ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ | ‘ಯೋಜನೆ ಸಮರ್ಪಕ ಜಾರಿಗೊಳಿಸಿ’

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ
Published 4 ಜುಲೈ 2024, 5:21 IST
Last Updated 4 ಜುಲೈ 2024, 5:21 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸರ್ಕಾರದ ಯೋಜನೆಗಳನ್ನು ಇಲಾಖೆಗಳು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸಬೇಕು  ಎಂದು ಜಿಲ್ಲಾ ಮುಖ್ಯ ಯೋಜನಾಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆಯಲ್ಲಿ ವಹಿಸಿ ಮಾತನಾಡಿದರು. ಸರ್ಕಾರದಿಂದ ಈಗಾಗಲೇ ನಿಗದಿಗೊಳಿಸಿರುವ ಯೋಜನೆಗಳಿಗೆ ಹಣ ಬರಲಿದ್ದು, ಎಲ್ಲರೂ ತಮಗೆ ನಿಗದಿಗೊಳಿಸಿರುವ ಹಣವನ್ನು ವಾರ್ಷಿಕ ಯೋಜನೆಯಲ್ಲಿ ಬಳಸಿಕೊಳ್ಳಬೇಕು. ತಮ್ಮ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಬಯೋಮೆಟ್ರಿಕ್ ಉಪಕರಣ ಅಳವಡಿಸಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಪಶುವೈದ್ಯಕೀಯ ಇಲಾಖೆಯಲ್ಲಿ ಲಸಿಕೆ ಸಂಗ್ರಹ ಇದೆ. ಕಾಲುಬಾಯಿ ರೋಗಕ್ಕೆ ಈಗಾಗಲೇ ಒಂದು ಬಾರಿ ಲಸಿಕೆ ನೀಡಲಾಗಿದ್ದು, ಎರಡನೇ ಲಸಿಕೆ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಇಲಾಖೆಯ ವೈದ್ಯಾಧಿಕಾರಿ ನಾಗರಾಜು ಸಭೆಗೆ ತಿಳಿಸಿದರು.

ಕೊಡಗು ಜಿಲ್ಲೆಯ ಡೈರಿಗೆ ಅಕ್ಕಪಕ್ಕದ ಜಿಲ್ಲೆಗಳಿಂದ ಹಾಲು ಸರಬರಾಜಾಗುತ್ತಿದೆ. ಹೈನುಗಾರಿಕೆ ರೈತರ ಉಪ ಕಸುಬಾಗಿದ್ದು, ರೈತರಿಗೆ ಹೈನುಗಾರಿಕೆಯಿಂದಾಗುವ ಲಾಭದ ಹಾಗೂ ಸರ್ಕಾರ ನೀಡುವ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಜಾನುವಾರುಗಳಿಗೆ ಯಾವುದೇ ಕಾಯಿಲೆ ಬಾರದ ಹಾಗೆ ಮುಂಜಾಗ್ರತೆ ವಹಿಸಬೇಕು. ಸಮಯಕ್ಕೆ ಸರಿಯಾಗಿ ಚುಚ್ಚುಮದ್ದುಗಳನ್ನು ನೀಡಬೇಕು. ಪಶು ವಿಮೆಯ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ಸಭೆಯಲ್ಲಿ ಆರೋಗ್ಯಾಧಿಕಾರಿ ಇಂದೂಧರ್ ತಿಳಿಸಿದರು. ಕಾಯಿಲೆ ಬಗ್ಗೆ ಜನರಿಗೆ ಆಶಾ ಕಾರ್ಯಕರ್ತರ ಮೂಲಕ ಹಾಗೂ ಬೆಳಿಗ್ಗೆ ತ್ಯಾಜ್ಯ ಸಂಗ್ರಹಿಸುವ ವಾಹನದಲ್ಲಿ ಪ್ರಚಾರ ಮಾಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಜನರಿಗೆ ಡೆಂಗಿ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಜ್ವರ ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿ, ಪ್ರಾರಂಭದಲ್ಲಿಯೇ ಗುಣಪಡಿಸಲು ಇಲಾಖೆ ಮುಂದಾಗಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾಯಿಲೆ ಬಗ್ಗೆ ಮಾಹಿತಿ ನೀಡಬೇಕೆಂದು ಯೋಜನಾಧಿಕಾರಿ ತಿಳಿಸಿದರು.

ತಾಲ್ಲೂಕಿನಲ್ಲಿ ಶಾಲೆಯಿಂದ ಹೊರಗುಳಿದಿದ್ದ 14 ವಿದ್ಯಾರ್ಥಿಗಳಲ್ಲಿ ಇಬ್ಬರನ್ನು ಶಾಲೆಗೆ ಮತ್ತೆ ಕರೆತರುವ ಕೆಲಸವಾಗಿದೆ. ಉಳಿದ 12 ವಲಸೆ ವಿದ್ಯಾರ್ಥಿಗಳ ವಿಳಾಸ ಸರಿಯಾಗಿ ತಿಳಿಯದ ಕಾರಣ ಸಂಬಂಧಿಸಿದ ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ ಎಂದು ಬಿಇಒ ಭಾಗ್ಯಮ್ಮ ಮಾಹಿತಿ ನೀಡಿದರು.

ಎಲ್ಲ ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ಇಲಾಖೆ ಮುಂದಾಗಬೇಕು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ರಿಪೇರಿಗೆ ಎಂಜಿನಿಯರ್‌ ಕ್ರಿಯಾಯೋಜನೆ ತಯಾರಿಸಿ ಮೇಲಧಿಕಾರಿಗಳಿಗೆ ಕಳಿಸುವಂತೆ ಯೋಜನಾಧಿಕಾರಿ ತಿಳಿಸಿದರು.

ಜೆಜೆಎಂ ಯೋಜನೆಯಡಿ ತಾಲ್ಲೂಕಿನಲ್ಲಿ 247 ಕುಡಿಯುವ ನೀರಿನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ 202 ಕಾಮಗಾರಿಗಳು ಮುಗಿದು ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದವುಗಳನ್ನು ಡಿಸೆಂಬರ್ ಒಳಗೆ ಮುಗಿಸಲಾಗುವುದು ಎಂದು ಜಿ.ಪಂ ಎಂಜಿನಿಯರ್‌ ವಿರೇಂದ್ರ ತಿಳಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದು, ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ವೀರಣ್ಣ ಇದ್ದರು.

ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಪಶುವೈದ್ಯಾಧಿಕಾರಿ ನಾಗರಾಜು ಮಾಹಿತಿ ನೀಡಿದರು
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಪಶುವೈದ್ಯಾಧಿಕಾರಿ ನಾಗರಾಜು ಮಾಹಿತಿ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT