ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಜಲಾಶಯ | ಎರಡನೇ ಬೆಳೆಗೂ ನೀರು: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

Published : 22 ಸೆಪ್ಟೆಂಬರ್ 2024, 10:56 IST
Last Updated : 22 ಸೆಪ್ಟೆಂಬರ್ 2024, 10:56 IST
ಫಾಲೋ ಮಾಡಿ
Comments

ಕೊಪ್ಪಳ: ಒಂದೇ ವಾರದಲ್ಲಿ ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್‌ ಗೇಟ್ ಅಳವಡಿಸಿ 20 ಟಿಎಂಸಿ ಅಡಿ ನೀರು ಉಳಿಸಿದ ತಜ್ಞರಿಗೆ ರೈತರ ಪರವಾಗಿ ಧನ್ಯವಾದ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎರಡನೇ ಬೆಳೆಗೂ ನೀರು ಸಿಗುತ್ತದೆ ಎಂದು ಭರವಸೆ ನೀಡಿದರು.

ಮೈತುಂಬಿಕೊಂಡಿರುವ ತುಂಗಭದ್ರಾ ಅಣೆಕಟ್ಟೆಗೆ‌ ಭಾನುವಾರ ಬಾಗಿನ ಅರ್ಪಿಸಿ, ಕೊಚ್ಚಿ ಹೋಗಿದ್ದ ಕ್ರಸ್ಟ್‌ ಗೇಟನ್ನು ತುರ್ತಾಗಿ ಅಳವಡಿಸಿದ ಎಂಜಿನಿಯರ್ ಮತ್ತು ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿ ಅವರು ಮಾತನಾಡಿದರು.

ಗೇಟ್ ಮುರಿದಾಗ ನನ್ನ ರೈತರು ಆತಂಕದಲ್ಲಿದ್ದರು. ಜಲ ಸಂಪನ್ಮೂಲ ಸಚಿವರು ಮತ್ತು ನಾನು ಚರ್ಚಿಸಿ ತುರ್ತಿನ ಕ್ರಮಕ್ಕೆ ಮುಂದಾದೆವು. ನಮ್ಮ ಸೂಚನೆಯಂತೆ ಒಂದೇ ವಾರದಲ್ಲಿ ಗೇಟ್ ಅಳವಡಿಸಿ 20 ಟಿಎಂಸಿ ಅಡಿ ನೀರನ್ನು ಉಳಿಸಿದ ಗೇಟ್ ‌ನಿರ್ವಹಣಾ ತಜ್ಞ ಕನ್ನಯ್ಯ ನಾಯ್ಡು ಮತ್ತು ಎಂಜಿನಿಯರ್ ಸಿಬ್ಬಂದಿಗೆ ಸರ್ಕಾರ ಮತ್ತು ರೈತರ ಪರವಾಗಿ ಧನ್ಯವಾದ ಅರ್ಪಿಸಿದರು.

ಕರ್ನಾಟಕಕ್ಕೆ ಎಡ ಮತ್ತು ಬಲದಂಡೆ ಸೇರಿ 9,26,438 ಎಕರೆಗೆ, ಆಂಧ್ರ ಪ್ರದೇಶದ 6,25,097 ಎಕರೆ, ತೆಲಂಗಾಣದ 87,000 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ತುಂಗಭದ್ರಾ ಅಣೆಕಟ್ಟು ಎರಡನೇ ಬಾರಿ ತುಂಬಿರುವುದಕ್ಕೆ ಸಂತಸವಾಗಿದೆ ಎಂದರು.

ವಿರೋಧ ಪಕ್ಷದ ಮಾತುಗಳಿಗೆ ಕಿವಿಕೊಡಬೇಡಿ. ಮೊದಲು ದಿನಕ್ಕೊಂದು ಸುಳ್ಳು ಹೇಳುತ್ತಿದ್ದ ಬಿಜೆಪಿ ಈಗ ಗಳಿಗೆಗೊಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ. ಆದರೆ ಬಿಜೆಪಿ ನಾಯಕರು ನಿಮ್ಮನ್ನು ಯಾಮಾರಿಸಿ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎನ್ನುವ ನಂಬಿಕೆಯಿದೆ. ಯಾಕೆಂದರೆ ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರದ ಜನತೆ ಏನು ಎಂಬುದು ನನ್ನ ಹೃದಯಕ್ಕೆ ಚೆನ್ನಾಗಿ ಗೊತ್ತಿದೆ. ಬಿಜೆಪಿ ಮಾತನ್ನು ನಂಬಬೇಡಿ. ಎರಡೂ ಬೆಳೆಗೂ ನೀರು ಕೊಡುತ್ತೇವೆ ಎಂದು ಪುನರುಚ್ಚರಿಸಿದರು.

ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆ ಕೊಟ್ಟಿದ್ದೀರಿ. ನಾವು ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ 46 ವಿಷಯಗಳನ್ನು, ಕಲ್ಯಾಣ ಕರ್ನಾಟಕದ ಅಭಿವೃದ್ದಿಗಾಗಿ ಯೋಜನೆಗಳನ್ನು ಘೋಷಿಸಿದ್ದೇವೆ ಎಂದರು.

ಪ್ರಾದೇಶಿಕ ಅಸಮಾನತೆ ಹಾಗೂ‌ ನಂಜುಂಡಪ್ಪ ವರದಿ ಅನುಷ್ಠಾನದ ಪರಿಣಾಮಗಳ ಅಧ್ಯಯನಕ್ಕೆ ಗೋವಿಂದರಾವ್ ಅವರ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ನೀಡಿದ ಬಳಿಕ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ನೀಲನಕ್ಷೆ ರಚಿಸುತ್ತೇವೆ. ಈಗಾಗಲೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ₹ 5000 ಕೋಟಿ ಘೋಷಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT