ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಅನಧಿಕೃತ ಬಡಾವಣೆಗಳ ಹಾವಳಿ, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ

ಕಲಬುರಗಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಹೆಚ್ಚಿದ ಹಾವಳಿ; ಕಂದಾಯ ನಿವೇಶನದಲ್ಲಿಯೇ ಮನೆಗಳ ನಿರ್ಮಾಣ
Published : 9 ಸೆಪ್ಟೆಂಬರ್ 2024, 4:28 IST
Last Updated : 9 ಸೆಪ್ಟೆಂಬರ್ 2024, 4:28 IST
ಫಾಲೋ ಮಾಡಿ
Comments

ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಭಿವೃದ್ಧಿಗೆ ವೇಗ ಸಿಗುತ್ತಿದ್ದಂತೆಯೇ ಇಲ್ಲಿಯೇ ನಿವೇಶನ ಕೊಂಡು ಮನೆ ಕಟ್ಟಬೇಕೆಂಬ ಮಧ್ಯಮ ವರ್ಗದವರ ಆಸೆ ಹೆಚ್ಚಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ರಿಯಲ್ ಎಸ್ಟೇಟ್ ಕುಳಗಳು ಅಕ್ರಮ ಬಡಾವಣೆಗಳನ್ನು ನಿರ್ಮಿಸಿ ಹೆಚ್ಚಿನ ಬೆಲೆಗೆ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ. ಸೂಕ್ತ ದಾಖಲೆಗಳೂ ಇಲ್ಲದೇ ಇರುವುದರಿಂದ ಮನೆ ನಿರ್ಮಿಸಿಕೊಂಡವರು ತೆರಿಗೆ ಕಟ್ಟುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.

ಇದನ್ನು ತಡೆಯಬೇಕಿದ್ದ ಮಹಾನಗರ ಪಾಲಿಕೆಯಾಗಲಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವಾಗಲೀ ದೂರುಗಳು ಬಂದಾಗಲಷ್ಟೇ ಗಾಢ ನಿದ್ರೆಯಿಂದ ಎಚ್ಚೆತ್ತಂತೆ ಮಾಡಿ ನಂತರ ನೋಟಿಸ್ ನೀಡಿ ಕೈತೊಳೆದುಕೊಳ್ಳುತ್ತಿವೆ. ಅಬ್ಬಬ್ಬಾ ಎಂದರೆ ಲೇಔಟ್‌ನಲ್ಲಿ ಅಳವಡಿಸಿದ ಕಲ್ಲುಗಳನ್ನು ಕಿತ್ತು ’ಕಠಿಣ ಕ್ರಮದ ಸಂದೇಶ’ ರವಾನಿಸುತ್ತಿವೆ!

ಇತ್ತೀಚಿನ ವರ್ಷಗಳಲ್ಲಿ ಕೃಷಿ ಭೂಮಿಗಳಲ್ಲಿ ಬಡಾವಣೆಗಳು ತಲೆ ಎತ್ತುತ್ತಿದ್ದು, ಹಸಿರು ವಲಯದಲ್ಲಿ ಬಡಾವಣೆ ನಿರ್ಮಾಣ ಮತ್ತು ಕಂದಾಯ ಭೂಮಿಯ ಅಕ್ರಮ ನೋಂದಣಿ ಮೂಲಕ ಸರ್ಕಾರಕ್ಕೆ ವಂಚನೆ ಮಾಡಲಾಗುತ್ತಿದೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಅನುಮೋದನೆ ಪಡೆಯದೇ ಅನಧಿಕೃತವಾಗಿ 173 ಬಡಾವಣೆಗಳು ತಲೆಯೆತ್ತಿವೆ. ರಾಜ್ಯದ ಮಹಾನಗರ ಪಾಲಿಕೆಗಳ ಪೈಕಿ ಕಲಬುರಗಿಯಲ್ಲೇ ಅತ್ಯಧಿಕವಾಗಿವೆ.

ನಗರ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ನೂರಾರು ಬಡಾವಣೆಗಳು ನಿರ್ಮಾಣ ಆಗುತ್ತಿವೆ. ತೆರಿಗೆ, ಭೂ ಪರಿವರ್ತನೆಯ ಶುಲ್ಕ ಸೇರಿದಂತೆ ನೂರಾರು ಕೋಟಿ ರೂಪಾಯಿ ತೆರಿಗೆ ಸರ್ಕಾರದ ಖಜಾನೆ ಸೇರುತ್ತಿಲ್ಲ.

ಕಡಿಮೆ ಬೆಲೆ, ಸುಲಭ ಕಂತುಗಳು, ಮುಂಗಡ ಹಣ ಕಟ್ಟಿದರೆ ನಿವೇಶನಗಳನ್ನು ಖರೀದಿದಾರರ ಹೆಸರಿಗೆ ಮಾಡಿ ಕೊಡಲಾಗುತ್ತದೆ ಎಂಬ ಮಾಲೀಕರ ಮತ್ತು ರಿಯಲ್‌ ಎಸ್ಟೇಟ್ ಉದ್ಯಮಿಗಳ ಮಾತಿಗೆ ಮರುಳಾದ ಅನೇಕರು ವಂಚನೆಗೆ ಒಳಗಾಗಿದ್ದಾರೆ. ಕೇವಲ ಬಾಂಡ್ ಮೇಲೆಯೇ ನಿವೇಶನ ಖರೀದಿ ಪ್ರಕ್ರಿಯೆ ಹಾಗೂ ಹಣದ ಪಾವತಿ ನಡೆದಿದೆ.

ಉದ್ಯಾನಗಳಿಗೆ ಜಾಗ ಬಿಡದೇ ಇರುವುದು, ಸಿಎ ಸೈಟ್ ಮೀಸಲಿಡದಿರುವುದು, ನಿಗದಿತ ಅಳತೆಯಲ್ಲಿ ರಸ್ತೆ ನಿರ್ಮಾಣ ಮಾಡದಿರುವುದು ಕಂಡುಬಂದಿದೆ. ಹಲವೆಡೆ ಚರಂಡಿಗಳಿಗೆ ಜಾಗವೇ ಇಲ್ಲವಾಗಿದೆ. ಕೆಲವು ಕಡೆಗಳಲ್ಲಿ ನಿಗದಿಗಿಂತ ಕಡಿಮೆ ಜಾಗ ಬಿಟ್ಟು ರಸ್ತೆ ನಿರ್ಮಾಣ ಮಾಡಿದ ನಿದರ್ಶನಗಳೂ ಇವೆ ಎನ್ನುತ್ತಾರೆ ಅಧಿಕಾರಿಗಳು.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳು ಎಲ್ಲೆಲ್ಲಿವೆ ಎಂಬುದರ ಮಾಹಿತಿ ಸಿಗುವುದಿಲ್ಲ. ಜನರು ತಾವು ಖರೀದಿಸುತ್ತಿರುವುದು ಅಧಿಕೃತ ಬಡಾವಣೆ ಎಂದು ನಂಬಿ ಮೋಸ ಹೋಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಅನಧಿಕೃತ ಎಂದು ಗುರುತಿಸಿದ ಬಡಾವಣೆಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕುವ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಬೇಕು ಎನ್ನುತ್ತಾರೆ ಸ್ಥಳೀಯರು.

ಅನಧಿಕೃತ ಬಡಾವಣೆಗಳಲ್ಲಿ ಕಟ್ಟಡ ನಿರ್ಮಿಸಿಕೊಂಡವರು ಅಗತ್ಯ ದಾಖಲೆಗಳನ್ನು ಸಲ್ಲಿಸಿ, ದುಪ್ಪಟ್ಟು ತೆರಿಗೆ ಪಾವತಿಸಿದರೆ ಮಹಾನಗರ ಪಾಲಿಕೆಗೆ ಸೇರ್ಪಡೆ ಮಾಡಿಕೊಂಡು ಅಗತ್ಯ ಸೌಕರ್ಯ ಒದಗಿಸುವುದಾಗಿ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಅವರು ಭರವಸೆ ನೀಡಿದ್ದರು. ಆದರೆ, ಕಟ್ಟಡಗಳ ಮಾಲೀಕರಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗಲಿಲ್ಲ. ಇಂದಿಗೂ ನಗರದ ಅಂಚಿನಲ್ಲಿ ಬಡಾವಣೆಗಳಲ್ಲಿ ಸಮರ್ಪಕ ರಸ್ತೆ, ನೀರು, ಚರಂಡಿ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ ವ್ಯವಸ್ಥೆಯೂ ಸರಿಯಾಗಿಲ್ಲ.

ಮಹಾನಗರ ಪಾಲಿಕೆಯ ವಲಯ ಕಚೇರಿ 2ರಲ್ಲಿ 87, ವಲಯ ಕಚೇರಿ 3ರಲ್ಲಿ 49 ಹಾಗೂ ವಲಯ ಕಚೇರಿ 1ರಲ್ಲಿ 37 ಅನಧಿಕೃತ ಬಡಾವಣೆಗಳಿವೆ. ಕಪನೂರ, ಶೇಖ್ ರೋಜಾ, ನಿಜಾಮಪುರ, ಜಾಫರಾಬಾದ್, ಬಿದ್ದಾಪುರ, ಕೋಟನೂರ, ಸಿರಸಗಿ, ತಾಜಸುಲ್ತಾನಪುರ ಮತ್ತು ಕುವೆಂಪು ನಗರ ಅಕ್ರಮ ಬಡಾವಣೆಗಳ ತವರು ಮನೆಗಳಾಗಿವೆ. ಜತೆಗೆ ಸಾಕಷ್ಟು ಸಮಸ್ಯೆಗಳಿಂದ ಆವೃತವಾಗಿವೆ.

ಯಾರು ಏನಂತಾರೆ?

‘ಕೆಡಿಎ ಅನುಮೋದನೆ ಪಡೆಯಲ್ಲ’

ಬಹುತೇಕ ರಿಯಲ್ ಎಸ್ಟೇಟ್ ಉದ್ಯಮಿಗಳು ಜಿಲ್ಲಾಧಿಕಾರಿಗಳಿಂದ ಭೂಮಿಯನ್ನು ಕೃಷಿಯೇತರ (ಎನ್‌ಎ) ಚಟುವಟಿಕೆಗೆ ಅನುಮೋದನೆ ಮಾಡಿಸಿಕೊಳ್ಳುತ್ತಾರೆ. ಆದರೆ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯುವುದಿಲ್ಲ. ಒಂದೊಮ್ಮೆ ಅನುಮೋದನೆ ಪಡೆದರೆ ಉದ್ಯಾನ, ಶಿಕ್ಷಣ ಸಂಸ್ಥೆಯಂತಹ ನಾಗರಿಕ ಸೌಲಭ್ಯಗಳಿಗೆ ಹೆಚ್ಚಿನ ಜಾಗ ಮೀಸಲಿಡಬೇಕಾಗುತ್ತದೆ. ಅದರ ಗೊಡವೆಯೇ ಬೇಡವೆಂದು ಬರೀ ಎನ್‌ಎ ಮಾಡಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಾರೆ. ಆಳಂದ ರೋಡ್, ರಾಣೇಶಪೀರ ದರ್ಗಾ ಏರಿಯಾ, ಕಾಕಡೆ ಚೌಕ್, ತಾಜ ಸುಲ್ತಾನಪುರ ಸೇರಿದಂತೆ ಹಲವೆಡೆ ಇಂತಹ ಸಾಕಷ್ಟು ಲೇಔಟ್‌ಗಳಿವೆ. ಎನ್‌ಎ ಮಾಡಿಸಿಕೊಳ್ಳಲು ಅನುಮೋದನೆ ನೀಡುವ ಸಂದರ್ಭದಲ್ಲಿಯೇ ಪ್ರಾಧಿಕಾರದ ಅನುಮೋದನೆ ಪಡೆಯಲು ಕಟ್ಟುನಿಟ್ಟಿನ ನಿಯಮ ರೂಪಿಸಬೇಕು. 

ಭೀಮಾಶಂಕರ ಮಾಡಿಯಾಳ, ವಕೀಲ, ಕಿಸಾನ್ ಸಭಾ ಜಿಲ್ಲಾ ಅಧ್ಯಕ್ಷ

‘ಅಕ್ರಮಕ್ಕೆ ಜನಪ್ರತಿನಿಧಿಗಳ ಸಾಥ್’

ಯಾವುದೇ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ 2ರಿಂದ 5 ಎಕರೆಯಲ್ಲಿ ನಿವೇಶನ ಅಭಿವೃದ್ಧಿಪಡಿಸಿದ 20ಕ್ಕೂ ಅಕ್ರಮ ಲೇಔಟ್‌ಗಳು ಗಂಜ್ ಏರಿಯಾ, ಖಾಜಾ ಕೋಟನೂರ, ಬಂಬೂ ಬಜಾರ್ ಕಡೆ ಇವೆ. ಮನೆ ಕಟ್ಟುವಾಗ ಮಹಾನಗರ ಪಾಲಿಕೆಯಿಂದ ಯಾವುದೇ ಅನುಮತಿಯನ್ನೂ ಪಡೆಯುವುದಿಲ್ಲ. ವಿದ್ಯುತ್, ನಳದ ಸಂಪರ್ಕ ಪಡೆಯಬೇಕಾದ ಸಂದರ್ಭದಲ್ಲಿ ಕೆಲ ಪಾಲಿಕೆ ಸದಸ್ಯರೇ ಮಧ್ಯಸ್ಥಿಕೆ ವಹಿಸಿ ಕೊಡಿಸುತ್ತಾರೆ. ಇದರಿಂದಾಗಿ ಪಾಲಿಕೆಗೆ ಬರಬೇಕಾದ ಆಸ್ತಿ ತೆರಿಗೆ ಬರುವುದೇ ಇಲ್ಲ. ಮನೆ ಮಾರಾಟ ಮಾಡಬೇಕಾದಾಗಲೂ ಸೂಕ್ತ ದಾಖಲೆಗಳು ಇರುವುದಿಲ್ಲ. ಹಾಗಾಗಿ, ವಿಶೇಷ ಕಾನೂನು ರೂಪಿಸಿ ದಾಖಲೆಗಳನ್ನು ನೀಡುವ ವ್ಯವಸ್ಥೆಯಾದರೆ ಎಷ್ಟೋ ಕೋಟಿ ತೆರಿಗೆ ಬರುತ್ತದೆ.

ಸುನೀಲ ಮಾನಪಡೆ, ಸಾಮಾಜಿಕ ಕಾರ್ಯಕರ್ತ

‘15 ಮಂದಿ ವಿರುದ್ಧ ಕೇಸ್’
‘ಅಕ್ರಮವಾಗಿ ಬಡಾವಣೆ ನಿರ್ಮಿಸಿಕೊಂಡ ಹಲವರಿಗೆ ನೋಟಿಸ್ ನೀಡಲಾಗಿದೆ. 15 ಮಂದಿ ವಿರುದ್ಧ ದೂರು ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಂಗಾಧರ ಎಸ್‌.ಮಾಳಗಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬಡಾವಣೆ ಅಭಿವೃದ್ಧಿಗೆ ಬಂದಂತಹ ಅರ್ಜಿಗಳನ್ನು ಪರಿಶೀಲನೆ ಮಾಡಿ ಸಭೆ ನಡೆಸಿ ಸರ್ಕಾರ ನಿಗದಿಪಡಿಸಿದ ಶುಲ್ಕ ಪಡೆದುಕೊಂಡು ಅನುಮೋದನೆ ಕೊಡುತ್ತಿದ್ದೇವೆ. ಆದರೂ ಜನರು ಯಾವ ಉದ್ದೇಶಕ್ಕಾಗಿ ಅಕ್ರಮ ಬಡಾವಣೆಗಳು ಅಭಿವೃದ್ಧಿ ಪಡಿಸುತ್ತಿದ್ದಾರೆ ಗೊತ್ತಾಗುತ್ತಿಲ್ಲ. ‘ಕುಡಾ’ ಅಧ್ಯಕ್ಷರು ಸಭೆ ನಡೆಸಿ ಅಕ್ರಮ ಬಡಾವಣೆಗಳ ಪಟ್ಟಿ ಮಾಡಿಕೊಳ್ಳಲಾಗಿದೆ. ಹೊಸದಾಗಿ ಬಡಾವಣೆ ಮಾಡಿಕೊಂಡಿದ್ದರೆ ತಂಡ ರಚನೆ ಮಾಡಿಕೊಂಡು ತಡೆಗಟ್ಟಲಾಗುವುದು’ ಎಂದರು. ‘ಅಕ್ರಮ ಬಡಾವಣೆಗಳು ಕಂಡುಬಂದಲ್ಲಿ ಸಾರ್ವಜನಿಕರು ಪ್ರಾಧಿಕಾರದ ಆಯುಕ್ತರ ಮೊಬೈಲ್‌ಗೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಿಗೆ ಕರೆ ಮಾಡಬಹುದು. ಮುಂದಿನ ದಿನಗಳಲ್ಲಿ ಸಹಾಯವಾಣಿ ಸ್ಥಾಪಿಸುವ ಚಿಂತನೆಯೂ ಇದೆ’ ಎಂದು ಮಾಹಿತಿ ನೀಡಿದರು.

‘ಅನಧಿಕೃತ ಲೇಔಟ್‌ಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಆದಾಯ‌ನಷ್ಟ’

ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ‌ ಅನಧಿಕೃತ ಲೇಔಟ್‌ಗಳು ದಶಕದ ಹಿಂದೆಯೇ ತಲೆ ಎತ್ತಿವೆ. ಇಂತಹ ಲೇಔಟ್‌ಗಳಲ್ಲಿ ಈಗಾಗಲೇ ಮನೆಗಳನ್ನು ನಿರ್ಮಿಸಿಕೊಂಡು ಜನ ಜೀವನ‌ ನಡೆಸುತ್ತಿದ್ದಾರೆ. ಆದರೆ ಇದರಲ್ಲಿರುವ ಖಾಲಿ ನಿವೇಶನಗಳು ಪುರಸಭೆಗೆ ಭಾರವಾಗಿ ಪರಿಣಮಿಸಿವೆ.

ಮನೆಗಳಿಂದ ತೆರಿಗೆ ಪಡೆಯುವ ಪುರಸಭೆ ಅಧಿಕಾರಿಗಳು ಖಾಲಿ ನಿವೇಶನಗಳ ಮಾಲೀಕರ ಸಮಸ್ಯೆ ಅರಣ್ಯರೋದನವಾಗಿದೆ. ನಿವೇಶನ ಖರೀದಿ ಮಾಡಿ ಉಪ‌ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿಕೊಂಡು ಪುರಸಭೆಯಲ್ಲಿ‌ ಲಿಖಿತ (ಮ್ಯಾನುವಲ್) ಹಕ್ಕು ವರ್ಗಾವಣೆ ಮಾಡಿಕೊಂಡಿದ್ದರೂ ಖಾಲಿ ನಿವೇಶನಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ.

ಇಂತಹ ನಿವೇಶನ ಖರೀದಿಸಿದವರು ಒಂದು ಕಡೆ ಕಳೆದುಕೊಳ್ಳುತ್ತಿದ್ದರೆ ಇನ್ನೊಂದು ಕಡೆ ತಮ್ಮ ಹೆಸರಿಗೆ ಫಾರಂ ನಂ 3 ಲಭಿಸುತ್ತಿಲ್ಲ. ಇದರಿಂದ ಜನ ತೊಂದರೆಗೆ ಒಳಗಾಗುತ್ತಿದ್ದಾರೆ. ಚಿಂಚೋಳಿ ಮುಖ್ಯರಸ್ತೆಯಲ್ಲಿ ಅಂದರೆ ಬಸ್ ನಿಲ್ದಾಣದ ಅಕ್ಕಪಕ್ಕ ಅನಧಿಕೃತ ಲೇಔಟ್ ತಯಾರಿಸಿ ನಿವೇಶನ ಮಾರಾಟ ಮಾಡಿದ್ದು ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಇಂತಹ ಲೇಔಟ್‌ಗಳು ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿ ಹೆಚ್ಚಾಗಿವೆ. ಈ ಹಿಂದೆ ಲೇಔಟ್ ಮಾಡಿದವರು ಕೃಷಿಯೇತರ ಉದ್ದೇಶಕ್ಕೆ ಭೂಮಿ‌ (ಎನ್.ಎ) ಪರಿವರ್ತಿಸಿದ್ದಾರೆ. ಆದರೆ ನಗರ ಯೋಜನಾ ಇಲಾಖೆಯಿಂದ ಲೇಔಟ್ ಅನುಮೋದನೆ ಪಡೆದಿಲ್ಲ. ಜತೆಗೆ ಅಲ್ಲಿ ಮೂಲಸೌಕರ್ಯವನ್ನು ಲೇಔಟ್ ಮಾಲೀಕ ಕಲ್ಪಿಸಿಲ್ಲ.

ಎನ್ಎ ಮಾಡಿಸಿದರೂ ನಗರ ಯೋಜನಾ ಇಲಾಖೆಯ ಅನುಮೋದನೆ ಪಡೆಯದಿರುವುದಕ್ಕೆ ಮಾನದಂಡ ಪೂರೈಸದಿರುವುದು ಕಾರಣವಾಗಿದೆ. ಅನಧಿಕೃತ ಲೇಔಟ್‌ಗಳಲ್ಲಿ 20 ಅಡಿ ಅಗಲದ ರಸ್ತೆ ಇರುತ್ತದೆ. ಚರಂಡಿ ಇಲ್ಲ. ವಿದ್ಯುತ್ ಕುಡಿಯುವ ನೀರು ಸಮುದಾಯ ಬಳಕೆಯ ಶಾಲೆ ಅಂಗನವಾಡಿ ಹಾಗೂ ಉದ್ಯಾನವನಕ್ಕೆ ಜಾಗ ಬಿಟ್ಟಿರುವುದಿಲ್ಲ. ಇದರಿಂದ ಲೇಔಟ್ ಮಾಲೀಕನಿಗೆ ನಿವೇಶನಗಳು ಹೆಚ್ಚಾಗುತ್ತವೆ ಆದಾಯ ಹೆಚ್ಚು ಬರುತ್ತದೆ. ಆದರೆ ಖರೀದಿಸಿದವರು ತೊಂದರೆ ಎದುರಿಸುತ್ತಿದ್ದಾರೆ. ಇಂತಹ ಅನಧಿಕೃತ ಲೇಔಟ್‌ಗಳ ಪಹಣಿ ಪತ್ರಿಕೆ ಹೊಲದ ಮಾಲೀಕನ ಹೆಸರಲ್ಲಿಯೇ ಬರುತ್ತಿರುತ್ತದೆ. ಸರ್ಕಾರ ಇವುಗಳಿಗೆ ಕಡಿವಾಣ ಹಾಕುವ ಭರದಲ್ಲಿ 2017ರಿಂದ ನಿವೇಶನ ಕಟ್ಟಡದ ಫಾರಂ 3 ನೀಡುವುದು ನಿಲ್ಲಿಸಿದೆ. ಇದರಿಂದ ಪುರಸಭೆಯವರು ತೆರೆಮರೆಯಲ್ಲಿ ಲಕ್ಷಾಂತರ ರೂಪಾಯಿ ಲಂಚ ಪಡೆದು ನಿವೇಶನ ಫಾರಂ ನಂ.3 ನೀಡುತ್ತಿದ್ದಾರೆ. ಇದು ಈಗ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. ಪುರಸಭೆ ಸದಸ್ಯರೂ ಇದಕ್ಕೆ ಹೊರತಾಗಿಲ್ಲ.

ವರದಿ: ಜಗನ್ನಾಥ ಡಿ. ಶೇರಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT