ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಜಿ.ಎಚ್‌.ನಾಯಕರದು ನಿಷ್ಠುರ, ದಿಟ್ಟತನದ ವಿಮರ್ಶೆ’

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್ ಅಭಿಮತ
Published : 18 ಸೆಪ್ಟೆಂಬರ್ 2024, 14:38 IST
Last Updated : 18 ಸೆಪ್ಟೆಂಬರ್ 2024, 14:38 IST
ಫಾಲೋ ಮಾಡಿ
Comments

ಮೈಸೂರು: ‘ಪ್ರೊ.ಜಿ.ಎಚ್‌.ನಾಯಕ ಅವರು ಆಧುನಿಕ ಕನ್ನಡ ಸಾಹಿತ್ಯದ ನಿಷ್ಠುರ ಹಾಗೂ ದಿಟ್ಟತನದ ವಿಮರ್ಶಕ’ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್ ಬಣ್ಣಿಸಿದರು. 

ಜಯಲಕ್ಷ್ಮಿಪುರಂನ ಮಹಾಜನ ಕಾಲೇಜಿನಲ್ಲಿ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಹಾಗೂ ‘ಚಿಂತನ ಚಿತ್ತಾರ’ ಪ್ರಕಾಶನವು ಬುಧವಾರ ವಿಮರ್ಶಕ ಜಿ.ಎಚ್‌.ನಾಯಕ –89ನೇ ಜನ್ಮದಿನದ ಪ್ರಯುಕ್ತ ಅವರ ‘ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಆದರ್ಶ ಮತ್ತು ವಾಸ್ತವ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಎಲ್ಲ ಲೇಖಕರ ಕೃತಿಗಳ ಬಗ್ಗೆ ನಿಷ್ಠುರವಾಗಿ ವಿಮರ್ಶೆ ಬರೆದ ಅವರು ವಿಮರ್ಶಾ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದರು. ಶಿವರಾಮ ಕಾರಂತರ ಕಾದಂಬರಿಗಳ ಕುರಿತು ನೇರವಾಗಿ ಟೀಕಿಸಿದ್ದರು. ಕಾರಂತರೂ ತಾಳ್ಮೆಯಿಂದ ನಾಯಕರ ಕಟು ವಿಮರ್ಶೆಯನ್ನು ಸಹಿಸಿದ್ದರು. ಕಾರಂತರ ಕೃತಿಗಳ ಬಗ್ಗೆಯೇ ಸ್ವಂತ ಆಸಕ್ತಿಯಿಂದ ಹೆಚ್ಚಾಗಿ ವಿಮರ್ಶೆ ಬರೆದರು’ ಎಂದರು.

‘ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆ. ಮೂರು ದಶಕದ ಹಿಂದೆ ಕಿ.ರಂ.ನಾಗರಾಜ, ಡಿ.ಆರ್.ನಾಗರಾಜ ಅವರಂಥ ಪ್ರಖರ ವಿಮರ್ಶಕರಿದ್ದರು. ಇದೀಗ ಅಂತಹವರ ಸಂಖ್ಯೆ ಬೆರಳೆಣಿಕೆಯಾಗಿದೆ. ಗಂಭೀರವಾಗಿ ವಿಮರ್ಶೆಯನ್ನೇ ಓದುವ ಹವ್ಯಾಸ ಬಹುತೇಕರಿಗೆ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಸ್ತುತ ಲೇಖಕನೇ ತನ್ನ ಕೃತಿಗಳ ಅನುವಾದಕರು, ವಿಮರ್ಶಕರನ್ನು ಹುಡುಕುವ, ತಯಾರು ಮಾಡುವ ಪರಿಸ್ಥಿತಿ ಬಂದಿದೆ. ಇದನ್ನು ಹಿಂದೆಯೇ ವಿದ್ವಾಂಸ ಎಲ್‌.ಬಸವರಾಜ ಅವರೂ ಹೇಳಿದ್ದರು. ವಿಮರ್ಶಕ ತಾನಾಗಿಯೇ ಕೃತಿ ವಿಮರ್ಶೆ ಬರೆದರೆ ಅದು ದೊಡ್ಡತನವಾಗಿದೆ’ ಎಂದರು.

‘ಲೇಖಕನ ಆಲೋಚನೆಯ ಆಳ– ಅಗಲವನ್ನು ಚೆನ್ನಾಗಿ ಗ್ರಹಿಸಿ ಓದುಗನಿಗೆ ತಿಳಿಸುವವನು ವಿಮರ್ಶಕ. ಆಧುನಿಕ ಕನ್ನಡ ಸಾಹಿತ್ಯದ ವಿಮರ್ಶಾ ಪ್ರಕಾರವೇ ಹೊಸತು. ಅದು ಇಂಗ್ಲಿಷ್‌ ಸಾಹಿತ್ಯದ ಪ್ರಭಾವದಿಂದಾಗಿ ಅಸ್ತಿತ್ವಕ್ಕೆ ಬಂದಿತು. ಈ ಮೊದಲು ಪಂಪ, ರನ್ನ, ಕುಮಾರವ್ಯಾಸರು ಸ್ವವಿಮರ್ಶೆ ಮಾಡಿಕೊಳ್ಳುತ್ತಿದ್ದರು’ ಎಂದರು. 

ಲೇಖಕ ಜಿ.ಪಿ.ಬಸವರಾಜು, ಕೀರ್ತಿಶ್ರೀ ನಾಯಕ, ಪ್ರಕಾಶಕ ನಿಂಗರಾಜು ಚಿತ್ತಣ್ಣನವರ್‌, ಮಹಾಜನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಪ್ರೊ.ಬಿ.ಆರ್.ಜಯಕುಮಾರಿ ಹಾಜರಿದ್ದರು.

‘ಗ್ರಹಣ ಬಿಡಿಸಿದ ವಿಮರ್ಶಕ’

‘ಜಿ.ಎಚ್‌.ನಾಯಕರ ವಿಮರ್ಶೆ ಮತ್ತು ಬದುಕು’ ಕುರಿತು ಮಾತನಾಡಿದ ಪ್ರೊ.ಮೈಸೂರು ಕೃಷ್ಣಮೂರ್ತಿ ‘ಜಿ.ಎಚ್‌.ನಾಯಕರು ಕಟು ಬರಹಗಳಿಂದ ಸಾಂಪ್ರದಾಯಿಕ ವಿಮರ್ಶೆಯ ಗ್ರಹಣ ಬಿಡಿಸಿದರು. ಕನ್ನಡ ವಿಮರ್ಶೆಯ ನಾಯಕ ಮಾರ್ಗ ರೂಪಿಸಿದರು. ಅವರ ವಿಮರ್ಶಾ ಕೃತಿಗಳ ಬಗ್ಗೆ ಆಲೋಚನೆ ಮಾಡುವುದಾಗಲಿ ಇತರರು ಮಾತನಾಡಿದಾಗ ಕೇಳಿಸಿಕೊಳ್ಳುವಾಗ ಶುದ್ಧ ಜಲದಲ್ಲಿ ಮಿಂದೆದ್ದು ಬಂದಂತಾಗುತ್ತದೆ’ ಎಂದರು.

‘ವರ್ತಮಾನದ ಬದುಕು ಎಷ್ಟು ವಿಕಾರವಾಗುತ್ತಿದೆ ಭಯಾನಕವಾಗುತ್ತಿದೆ. ಆದರ್ಶಗಳ ಗೈರಿನಲ್ಲಿ ವರ್ತಮಾನದ ಬದುಕು ಅತ್ಯಂತ ಕ್ರೂರವಾಗಿದೆ. ಇಂಥ ಸಮಯದಲ್ಲಿ ನಾಯಕರ ಬದುಕು–ಬರಹದ ಬಗ್ಗೆ ಮಾತನಾಡುವುದು ಮಾನವೀಯವಾಗಿದೆ. ಆಧುನಿಕ ಕನ್ನಡ ಸಾಹಿತ್ಯ ಕಾಲದಲ್ಲಿ ಜಿ.ಎಚ್‌.ನಾಯಕರು ಬಂದಿರದೇ ಇದ್ದಿದ್ದರೆ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟವಾಗುತ್ತಿತ್ತು’ ಎಂದು ಹೇಳಿದರು.

ಪುಸ್ತಕ ವಿವರ ಕೃತಿ: ಶಿವರಾಮಕಾರಂತರ ಕಾದಂಬರಿಗಳಲ್ಲಿ ಆದರ್ಶ ಮತ್ತು ವಾಸ್ತವ (ವಿಮರ್ಶಾ ಸಂಕಲನ)

ಲೇಖಕ: ಜಿ.ಎಚ್‌.ನಾಯಕ

ಪ್ರಕಾಶನ: ಚಿಂತನ ಚಿತ್ತಾರ

ಪುಟ: 306 ಬೆಲೆ: ₹ 400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT