ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಜಮೀನಲ್ಲಿ ದಂಡಗುಂಡ ದೇವಸ್ಥಾನ

13 ಎಕರೆ ಸರ್ಕಾರಿ ಗಾಯರಾಣು ಜಮೀನು ನೀಡಲು ಜಿಲ್ಲಾಧಿಕಾರಿಗೆ ಪತ್ರ
Published : 13 ಸೆಪ್ಟೆಂಬರ್ 2024, 6:37 IST
Last Updated : 13 ಸೆಪ್ಟೆಂಬರ್ 2024, 6:37 IST
ಫಾಲೋ ಮಾಡಿ
Comments

ಚಿತ್ತಾಪುರ: ತಾಲ್ಲೂಕಿನ ದಂಡಗುಂಡ ಗ್ರಾಮದಲ್ಲಿರುವ ಬಸವಣ್ಣ ದೇವಸ್ಥಾನ ಹಾಗೂ ಗುರು ಸಂಗಮೇಶ್ವರ ಸಂಸ್ಥಾನ ಹಿರೇಮಠವು ಸರ್ಕಾರಿ ಗಾಯರಾಣು ಜಮೀನಿನಲ್ಲಿರುವುದು ಹಾಗೂ ದೇವಸ್ಥಾನಕ್ಕೆ 13 ಎಕರೆ ಜಮೀನು ನೀಡಲು ಯೋಗ್ಯವಿದೆ ಎಂದು ಅಧಿಕಾರಿಗಳೇ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಉಪ ವಿಭಾಗಾಧಿಕಾರಿಗೆ ತಹಶೀಲ್ದಾರ್ ವರದಿ: ದಂಡಗುಂಡ ಗ್ರಾಮದ ಸರ್ಕಾರದ ಸುಮಾರು 13 ಎಕರೆ ಜಮೀನಿನಲ್ಲಿ ಬಸವಣ್ಣ ದೇವಸ್ಥಾನ ನಿರ್ಮಾನವಾಗಿದೆ. ದಂಡಗುಂಡ ಬಸವೇಶ್ವರ ಟ್ರಸ್ಟ್ ಸಮಿತಿಯಿಂದ ಅಭಿವೃದ್ಧಿ ಹೊಂದಿರುವ ದೇವಸ್ಥಾನವನ್ನು ಸರ್ಕಾರಿ ಗಾಯರಾಣ ಜಮೀನಿನ 13 ಎಕರೆ ಪಹಣಿ ಪತ್ರಿಕೆಯಲ್ಲಿ ನಮೂದಿಸಲು ಹಾಗೂ ಜಮೀನು ಮಂಜೂರಾತಿ ನೀಡಲು ತಹಶೀಲ್ದಾರ್ 2023ರ ಸೆಪ್ಟೆಂಬರ್ 26ರಂದು ಸೇಡಂ ಉಪ ವಿಭಾಗಾಧಿಕಾರಿಗೆ ವರದಿ ಸಲ್ಲಿಸಿರುವುದು ಪತ್ರ ವ್ಯವಹಾರದ ದಾಖಲೆಗಳಿಂದ ಪತ್ತೆಯಾಗಿದೆ.

ಉಪ ವಿಭಾಗಾಧಿಕಾರಿಯಿಂದ ಜಿಲ್ಲಾಧಿಕಾರಿಗೆ ಪತ್ರ: ಸರ್ಕಾರಿ ಗಾಯರಾಣ ಜಮೀನು ದಂಡಗುಂಡ ಗ್ರಾಮದಿಂದ 2 ಕಿ.ಮೀ ದೂರದಲ್ಲಿದೆ. ಗ್ರಾಮದಲ್ಲಿ ಒಟ್ಟು 1158 ದನಕರುಗಳಿವೆ. 1963–64 ರಿಂದ 1987–88ರವರೆಗೆ ಕೈಬರಹದ ಪಹಣಿ ಪತ್ರಿಕೆ, 2000–01 ರಿಂದ 2023–24ರವರೆಗೆ ಕಂಪ್ಯೂಟರ್ ಪಹಣಿಗಳಿವೆ. ‘ತಹಶೀಲ್ದಾರ್ ಅವರು ವರದಿ ಸಲ್ಲಿಸಿ 13 ಎಕರೆ ಜಮೀನು ದಂಡಗುಂಡ ಬಸವಣ್ಣ ದೇವಸ್ಥಾನಕ್ಕೆ ನೀಡಲು ಯೋಗ್ಯವಿದೆ ಎಂದಿದ್ದಾರೆ’ ಎಂದು ಸೇಡಂ ಉಪ ವಿಭಾಗಾಧಿಕಾರಿ 2023ರ ಅಕ್ಟೋಬರ್ 10ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಪ್ರತಿ ‘ಪ್ರಜಾವಾಣಿ’ಗೆ ಲಭಿಸಿದೆ.

ಒಂದು ಎಕರೆ ಒಂಬತ್ತು ಗುಂಟೆಯಲ್ಲಿ ದೇವಸ್ಥಾನ, ಮಠ: ದಂಡಗುಂಡ ಗ್ರಾಮದ ಸರ್ಕಾರಿ ಗಾಯರಾಣ ಜಮೀನಿನಲ್ಲಿಯೇ ದಂಡಗುಂಡ ಬಸವಣ್ಣ ದೇವಸ್ಥಾನ ಹಾಗೂ ಗುರು ಸಂಗಮೇಶ್ವರ ಸಂಸ್ಥಾನ ಹಿರೇಮಠವಿದೆ. ಕಂದಾಯ ದಾಖಲೆ ಪ್ರಕಾರ ಒಟ್ಟು 1 ಎಕರೆ 9 ಗುಂಟೆ ಜಮೀನಲ್ಲಿವೆ. 1 ಎಕರೆ 9 ಗುಂಟೆ ಜಮೀನಿನ ಪಹಣಿ ಪತ್ರಿಕೆಯಲ್ಲಿ ದೇವಸ್ಥಾನ ಮತ್ತು ಮಠದ ಹೆಸರು ನಮೂದಿಸಬೇಕು ಎಂದು ಸಂಗಮೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಂಗನಬಸವ ಶಿವಾಚಾರ್ಯರು 2023ರ ಸೆ.26ರಂದು ಸೇಡಂ ಉಪ ವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ.

ಅಧಿಕಾರಿಗಳಿಂದಲೇ ನಿಯಮ ಉಲ್ಲಂಘನೆ?: ದಂಡಗುಂಡ ದೇವಸ್ಥಾನಕ್ಕೆ 'ಸರ್ಕಾರಿ ಗಾಯರಾಣ' ಜಮೀನು ಮಂಜೂರಾತಿ ನೀಡುವ ಸಂಬಂಧ ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್ ಸರ್ಕಾರಿ ಜಮೀನು ಕಾಯ್ದಿರಿಸಬೇಕು ಎಂಬುದು ಕಂದಾಯ ಕಾಯ್ದೆಗಳ ನಿಯಮದಲ್ಲಿದೆ. ಅಧಿಕಾರಿಗಳೇ ಹೇಳಿರುವಂತೆ ದಂಡಗುಂಡದಲ್ಲಿ 1158 ಜಾನುವಾರುಗಳಿದ್ದು, ಒಟ್ಟು 138 ಹೆಕ್ಟೇರ್ (276 ಎಕರೆ ಜಮೀನಿಗಿಂತ ಅಧಿಕ) ಜಮೀನು ಜಾನುವಾರುಗಳಿಗೆ ಮೀಸಲಿರಿಸಬೇಕಾಗುತ್ತದೆ. 144 ಎಕರೆ 6 ಗುಂಟೆ ಸರ್ಕಾರಿ ಗಾಯರಾಣ ಜಮೀನಲ್ಲಿ 13 ಎಕರೆ ದೇವಸ್ಥಾನಕ್ಕೆ ನೀಡಲು ಮುಂದಾಗಿರುವ ಅಧಿಕಾರಿಗಳು ಕರ್ನಾಟಕ ಭೂ ಕಂದಾಯ ನಿಯಮ ಉಲ್ಲಂಘನೆ ಮಾಡಿದ್ದಾರೆಯೇ? ಎನ್ನುವ ಮಾತುಗಳು ಆಡಳಿತ ವಲಯದಲ್ಲಿ ಕೇಳಿ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT