ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಶಿಕ್ಷಕರ ಸಾಮೂಹಿಕ ವರ್ಗಾವಣೆಗೆ ಒತ್ತಾಯ

ಸೀತನೂರ ಶಾಲೆಗೆ ಬೀಗ ಹಾಕಿ ಗ್ರಾಮಸ್ಥರ ಪ್ರತಿಭಟನೆ
Published 23 ಜುಲೈ 2024, 16:23 IST
Last Updated 23 ಜುಲೈ 2024, 16:23 IST
ಅಕ್ಷರ ಗಾತ್ರ

ಕಲಬುರಗಿ: ತಾಲ್ಲೂಕಿನ ಸೀತನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಸಾಮೂಹಿಕ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಮಂಗಳವಾರ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಶಾಲೆಯಲ್ಲಿ ಏಳು ಮಂದಿ ಶಿಕ್ಷಕರಿದ್ದು, ಯಾರೂ ನಿಗದಿತ ಅವಧಿಗೆ ಶಾಲೆಗೆ ಬರುತ್ತಿಲ್ಲ. ಬಹುತೇಕ ಶಿಕ್ಷಕರು ಕಳೆದ 15 ವರ್ಷಗಳಿಂದ ಇದೇ ಶಾಲೆಯಲ್ಲಿ ಕಲಿಸುತ್ತಿದ್ದಾರೆ. ಆದರೆ ನಮ್ಮ ಮಕ್ಕಳಿಗೆ ಕನ್ನಡ ಓದು–ಬರಹವೇ ಬರುವುದಿಲ್ಲ. ಅನಾರೋಗ್ಯಪೀಡಿತ ಶಿಕ್ಷಕಿಯೊಬ್ಬರಿಗೆ ಪಾಠ–ಪ್ರವಚನ ಮಾಡಲು ಆಗುವುದಿಲ್ಲ. ಇದರಿಂದ ನಮ್ಮ ಮಕ್ಕಳ ಕಲಿಕಾ ಗುಣಮಟ್ಟ ಕುಸಿದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬರುವ ವರೆಗೂ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಬಂದ ಡಿಡಿಪಿಐ ಸೂರ್ಯಕಾಂತ ಮದಾನಿ, ಬಿಇಒ ವಿಜಯಕುಮಾರ್‌ ಜಮಖಂಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.

‘ಕನ್ನಡ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ 146 ಮಕ್ಕಳಿದ್ದು,  ಉರ್ದು ಮಾಧ್ಯಮದಲ್ಲಿ 1 ರಿಂದ 5ನೇ ತರಗತಿ ವರೆಗೆ 26 ಮಕ್ಕಳಿದ್ದಾರೆ. ಆದರೆ ಕೇವಲ 4 ರಿಂದ 5 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಸರಿಯಾದ ಸಮಯಕ್ಕೆ ಬರದ ಕಾರಣ ಶಾಲೆಯಲ್ಲಿ ಬಯೋಮೆಟ್ರಿಕ್‌  ಅಳವಡಿಸಬೇಕು. ಶಾಲೆಗೆ ಮುಖ್ಯಶಿಕ್ಷಕರು, ವಿಷಯಾಧಾರಿತ ಶಿಕ್ಷಕರನ್ನು ನೇಮಕ ಮಾಡಬೇಕು. ಆರೋಗ್ಯ ಸರಿ ಇಲ್ಲದ ಶಿಕ್ಷಕಿಯನ್ನು ಬೇರೆಡೆಗೆ ನಿಯೋಜಿಸಬೇಕು. ಎಲ್ಲ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು. ‌ ಕಳೆದ 15 ವರ್ಷದಿಂದ ಒಂದೇ ಶಾಲೆಯಲ್ಲಿ ಇರುವ ಶಿಕ್ಷಕರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಶೀಘ್ರವೇ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುವುದು. ಶಾಲೆಯ ಇನ್ನಿತರ ಸಮಸ್ಯೆ ಬಗೆಹರಿಸುವುದಾಗಿ ಡಿಡಿಪಿಐ ಸೂರ್ಯಕಾಂತ ಮದಾನಿ ಅವರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು ಎಂದು ಗ್ರಾಮಸ್ಥ ಉಮೇಶ ಶೃಂಗೇರಿ ಹೇಳಿದರು.

ಈ ಸಂದರ್ಭದಲ್ಲಿ ಗೌತಮ ಶೃಂಗೇರಿ, ಸಂಜೀವ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಗ್ರಾಮಸ್ಥರ ಮನವಿ ಆಲಿಸಿದ ಡಿಡಿಪಿಐ ಸೂರ್ಯಕಾಂತ ಮದಾನಿ
ಗ್ರಾಮಸ್ಥರ ಮನವಿ ಆಲಿಸಿದ ಡಿಡಿಪಿಐ ಸೂರ್ಯಕಾಂತ ಮದಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT