ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ–ತಿರುಪತಿ ವಿಮಾನ ಸೇವೆ ಸ್ಥಗಿತ

ದೆಹಲಿ, ಮುಂಬೈ, ಹೈದರಾಬಾದ್ ಬಳಿಕ ಧಾರ್ಮಿಕ ಕ್ಷೇತ್ರದ ಸಂಪರ್ಕ ಕಡಿತ
Published 4 ಜುಲೈ 2024, 5:59 IST
Last Updated 4 ಜುಲೈ 2024, 5:59 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ಮತ್ತು ತಿರುಪತಿ ನಡುವೆ ವಾರದಲ್ಲಿ ನಾಲ್ಕು ದಿನಗಳು ಸಂಚರಿಸುತ್ತಿದ್ದ ಸ್ಟಾರ್‌ಏರ್ ವಿಮಾನದ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಹಿಂಡಾನ್ (ದೆಹಲಿ), ಮುಂಬೈ ಮತ್ತು ಹೈದರಾಬಾದ್‌ ಸಂಪರ್ಕ ಕಡಿತದ ಬಳಿಕ ಈಗ ಧಾರ್ಮಿಕ ಕೇಂದ್ರದ ಸಂಪರ್ಕವೂ ಇಲ್ಲವಾಗಿದೆ. ರಾಜಧಾನಿ ಬೆಂಗಳೂರಿನ ಸಂಪರ್ಕವೊಂದೇ ಉಳಿದುಕೊಂಡಿದೆ.

2019ರ ನವೆಂಬರ್ 22ಕ್ಕೆ ಲೋಕಾರ್ಪಣೆಗೊಂಡ ಕಲಬುರಗಿ ವಿಮಾನ ನಿಲ್ದಾಣವು ಐದು ವರ್ಷಗಳು ಪೂರೈಸುವ ಸನಿಹದಲ್ಲಿದೆ. ರಷ್ಯಾ ನಿರ್ಮಿತಿ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್‌ (ಐಎಲ್‌ಎಸ್‌), ಅತ್ಯಾಧುನಿಕ ತಂತ್ರಜ್ಞಾನದ ರನ್‌ವೇ, ಎಟಿಸಿ, ಲೈಟಿಂಗ್ ವ್ಯವಸ್ಥೆಯ ಜತೆಗೆ ನೈಟ್ ಲ್ಯಾಡಿಂಗ್‌ ಇದ್ದರೂ ವಿಮಾನ ಸೇವೆ ವಿಸ್ತರಣೆ ಆಗುತ್ತಿಲ್ಲ ಎಂಬುದು ಪ್ರಯಾಣಿಕರ ಅಳಲು.

ನಿಲ್ದಾಣ ಉದ್ಘಾಟನೆಯ ಆರಂಭದಿಂದಲೂ ತಿರುಪತಿ ನಡುವೆ ವಿಮಾನ ಹಾರಾಟ ಶುರುವಾಗಿತ್ತು. ಕೋವಿಡ್ ಅವಧಿಯ ಒಂದು ವರ್ಷ ಹೊರತುಪಡಿಸಿದರೆ ವಿಮಾನಯಾನ ಸಂಸ್ಥೆಯು ಉಳಿದ ವರ್ಷಗಳಲ್ಲಿ ತನ್ನ ಅನುಕೂಲಕ್ಕೆ ತಕ್ಕಂತೆ ವಾರದಲ್ಲಿ ಎರಡು, ಮೂರು, ನಾಲ್ಕು ದಿನಗಳ ಕಾಲ ಹಾರಾಟ ನಡೆಸಿತ್ತು. ಕಲಬುರಗಿ– ತಿರುಪತಿ ನಡುವಿನ ಲೋಹದ ಹಕ್ಕಿಯ ನಂಟು ಜೂನ್‌ 27ಕ್ಕೆ ಕೊನೆಗೊಳ್ಳುತ್ತಿದ್ದಂತೆ ತಿಮ್ಮಪ್ಪನ ಭಕ್ತರಲ್ಲಿ ಬೇಸರ ತರಿಸಿದೆ.

ತಿರುಪತಿಯ ಸ್ಟಾರ್‌ಏರ್ ವಾರದಲ್ಲಿ ನಾಲ್ಕು ದಿನಗಳು ಸಂಚರಿಸುತ್ತಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತಿತ್ತು. ಪ್ರತಿ ಬಾರಿ ಸುಮಾರು 15 ಜನರು ಪ್ರಯಾಣಿಸುತ್ತಿದ್ದರೂ ಉಡಾನ್ ಯೋಜನೆಯಡಿ ಶೇ 50ರಷ್ಟು ಸೀಟುಗಳಿಗೆ ಸಬ್ಸಿಡಿ ಲಭ್ಯವಾಗುತ್ತಿತ್ತು. ಹೀಗಾಗಿ, ಬಂದಷ್ಟೇ ಪ್ರಯಾಣಿಕರನ್ನು ಹೊತ್ತು ನಷ್ಟವನ್ನು ಸರಿದೂಗಿಸಿಕೊಳ್ಳುತ್ತಿತ್ತು. ಈಗ ಆ ಹಾರಾಟವೂ ಸ್ಥಗಿತವಾಗಿದೆ ಎನ್ನುತ್ತಾರೆ ನಿಲ್ದಾಣದ ಅಧಿಕಾರಿಗಳು.

ಕಾರ್ಯಾಚರಣೆ ವಿಸ್ತರಣೆ: ‘ಬೆಂಗಳೂರು–ಕಲಬುರಗಿ ನಡುವೆ ಅಲಯನ್ಸ್‌ ಏರ್ ವಿಮಾನವು ರಾತ್ರಿ ವೇಳೆ ವಾರದಲ್ಲಿ ಎರಡು ದಿನ (ಸೋಮವಾರ ಮತ್ತು ಮಂಗಳವಾರ) ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ವಾರದಿಂದ ಅದು ವಾರದಲ್ಲಿ ಮೂರು ದಿನ (ಗುರುವಾರ ಸೇರಿ) ಹಾರಾಟ ನಡೆಸಲಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 5.45ಕ್ಕೆ ಹೊರಟು 7.20ಕ್ಕೆ ಕಲಬುರಗಿ ತಲುಪಲಿದೆ. ಸಂಜೆ 7.45ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 9.10ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರು– ಕಲಬುರಗಿ ನಡುವೆ ಸ್ಟಾರ್‌ಏರ್‌ ವಿಮಾನವು ಎಂದಿನಂತೆ ನಿತ್ಯ ಬೆಳಿಗ್ಗೆ ಹಾರಾಟ ಮಾಡಲಿದೆ’ ಎಂದರು.

ನಿಲ್ದಾಣಕ್ಕಿಲ್ಲ ಬಸ್ ಸಂಪರ್ಕ!
ವಿಮಾನ ನಿಲ್ದಾಣದ ಸೇವೆ ಶುರುವಾಗಿ ಇಲ್ಲಿಯವರೆಗೂ ನಗರದಿಂದ ನೇರವಾಗಿ ಬಸ್‌ಗಳ ವ್ಯವಸ್ಥೆ ಇಲ್ಲ ಎಂದು ನಿಲ್ದಾಣದ ಅಧಿಕಾರಿ ಬೇಸರ ವ್ಯಕ್ತಪಡಿಸಿದರು.  ‘ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಸ್ವಚ್ಛತಾ ಸಿಬ್ಬಂದಿ ತಾಂತ್ರಿಕ ವರ್ಗ ಸೇರಿ 100ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಕೆಲವರು ಬೈಕ್‌ಗಳನ್ನೇ ಅವಲಂಬಿಸಿದ್ದಾರೆ. ಕಲಬುರಗಿ– ಸೇಡಂ ರಸ್ತೆಯಲ್ಲಿ ರಾತ್ರಿ ವೇಳೆ ಟ್ರಕ್‌ ಲಾರಿಗಳು ಸಂಚರಿಸುತ್ತವೆ. ರಾತ್ರಿ ವೇಳೆ ಕಣ್ಣು ಕೊರೆಯುವ ಲೈಟ್ ಗಾಳಿ ಮಳೆಯಲ್ಲಿ ಜೀವ ಭಯದಲ್ಲಿ ಓಡಾಡುವಂತಾಗಿದೆ. ರಾತ್ರಿ ವಿಮಾನಕ್ಕೆ ಬರುವವರು ಸ್ವಂತ ವಾಹನವನ್ನೇ ಅವಲಂಬಿಸುತ್ತಾಗಿದೆ’ ‌‌ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ನೌಕರ. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಕೆಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ‘ನಿಲ್ದಾಣದ ಅಧಿಕಾರಿಗಳು ವಿಮಾನಗಳ ಹಾರಾಟದ ಸಮಯದ ಮಾಹಿತಿಯನ್ನು ಸಂಸ್ಥೆಗೆ ನೀಡಿದರೆ ಅದಕ್ಕೆ ಅನುಗುಣವಾಗಿ ಬಸ್‌ಗಳ ವ್ಯವಸ್ಥೆ ಮಾಡುತ್ತೇವೆ. ಎರಡು ತಿಂಗಳವರೆಗೆ ಈಗಿರುವ ಸಾಧಾರಣ ಬಸ್‌ಗಳನ್ನು ಓಡಿಸಿ ಆ ಬಳಿಕ ಹೈಫೈ ಬಸ್‌ಗಳ ವ್ಯವಸ್ಥೆ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT