ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರು ತಿಂಗಳಾದರೂ ಬಾರದ ವೇತನ: ‘ಜಿಮ್ಸ್’ ಗುತ್ತಿಗೆ ನೌಕರರ ಪರದಾಟ

ಸರ್ಕಾರದಿಂದ ಏಜೆನ್ಸಿಗೆ ಬಿಡುಗಡೆಯಾಗದ ಅನುದಾನ
Published : 11 ಜನವರಿ 2024, 6:51 IST
Last Updated : 11 ಜನವರಿ 2024, 6:51 IST
ಫಾಲೋ ಮಾಡಿ
Comments

ಕಲಬುರಗಿ: ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಮ್ಸ್) ಕರ್ತವ್ಯ ನಿರ್ವಹಿಸುತ್ತಿರುವ 400ಕ್ಕೂ ಹೆಚ್ಚು ಗುತ್ತಿಗೆ ನೌಕರರಿಗೆ ಮೂರು ತಿಂಗಳಾದರೂ ಸಂಬಳ ಬಂದಿಲ್ಲ. ನೂರಾರು ನೌಕರರು ಸಂಬಳವಿಲ್ಲದೆ ಪರದಾಡುತ್ತಿದ್ದು, ಸಂಕಷ್ಟದಲ್ಲೇ ದಿನಗಳನ್ನು ದೂಡುತ್ತಿದ್ದಾರೆ.

‘ಜಿಮ್ಸ್‌’ನ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು, ವೈದ್ಯರ ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ 400ಕ್ಕೂ ಹೆಚ್ಚು ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಸುಮಾರು 200 ‘ಡಿ’ ಗ್ರೂಪ್‌ ನೌಕರರು ಇದ್ದಾರೆ. ಸುಮಾರು 60 ನರ್ಸಿಂಗ್ ಸಿಬ್ಬಂದಿ, 40ಕ್ಕೂ ಅಧಿಕ ತಾಂತ್ರಿಕ ವರ್ಗ, ಸುಮಾರು 45 ಜನ ಕ್ಲರ್ಕ್, 40ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, 10 ಜನ ವಾಹನ ಚಾಲಕರು ಇದ್ದಾರೆ. ಇವರೆಲ್ಲರ ಬದುಕಿಗೆ ವೇತನವೇ ಆಧಾರ.

ಜಿಮ್ಸ್ ಆವರಣದಲ್ಲಿನ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ, ನವಜಾತ ಶಿಶು ಆರೈಕೆ ಘಟಕ (ಎನ್‌ಐಸಿಯು), ಮಕ್ಕಳ ಪೌಷ್ಟಿಕ ಪುನಶ್ಚೇತನ ಘಟಕ, ವೈದ್ಯಕೀಯ ಕಾಲೇಜು, ವಿದ್ಯಾರ್ಥಿಗಳ ವಸತಿ ನಿಲಯ, ಔಷಧ ಕೇಂದ್ರ, ಪ್ರಯೋಗಾಲಯ ಕೇಂದ್ರಗಳು ಸೇರಿದಂತೆ ಇತರೆ ವಿಭಾಗಗಳಲ್ಲಿ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ಈಗಲ್ ಡಿಟೆಕ್ಟಿವ್ ಏಜೆನ್ಸಿಯು ಗುತ್ತಿಗೆ ನೌಕರರಿಗೆ ವೇತನ ಪಾವತಿಸುತ್ತಿದೆ.

ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದರೂ ಪ್ರತಿ ತಿಂಗಳು ಸರಿಯಾಗಿ ಸಂಬಳ ಬರುತ್ತಿಲ್ಲ. ಮನೆಯಲ್ಲಿ ಹಬ್ಬ– ಹರಿದಿನಗಳು ಆಚರಿಸದಂತಹ ಸ್ಥಿತಿ ಇದೆ. ವೇತನಕ್ಕಾಗಿ ಪ್ರತಿ ತಿಂಗಳು ಅಧಿಕಾರಿಗಳ ಕಚೇರಿಗೆ ಅಲೆದು, ದುಂಬಾಲು ಬಿದ್ದು ಸಾಕಾಗಿ ಹೋಗಿದೆ. ದುಬಾರಿಯ ದಿನಮಾನಗಳಲ್ಲಿ ವೇತನ ಇಲ್ಲದೆ ಕುಟುಂಬ ನಿರ್ವಹಣೆ ಮಾಡವುದು ಕಷ್ಟವಾಗುತ್ತಿದೆ ಎಂದು ಜಿಮ್ಸ್ ಸಿಬ್ಬಂದಿ ಅವಲತ್ತುಕೊಂಡರು.

‘ನಿಯಮಿತವಾಗಿ ಸಂಬಳ ಬಾರದ ಕಾರಣ ಮನೆಯ ಬಾಡಿಗೆ, ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಆಗುತ್ತಿಲ್ಲ. ಮನೆಯ ನಿರ್ವಹಣೆಗಾಗಿ ಸಾಲ ಮಾಡುತ್ತಿದ್ದೇವೆ. ಏರು ಧ್ವನಿಯಲ್ಲಿ ಸಂಬಳ ಕೇಳುವಂತೆಯೂ ಇಲ್ಲ. ಅನುದಾನ ಬಂದಿಲ್ಲ, ಬಂದ ತಕ್ಷಣವೇ ಬಿಡುಗಡೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ಮೂರು ತಿಂಗಳಿಂದ ಇದೇ ಹೇಳಿಕೆ ಪುನರಾವರ್ತನೆ ಆಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನೌಕರರು ‘ಪ್ರಜಾವಾಣಿ’ಗೆ ತಿಳಿಸಿದರು.

ಡಾ.ಶರಣಪ್ರಕಾಶ ಪಾಟೀಲ
ಡಾ.ಶರಣಪ್ರಕಾಶ ಪಾಟೀಲ
ಇಎಸ್‌ಐ ಪಿಎಫ್‌ನಂತಹ ತಾಂತ್ರಿಕ ಕಾರಣಗಳಿಂದ ವೇತನ ಪಾವತಿ ವಿಳಂಬ ಆಗಿರಬಹುದು. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು
ಡಾ.ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಡಾ.ಉಮೇಶ ಎಸ್‌.ಆರ್‌.
ಡಾ.ಉಮೇಶ ಎಸ್‌.ಆರ್‌.
ಒಪ್ಪಂದದ ಪ್ರಕಾರ ಸಂಸ್ಥೆಯಿಂದ 3 ತಿಂಗಳ ಸಂಬಳ ಕೊಡದೆ ಇದ್ದರೂ ಏಜೆನ್ಸಿಯವರು ಪಾವತಿಸಬೇಕು. ಈಗ ಎರಡು ಚೆಕ್‌ಗಳು ಬಂದಿದ್ದು ವೇತನ ಪಾವತಿ ಮಾಡಲಾಗುವುದು
ಡಾ.ಉಮೇಶ ಎಸ್‌.ಆರ್‌. ಜಿಮ್ಸ್ ನಿರ್ದೇಶಕ

‘5 ತಿಂಗಳಿಂದ ಸರ್ಕಾರದ ಅನುದಾನ ಬಂದಿಲ್ಲ’

‘ಜಿಮ್ಸ್‌ನ ಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು ಸುಮಾರು ₹90 ಲಕ್ಷ ವೇತನ ಪಾವತಿಸುತ್ತೇವೆ. ಆದರೆ ರಾಜ್ಯ ಸರ್ಕಾರ ಐದು ತಿಂಗಳಿಂದ ಏಜೆನ್ಸಿಗೆ ಅನುದಾನವೇ ಬಿಡುಗಡೆ ಮಾಡಿಲ್ಲ’ ಎಂದು ಈಗಲ್ ಡಿಟೆಕ್ಟಿವ್ ಏಜೆನ್ಸಿಯ ಅಧಿಕಾರಿ ನಾಗಪ್ಪ ಬಿದರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘₹2 ಕೋಟಿಯಿಂದ ₹ 3 ಕೋಟಿ ಹೂಡಿಕೆ ಮಾಡಿ ₹1 ಕೋಟಿ ಠೇವಣಿ ಇರಿಸಿ ಟೆಂಡರ್ ಪಡೆಯಲಾಗಿದೆ. ನಮಗೆ ಸಿಗುವುದು ಶೇ 2ರಷ್ಟು ಸೇವಾ ಶುಲ್ಕ ಮಾತ್ರ. ಇಎಸ್‌ಐ ಪಿಎಫ್‌ ಜಿಎಸ್‌ಟಿ ಕಟ್ಟಲು ಒಂದು ದಿನ ತಡವಾದರೆ ನಿತ್ಯ ₹5000 ದಂಡ ಶೇ 18ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ. ಇಷ್ಟೊಂದು ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿರುವ ಸರ್ಕಾರ ತನ್ನ ಪಾಲಿನ ಅನುದಾನ ಕೊಡಲು ವಿಳಂಬ ಮಾಡುತ್ತಿದೆ. ನಾವೇ ಹೊರಗಡೆಯಿಂದ ದುಡ್ಡು ತಂದು ಸಂಬಳ ಕೊಡುವಂತಹ ಪರಿಸ್ಥಿತಿ ಇದೆ’ ಎಂದು ಹೇಳಿದರು. ‘ಅಕ್ಟೋಬರ್ ತಿಂಗಳ ವೇತನದ ಹಣ ಹೊಂದಿಸಲಾಗಿದೆ. ಕೆಲವೇ ದಿನಗಳಲ್ಲಿ ನೌಕರರಿಗೆ ಪಾವತಿಸಲಾಗುವುದು. ಸರ್ಕಾರ ಕೂಡ ಸಕಾಲದಲ್ಲಿ ಏಜೆನ್ಸಿಗಳಿಗೆ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT