ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಬಿಬೆಟ್ಟದಲ್ಲಿ ಟ್ರಯಲ್‌ ಬ್ಲಾಸ್ಟಿಂಗ್‌: ಡ್ರಿಲ್ಲಿಂಗ್‌ ಕಾರ್ಯ ಆರಂಭ

ರೈತರ ತೀವ್ರ ವಿರೋಧದ ನಡುವೆಯೂ ಜಿಲ್ಲಾಡಳಿತ ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಗಣಿ ಪ್ರದೇಶದಲ್ಲಿ ಡ್ರಿಲ್ಲಿಂಗ್‌ ಕಾರ್ಯ ಆರಂಭ
Published 3 ಜುಲೈ 2024, 15:02 IST
Last Updated 3 ಜುಲೈ 2024, 15:02 IST
ಅಕ್ಷರ ಗಾತ್ರ

ಮಂಡ್ಯ/ಪಾಂಡವಪುರ: ರೈತರ ತೀವ್ರ ವಿರೋಧದ ನಡುವೆಯೂ ಜಿಲ್ಲಾಡಳಿತ ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಗಣಿ ಪ್ರದೇಶದಲ್ಲಿ ಪೊಲೀಸ್ ಭದ್ರತೆಯೊಂದಿಗೆ ‘ಪರೀಕ್ಷಾರ್ಥ ಸ್ಫೋಟ’ದ ಸಿದ್ಧತೆಗೆ ಕುಳಿ ಕೊರೆಯುವ (ಡ್ರಿಲ್ಲಿಂಗ್‌) ಕಾರ್ಯವನ್ನು ಬುಧವಾರ ಆರಂಭಿಸಿತು.

‘ನ್ಯಾಯಾಲಯದ ಆದೇಶ ಬರುವವರೆಗೆ ‘ಟ್ರಯಲ್‌ ಬ್ಲಾಸ್ಟ್‌’ ನಡೆಸುವುದಿಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ಮಂಗಳವಾರ ಪ್ರತಿಭಟನಾನಿರತ ರೈತರಿಗೆ ಭರವಸೆ ನೀಡಿದ್ದರು. ಆದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸದ್ದಿಲ್ಲದೆ ಬೇಬಿಬೆಟ್ಟದಲ್ಲಿ ಯಂತ್ರದ ಮೂಲಕ ‘ಡ್ರಿಲ್ಲಿಂಗ್‌’ ಕಾರ್ಯ ನಡೆಸಿದರು.

ಈ ವಿಷಯ ತಿಳಿಯುತ್ತಿದ್ದಂತೆ, ಬುಧವಾರ ರೈತ ಸಂಘದ ನೂರಾರು ಕಾರ್ಯಕರ್ತರು ಬಡಗಲಪುರ ನಾಗೇಂದ್ರ ಮತ್ತು ಎ.ಎಲ್. ಕೆಂಪೂಗೌಡ ನೇತೃತ್ವದಲ್ಲಿ ಕೆ.ಆರ್‌.ಎಸ್‌. ಬೃಂದಾವನ ಗೇಟ್‌ ಸಮೀಪ ಜಮಾಯಿಸಿ ಪ್ರತಿಭಟನೆ ನಡೆಸಿದರು. ‘ಪರೀಕ್ಷಾರ್ಥ ಸ್ಫೋಟ ನಿಲ್ಲಿಸಿ, ಕೆಆರ್‌ಎಸ್‌ ಡ್ಯಾಂ ಉಳಿಸಿ’ ಎಂದು ಘೋಷಣೆ ಕೂಗಿದರು.

ಇನ್ನೊಂದೆಡೆ ಸತ್ಯಾಂಶ ತಿಳಿಯಲು ‘ಪರೀಕ್ಷಾರ್ಥ ಸ್ಫೋಟ’ ನಡೆಸಬೇಕು ಎಂದು ಮತ್ತೊಂದು ರೈತ ಬಣದವರು ಆಗ್ರಹಿಸಿದರು. ಇದಕ್ಕೆ ಕಲ್ಲುಗಣಿ ಮಾಲೀಕರು ಬೆಂಬಲ ಸೂಚಿಸಿದರು. ಪರ–ವಿರೋಧದ ಅಲೆಯಿಂದ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.

‘ಹೈಕೋರ್ಟ್‌ ಆದೇಶದಂತೆ ಬೇಬಿ ಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಸರಾಸರಿ 60 ಅಡಿ ಆಳದಲ್ಲಿ 5 ಕಡೆ ಕುಳಿ ಕೊರೆಯುತ್ತಿದ್ದೇವೆ. ಈ ಕಾರ್ಯ ಮುಗಿದ ಮೇಲೆ ಪುಣೆ ಮತ್ತು ಜಾರ್ಖಂಡ್ ಮೂಲಕ ಗಣಿ ತಜ್ಞರು ‘ಪರೀಕ್ಷಾರ್ಥ ಸ್ಫೋಟ’ ನಡೆಸಲಿದ್ದಾರೆ’ ಎಂದು ಹಿರಿಯ ಭೂವಿಜ್ಞಾನಿ ರೇಷ್ಮಾ ತಿಳಿಸಿದರು.

ಜೈಲಿಗೆ ಹೋಗಲು ಸಿದ್ಧ

ಬೃಂದಾವನದ ಬಳಿ ಪ್ರತಿಭಟನೆ ನಡೆಸಿದ ನಂತರ, ರೈತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಕುಮಾರ ಅವರನ್ನು ಭೇಟಿ ಮಾಡಿದರು. ‘ಟ್ರಯಲ್‌ ಬ್ಲಾಸ್ಟ್‌ ಕೂಡಲೇ ನಿಲ್ಲಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಯವರು ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಜು.5ರಂದು ಪ್ರತಿಭಟನೆ ನಡೆಸುತ್ತೇವೆ. ಈ ಹೋರಾಟದಲ್ಲಿ ಜೈಲಿಗೆ ಹೋಗಲು ಸಿದ್ಧರಿದ್ದೇವೆ’ ಎಂದು ರೈತ ಮುಖಂಡರು ಗುಡುಗಿದರು.

ಈ ‘ಟ್ರಯಲ್‌ ಬ್ಲಾಸ್ಟ್‌’ ನಡೆಸುವ ಉದ್ದೇಶ ನಮಗೆ ಅಥವಾ ಸರ್ಕಾರಕ್ಕಾಗಲೀ ಇಲ್ಲ. ಇದು ನ್ಯಾಯಾಲಯದ ಆದೇಶವಾಗಿರುವುದರಿಂದ ಪಾಲಿಸಲೇಬೇಕಿದೆ

– ಕುಮಾರ, ಜಿಲ್ಲಾಧಿಕಾರಿ, ಮಂಡ್ಯ

ಕೆ.ಆರ್‌.ಎಸ್ ಅಣೆಕಟ್ಟೆಗೆ ಅಪಾಯವಿದೆ ಎಂದು ಗೊತ್ತಿದ್ದರೂ ಜಿಲ್ಲಾಡಳಿತ ‘ಟ್ರಯಲ್‌ ಬ್ಲಾಸ್ಟ್‌’ಗೆ ಮುಂದಾಗಿದೆ. ಇದರಲ್ಲಿ ಪ್ರಭಾವಿಗಳ ಕೈವಾಡ ಮತ್ತು ಕಲ್ಲು ಗಣಿಗಾರಿಕೆ ನಡೆಸುವ ಹುನ್ನಾರವಿದೆ

– ಬಡಗಲಪುರ ನಾಗೇಂದ್ರ, ರಾಜ್ಯ ಘಟಕದ ಅಧ್ಯಕ್ಷ, ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT