ಶ್ರೀನಿವಾಸಪುರ: ತಾಲ್ಲೂಕಿನ ಇಮರಕುಂಟೆ ಗ್ರಾಮದ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಶ್ರೀನಿವಾಸಪುರದ ಭೈರವೇಶ್ವರ ವಿದ್ಯಾ ನಿಕೇತನದ ಸಂಸ್ಥಾಪಕ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಉತ್ತರೋತ್ತರ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀರಾಮರೆಡ್ಡಿ ಅವರ ಶೈಕ್ಷಣಿಕ ಹಾಗೂ ಸಮಾಜ ಸೇವಾ ಕಾರ್ಯಗಳಿಗೆ ಸಂದ ಗೌರವ ಇದಾಗಿದೆ. ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಸ್ವಾವಲಂಬನೆ ಪಾಠ ಹೇಳಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಶ್ರೀರಾಮರೆಡ್ಡಿ ಅವರು ಶಾಲಾ ಶಿಕ್ಷಣವನ್ನು ಪಠ್ಯ ಹಾಗೂ ಪಠ್ಯೇತರ ಎಂದು ವಿಭಾಗಿಸಿ, ಪಠ್ಯೇತರ ಚಟುವಟಿಕೆಗೆ ಪಠ್ಯದಷ್ಟೇ ಮಹತ್ವ ನೀಡಿದ್ದರು. ಮಕ್ಕಳನ್ನು ಸ್ವಾವಲಂಬಿ ಬದುಕಿಗೆ ಅಣಿಗೊಳಿಸುವುದು ಅವರ ಆಶಯವಾಗಿತ್ತು. ಹಾಗಾಗಿ ಅನುಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವ ಬಗ್ಗೆ ಹಾಗೂ ಉಪ್ಪಿನಕಾಯಿ, ಸಾಬೂನು ಪುಡಿ, ಶಾಂಪೂ ಮುಂತಾದ ಮನೆ ಬಳಕೆ ವಸ್ತುಗಳ ತಯಾರಿಕೆಯಲ್ಲಿ ಮಕ್ಕಳಿಗೆ ವಿಶೇಷ ತರಬೇತಿ ನೀಡುತ್ತಿದ್ದರು. ಆಹ್ವಾನದ ಮೇರೆಗೆ ರಾಜ್ಯಾದ್ಯಂತ ಸಂಚರಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಅಗತ್ಯವಾದ ತರಬೇತಿ ನೀಡಿದ್ದಾರೆ.

ಶ್ರೀರಾಮರೆಡ್ಡಿ ಅವರು ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಪ್ರತಿ ಶಾಲೆಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸೋಮಯಾಜಲಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಸರ್ಕಾರದಿಂದ ಸುಮಾರು 20 ಎಕರೆ ಜಮೀನು ಮಂಜೂರು ಮಾಡಿಸಿ ಮಾವಿನ ತೋಟ ಬೆಳೆಸಿದ್ದಾರೆ. ಶಾಲಾ ಆವರಣದಲ್ಲಿ ಪರಂಗಿ ತೋಟ ಬೆಳೆಸಿ ವಿದ್ಯಾರ್ಥಿಗಳಿಗೆ ಟೂಟಿ ಫ್ರೂಟಿ ತಯಾರಿಕೆಯಲ್ಲಿ ತರಬೇತಿ ನೀಡಿದ್ದಾರೆ. ಆರಿಕುಂಟೆ ಗ್ರಾಮದ ಪ್ರೌಢಶಾಲೆಯ ಶಾಲಾ ಆವರಣದಲ್ಲಿ ನೆಟ್ಟು ಬೆಳೆಸಲಾಗಿರುವ ತೇಗದ ಮರಗಳು ಇಂದು ₹1 ಕೋಟಿಗೂ ಹೆಚ್ಚು ಬೆಲೆ ಬಾಳುತ್ತವೆ.

ಕೋಲಾರ ತಾಲ್ಲೂಕಿನ ಹರಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿದ್ದಾಗ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಶ್ರಮದಾನದ ಮೂಲಕ ಶಾಲಾ ಕಟ್ಟಡ ನಿರ್ಮಿಸಿದರು. ಗ್ರಾಮದ ರೈತರಿಗೆ ವೈಜ್ಞಾನಿಕ ಕೃಷಿ ಕೈಗೊಳ್ಳುವಂತೆ ಪ್ರೇರಣೆ ನೀಡಿದರು. ಗ್ರಾಮದ ರೈತರ ಆರ್ಥಿಕಾಭಿವೃದ್ಧಿಗೆ ಪೂರಕ ಯೋಜನೆ ರೂಪಿಸಿದರು. ರಾತ್ರಿ ಶಾಲೆಯಲ್ಲಿಯೇ ಉಳಿದುಕೊಂಡು, ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾರಣರಾದರು. ನಾಡಿನ ಹೆಸರಾಂತ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಶ್ರೀರಾಮರೆಡ್ಡಿ ಅವರ ವಿದ್ಯಾರ್ಥಿ.

ಶ್ರೀನಿವಾಸಪುರ-ಪುಂಗನೂರು ರಸ್ತೆ ಬದಿಯಲ್ಲಿ ಅವರು ಬೆಳೆಸಿರುವ ಮರಗಳು ಅವರ ಪರಿಸರ ಪ್ರೀತಿಗೆ ಪ್ರತೀಕವಾಗಿವೆ. ಶಾಲಾ ಆವರಣ ಹಾಗೂ ಸುತ್ತಮುತ್ತ ವಿದ್ಯಾರ್ಥಿಗಳ ನೆರವಿನಿಂದ ನೂರಾರು ಗಿಡ ಮರಗಳನ್ನು ಬೆಳೆಸಿದ್ದಾರೆ.

1998ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ, ಸಾರ್ವಜನಿಕರು ಹಾಗೂ ಆದಿಚುಂಚನಗಿರಿ ಶ್ರೀಗಳ ಒತ್ತಾಯದ ಫಲವಾಗಿ ಭೈರವೇಶ್ವರ ವಿದ್ಯಾ ನಿಕೇತನ ಸ್ಥಾಪಿಸಿದರು. ಸಂಬಳ ರಹಿತ ಶಿಕ್ಷಕರಾಗಿ, ಕಾರ್ಯದರ್ಶಿಯಾಗಿ, ನಿವೃತ್ತಿಯಿಂದ ಬಂದ ಹಣ ಹಾಗೂ ದಾನಿಗಳ ನೆರವು ಪಡೆದು ಶಾಲಾಭಿವೃದ್ಧಿ ಕೈಗೊಂಡರು.

ಗ್ರಾಮೀಣ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಭಾಷಾ ಪ್ರಯೋಗ ಶಾಲೆ, ಕಂಪ್ಯೂಟರ್ ತರಬೇತಿ ಕೇಂದ್ರ, ಸ್ಪೋಕನ್ ಇಂಗ್ಲಿಷ್ ತರಗತಿ ಪ್ರಾರಂಭಿಸಿದರು. ಸಾವಯವ ಕೃಷಿಯಲ್ಲಿ ಮಕ್ಕಳಿಗೆ ತರಬೇತಿ ನೀಡಿದರು. ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸಲು ಅಗತ್ಯ ಕ್ರಮ ಕೈಗೊಂಡರು. ಹಾಗಾಗಿ ಶಾಲೆ ಮಾದರಿಯಾಗಿ ಬೆಳೆಯಿತು.

ಶಾಲಾವರಣದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಬಾಳೆ, ನುಗ್ಗೆ ಹಾಗೂ ಹೂ ಬೆಳೆದು ರೈತರು ಹುಬ್ಬೇರಿಸುವಂತೆ ಮಾಡಿದರು. ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕರಾಗಿ, ಸಾರ್ವಜನಿಕ ವಲಯದಲ್ಲಿ ಪ್ರೀತಿಯ ಮೇಷ್ಟ್ರಾಗಿ ಅವರ ನಿಸ್ವಾರ್ಥ ಸೇವೆ ಸಾರ್ವಕಾಲಿಕ ಮಾದರಿಯಾಗಿದ್ದಾರೆ.

ಇಲ್ಲಿಯವರೆಗೆ ರಾಜ್ಯ ಶಿಕ್ಷಕ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಎಂ.ಶ್ರೀರಾಮರೆಡ್ಡಿ ಅವರಿಗೆ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ತನ್ನ ಚೊಚ್ಚಲ ಉತ್ತರೋತ್ತರ ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಆದರ್ಶ ಗುರು ಶ್ರೀರಾಮರೆಡ್ಡಿ ಅವರಿಗೆ ಉತ್ತರೋತ್ತರ ಪ್ರಶಸ್ತಿ ನೀಡುವುದರ ಮೂಲಕ ತನ್ನ ಗೌರವ ಹೆಚ್ಚಿಸಿಕೊಂಡಿದೆ
ಕೋಟಿಗಾನಹಳ್ಳಿ ರಾಮಯ್ಯ, ನಾಟಕಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.