ನಾನು ಸಿಎಂ ಆಗಿದ್ದಾಗಲೇ ನಿವೇಶನಕ್ಕೆ ಅರ್ಜಿ
ಮೈಸೂರು: ‘ಜಮೀನನ್ನು ಬಡಾವಣೆಗೆ ಬಳಸಿಕೊಂಡಿದ್ದಕ್ಕೆ ಪ್ರತಿಯಾಗಿ ಬದಲಿ ನಿವೇಶನ ಕೊಡುವಂತೆ ನನ್ನ ಪತ್ನಿಯು ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಅರ್ಜಿ ಕೊಟ್ಟಿದ್ದಳು. ಆದರೆ, ನಾನು ಕೊಡಿಸಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
‘ನಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡು ನಿವೇಶನ ಮಾಡಿ ಹಂಚಿ ಬಿಟ್ಟಿದ್ದೀರಿ, ಅದಕ್ಕಾಗಿ ಬದಲಿ ನಿವೇಶನ ಕೊಡಿ ಎಂದು ನನ್ನ ಹೆಂಡತಿ 2014ರಲ್ಲೇ ಅಂದರೆ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಮುಡಾಕ್ಕೆ ಅರ್ಜಿ ಕೊಟ್ಟಿದ್ದಳು. ನಾನು ಮುಖ್ಯಮಂತ್ರಿ ಆಗಿರುವವರೆಗೂ ಬದಲಿ ನಿವೇಶನ ಕೊಡಕೂಡದೆಂದು ಮುಡಾದವರಿಗೆ ಹೇಳಿದ್ದೆ. ಒಂದು ಗುಂಟೆಯನ್ನೂ ಕೊಡಬೇಡಿ ಎಂದು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದೆ’ ಎಂದರು.
‘ನಾನೇ ಮುಖ್ಯಮಂತ್ರಿಯಾಗಿದ್ದರಿಂದ ಆಗಲೇ ಕೊಟ್ಟು ಬಿಡಬಹುದಿತ್ತಲ್ಲವಾ? ಕೊಡಲಿಲ್ಲ. ಪ್ರಭಾವ ಬಳಸುವುದಿದ್ದರೆ ಅಂದೇ ಬಳಸುತ್ತಿದ್ದೆ. ಹಾಗೆ ಮಾಡಲಿಲ್ಲ’ ಎಂದರು.
‘ಮತ್ತೆ 2021ರಲ್ಲಿ ಅರ್ಜಿ ಕೊಟ್ಟಿದ್ದಳು. ಆಗ ಬಿಜೆಪಿ ಅಧಿಕಾರ ದಲ್ಲಿತ್ತು. ನಾನು ಪ್ರಭಾವ ಬೀರಲು ಹೇಗೆ ಸಾಧ್ಯ? ಎಲ್ಲವೂ ಕಾನೂನುಪ್ರಕಾರ ಇದ್ದಿದ್ದರಿಂದ ಬದಲಿ ನಿವೇಶನ ಕೊಟ್ಟಿದ್ದಾರಷ್ಟೆ. ಇದೆಲ್ಲ ವಿವರಣೆಯನ್ನೂ ರಾಜ್ಯಪಾಲರಿಗೆ ನೀಡಿದ್ದೇನೆ. ಕಾನೂನು ಪ್ರಕಾರ ಇರುವುದರಿಂದ ಒಪ್ಪುತ್ತಾರೆಂಬ ನಂಬಿಕೆ ನನಗಿದೆ. ಅವರೂ ಕಾನೂನಿನಂತೆಯೇ ನಡೆದುಕೊಳ್ಳಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.