ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್‌ ಉತ್ಪಾದಕರಿಗಿಲ್ಲ ‘ಗೃಹಜ್ಯೋತಿ’ ಗ್ಯಾರಂಟಿ!

ವರ್ಷದಿಂದ ಅಧಿಕಾರಿಗಳಿಗೆ ಪತ್ರ: ಗ್ರಾಹಕ ಕಂಗಾಲು
Published 20 ಜೂನ್ 2024, 7:54 IST
Last Updated 20 ಜೂನ್ 2024, 7:54 IST
ಅಕ್ಷರ ಗಾತ್ರ

ಮೈಸೂರು: ಸೌರಗೃಹ ಯೋಜನೆಯಡಿ (ಎಸ್‌ಆರ್‌ಟಿಪಿವಿ) ಸೌರ ಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುತ್ತಿರುವ ನಗರದ ಗ್ರಾಹಕ ವಿ.ಕೆ.ರಾಮಚಂದ್ರ ಅವರಿಗೆ ರಾಜ್ಯ ಸರ್ಕಾರದ ‘ಗೃಹಜ್ಯೋತಿ’ ಗ್ಯಾರಂಟಿ ಸಿಕ್ಕಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಿದ್ದರೂ, ಇಲ್ಲಿನ ಸೆಸ್ಕ್‌ ಪರಿಹರಿಸಿಲ್ಲ. 

ಶ್ರೀರಾಂಪುರ 2ನೇ ಹಂತದ ಎಲ್‌ಐಸಿ ಕಾಲೊನಿ ನಿವಾಸಿಯಾದ ಅವರು, 2 ಕಿಲೊ ವ್ಯಾಟ್‌ ಸಾಮರ್ಥ್ಯದ ಸೌರಫಲಕಗಳನ್ನು ಮನೆಯಲ್ಲಿ ಅಳವಡಿಸಲು ₹ 1.38 ಲಕ್ಷ ಖರ್ಚು ಮಾಡಿದ್ದಾರೆ. ಸಹಾಯಧನ ಹೊರತು ಪಡಿಸಿ ಸ್ವಂತ ಹೂಡಿಕೆ ₹1.09 ಲಕ್ಷವಾಗಿದೆ. ಆದರೂ ಅವರು, ‘ಗ್ಯಾರಂಟಿ’ ಯೋಜನೆ ವ್ಯಾಪ್ತಿಯಿಂದ ಹೊರಗಿದ್ದಾರೆ. ‘ಇದು, ರಾಜ್ಯದ ಎಲ್ಲ ಸೌರ ವಿದ್ಯುತ್ ಉತ್ಪಾದಕರು ಎದುರಿಸುತ್ತಿರುವ ಸಮಸ್ಯೆ’ ಎನ್ನುತ್ತಾರೆ ಅವರು.

‘200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸಿದರೂ ಗೃಹಜ್ಯೋತಿ ಯೋಜನೆಯ ಫಲಾನುಭವಿಯಾಗಿಲ್ಲ. ಮನೆಗೆ ಅಗತ್ಯ ವಿದ್ಯುತ್‌ ಅನ್ನು ನಾನೇ ಉತ್ಪಾದಿಸುವಂತಾಗಿದೆ. ಹೆಚ್ಚುವರಿ ಸೌರ ವಿದ್ಯುತ್‌ ಅನ್ನು ಪ್ರತಿ ಯುನಿಟ್‌ಗೆ ₹ 2.67 ದರದಲ್ಲಿ ಸೆಸ್ಕ್‌ಗೆ ನೀಡುತ್ತಿರುವೆ. ಯೋಜನೆಗೆ ಸೇರಿಸಿದರೆ ಈಗ ಬಳಸುತ್ತಿರುವ ವಿದ್ಯುತ್‌ ಕೂಡ ಸೆಸ್ಕ್‌ನ ಆಮದು ವ್ಯಾಪ್ತಿಗೆ ಸೇರಲಿದೆ. ಅದರಿಂದ ನಾನೂ ಸೇರಿದಂತೆ ಸೌರ ವಿದ್ಯುತ್‌ ಉತ್ಪಾದಕರಿಗೆ ಲಾಭವಾಗಲಿದ್ದು, ಅವರಿಗೆ ಪ್ರೋತ್ಸಾಹ ಸಿಗುವಂತಾಗುತ್ತದೆ’ ಎಂದು ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜೂನ್ 2023ನಿಂದ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದೆ. ಯೋಜನೆ ವ್ಯಾಪ್ತಿಗೆ ಸೌರ ವಿದ್ಯುತ್ ಉತ್ಪಾದಕರನ್ನು ಸೇರಿಸುವಂತೆ ಮಾರ್ಚ್‌ನಲ್ಲಿಯೇ ಸಿ.ಎಂ ಅವರಿಗೆ ಮನವಿ ಮಾಡಿರುವೆ. ಏಪ್ರಿಲ್‌ನಲ್ಲಿ ಈ ಬಗ್ಗೆ ವಿವರಣೆ ಕೋರಿ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಅವರು ಸೆಸ್ಕ್‌ಗೆ ಮರು ಪತ್ರ ಕಳುಹಿಸಿದ್ದರೂ ‍ಪ್ರತಿಕ್ರಿಯೆ ಬಂದಿಲ್ಲ’ ಎಂದು ದೂರಿದರು. 

‘ಇಂಧನ ಇಲಾಖೆಗೆ ಸಮಸ್ಯೆ ಬಗೆಹರಿಸುವಂತೆ ಜನವರಿಯಲ್ಲಿ ಪತ್ರವನ್ನು ಬರೆಯಲಾಗಿತ್ತು. ಈವರೆಗೂ ಇಲಾಖೆಯಿಂದ ಯಾವುದೇ ಸ್ಪಷ್ಟೀಕರಣ ಹಾಗೂ ಆದೇಶ ಬಂದಿಲ್ಲ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆಂದು ಸೆಸ್ಕ್ ರಾಮಕೃಷ್ಣನಗರ ಉಪವಿಭಾಗದ ಎಇಇ ಉತ್ತರಿಸಿದ್ದಾರೆ’ ಎಂದೂ ಹೇಳಿದರು.  

‘ಸರ್ಕರದ ನೀತಿ ನಿರೂಪಣೆಯಲ್ಲಿಯೇ ಸಮಸ್ಯೆಯಿದೆ. ವಿದ್ಯುತ್‌ ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ಕ್ರಮ ತೆಗೆದುಕೊಳ್ಳಬೇಕು. ಸೌರ ವಿದ್ಯುತ್‌ ಫಲಕ ಅಳವಡಿಸಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಬಾರದು. ಗೃಹಜ್ಯೋತಿ ಯೋಜನೆ ವ್ಯಾಪ್ತಿಗೆ ಸೇರಿಸಿದರೆ 2023ರ ಜೂನ್‌ನಿಂದ ಪೂರ್ವಾನ್ವಯವಾಗುವಂತೆ ನಮಗೆ ಪರಿಹಾರವನ್ನೂ ಕೊಡಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT