ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಸು ಸಾಕಾರದ ನಿರೀಕ್ಷೆಯಲ್ಲಿ ಟೆನಿಸ್‌ ಆಟಗಾರ ಶ್ರೀಕಾರ

ರಾಷ್ಟ್ರೀಯ, ರಾಜ್ಯ ಟೂರ್ನಿಗಳಲ್ಲಿ ಮಿಂಚುತ್ತಿರುವ ಜಿಲ್ಲೆಯ ಟೆನಿಸ್‌ ಪ್ರತಿಭೆ
Published 12 ಜೂನ್ 2024, 6:06 IST
Last Updated 12 ಜೂನ್ 2024, 6:06 IST
ಅಕ್ಷರ ಗಾತ್ರ

ಕಲಬುರಗಿ: ಶ್ರೀಕಾರ ಡೋಣಿ ಟೆನಿಸ್‌ನಲ್ಲಿ ಬಹು ಎತ್ತರಕ್ಕೇರುವ ಕನಸು ಕಟ್ಟಿಕೊಂಡಿರುವ ಹುಡುಗ. ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಈ ಪ್ರತಿಭೆ, ಅಂತರರಾಷ್ಟ್ರೀಯ, ರಾಷ್ಟ್ರ, ರಾಜ್ಯಮಟ್ಟದ ಹಲವು ಟೂರ್ನಿಗಳಲ್ಲಿ ಈಗಾಗಲೇ ತನ್ನ ಆಟದ ಹೊಳಪು ಮೂಡಿಸಿದೆ.

ಮೂಲತಃ ಕಡಗಂಚಿಯವರಾದ ಶ್ರೀಕಾರ ಅವರ ತಂದೆ ಶಿವಕುಮಾರ ಡೋಣಿ ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ‘ಸಿ’ ಗ್ರೂಪ್‌ ನೌಕರರಾಗಿದ್ದು, ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯುಳ್ಳವರು. ತಾಯಿ ನಿಂಗಮ್ಮ ಪ್ರೋತ್ಸಾಹವೂ ಶ್ರೀಕಾರ ಬೆನ್ನಿಗಿದೆ.

ಆರು ವರ್ಷದವರಿದ್ದಾಗಲೇ ಕಲಬುರಗಿಯಲ್ಲಿ ಟೆನಿಸ್‌ನ ಪ್ರಾಥಮಿಕ ತರಬೇತಿ ಪಡೆದಿರುವ ಶ್ರೀಕಾರ, 11ನೇ ವಯಸ್ಸಿನಲ್ಲಿ ಹೆಚ್ಚಿನ ತರಬೇತಿಗಾಗಿ ಕುಟುಂಬದೊಂದಿಗೆ ಬೆಂಗಳೂರಿಗೆ ತೆರಳಿದರು.

ಸದ್ಯ ಬೆಂಗಳೂರಿನ ‘ದಿ ಸ್ಪೋರ್ಟ್ಸ್ ಸ್ಕೂಲ್‌’ ಆರ್‌ಬಿಟಿಎಯಲ್ಲಿ (ಜೈನ್‌ ಶಾಲೆ ಆಶ್ರಯದಲ್ಲಿ ನಡೆಯುತ್ತಿರುವ ಅಕಾಡೆಮಿ) ನಾಲ್ಕು ವರ್ಷಗಳಿಂದ ಜೂನಿಯರ್‌ ಪ್ರೊ ಟೆನಿಸ್‌ ತರಬೇತಿ ಪಡೆಯುತ್ತಿದ್ದು, ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮುತ್ತಿದ್ದಾರೆ. ಜೈನ್‌ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾರೆ.

ಮೂರು ವರ್ಷಗಳಿಂದ ಸ್ಪರ್ಧಾತ್ಮಕ ಟೆನಿಸ್‌ ಕಣದಲ್ಲಿರುವ ಶ್ರೀಕಾರ ಅವರಿಗೆ ಹಲವು ಪ್ರಶಸ್ತಿಗಳು ಒಲಿದಿವೆ. ಅಖಿಲ ಭಾರತ ಟೆನಿಸ್‌ ಸಂಸ್ಥೆಯ (ಎಐಟಿಎ) 16 ವರ್ಷದೊಳಗಿನವರ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಅವರು 11ನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ಗರಿಷ್ಠ 7ನೇ ರ‍್ಯಾಂಕಿಂಗ್‌ವರೆಗೂ ಅವರು ತಲುಪಿದ್ದರು.

16 ವರ್ಷದೊಳಗಿನವರ ಡಬಲ್ಸ್ ವಿಭಾಗದಲ್ಲಿ ಏಷ್ಯಾಮಟ್ಟದಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದಾರೆ. 18 ಎಐಟಿಎ ಟೂರ್ನಿಗಳಲ್ಲಿ (12, 14 ಮತ್ತು 16 ವರ್ಷದೊಳಗಿನವರ ಸಿಂಗಲ್ಸ್, ಡಬಲ್ಸ್ ವಿಭಾಗಗಳು ಸೇರಿ) ಅವರಿಗೆ ಮೊದಲ ಸ್ಥಾನ ಲಭಿಸಿದೆ.

ಎಐಟಿಎನ 13 ಟೂರ್ನಿಗಳಲ್ಲಿ (ಸಿಂಗಲ್ಸ್, ಡಬಲ್ಸ್ ಸೇರಿ) ರನ್ನರ್‌ ಅಪ್ ಸ್ಥಾನದ ಹೆಗ್ಗಳಿಕೆ ಅವರದು. ಇದಲ್ಲದೇ ರಾಜ್ಯ ರ‍್ಯಾಂಕಿಂಗ್‌, ಸ್ಥಳೀಯ ಟೂರ್ನಿಗಳಲ್ಲಿ ಹಲವು ಪದಕಗಳು ಅವರ ಮುಡಿಗೇರಿವೆ.

ನೊವಾಕ್‌ ಜೊಕೊವಿಚ್‌ ನನ್ನ ನೆಚ್ಚಿನ ಆಟಗಾರ. ಆತನ ಹಾದಿಯಲ್ಲೇ ಸಾಗುವ ಕನಸು ನನ್ನದು.
ಶ್ರೀಕಾರ, ಟೆನಿಸ್ ಆಟಗಾರ

‘ಬೆಳಿಗ್ಗೆ ಮೂರು ಹಾಗೂ ಸಂಜೆ ನಾಲ್ಕು ತಾಸು ಅಭ್ಯಾಸ ಮಾಡುವೆ. ಶಾಲೆಯಿಂದ ಅಭ್ಯಾಸಕ್ಕಾಗಿ ಸಮಯವನ್ನೂ ನೀಡುತ್ತಾರೆ. ಟೆನಿಸ್‌ನಲ್ಲಿ ಮಹತ್ವದ ಮೈಲಿಗಲ್ಲು ಮುಟ್ಟುವ ತವಕವಿದೆ’ ಎಂದು ಶ್ರೀಕಾರ ಹೇಳುತ್ತಾರೆ.

ಬೋಪಣ್ಣ ಪ್ರೋತ್ಸಾಹ: ಶ್ರೀಕಾರ ಅವರ ಆಟವನ್ನು ಗಮನಿಸಿದ ಭಾರತದ ಖ್ಯಾತ ಆಟಗಾರ ರೋಹನ್ ಬೋಪಣ್ಣ ತಾವು ತರಬೇತಿ ನೀಡುವ ದಿ ಸ್ಪೋರ್ಟ್ಸ್ ಸ್ಕೂಲ್‌’ ಆರ್‌ಬಿಟಿಎಗೆ (ರೋಹನ್ ಬೋಪಣ್ಣ ಟೆನಿಸ್‌ ಅಕಾಡೆಮಿ) ಸೇರಿಸಿಕೊಂಡರು. ಶ್ರೀಕಾರ ಆಟಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.

ಪ್ರಾಯೋಜಕತ್ವಕ್ಕೆ ಮನವಿ

‘ಶ್ರೀಕಾರ ಅತ್ಯಂತ ಭರವಸೆಯ ಆಟಗಾರನಾಗಿದ್ದು ಈಗ ಆತನಿಗೆ ನಿರ್ಣಾಯಕ ಘಟ್ಟ. ಆತನ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಗಳ ಖರ್ಚು– ವೆಚ್ಚಗಳನ್ನು ನಿಭಾಯಿಸಲು ಹಣಕಾಸಿನ ಅವಶ್ಯಕತೆಯಿದೆ. ಈ ಕುರಿತು ಸಿಎಸ್‌ಆರ್‌ ಅನುದಾನಕ್ಕೆ ಮನವಿ ಮಾಡಿಕೊಂಡಿದ್ದು ಓರಿಯಂಟಲ್‌ ಸಿಮೆಂಟ್‌ ಕಂಪನಿಯವರು ಕಲಬುರಗಿ ಜಿಲ್ಲಾಧಿಕಾರಿ ಮೂಲಕ ₹ 5 ಲಕ್ಷ ನೀಡಿದ್ದಾರೆ. ಇನ್ನೂ ಸುಮಾರು ₹18 ಲಕ್ಷ ಬೇಕಾಗಿದೆ. ಪ್ರಾಯೋಜಕರು ಮುಂದೆ ಬಂದರೆ ಅನುಕೂಲವಾಗಲಿದೆ’ ಎಂದು ಶ್ರೀಕಾರ ಅವರ ತಂದೆ ಶಿವಕುಮಾರ ಡೋಣಿ ಹೇಳಿದರು.

ಶ್ರೀಕಾರ ಡೋಣಿ ಆಟದ ಪರಿ
ಶ್ರೀಕಾರ ಡೋಣಿ ಆಟದ ಪರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT