ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರಾಕಾರ ಮಳೆ; ತಂಪಾದ ಇಳೆ

ಜಿಲ್ಲೆಯಲ್ಲಿ ತೇವಾಂಶ ಕೊರತೆಯಿಂದ ಬಾಡುತ್ತಿದ್ದ ಮುಂಗಾರು ಬೆಳೆಗಳಿಗೆ ಜೀವಕಳೆ ತುಂಬಿದ ವರುಣ
Published 1 ಜುಲೈ 2024, 5:52 IST
Last Updated 1 ಜುಲೈ 2024, 5:52 IST
ಅಕ್ಷರ ಗಾತ್ರ

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮುಂಗಾರು ಮಳೆ ಚುರುಕು ಪಡೆದಿದ್ದು, ಭಾನುವಾರ ಧಾರಾಕಾರ ಸುರಿದಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಲಬುರಗಿಯಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸೆಕೆಯೂ ಹೆಚ್ಚಾಗಿತ್ತು. ಆಗಸದಲ್ಲಿ ದಟ್ಟೈಸಿದ್ದ ಮೋಡಗಳು ಮಧ್ಯಾಹ್ನ 2.45ರ ಸುಮಾರಿಗೆ ಧಾರಾಕಾರ ಮಳೆ ಸುರಿಸಿದವು. ಬಳಿಕ ಜಿಟಿ–ಜಿಟಿ ಮಳೆಯಾಯಿತು. ಸಂಜೆ 5 ಗಂಟೆ ಹೊತ್ತಿಗೆ ಮತ್ತೊಮ್ಮೆ ಬಿರುಸಿನ ಮಳೆ ಸುರಿಯಿತು.

ಬಹುತೇಕ ಒಂದು ವಾರದ ಬಿಡುವಿನ ಬಳಿಕ ಸುರಿದ ಮಳೆಗೆ ಚರಂಡಿಗಳು ತುಂಬಿ ಹರಿದವು. ಕಾವೇರಿದ್ದ ವಾತಾವರಣವೂ ತಂಪಾಯಿತು. ರಾತ್ರಿಯೂ ಜಿಟಿ–ಜಿಟಿ ಮಳೆ ಹನಿ ಮುಂದುವರಿದಿತ್ತು.

ಇನ್ನು, ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಕಮಲಾಪುರ, ಕಾಳಗಿ, ಶಹಾಬಾದ್‌ ತಾಲ್ಲೂಕುಗಳಲ್ಲೂ ಉತ್ತಮ ಮಳೆಯಾಗಿದೆ. ಭಾನುವಾರ ಸುರಿದ ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಳೆ ಹಾಗೂ ತೇವಾಂಶ ಕೊರತೆ ಎದುರಿಸುತ್ತಿದ್ದ ಹೆಸರು, ಉದ್ದು, ತೊಗರಿ ಬೆಳೆಗಳಿಗೆ ಭಾನುವಾರದ ಮಳೆ ಪೂರಕವಾಗಿದೆ. ಕಳೆದೊಂದು ವಾರದಿಂದ ಮಳೆ ಬಾರದೆ ರೈತರು ಮುಂಗಾರು ಬೆಳೆ ತೊಗರಿ ಬಿತ್ತನೆ ಸ್ಥಗಿತಗೊಳಿಸಿದ್ದರು.‌

ಬೆಳೆಗಳಿಗೆ ವರ:

ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ಮಳೆ ಸುರಿದಿದೆ. ಮಳೆಗಾಗಿ ಆಗಸದತ್ತ ಮುಖ ಮಾಡಿದ್ದ ರೈತರು ತುಸು ನಿರಾಳರಾಗಿದ್ದಾರೆ. ತೇವಾಂಶ ಕೊರತೆಯಿಂದ ಬೆಳೆಗಳು ಬಾಡುತ್ತಿದ್ದ ಸಮಯದಲ್ಲೇ ಸುರಿದ ಮಳೆ, ಮುಂಗಾರು ಬೆಳೆಗಳಿಗೆ ವರವಾಗಿದೆ. ಆದರೆ, ಇಳೆ ಸಂಪೂರ್ಣವಾಗಿ ತಣಿಯುವಷ್ಟು ಮಳೆಯಾಗಿಲ್ಲ.

ಶಹಾಬಾದ್‌ನಲ್ಲಿ ಉತ್ತಮವಾಗಿ ಮಳೆ ಸುರಿದಿದ್ದು, ಮಧ್ಯಾಹ್ನದಿಂದ ಸಂಜೆ ತನಕ ಮಳೆ ಹನಿ ಮುಂದುವರಿದಿತ್ತು. ಕಮಲಾಪುರದಲ್ಲೂ ಭಾನುವಾರ ಬಿರುಸಿನ ಮಳೆಯಾಗಿದ್ದು, ತೇವಾಂಶ ಕೊರತೆ ಎದುರಿಸುತ್ತಿದ್ದ ಬೆಳೆಗಳಿಗೆ ಆಧಾರವಾಯಿತು. ಈಚೆಗೆ ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆಯಲು ಅನುಕೂಲವಾಯಿತು.

ವಾಡಿ ಸುತ್ತಲಿನ ಪ್ರದೇಶದಲ್ಲೂ ಉತ್ತಮ ಮಳೆ ಸುರಿದಿದೆ. ಜಿಟಿ–ಜಿಟಿ ಮಳೆ ಬೆಳೆಗಳ ಚೇತರಿಕೆಗೆ ನೆರವಾಗಿದೆ. ಕಾಳಗಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ವರ್ಷಧಾರೆ ಸುರಿದಿದೆ. ಶನಿವಾರ ರಾತ್ರಿಯೂ ಉತ್ತಮ ಮಳೆಯಾಗಿತ್ತು.

‘ಕಲಬುರಗಿ ನಗರದಲ್ಲಿ 2 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ನಂದೂರ ಕೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗರಿಷ್ಠ 39.5 ಮಿ.ಮೀ. ಮಳೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಸಾಧಾರಣದಿಂದ ಹಗುರ ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಫಜಲಪುರ ವರದಿ:

ತಾಲ್ಲೂಕಿನ ವಿವಿಧೆಡೆ ಭಾನುವಾರ ಎರಡು ಗಂಟೆಗಳ ಕಾಲ ಬಿರುಸಿನ ಮಳೆಯಾಗಿದೆ. ತಾಲ್ಲೂಕಿನಲ್ಲಿ 15 ದಿನಗಳ ಹಿಂದೆ ರೈತರು ತೊಗರಿ, ಹೆಸರು, ಸೂರ್ಯಕಾಂತಿ ಮತ್ತು ಹತ್ತಿ ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಈ ಮಳೆಯು ಹರ್ಷವುಂಟು ಮಾಡಿದೆ.

‘ರೈತರು ಮಳೆಗಾಗಿ ಕಾಯುತ್ತಿದ್ದರು. ಭಾನುವಾರ ಸುರಿದ ಮಳೆ ಅನುಕೂಲವಾಗಿದೆ. ಕೆಲವರು ತೇವಾಂಶ ಕೊರತೆಯಿಂದ ಬಿತ್ತನೆ ಮಾಡಿರಲಿಲ್ಲ. ಇನ್ನೂ ಕೆಲವರು ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದರು. ಹೀಗಾಗಿ ಎಲ್ಲ ರೈತರಿಗೂ ಮಳೆ ಅನುಕೂಲವಾಗಿದೆ. ರೈತರು ಬೀಜೋಪಚಾರ ಮಾಡಿಯೇ ಬಿತ್ತನೆ ಮಾಡಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಗಿಮನಿ ಸಲಹೆ ನೀಡಿದ್ದಾರೆ.

‘ಈ ಮಳೆಯಿಂದ ಬಹಳ ಅನುಕೂಲವಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ಇಟ್ಟುಕೊಂಡು ತಿಂಗಳಾಯ್ತು. ಮಳೆಗಾಗಿ ಕಾಯುತ್ತಿದ್ದೆವು. ಈಗ ಮಳೆ ಸುರಿದಿದ್ದು, ಒಂದೆರಡು ದಿನಗಳಲ್ಲಿ ಬಿತ್ತನೆ ನಡೆಸುತ್ತೇವೆ. ತೆರೆದ ಬಾವಿಗಳು, ಕೊಳವೆ ಬಾವಿಗಳಿಗೆ ಅಂತರ್ಜಲಮಟ್ಟ ಹೆಚ್ಚಳ ಆಗಬೇಕಾದರೆ ಇನ್ನಷ್ಟು ಮಳೆ ಸುರಿಯಬೇಕಿದೆ’ ಎಂದು ಮಾಶಾಳದ ರೈತ ಸಂತೋಷ ಗಂಜಿ, ಬಳ್ಳೂರ್ಗಿಯ ರೈತರಾದ ಸುರೇಶ್ ಹಂದಿಕೋಲ, ಲಕ್ಷಪ್ಪ ಎಲ್ಲಗೋಳ ಅಭಿಪ್ರಾಯಪಟ್ಟರು.

ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ಸಂಜೆ ಬಿರುಸಿನ ಮಳೆ ಸುರಿಯಿತು
ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ಸಂಜೆ ಬಿರುಸಿನ ಮಳೆ ಸುರಿಯಿತು

ಚಿತ್ತಾಪುರದಲ್ಲಿ ಮುಂದುವರಿದ ವರ್ಷಧಾರೆ ಚಿತ್ತಾಪುರ

ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಉತ್ತಮ ಮಳೆಯಾಗಿದೆ. ಮುಂಗಾರು ಬೆಳೆಗಳಿಗೆ ಭಾನುವಾರದ ಮಳೆ ಪೂರಕವಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಶನಿವಾರ ರಾತ್ರಿ ರಭಸವಾದ ಗಾಳಿಯೊಂದಿಗೆ ಜಿಟಿಜಿಟಿ ಮಳೆಯಾಗಿತ್ತು. ಭಾನುವಾರ ಮತ್ತೆ ಮಳೆ ಸುರಿದಿದ್ದರಿಂದ ಹೊಲಗಳಲ್ಲಿ ತೇವಾಂಶ ವೃದ್ಧಿಯಾಗಿದೆ. ಇದರಿಂದ ಹೆಸರು ಉದ್ದು ತೊಗರಿ ಬೆಳೆಗಳಿಗೆ ಹೊಸ ಚೈತನ್ಯ ಬಂದಿದೆ. ತಾಲ್ಲೂಕಿನ ಮಲಕೂಡ ದಂಡೋತಿ ಇವಣಿ ಬೆಳಗುಂಪಾ ಭಾಗೋಡಿ ಕದ್ದರಗಿ ಮುಡಬೂಳ ಮರಗೋಳ ಮೊಗಲಾ ದಿಗ್ಗಾಂವ ಸಾತನೂರು ಹೊಸೂರು ಡೋಣಗಾಂವ ರಾಜೋಳಾ ರಾಮತೀರ್ಥ ಭೀಮನಹಳ್ಳಿ ಅಲ್ಲೂರ್(ಕೆ) ಅಲ್ಲೂರ್(ಬಿ) ಬೆಳಗೇರಾ ಯಾಗಾಪುರ ದಂಡಗುಂಡ ಸಂಕನೂರು ಅಳ್ಳೊಳ್ಳಿ ಕರದಾಳ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT