ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ಕರಿಕೆಯ ಹಾದಿಯಲ್ಲಿದ್ದಾರೆ ಜಲಕನ್ನಿಕೆಯರು...!

ಪಾಕತ್ ಕೊಲ್ಲಿ, ಮೇಲಡ್ಕ, ಬಾಚಿಮಲೆ...ಒಂದೇ ಎರಡೇ ಇಲ್ಲಿವೆ 25ಕ್ಕೂ ಅಧಿಕ ಜಲಪಾತಗಳು
Published : 8 ಜುಲೈ 2024, 6:53 IST
Last Updated : 8 ಜುಲೈ 2024, 6:53 IST
ಫಾಲೋ ಮಾಡಿ
Comments

ನಾಪೋಕ್ಲು: ಪಾಕತ್ ಕೊಲ್ಲಿ, ಮೇಲಡ್ಕ, ಬಾಚಿಮಲೆ... ಇವೆಲ್ಲಾ ಕರಿಕೆಯ ಜಲಕನ್ನಿಕೆಯರಿಗೆ ಸ್ಥಳೀಯರು ಇಟ್ಟ ಹೆಸರುಗಳು. ಇಲ್ಲಿ ರಸ್ತೆಯಂಚಿನಲ್ಲಿ ಕಾಣಸಿಗುವ ಜಲಪಾತಗಳು ಒಂದೆರಡಲ್ಲ. ಬರೋಬ್ಬರಿ 25ಕ್ಕೂ ಅಧಿಕ ಜಲಪಾತಗಳು ಈ ರಸ್ತೆಯಲ್ಲಿ ಕಾಣಸಿಗುತ್ತವೆ.

ಭಾಗಮಂಡಲದಿಂದ ಕರಿಕೆಯತ್ತ ಸಾಗುವಾಗ ಸುಮಾರು 6 ಕಿ.ಮೀ ಕ್ರಮಿಸಿದೊಡನೆ ಜಲಪಾತಗಳ ದರ್ಶನ ಆರಂಭವಾಗುತ್ತದೆ. ಕಿರಿದು, ಹಿರಿದು ಎಂಬಂತೆ ಕಣ್ಮನ ಸೆಳೆಯುವ ಜಲಧಾರೆಗಳ ಸೊಬಗು ಮಳೆಗಾಲದಲ್ಲಿ ವರ್ಣನಾತೀತ.

ಭಾಗಮಂಡಲದಿಂದ 12 ಕಿ.ಮೀ ಅಂತರದಲ್ಲಿ ಪಾಕತ್ ಕೊಲ್ಲಿ ಜಲಪಾತವಿದೆ. ಇದು ಕರಿಕೆಯ ಜಲಕನ್ನಿಕೆಯರಲ್ಲಿ ಹಿರಿದು. ಭೋರ್ಗರೆಯುತ್ತಾ ಧುಮುಕುವ ಈ ಜಲಧಾರೆ ಕರಿಕೆಯ ಅಪೂರ್ವ ಜಲಧಾರೆಗಳಲ್ಲಿ ಒಂದು.

‘ದಕ್ಷಿಣದ ಪ್ರಯಾಗ’ ಎನಿಸಿರುವ ಭಾಗಮಂಡಲದಿಂದ ಕೊಡಗು -ಕೇರಳ ಗಡಿಭಾಗದಲ್ಲಿರುವ ಕರಿಕೆಗೆ ದಟ್ಟಾರಣ್ಯದ ನಡುವೆ ಸುಮಾರು 28 ಕಿ.ಮೀ ದೂರ ತೆರಳಬೇಕು. ಭಾಗಮಂಡಲ - ಕರಿಕೆ ರಸ್ತೆಯ ವೈಶಿಷ್ಟ್ಯವೆಂದರೆ ಇಲ್ಲಿ ಎಡಬದಿಯಲ್ಲಿ ದಟ್ಟ ಕಾಡಿನ ಸೌಂದರ್ಯ ಮನಸೆಳೆದರೆ ಬಲಬದಿಯಲ್ಲಿ ಹೆಜ್ಜೆ ಹೆಜ್ಜೆಗೂ ಸರಣಿ ಜಲಧಾರೆಗಳು ಕಾಣಸಿಗುತ್ತವೆ.

ಕೊಡಗಿನ ಅಬ್ಬಿ ಜಲಪಾತ, ಚೇಲಾವರ ಜಲಪಾತ, ಇರ್ಪು ಜಲಪಾತ, ಮಲ್ಲಳ್ಳಿ ಜಲಪಾತ ಮುಂತಾದವುಗಳಿಗೆ ಕಮ್ಮಿ ಇಲ್ಲದಂತೆ ಬೆಡಗು ತೋರುವ ಬಹುತೇಕ ಜಲಧಾರೆಗಳು ಮಳೆಗಾಲಕ್ಕಷ್ಟೇ ಸೀಮಿತವಾಗಿರುವ ಚೆಲುವೆಯರು.

ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಪಶ್ಚಿಮ ಘಟ್ಟದಲ್ಲಿ ಮಳೆ ಸುರಿದಾಗ ಬ್ರಹ್ಮಗಿರಿ ಶ್ರೇಣಿಯಲ್ಲಿನ ತಲಕಾವೇರಿ ರಕ್ಷಿತಾರಣ್ಯದ ನಡುವಿನಿಂದ ಬಳುಕಿ ಬಂದು ಧುಮ್ಮಿಕ್ಕುವ ಜಲಬೆಡಗಿಯರು ಆ ಮೂಲಕ ಮಳೆಗಾಲದ ಪ್ರಯಾಣಿಕರನ್ನು ಸೆಳೆಯುತ್ತಾರೆ.

ಬ್ರಹ್ಮಗಿರಿಯಿಂದ ಹೊರಟು ಕೆಲವೇ ಕೆಲವು ಕಿಲೋಮೀಟರ್ ದೂರವನ್ನು ತಿರುವು ರಸ್ತೆಗಳಲ್ಲಿ ಸಾಗಿದರೆ ಎಡಬದಿಯಲ್ಲಿ ತಲಕಾವೇರಿ ರಕ್ಷಿತಾರಣ್ಯ ಮತ್ತು ಬ್ರಹ್ಮಗಿರಿ ಶಿಖರ ಶ್ರೇಣಿ ಕಾಣಸಿಗುತ್ತದೆ. ನಿಸರ್ಗದ ಸೌಂದರ್ಯದ ನಡುವೆ ಮತ್ತಷ್ಟು ದೂರ ಸಾಗಿದರೆ ಅದೊಂದು ತಿರುವಿನಲ್ಲಿ ರಸ್ತೆಗೆ ಬೀಳುವ ಧಾರೆ ಕಾಣಸಿಗುತ್ತದೆ. ಎರಡು ಕವಲುಗಳಾಗಿ ಕಾಡಿನ ನಡುವಿನಿಂದ ಹರಿದು ಬರುವ ಜಲಧಾರೆ ರಸ್ತೆಯ ಬದಿಯ ಮೋರಿಯಲ್ಲಿ ನಿಂತರೆ ಕೈಗೆಟುಕುವ ಅದ್ಭುತ ಧಾರೆ. ಅಲ್ಲಿಂದ ಮುಂದೆ ಸಾಗಿದರೆ ಕಿಲೋಮೀಟರಿಗೆ ಒಂದೊಂದು ಜಲಪಾತಗಳು.

ಜಿಟಿಜಿಟಿ ಮಳೆಯ ನಡುವೆ ಮೈದುಂಬಿಕೊಂಡು ಸಾಗಿ ಬರುವ ಬೆಳ್ನೊರೆಗಳು ಕೆಲವೊಂದನ್ನು ಕಾಡಿನ ನಡುವಿನ ನಡುವೆ ಸದ್ದು ಆಲಿಸಿ ಕಾಡಿನ ಹಾದಿ ಹಿಡಿದು ಹುಡುಕಬೇಕು. ಈ ರಸ್ತೆಯಲ್ಲಿ ಸಾಗಿದರೆ 30ಕ್ಕೂ ಅಧಿಕ ಜಲಪಾತಗಳು ಕಾಣಸಿಗುತ್ತವೆ. ಹತ್ತಿಪ್ಪತ್ತು ಜಲಧಾರೆಗಳು 50-100 ಅಡಿ ಎತ್ತರದಿಂದ ಧುಮುಕುತ್ತವೆ. 19ನೇ ಕಿ.ಮೀನಲ್ಲಿ ಸಿಗುವ ಬೃಹತ್ ಜಲಧಾರೆಯ ಅಂದವಂತೂ ಚೆಂದಕ್ಕಿಂತ ಚಂದ. ಸುಮಾರು 60 ಅಡಿ ಎತ್ತರದಿಂದ ಭೋರ್ಗರೆಯುತ್ತಾ ಧುಮುಕುವ ಈ ಜಲಪಾತ ನಡು ಮಳೆಗಾಲದಲ್ಲಿ ರಸ್ತೆಗೆ ಬೀಳುವುದು.

ಹಲವು ಧಾರೆಗಳು ಧುಮ್ಮಿಕ್ಕಿ ಬಂದು ರಸ್ತೆಯಡಿಯ ಮೋರಿಯಲ್ಲಿ ಅವಿತು ಸಾಗಿ ಮತ್ತೆ ಕಾಡಿನ ನಡುವೆ ದಾರಿ ಕಂಡುಕೊಂಡು ಪ್ರಪಾತ ಸೇರಿ ಬಿಡುತ್ತವೆ. ಸುಮಾರು ಹತ್ತರಷ್ಟು ಜಲಪಾತಗಳು ಮಾಮೂಲಿ ಜಲಧಾರೆಗಳಿಗಿಂತ ಭಿನ್ನವಾಗಿ ವಿಶಾಲವಾಗಿ ಹರಿಯುತ್ತಾ ಬಂದು ನದಿರೂಪದಲ್ಲಿ ಕಂಗೊಳಿಸುತ್ತವೆ. ಇಲ್ಲಿನ ಹಲವು ಗಿರಿಕನ್ಯೆಯರು ಅನಾಮಿಕರೇ.

ಕೊಡಗಿನ ದಟ್ಟ ಕಾಡುಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಸುಮಾರು ಹತ್ತು ಸಾವಿರ ಎಕರೆ ವಿಸ್ತಾರದ ಮಳೆಕಾಡು ಹೊಂದಿರುವ ತಲಕಾವೇರಿ ಅಭಯಾರಣ್ಯದಲ್ಲಿ ಅಪರೂಪದ ಮರಗಳು ಇವೆ. ಜಿಂಕೆ, ಆನೆ, ಕಾಡೆಮ್ಮೆ, ಚಿರತೆ ಮುಂತಾದ ವನ್ಯ ಮೃಗಗಳು ಇಲ್ಲಿವೆ. ಅಪರೂಪದ ಕಾಡು ಹೂಗಳೂ ಕಾಣಸಿಗುತ್ತವೆ. ಪಡಿನಾಲ್ಕುನಾಡು ಮತ್ತು ಪಟ್ಟಿಘಾಟ್ ರಕ್ಷಿತಾರಣ್ಯಗಳು ತಲಕಾವೇರಿ ಅಭಯಾರಣ್ಯದ ವ್ಯಾಪ್ತಿಯಲ್ಲಿದೆ. ಈ ರಕ್ಷಿತಾರಣ್ಯದಿಂದ ಹರಿದುಬರುವ ಜಲಧಾರೆಗಳನ್ನು ಸಂಗ್ರಹಿಸಿ ಭರೂಕ ವಿದ್ಯುತ್ ಉತ್ಪಾದನಾ ಕೇಂದ್ರವು ವಿದ್ಯುತ್ ಉತ್ಪಾದಿಸುತ್ತದೆ. ಕರಿಕೆಯ ಜಲಕನ್ನಿಕೆಯರ ಚೆಲುವು ಆಸ್ವಾದಿಸಲು ಬಿಡುವು ಕೊಟ್ಟ ಮಳೆಗಾಲದ ದಿನಗಳು ಸೂಕ್ತ.

ಮಡಿಕೇರಿಯಿಂದ ಬಾಗಮಂಡಲ ಮೂಲಕ ಕರಿಕೆಗೆ ಖಾಸಗಿ ಹಾಗೂ ಸರ್ಕಾರಿ ಬಸ್ ಸೌಲಭ್ಯಗಳಿವೆ. ಒಮ್ಮೆ ಬಸ್‌ ಹತ್ತಿ ಕರಿಕೆಯವರೆಗೂ ಸಾಗಿ, ವಾಪಸ್ ಅದೇ ಹಾದಿಯಲ್ಲಿ ಬಂದರೆ ರಸ್ತೆಯ ಇಕ್ಕೆಲಗಳಲ್ಲಿರುವ ಜಲಪಾತಗಳನ್ನು ಎರಡು ಬಾರಿ ಕಣ್ತುಂಬಿಕೊಳ್ಳಬಹುದು.

ಭಾಗಮಂಡಲ-ಕರಿಕೆಯ ಹಾದಿಯಲ್ಲಿ ರಸ್ತೆಯಂಚಿಗೆ ಬೀಳುವ ಜಲಧಾರೆ
ಭಾಗಮಂಡಲ-ಕರಿಕೆಯ ಹಾದಿಯಲ್ಲಿ ರಸ್ತೆಯಂಚಿಗೆ ಬೀಳುವ ಜಲಧಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT