ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Land row: ತಪ್ಪೊಪ್ಪಿಗೆ ರೂಪದಲ್ಲಿ ಮುಖ್ಯಮಂತ್ರಿ ಪತ್ನಿಗೆ ನಿವೇಶನ!

ಡಿನೋಟಿಫೈ ಆದ ಜಮೀನಿನಲ್ಲಿ ಮತ್ತೆ ಬಡಾವಣೆ ನಿರ್ಮಿಸಿದ ಮುಡಾ
Published 3 ಜುಲೈ 2024, 19:48 IST
Last Updated 3 ಜುಲೈ 2024, 19:48 IST
ಅಕ್ಷರ ಗಾತ್ರ

ಮೈಸೂರು: ಬಡಾವಣೆ ನಿರ್ಮಿಸಲು ಉದ್ದೇಶಿಸಿದ್ದ ಜಮೀನನ್ನು ಡಿನೋಟಿಫೈ ಮಾಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಮತ್ತೆ ಅದೇ ಜಮೀನಿನಲ್ಲಿ ಬಡಾವಣೆ ನಿರ್ಮಿಸಿದೆ! ನಂತರ, ‘ನನ್ನಿಂದ ತಪ್ಪಾಗಿದೆ’ ಎಂದು ಒಪ್ಪಿಕೊಂಡು, ಪ್ರತಿಷ್ಠಿತ ಬಡಾವಣೆಯಲ್ಲಿ ‘ಪ್ರತಿಷ್ಠಿತರಿಗೆ’ ಭಾರಿ ಮೌಲ್ಯದ ನಿವೇಶನಗಳನ್ನು ‘ಉಡುಗೊರೆ’ಯಾಗಿ ನೀಡಿದೆ.

ಹೀಗೆ, ಭಾರಿ ಮೌಲ್ಯದ ನಿವೇಶನ ನೀಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ. ಬಡಾವಣೆ ನಿರ್ಮಿಸಲು ಉದ್ದೇಶಿಸಿದ್ದ ಜಮೀನನ್ನು ಡಿನೋಟಿಫೈ ಮಾಡಿದ್ದು ಏಕೆ? ಮತ್ತೆ ಅದೇ ಜಮೀನಿನಲ್ಲಿ ಬಡಾವಣೆ ನಿರ್ಮಿಸಿದ್ದೇಕೆ? 2017ರಲ್ಲೇ ಪರಿಹಾರಕ್ಕೆ ನಿರ್ಣಯಿಸಿದ್ದರೂ ನಾಲ್ಕು ವರ್ಷ ಸುಮ್ಮನಿದ್ದದ್ದು ಏಕೆ? ಎಂಬ ಪ್ರಶ್ನೆಗಳು ಈಗ ಕೇಳಿ ಬರುತ್ತಿವೆ.

ಮುಡಾ ವ್ಯಾಪ್ತಿಯಲ್ಲಿ 50:50 ಅನುಪಾತದಲ್ಲಿ ಸುಮಾರು 3 ಸಾವಿರ ದಿಂದ 5 ಸಾವಿರ ನಿವೇಶನಗಳನ್ನು ಹಂಚ ಲಾಗಿದೆ. ಅದರಲ್ಲಿ ಸಾಕಷ್ಟು ಮಂದಿಗೆ ಪ್ರತಿಷ್ಠಿತ ಬಡಾವಣೆಗಳಲ್ಲೇ ಬದಲಿ ನಿವೇಶನಗಳು ದೊರಕಿವೆ ಎನ್ನಲಾಗಿದ್ದು, ತನಿಖೆ ಬಳಿಕ ಸತ್ಯ ಹೊರಬರಬೇಕಾಗಿದೆ.

ಹಿನ್ನೆಲೆ ಏನು?: ದೇವನೂರು ಮೂರನೇ ಹಂತದ ಬಡಾವಣೆ ನಿರ್ಮಾಣದ ಸಲುವಾಗಿ ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿರುವ 3 ಎಕರೆ 16 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು 1997ರ ಅಕ್ಟೋಬರ್ 31ರಂದು ಮುಡಾ ಅಂತಿಮ ಅಧಿಸೂಚನೆ ಹೊರಡಿಸಿತ್ತು. ನಂತರ ಆ ಜಮೀನಿಗೆ ₹3,24,700 ವೈಯಕ್ತಿಕ ಪರಿಹಾರವನ್ನೂ ನಿರ್ಣಯಿಸಲಾಯಿತು. ಆದರೆ 1998ರ ಮೇ 18ರ ಅಧಿಸೂಚನೆಯಂತೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಯಿತು.

ಡಿನೋಟಿಫೈ ಆದ ಜಮೀನನ್ನು ಸಿದ್ದರಾಮಯ್ಯ ಭಾಮೈದ ಬಿ.ಎಂ. ಮಲ್ಲಿಕಾರ್ಜುನಸ್ವಾಮಿ 2004ರಲ್ಲಿ ಖರೀದಿಸಿದ್ದು, 2010ರಲ್ಲಿ ಅದನ್ನು ತಮ್ಮ ಸಹೋದರಿ, ಸಿದ್ದರಾಮಯ್ಯರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ದಾನಪತ್ರ ರೂಪದಲ್ಲಿ ನೋಂದಣಿ ಮಾಡಿಕೊಟ್ಟಿದ್ದರು. ಈ ನಡುವೆ ಅದೇ ಜಮೀನಲ್ಲಿ ಮುಡಾ ನಿವೇಶನಗಳನ್ನೂ ಅಭಿವೃದ್ಧಿಪಡಿಸಿ ಹಂಚಿತ್ತು. ಆದರೆ ಮಾಲೀಕರು ಗಮನಿಸಿರಲಿಲ್ಲ.

2014ರ ಜೂನ್‌ 23ರಂದು ಭೂಮಾಲೀಕರಾದ ಪಾರ್ವತಿ ಮುಡಾಕ್ಕೆ ಪತ್ರ ಬರೆದಿದ್ದು, ಡಿನೋಟಿಫೈ ಆದ ನಂತರವೂ ಮುಡಾ ತಮ್ಮ ಜಮೀನಿನಲ್ಲಿ ಬಡಾವಣೆ ನಿರ್ಮಿಸಿದ್ದು, ಅದಕ್ಕೆ ಬದಲಾಗಿ ಅಷ್ಟೇ ವಿಸ್ತೀರ್ಣದ ಜಮೀನನ್ನು ಸಮನಾಂತರ ಬಡಾವಣೆಯಲ್ಲಿ ನೀಡುವಂತೆ ಕೋರಿದ್ದರು.

2017ರ ಡಿಸೆಂಬರ್ 15 ಹಾಗೂ 30ರಂದು ನಡೆದ ಮುಡಾ ಸಭೆಗಳಲ್ಲಿ ಈ ವಿಷಯ ಚರ್ಚೆಯಾಗಿದ್ದು, ‘ಡಿನೋಟಿಫೈ ಆದಾಗ್ಯೂ ಈ ಜಮೀನನ್ನು ಪ್ರಾಧಿಕಾರ ಉಪಯೋಗಿಸಿಕೊಂಡಿದ್ದು ನಮ್ಮಿಂದ ತಪ್ಪಾಗಿದೆ’ ಎಂದು ಒಪ್ಪಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ, ಪ್ರಾಧಿಕಾರದ ವಶದಲ್ಲಿದ್ದು ಅಭಿವೃದ್ಧಿ ಪಡಿಸದೇ ಇರುವ ಜಮೀನನ್ನು ಅರ್ಜಿದಾರರಿಗೆ ನೀಡುವುದು ಎಂದು ಸಭೆಯು ನಿರ್ಣಯಿಸಿತ್ತು. ಆದರೂ ಪಾರ್ವತಿ ಅವರಿಗೆ 2021ರವರೆಗೆ ಬದಲಿ ಜಮೀನು ನೀಡಿರಲಿಲ್ಲ.

50–50 ಅನುಪಾತದಲ್ಲಿ ಹಂಚಿಕೆ: 2021ರ ಅಕ್ಟೋಬರ್ 21ರಂದು ಮುಡಾಕ್ಕೆ ಮತ್ತೆ ಅರ್ಜಿ ಸಲ್ಲಿಸಿದ ಪಾರ್ವತಿ, ಬದಲಿ ಜಮೀನು ಇಲ್ಲವೇ ನಿವೇಶನ ಕೊಡುವಂತೆ ಕೋರಿದ್ದರು. ಅದಾದ ನಾಲ್ಕೇ ದಿನಕ್ಕೆ ಆಯುಕ್ತರು ಶೇ 50:50 ಅನುಪಾತದಲ್ಲಿ ಅವರಿಗೆ ಒಟ್ಟು 38,284 ಚ.ಅಡಿ ಅಳತೆಯ ನಿವೇಶನ ಹಂಚಿಕೆ ಮಾಡುವಂತೆ ಆದೇಶಿಸಿದ್ದರು. ನಂತರ, ಮೈಸೂರಿನ ಪ್ರತಿಷ್ಠಿತ ಬಡಾವಣೆಯಾದ ವಿಜಯನಗರದಲ್ಲಿ 38 ಸಾವಿರ ಚದರಡಿ ಅಳತೆಯ ನಿವೇಶನಗಳನ್ನು ಮುಡಾ ನೀಡಿದೆ.

‘ನಿಯಮಗಳಲ್ಲಿ ಅವಕಾಶವಿಲ್ಲ’

‘ಯಾವುದೇ ಬಡಾವಣೆ ನಿರ್ಮಾಣಕ್ಕೆ ಜಮೀನು ವಶಪಡಿಸಿಕೊಂಡಲ್ಲಿ ಭೂ ಸಂತ್ರಸ್ತರಿಗೆ ಆ ಬಡಾವಣೆಯಲ್ಲಿಯೇ ಆದ್ಯತೆ ಮೇರೆಗೆ ನಿವೇಶನ ನೀಡಬೇಕು. ಅದು ಸಾಧ್ಯವಾಗದಿದ್ದರೆ, ಸಮನಾಂತರ ಇಲ್ಲವೇ ನಂತರ ರಚನೆಯಾಗುವ ಬಡಾವಣೆಗಳಲ್ಲಿ ನಿವೇಶನ ನೀಡಬಹುದು. ದೇವನೂರು ಮೂರನೇ ಹಂತದ ಬಡಾವಣೆಯು 2003ರಲ್ಲಿ ಹಂಚಿಕೆಯಾಗಿದೆ. ಆದರೆ ವಿಜಯನಗರ ಮೂರು ಮತ್ತು ನಾಲ್ಕನೇ ಹಂತ ಬಡಾವಣೆಗಳು 1989ರಿಂದ 1992ರವರೆಗೆ ನಿರ್ಮಾಣವಾಗಿವೆ. ಹೀಗಾಗಿ ಪಾರ್ವತಿ ಅವರಿಗೆ ದೇವನೂರು (ಕೆಸರೆ) ಬದಲಿಗೆ ವಿಜಯನಗರದಲ್ಲಿ ನಿವೇಶನ ನೀಡಿರುವುದು ಕಾನೂನು ಬಾಹಿರ’ ಎಂದು ಮುಡಾದ ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.

ಮುಡಾದ ಈಗಿನ ಅಧಿಕಾರಿಗಳು ಇದನ್ನು ಒಪ್ಪುವುದಿಲ್ಲ. ‘ನ್ಯಾಯಾಲಯಗಳ ತೀರ್ಪಿನ ಅನ್ವಯ ಭೂಸಂತ್ರಸ್ತರಿಗೆ ಪ್ರಾಧಿಕಾರವು ತನ್ನ ವ್ಯಾಪ್ತಿಯ ಯಾವುದೇ ಬಡಾವಣೆಗಳಲ್ಲಿ ಲಭ್ಯ ಇರುವ ನಿವೇಶನಗಳನ್ನು ನೀಡಲು ಅವಕಾಶ ಇದೆ’ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT