ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ: ಬಳಕೆಗೆ ಬಾರದ ಶುದ್ಧ ನೀರಿನ ಘಟಕ

ವರ್ಷಗಳು ಕಳೆದರೂ ಘಟಕಕ್ಕಿಲ್ಲ ದುರಸ್ತಿ ಭಾಗ್ಯ
Published 2 ಜುಲೈ 2024, 5:31 IST
Last Updated 2 ಜುಲೈ 2024, 5:31 IST
ಅಕ್ಷರ ಗಾತ್ರ

ಬಂಗಾರಪೇಟೆ: ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕ ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿದ್ದು, ವರ್ಷಗಳು ಕಳೆದರೂ ದುರಸ್ತಿಯಾಗದೆ ಜನರು ಪ್ಲೋರೈಡ್‌ ಯುಕ್ತ ನೀರನ್ನೇ ಕುಡಿಯಬೇಕಾಗಿದೆ.

ಗ್ರಾಮೀನ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ತಾಲ್ಲೂಕಿನಾದ್ಯಂತ ಲಕ್ಷಾಂತರ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದರೆ. ಆದರೆ, ಬಂಗಾರಪೇಟೆ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಈ ಬಗ್ಗೆ ಗ್ರಾಮೀಣ ಪ್ರದೇಶದ ಜನರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪಾತರಾಮಗೊಳ್ಳ, ಗುಟ್ಟಹಳ್ಳಿ, ಬೋಪ್ಪನಹಳ್ಳಿ, ಅತ್ತಿಗಿರಿಕೊಪ್ಪ, ಪೋಲೇನಹಳ್ಳಿ, ಕುಂದರಸನಹಳ್ಳಿ, ಕೀಲುಕೊಪ್ಪ, ಮರವಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕಗಳು ಕೆಟ್ಟು ವರ್ಷ ಕಳೆದಿದೆ. ಆದರೂ ಸಂಬಂಧಪಟ್ಟ ಇಲಾಖೆ ಅಥವಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ದುರಸ್ತಿಪಡಿಸಲು ಸೂಕ್ತ ಕ್ರಮ ವಹಿಸುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ಜನರು ನಿತ್ಯ ಕೊಳವೆಬಾವಿ ನೀರನ್ನು ಕುಡಿಯಬೇಕಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವಕ್ಕೆ ನೀಡಿದ್ದು, ಅವು ಕೆಟ್ಟರೆ ದುರಸ್ತಿಗೊಳಿಸಬೇಕಾದ  ಜವಾಬ್ದಾರಿ ಸಹ ಆಯಾ ಸಂಸ್ಥೆಗಳಿಗೆ ಸೇರಿದೆ. ದುರಸ್ತಿಗೆ ಪಂಚಾಯಿತಿ ಅಧಿಕಾರಿಗಳಿಗೆ ಕೇಳಿದರೆ ನಮಗೆ ಸಂಬಂಧಿಸಿದ್ದಲ್ಲ ಎಂದು ಜಾರಿಕೊಳ್ಳುತ್ತಾರೆ. ಇದರಿಂದ ಜನ ಪ್ಲೋರೈಡ್ ನೀರನ್ನು ಕುಡಿಯುವಂತಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ನಷ್ಟ ಉಂಟಾಗುತ್ತಿದೆ ಎಂಬುದು ಗ್ರಾಮಸ್ಥರ ದೂರಾಗಿದೆ.

ಕುಡಿಯುವ ನೀರಿನ ಅಗತ್ಯವಿದ್ದು, ಆದಷ್ಟು ಬೇಗ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅತ್ತಿಗಿರಿಕೊಪ್ಪದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ತುಕ್ಕು ಹಿಡಿಯುತ್ತಿರುವ ಯಂತ್ರಗಳು
ಅತ್ತಿಗಿರಿಕೊಪ್ಪದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ತುಕ್ಕು ಹಿಡಿಯುತ್ತಿರುವ ಯಂತ್ರಗಳು
ಗುಟ್ಟಹಳ್ಳಿಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ
ಗುಟ್ಟಹಳ್ಳಿಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ

ಘಟಕ ದುರಸ್ತಿಗೆ ಮುಂದಾಗಲಿ

ಗ್ರಾಮದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಎರಡು ವರ್ಷ ಕಳೆದಿದ್ದು ದುರಸ್ತಿಗೆ ಗಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಕೊಳವೆಬಾವಿ ನೀರನ್ನು ಕುಡಿಯುವಂತಾಗಿದೆ. ಗ್ರಾಮದ ಆರೋಗ್ಯ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಘಟಕ ದುರಸ್ತಿಗೆ ಮುಂದಾಗಬೇಕು. ನಾರಾಯಣಪ್ಪ ಬೋಪ್ಪನಹಳ್ಳಿ ಗ್ರಾಮಸ್ಥ

ನಿರ್ವಹಣೆ ದುರಸ್ತಿ ಗುತ್ತಿಗೆದಾರರ ಜವಾಬ್ದಾರಿ

ಖಾಸಗಿ ಸಂಸ್ಥೆಯವರು ಘಟಕ ನಿರ್ಮಾಣಕ್ಕೆ ಗುತ್ತಿಗೆ ಪಡೆದುಕೊಂಡಿದ್ದಾರೆ. ಅದರ ನಿರ್ವಹಣೆ ಹಾಗೂ ದುರಸ್ತಿ ಅವರದೇ ಜವಾಬ್ದಾರಿ. ಗುತ್ತಿಗೆದಾರರು ದುರಸ್ತಿಗೆ ಮುಂದಾಗದ ಕಾರಣ ಜನರ ಆರೋಗ್ಯ ದೃಷ್ಟಿಯಿಂದ ಅನುದಾನ ಲಭ್ಯತೆ ಮೇರೆಗೆ ಪಂಚಾಯಿತಿಯಿಂದ ದುರಸ್ತಿಗೊಳಿಸುತ್ತೇವೆ. ಭವ್ಯಾ ಸಂತೋಷ್ ಅಧ್ಯಕ್ಷೆ ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ

ಸ್ಥಳೀಯ ಆಡಳಿತವೇ ನಿರ್ವಹಣೆ ಮಾಡಲಿ

ಗ್ರಾಮೀಣ ಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಸಮಸ್ಯೆ ಇತ್ಯರ್ಥ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಆಡಳಿತವೇ ಇವುಗಳ ನಿರ್ವಹಣೆ ಮಾಡಬೇಕು. ಶ್ರೀನಿವಾಸ ಹುಲಿಬೆಲೆ ಗ್ರಾಮ ಪಂಚಾಯಿತಿ ಸದಸ್ಯ

ಶೀಘ್ರ ದುರಸ್ತಿ

ತಾಲ್ಲೂಕಿನಲ್ಲಿ 161 ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದು ಗುತ್ತಿಗೆದಾರರ ಅವಧಿ ಮುಗಿಯುವವರೆಗೂ ಅವುಗಳ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರದೇ. ಅವಧಿ ಮುಗಿದ ನಂತರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಆಗಿದೆ. ಶೀಘ್ರದಲ್ಲಿ ದುರಸ್ತಿಗೊಳಿಸಲಾಗುವುದು. ಸೂರ್ಯ ಪ್ರಸಾದ್ ಸಹಾಯಕ ಅಭಿಯಂತರ ಕುಡಿಯುವ ನೀರು ಮತ್ತು ನೈರ್ಮಲ್ಯ ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT