ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್ ಪರೀಕ್ಷೆ: ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸಚಿವ ಡಾ.ಶರಣಪ್ರಕಾಶ್ ಪಾಟೀಲ

Published : 6 ಜುಲೈ 2024, 6:05 IST
Last Updated : 6 ಜುಲೈ 2024, 6:05 IST
ಫಾಲೋ ಮಾಡಿ
Comments

ಮಡಿಕೇರಿ: ‘ನೀಟ್ ಪರೀಕ್ಷೆ ಬೇಡ ಎಂದು ಕೇರಳ ವಿಧಾನಸಭೆ ನಿರ್ಣಯಿಸಿದ್ದು, ತನ್ನಂತೆಯೇ ಕರ್ನಾಟಕವೂ ನಿರ್ಣಯಿಸಬೇಕು ಎಂದು ಪತ್ರವನ್ನೂ ಬರೆದಿದೆ’ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಆರ್.ಶರಣಪ್ರಕಾಶ್ ಪಾಟೀಲ ತಿಳಿಸಿದರು.

‘ಕೆಲವು ರಾಜ್ಯಗಳಲ್ಲಿ ಇಂಥ ಪ್ರಯತ್ನಗಳೂ ನಡೆದಿವೆ. ಆದರೆ, ನೀಟ್ ಕುರಿತು ಸುಪ್ರೀಂಕೋರ್ಟ್ ಆದೇಶವೂ ಇದೆ. ನೀಟ್‌ ಅಕ್ರಮ ಪ್ರಶ್ನಿಸಿ ಕೆಲವು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಗಾಗಿ, ಕಾನೂನು ತೊಡಕು ಉಂಟಾಗದಂತೆ, ಆಳವಾಗಿ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.

‘ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಹುದೊಡ್ಡ ಹಗರಣ ನೀಟ್. ಇದು ಕೇವಲ ಒಂದು ವರ್ಷದ್ದಲ್ಲ, ಹಲವು ವರ್ಷಗಳ ಹಗರಣ. ಮೊದಲಿಗೆ ಸಚಿವ ದೇವೇಂದ್ರ ಪ್ರಧಾನ್ ಅಕ್ರಮವೇ ಆಗಿಲ್ಲ ಎಂದರು. ನಂತರ, ಒತ್ತಡ ಬಂದ ಬಳಿಕ ಸಿಬಿಐ ತನಿಖೆಗೆ ಆದೇಶಿಸಲಾಯಿತು. ಈಗ ಒಂದೊಂದೇ ಅಕ್ರಮ ಬಯಲಾಗುತ್ತಿದೆ. ಕೇಂದ್ರ ಸರ್ಕಾರ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡಿದೆ’ ಎಂದು ಕಿಡಿಕಾರಿದರು.

‘ಇದುವರೆಗೆ ಒಬ್ಬರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಇದೆಲ್ಲವನ್ನೂ ಗಮನಿಸಿದರೆ ಕೇಂದ್ರ ಸರ್ಕಾರ ಈ ಹಗರಣದಲ್ಲಿ ಯಾರನ್ನೋ ರಕ್ಷಿಸಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕೆಲವರು ನನ್ನ ಕಚೇರಿಗೆ ಬಂದಿದ್ದರು ಎಂದು ಆರೋಪಿಸಲಾಗುತ್ತಿದೆ. ಆದರೆ, ನನ್ನದು ಸಾರ್ವಜನಿಕ ಕಚೇರಿ. ಅಲ್ಲಿಗೆ ಯಾರು ಬೇಕಾದರೂ ಬರಬಹುದು. ಅವರು ಭೇಟಿ ನೀಡಿದ್ದಾರೆ ಎನ್ನಲಾದ ದಿನ ನಾನು ಕಚೇರಿಗೆ ಹೋಗಿರಲಿಲ್ಲ. ಬೇಕಿದ್ದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಮುಂದಿನ ಸಾಲಿನ ವೈದ್ಯಕೀಯ ಸ್ನಾತಕೋತ್ತರ ಪದವಿಯಲ್ಲಿ ಸುಮಾರು 1 ಸಾವಿರ ಸೀಟುಗಳನ್ನು ಹೆಚ್ಚಿಸುವ ಪ್ರಯತ್ನಗಳು ಶುರುವಾಗಿದ್ದು, ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವುದು ಹಗರಣವೇ ಅಲ್ಲ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ
ಡಾ.ಆರ್.ಶರಣಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಮಡಿಕೇರಿಯಲ್ಲಿ ದಿನಕ್ಕೆ 2 ಗಂಟೆ ನೀರು ಪೂರೈಕೆ!
ಮಡಿಕೇರಿ ಸಮೀಪದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ ಸಂವಾದ ನಡೆಸಿದ ವೇಳೆ ವಿದ್ಯಾರ್ಥಿನಿಯೊಬ್ಬರು ‘ಹಾಸ್ಟೆಲ್‌ನಲ್ಲಿ ದಿನಕ್ಕೆ 2 ಗಂಟೆ ಮಾತ್ರವೇ ನೀರು ಕೊಡುತ್ತಾರೆ. ನಾವು ಹೇಗೆ ಸಂಗ್ರಹಿಸಿಟ್ಟುಕೊಳ್ಳಬೇಕು ಎನ್ನುವುದಕ್ಕೆ ಸಲಹೆ ಕೊಡಿ’ ಎಂದು ಕೇಳಿದರು. ಇದನ್ನು ಕೇಳಿ ಮಡಿಕೇರಿಯಂತಹ ಊರಿನಲ್ಲಿ ಕುಡಿಯುವ ನೀರಿಗೂ ಸಮಸ್ಯೆಯೇ ಎಂದು ಅಚ್ಚರಿ ವ್ಯಕ್ತಪಡಿಸಿದ ಸಚಿವರು ‘ಕೂಡಲೇ ಮತ್ತೊಂದು ಕೊಳವೆಬಾವಿ ಕೊರೆಸಿ 24 ಗಂಟೆಗಳ ಕಾಲ ನೀರು ಸರಬರಾಜು ಆಗುವಂತೆ ಕ್ರಮ ವಹಿಸಿ’ ಎಂದು ಸೂಚನೆ ನೀಡಿದರು. ನಂತರ ವಿದ್ಯಾರ್ಥಿಗಳು ಬೋಧಕರ ಕೊರತೆ ಸಮರ್ಪಕವಾಗಿ ಪಾವತಿಯಾಗದ ಶಿಷ್ಯವೇತನ ಶೌಚಾಲಯದ ಸಮಸ್ಯೆ ಬಸ್‌ಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಸುರಿಮಳೆಗರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT