿ ಶಾಲೆ ಗಗನಕುಸುಮವಾಗಿದೆ’ ಎಂಬ ಆರೋಪ ತಾಂಡಾ ವಾಸಿಗಳದ್ದಾಗಿದೆ.

ದಶಕದ ಹಿಂದೆ ಅನುದಾನಿತ ಶಾಲೆ ಹೊಂದಿದ್ದ ತಾಲ್ಲೂಕಿನ ಫತ್ತು ನಾಯಕ ತಾಂಡಾದಲ್ಲಿ ಈಗ ಸರ್ಕಾರಿ ಮತ್ತು ಖಾಸಗಿ ಶಾಲೆಯೇ ಇಲ್ಲ. ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿದ್ದು 50ಕ್ಕೂ ಅಧಿಕ ಮಕ್ಕಳಿದ್ದಾರೆ. ಶಾಲೆಗೆ ಹೋಗುವ 60ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಶಾಲೆಗೆ ಮಕ್ಕಳು ನೆರೆಹೊರೆಯ ತಾಂಡಾ ಮತ್ತು ಗ್ರಾಮಗಳನ್ನು ಅವಲಂಬಿಸುವಂತಾಗಿದೆ. ಇದರಿಂದ ಇಲ್ಲಿನ ಮಕ್ಕಳು ಈ ತಾಂಡಾದಲ್ಲಿ ಹುಟ್ಟುವುದೇ ಪಾಪ ಎಂದು ಕೊಳ್ಳುವಂತಾಗಿದೆ.

ಫತ್ತು ನಾಯಕ ತಾಂಡಾದಲ್ಲಿ 1982ರಿಂದ ಖಾಸಗಿ ಶಾಲೆಯೊಂದು 2010ರವರೆಗೆ ನಡೆಸಲಾಗಿದೆ. ಈ ಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು, 2010-11ರಲ್ಲಿ ಶಾಲೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಿಸುವಾಗ ತಾಂಡಾದಲ್ಲಿ ಸರ್ಕಾರಿ ಅಥವಾ ಇನ್ನಿತರ ಶಾಲೆಯಿದೆಯೇ ಎನ್ನುವುದು ಮತ್ತು ಅಲ್ಲಿ ದಾಖಲಾದ ಮಕ್ಕಳ ಶೈಕ್ಷಣಿಕ ಜೀವನದ ಬಗ್ಗೆ ಮುಂದಾಲೋಚನೆ ಮಾಡದೇ ಇರುವುದರಿಂದ ಈಗ ತಾಂಡಾವಾಸಿಗಳು ಬೇರೆ ತಾಂಡಾದ ಶಾಲೆಯನ್ನು ಅವಲಂಬಿಸಿದ್ದಾರೆ.

ಫತ್ತುನಾಯಕ ತಾಂಡಾದಿಂದ ನಾಮು ನಾಯಕ ತಾಂಡಾ 2 ಕಿ.ಮೀ. ಅಂತರದಲ್ಲಿದೆ. ಭೂಂಯಾರ್(ಕೆ) 3 ಕಿ.ಮೀ ಅಂತರ ಹೊಂದಿದೆ. ಫತ್ತುನಾಯಕ ತಾಂಡಾದ ಕೆಲವು ಮಕ್ಕಳು ನಾಮು ನಾಯಕ ತಾಂಡಾಕ್ಕೆ ಹೋದರೆ ಇನ್ನೂ ಕೆಲವು ಮಕ್ಕಳು ಭೂಂಯಾರ್(ಕೆ) ಶಾಲೆಗೆ ಹೋಗುತ್ತಿದ್ದಾರೆ. ತಾಂಡಾದಲ್ಲಿ ಶಾಲೆ ಇಲ್ಲದ ಕಾರಣ ಕೆಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ತಾಂಡಾದ ಗ್ರಾ.ಪಂ. ಸದಸ್ಯ ಲಕ್ಷ್ಮಣ ರಾಠೋಡ್ ದೂರುತ್ತಾರೆ.

ಸದ್ಯ ತಾಂಡಾದಲ್ಲಿ 1ರಿಂದ 5ನೇ ತರಗತಿವರೆಗೆ ತಾತ್ಕಾಲಿಕ ಶಾಲೆ ನಡೆಯುತ್ತಿದೆ. ದಾಖಲಾತಿ ನಾಮುನಾಯಕ ತಾಂಡಾದಲ್ಲಿದೆ. ಅತಿಥಿ ಶಿಕ್ಷಕರೇ ಎಲ್ಲಾ ತರಗತಿ ನಿರ್ವಹಿಸುತ್ತಿದ್ದಾರೆ.

ಇದರಿಂದ ಗುಣಮಟ್ಟದ ಶಿಕ್ಷಣ ಮರಿಚೀಕೆಯಾಗಿದೆ. ಅಕ್ಷರ ದಾಸೋಹದ ಬಿಸಿ ಊಟ ಯೋಜನೆಗೆ ಅನುಷ್ಠಾನಕ್ಕೆ ಒಬ್ಬರು ಅಡುಗೆಯವರನ್ನು ನಿಯೋಜಿಸಿದ್ದಾರೆ. ಅವರು ಬಿಸಿ ಊಟ, ಮೊಟ್ಟೆ, ಹಾಲು ಒದಗಿಸುತ್ತಿದ್ದಾರೆ.

ತಾಂಡಾದಲ್ಲಿ ನಡೆಯುತ್ತಿದ್ದ ಅನುದಾನಿತ ಶಾಲೆ ಬಂದ್ ಆಗಿ ಒಂದೂವರೆ ದಶಕವಾದರೂ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ನಮ್ಮ ತಾಂಡಾಕ್ಕೆ ಸರ್ಕಾರಿ ಶಾಲೆ ಮಂಜೂರಿಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಗ್ರಾ.ಪಂ.ಉಪಾಧ್ಯಕ್ಷೆ ಉಮ್ಲಿಬಾಯಿ ಚಿನ್ನಾ ರಾಠೋಡ್ ಹೇಳುತ್ತಾರೆ.

ಅನೇಕ ಕಡೆಗಳಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಮುಚ್ಚಿವೆ. ಒಂದು ಶಾಲೆ ಸ್ಥಳಾಂತರಕ್ಕೆ ಅಧಿಕಾರಿಗಳು ಮನಸ್ಸು ಮಾಡದಿರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯ ಪ್ರತೀಕವಾಗಿದೆ ಎನ್ನುತ್ತಾರೆ. 

ಫತ್ತು ನಾಯಕ ತಾಂಡಾದಲ್ಲಿ ಶಾಲೆ ಇಲ್ಲದ ಬಗ್ಗೆ ನಾನು ಸಂಬಂಧಿಸಿದವರ ಜತೆಗೆ ಮಾತನಾಡುತ್ತೇನೆ. ಏನಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತೇನೆ

-ಸಕ್ರೆಪ್ಪಗೌಡ ಬಿರಾದಾರ,ಡಿಡಿಪಿಐ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT