ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೊಣಿಕೊಪ್ಪಲು: ಬಿಕ್ಕಟ್ಟುಗಳ ಮಧ್ಯೆ ಗರಿಗೆದರಿದ ಭತ್ತದ ಕೃಷಿ

ಉತ್ತಮ ಮಳೆಯಿಂದ ದಕ್ಷಿಣ ಕೊಡಗಿನಲ್ಲಿ ಚುರುಕು ಪಡೆದ ಬಿತ್ತನೆ ಕಾರ್ಯ, ಎಲ್ಲೆಡೆ ಸಂಭ್ರಮ
Published 4 ಜುಲೈ 2024, 7:20 IST
Last Updated 4 ಜುಲೈ 2024, 7:20 IST
ಅಕ್ಷರ ಗಾತ್ರ

ಗೊಣಿಕೊಪ್ಪಲು: ದಕ್ಷಿಣ ಕೊಡಗಿನಾದ್ಯಂತ ಉತ್ತಮವಾಗಿ ಸುರಿದ ಆರಿದ್ರ ಮಳೆಗೆ ಭತ್ತದ ಕೃಷಿ ಚಟುವಟಿಕೆ ಗರಿಗೆದರಿದೆ. ಕೃಷಿಕರು ಗದ್ದೆ ಹದ ಮಾಡಿಕೊಂಡು ಭತ್ತ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಭಾಗದಲ್ಲಿ ಬಿಕ್ಕಟ್ಟುಗಳಿಂದ ಕೂಡಿದ್ದ ಭತ್ತದ ಕೃಷಿ ಮತ್ತೊಮ್ಮೆ ಚಿಗುರೊಡೆಯುತ್ತಿದೆ.

ಭತ್ತದ ಕೃಷಿ ದುಬಾರಿ ಎನ್ನುವ ಕಾರಣಕ್ಕೆ ಶೇ 60ರಷ್ಟು ಕೃಷಿಕರು ಗದ್ದೆಗಳನ್ನು ಈ ಭಾಗದಲ್ಲಿ ಪಾಳು ಬಿಟ್ಟಿದ್ದರು. ಮತ್ತೆ ಕೆಲವರು ಗದ್ದೆಗಳನ್ನು ಅಡಿಕೆ, ಬಾಳೆ, ಕಾಫಿ ತೋಟವಾಗಿ ಪರಿವರ್ತಿಸಿದ್ದರು. ನಗರದ ಸೆರಗಿನಲ್ಲಿರುವ ಗದ್ದೆಗಳು ಬಡಾವಣೆಗಳಾಗಿದ್ದವು. ಹೀಗೆ ಇಂತಹ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದ ಭತ್ತದ ಕೃಷಿ ಕಳೆದ ಬಾರಿ ದಕ್ಷಿಣ ಕೊಡಗಿನಲ್ಲಿ ಆವರಿಸಿದ ಭೀಕರ ಬರದಿಂದಾಗಿ ಮತ್ತಷ್ಟು ಸೊರಗಿತ್ತು. ಆದರೆ, ಈಚೆಗೆ ಸುರಿಯುತ್ತಿರುವ ಮಳೆಯಿಂದ ಮತ್ತೆ ಕೃಷಿಕರು ಭತ್ತದ ಕೃಷಿಯತ್ತ ಒಲವು ತೋರಿದ್ದಾರೆ. ಕೃಷಿ ಬಗ್ಗೆ ನಿಜವಾದ ಒಲವು ಬೆಳೆಸಿಕೊಂಡಿರುವ ರೈತರು ಲಾಭನಷ್ಟದ ಲೆಕ್ಕ ಹಾಕದೆ ಕೃಷಿಯಲ್ಲಿ ತೊಡಗಿ ತಮ್ಮ ಕೃಷಿ ಪ್ರೇಮ ಮೆರೆದಿದ್ದಾರೆ.

ಮಳೆ ನೀರಿನ ಆಶ್ರಯದಲ್ಲಿ ಕೃಷಿ ಮಾಡುವ ರೈತರು ಹಳ್ಳದ ಗದ್ದೆಗಳಲ್ಲಿ ತುಂಬಿದ್ದ ನೀರನ್ನು ಸಂಗ್ರಹಿಸಿಕೊಂಡು ಗದ್ದೆ ಉಳುಮೆ ಮಾಡಿದ್ದರು. ಇದೀಗ ಬೀಜ ಬಿತ್ತನೆ ಮಾಡುವ ಮೂಲಕ ಕೃಷಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕೆಲವರು ನೇರವಾಗಿ ಗದ್ದೆಗೆ ಭತ್ತದ ಬೀಜ ಎರಚಿದ್ದರೆ, ಮತ್ತೆ ಕೆಲವರು ಸಸಿಮಡಿ ಮಾಡಿ ಬೀಜ ಬಿತ್ತಿದ್ದಾರೆ.

ಒಂದು ತಿಂಗಳು ಕಳೆದ ಬಳಿಕ ಸಸಿ ಬಂದ ಮೇಲೆ ನಾಟಿ ಕಾರ್ಯ ಶುರುವಾಗಲಿದೆ. ಅಲ್ಲಿಯವರೆಗೆ ನಾಟಿ ಮಾಡುವ ಗದ್ದೆಗಳನ್ನು ಉಳುಮೆ ಮಾಡಿ ಹದ ಮಾಡಿಕೊಳ್ಳಲಿದ್ದಾರೆ.

ಪೊನ್ನಂಪೇಟೆ, ಕಾನೂರು ನಡುವಿನ ಚಿಕ್ಕಮಂಡೂರು ಗ್ರಾಮದ ಐನಂಡ ಬೋಪಣ್ಣ ತಮ್ಮ ವಿಶಾಲವಾದ ಗದ್ದೆ ಬಯಲ್ಲಿನಲ್ಲಿ ಪ್ರತಿ ವರ್ಷ ಉತ್ತಮ ಭತ್ತ ಬೆಳೆಯುತ್ತಿದ್ದಾರೆ. ತಮ್ಮ ತೋಟದಲ್ಲಿರುವ ಕಾಯಂ ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಯಾವತ್ತು ಗದ್ದೆ ಖಾಲಿ ಬಿಡದಂತೆ ಕೃಷಿ ಮಾಡುತ್ತಿದ್ದಾರೆ. ಜತೆಗೆ, ಆಯಾ ಮಳೆ ಮತ್ತು ಹವಾಗುಣಕ್ಕೆ ಅನುಗುಣವಾಗಿ ಪ್ರತಿ ವರ್ಷವೂ ಭತ್ತದ ತಳಿ ಬದಲಾಯಿಸುತ್ತಾರೆ. ಈ ಬಾರಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆ ಅವರದ್ದಾಗಿದೆ. ಒಂದು ವೇಳೆ ಮಳೆ ಕಡಿಮೆಯಾದರೂ ಅದಕ್ಕೆ ಹೊಂದಿಕೊಳ್ಳುವ ದೊಡ್ಡಿ ಭತ್ತದ ಬೀಜ ಬಿತ್ತಿದ್ದಾರೆ. ಇದು 160 ದಿನದ ಬೆಳೆ.

ಬೀಜ ಬಿತ್ತನೆ ಕುಕ್ಕೆಗೆ ಪೂಜೆ: ಟಿಲ್ಲರ್ ಮೂಲಕ ಗದ್ದೆಗಳನ್ನು ಹದ ಮಾಡಿ ಕಾರ್ಮಿಕರ ಮೂಲಕ ಭತ್ತ ಬಿತ್ತಿಸಿದ್ದಾರೆ. ಬಿತ್ತನೆಗೂ ಮೊದಲು ಭತ್ತಬೀಜ ತುಂಬಿದ ಕುಕ್ಕೆಯನ್ನು ಗದ್ದೆಯ ಬದುವಿನಲ್ಲಿ ಇಟ್ಟು ಅದನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರು. ತಮ್ಮ ಕುಲದೇವತೆ ಕಾವೇರಿಯನ್ನು ಸ್ಮರಿಸುತ್ತಾ ಈ ಬಾರಿ ಉತ್ತಮ ಮಳೆ ಬೆಳೆ ಮೂಲಕ ಸಮೃದ್ಧ ಅನ್ನ ಕೊಡು ಎಂದು ಬೇಡಿಕೊಂಡರು.

ಬಾಳೆಲೆ ಭಾಗದಲ್ಲಿ ದೇವನೂರಿನ ಪೋಡಮಾಡ ಮೋಹನ್ ಅವರು ಪ್ರತಿ ವರ್ಷದಂತೆ ಸಸಿ ಮಾಡಿ ಭತ್ತ ಕೃಷಿಗೆ ಮುಂದಾಗಿದ್ದಾರೆ. ಸಸಿಮಡಿ ಮಾಡಿ ಬಿತ್ತಿದ ಭತ್ತ ಮೊಳಕೆ ಒಡೆದು ಹಸಿರಾಗಿದೆ. ನಾಟಿ ಮಾಡಲು ಗದ್ದೆಗಳನ್ನು ಉಳುಮೆ ಮಾಡಿ ಹದ ಮಾಡಿಕೊಂಡಿದ್ದಾರೆ. ಮುಂದಿನ 15 ದಿನದ ಒಳಗೆ ನಾಟಿ ಮಾಡುವ ಸಿದ್ಧತೆ ನಡೆದಿದೆ. ಕೃಷಿ ವಿಜ್ಞಾನ ಕೇಂದ್ರದಿಂದ ಬಿತ್ತನೆ ಬೀಜ ಪಡೆದು ಆರ್‌ಎನ್‌ಆರ್ ಮತ್ತು ಕೆಎಚ್ ತಳಿಯನ್ನು ಬಿತ್ತಿದ್ದಾರೆ.

ಜಾಗಲೆಯ ಅಳಮೇಂಗಡ ಬೋಸ್ ಮಂದಣ್ಣ ಕೂಡ ಭತ್ತಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ಜತೆಗೆ, ತಮ್ಮ ಅಡಿಕೆ ತೋಟಕ್ಕೂ ಗೊಬ್ಬರ ಹಾಕಿ ಆರೈಕೆ ಮಾಡುತ್ತಿದ್ದಾರೆ.

ಶ್ರೀಮಂಗಲ, ಹುದಿಕೇರಿ, ಕುಟ್ಟ, ಬಿರುನಾಣಿ, ಕಿರುಗೂರು, ನಲ್ಲೂರು, ಬೆಸಗೂರು, ಮಾಯಮುಡಿ ಭಾಗದಲ್ಲಿಯೂ ಭತ್ತ ಕೃಷಿ ಕಾರ್ಯ ಚುರುಕುಗೊಂಡಿದೆ.

ಮಾಯಮುಡಿಯ ಆಪಟ್ಟೀರ ಟಾಟುಮೊಣ್ಣಪ್ಪ ಕೃಷಿ ಇಲಾಖೆಯಿಂದ ಮತ್ತು ಇತರೆಡೆಯಿಂದ ಅಗತ್ಯವಿರುವ ವಿವಿಧ ತಳಿಯ ಭತ್ತ ಬೀಜ ಪಡೆದು ಕೃಷಿಗೆ ಮುಂದಾಗಿದ್ದಾರೆ. ಹುದಿಕೇರಿಯ ಚೆಂಗುಲಂಡ ಸೂರಜ್, ಬೇಗೂರಿನ ದಾದು ಪೂವಯ್ಯ, ಕಾಕಮಾಡ ಚಂಗಪ್ಪ ಮೊದಲಾದವರು ಭತ್ತ ಕೃಷಿಯ ಜತೆಗೆ ಕಾಫಿ ತೋಟದ ಕೆಲಸವನ್ನೂ ಭರದಿಂದ ಮಾಡಿಸುತ್ತಿದ್ದಾರೆ.

ಭತ್ತ ಬಿತ್ತನೆ ಗದ್ದೆಯನ್ನು ಉಳುಮೆ ಮಾಡುತ್ತಿರುವುದು
ಭತ್ತ ಬಿತ್ತನೆ ಗದ್ದೆಯನ್ನು ಉಳುಮೆ ಮಾಡುತ್ತಿರುವುದು
ಬಾಳೆಲೆಯ ಪೋಡಮಾಡ ಮೋಹನ್ ಅವರು ಬಿತ್ತಿರುವ ಬತ್ತದ ಸಸಿಮಡಿ
ಬಾಳೆಲೆಯ ಪೋಡಮಾಡ ಮೋಹನ್ ಅವರು ಬಿತ್ತಿರುವ ಬತ್ತದ ಸಸಿಮಡಿ
ದಕ್ಷಿಣ ಕೊಡಗಿನಾದ್ಯಂತ ಚುರುಕಾಗಿರುವ ಮುಂಗಾರು ಎಲ್ಲೆಡೆ ಉತ್ತಮ ವರ್ಷಧಾರೆ ಕೃಷಿಕರಲ್ಲಿ ಸಂತಸ
ಭತ್ತ ಕೃಷಿ ಮಾಡುವುದು ಇಂದು ತುಂಬಾ ದುಬಾರಿಯಾಗಿದೆ. ಆದಾಯಕ್ಕಿಂತ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಹಲವರು ಭತ್ತ ಕೃಷಿಯನ್ನೇ ಕೈ ಬಿಟ್ಟಿದ್ದಾರೆ. ಕೃಷಿಗೆ ಸರ್ಕಾರ ಉತ್ತೇಜನ ನೀಡಿದರೆ ಕೃಷಿ ಉಳಿಯಲಿದೆ
ಐನಂಡ ಬೋಪಣ್ಣ ಕೃಷಿಕ ಪೊನ್ನಂಪೇಟೆ
15 ದಿನದ ಮೊದಲೇ ಬೀಜ ಬಿತ್ತನೆ ಮಾಡಿದ್ದೇನೆ. ಈ ಭಾಗದಲ್ಲಿ ಇನ್ನೂ ಯಾರೂ ಬಿತ್ತನೆ ಮಾಡಿಲ್ಲ. ಈಗ ಉಳುಮೆ ಮಾಡಿ ಗದ್ದೆ ಹದ ಮಾಡಿಕೊಳ್ಳುತ್ತಿದ್ದಾರೆ
ಪೋಡಮಾಡ ಮೋಹನ್ ಪ್ರಗತಿಪರ ಕೃಷಿಕ ಬಾಳೆಲೆ ದೇವನೂರು.
7 ದಿನಗಳಲ್ಲೇ ಅಧಿಕ ಮಳೆ
ಕಳೆದ 7 ದಿನಗಳಲ್ಲಿ ಈ ಭಾಗದಲ್ಲಿ ಮಳೆ ಬಿರುಸು ಪಡೆದಿದೆ. ಬಾಳೆಲೆ ಹೋಬಳಿಯಲ್ಲಿ ಅತ್ಯಧಿಕ ಶೇ 78ರಷ್ಟು ಹೆಚ್ಚುವರಿ ಹುದಿಕೇರಿ ಹೋಬಳಿಯಲ್ಲಿ ಶೇ 27 ಹಾಗೂ ಪೊನ್ನಂಪೇಟೆ ಹೋಬಳಿಯಲ್ಲಿ ಶೇ 18ರಷ್ಟು ಹೆಚ್ಚು ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT