ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸೂರು | ಡೆಂಗಿ ನಿರ್ಮೂಲನೆಗೆ ಟಾಸ್ಕ್ ಫೋರ್ಸ್

ಹುಣಸೂರು ತಾಲ್ಲೂಕಿನಲ್ಲಿ ಅಧಿಕ ಪ್ರಕರಣ; ಸ್ವಚ್ಛತೆಗೆ ಸೂಚನೆ
Published 3 ಜುಲೈ 2024, 6:25 IST
Last Updated 3 ಜುಲೈ 2024, 6:25 IST
ಅಕ್ಷರ ಗಾತ್ರ

ಹುಣಸೂರು: ಜಿಲ್ಲೆಯಲ್ಲೇ ಅಧಿಕ ಡೆಂಗಿ ಪ್ರಕರಣ ಕಾಣಿಸಿಕೊಂಡಿರುವ ತಾಲ್ಲೂಕಿನಲ್ಲಿ ಜ್ವರದ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜೊತೆಗೂಡಿ ಕಂದಾಯ ಇಲಾಖೆಯು ಟಾಸ್ಕ್ ಫೋರ್ಸ್ ರಚಿಸಿ ಕಾರ್ಯೋನ್ಮುಖವಾಗಿದೆ.

ಮುಂಗಾರು ಮಳೆ ಅಬ್ಬರ ಹೆಚ್ಚಾಗುತ್ತಿದ್ದಂತೆ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಪೂರಕವಾಗಿದ್ದು ಕಾಯಿಲೆ ಹೆಚ್ಚಲು ಕಾರಣವಾಗಿದೆ. ಮೇ ತಿಂಗಳಲ್ಲಿ 18 ಪ್ರಕರಣಗಳು ದಾಖಲಾಗಿದ್ದವು. ಜೂನ್ ಅಂತ್ಯದಲ್ಲಿ 74 ಪ್ರಕರಣಗಳು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗುತ್ತಿದೆ.

ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ವಿಶೇಷ ಕಾರ್ಯಾಚರಣೆಯೊಂದಿಗೆ ಡೆಂಗಿ ಜ್ವರಕ್ಕೆ ನಾಗರಿಕರು ಬಲಿಯಾಗದಂತೆ ಜಾಗೃತಿ ಮೂಡಿಸುವುದು ಮತ್ತು ಲಾರ್ವ ಸಂಗ್ರಹಿಸುವ ಕೆಲಸ ನಿರಂತರವಾಗಿ ಆರೋಗ್ಯ ಇಲಾಖೆ ನಡೆಸುತ್ತಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರಕ್ತದ ಮಾದರಿ ಕಳುಹಿಸಿ ಜ್ವರದಿಂದ ಬಳಲುತ್ತಿದ್ದ ಹೊರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

‘74 ಪ್ರಕರಣಗಳಲ್ಲಿ 62 ಜನ ಗುಣಮುಖರಾಗಿದ್ದು, 12 ಜನ ರಕ್ತಪರೀಕ್ಷೆ ಮಾದರಿಯ ವರದಿ ನಿರೀಕ್ಷೆಯಲ್ಲಿದ್ದಾರೆ. ವರದಿ ಬಳಿಕ ಚಿಕಿತ್ಸೆ ನೀಡಲು ಇಲಾಖೆ ಸಿದ್ದವಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಹೇಳಿದರು.

‘ನಗರ ವ್ಯಾಪ್ತಿಯ 12 ಕೊಳಚೆ ಪ್ರದೇಶದಲ್ಲಿ ತೆರೆದ ಚರಂಡಿ, ನೀರು ಸಂಗ್ರಹ ತೊಟ್ಟಿ ಹಾಗೂ ಮನೆ ಸುತ್ತಮುತ್ತ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಕ್ಕೆ ಕಡಿವಾಣ ಹಾಕಿದ್ದೇವೆ. ಸಂಗ್ರಹಿಸಿದ ನೀರನ್ನು ವೈಜ್ಞಾನಿಕವಾಗಿ ಮುಚ್ಚಿಡಲು ಸೂಚಿಸಿದ್ದೇವೆ’ ಎಂದು ಸಮುದಾಯ ಆರೋಗ್ಯ ಶಿಕ್ಷಣಾಧಿಕಾರಿ ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಗೃತಿ: ‘ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಂಡು ಮನೆಗಳಿಗೆ ಭೇಟಿ ನೀಡಿ ನೀರು ಪರೀಕ್ಷೆ ನಡೆಸಿ, ಲಾರ್ವ ಕಂಡು ಬಂದಲ್ಲಿ ನೀರು ತೆರವುಗೊಳಿಸಿ, ಸಂಪೂರ್ಣ ಒಣಗಿದ ಬಳಿಕ ನೀರು ಸಂಗ್ರಹಿಸಲು ಸೂಚಿಸಲಾಗಿದೆ. ಮನೆ ಅಂಗಳದಲ್ಲಿ ತ್ಯಾಜ್ಯ ಮಿಶ್ರಿತ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಪರಿಶಿಷ್ಪ ಪಂಗಡ ಇಲಾಖೆ ಅಧಿಕಾರಿಗಳು ವಿಶೇಷವಾಗಿ ಆದಿವಾಸಿ ಗಿರಿಜನರ ಹಾಡಿಗಳಿಗೆ ಭೇಟಿ ನೀಡಿ ಗಿರಿಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದು ಹೇಳಿದರು.

ಮೀನಿನ ತೊಟ್ಟಿ: ‘ತಾಲ್ಲೂಕಿನ 22 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಾರ್ವ ತಿನ್ನುವ ಮೀನು ಸಾಕಾಣಿಕೆ ತೊಟ್ಟಿ ನಿರ್ಮಿಸಿ, ಮೀನು ಅಭಿವೃದ್ಧಿಗೊಳಿಸಿ ಕೆರೆಕಟ್ಟೆ, ನೀರಿನ ಹೊಂಡಗಳಿಗೆ ಮೀನು ಬಿಟ್ಟು, ಸೊಳ್ಳೆ ಮೊಟ್ಟೆ ಹತೋಟಿಗೆ ತರುವ ಕೆಲಸ ನಡೆದಿದೆ’ ಎಂದರು.

ಬಿ.ಕೆ.ಮನು
ಬಿ.ಕೆ.ಮನು

ಜೂನ್ ಅಂತ್ಯದ ವೇಳೆ 74 ಪ್ರಕರಣ ಆಶಾ, ಅಂಗನವಾಡಿ ಕಾರ್ಯಕರ್ತರಿಂದ ಜಾಗೃತಿ ಕೊಳಚೆ ನೀರು ಸಂಗ್ರಹಕ್ಕೆ ಕಡಿವಾಣ

ಪಂಚಾಯಿತಿಗಳಲ್ಲಿ ನೀರಿನ ಟ್ಯಾಂಕ್ ಸ್ವಚ್ಚಗೊಳಿಸುವ ಕೆಲಸ ಪ್ರಗತಿಯಲ್ಲಿದ್ದು ಕ್ಲೋರಿನೈಸ್ ಮಾಡಿ ಶುದ್ಧ ಕುಡಿಯುವ ನೀರು ವಿತರಿಸಲಿದ್ದೇವೆ

-ಬಿ.ಕೆ.ಮನು ಇ.ಒ ತಾಲ್ಲೂಕು ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT