ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ, ಸಾಹಿತ್ಯ ಪರಿಸರಕ್ಕೆ ಪೂರಕವಿರಲಿ: ಸುರೇಶ್, ಶಶಿಧರ ಹಾಲಾಡಿ ಪ್ರತಿಪಾದನೆ

ನಟ ಸುರೇಶ್ ಹೆಬ್ಳೀಕರ್, ಲೇಖಕ ಶಶಿಧರ ಹಾಲಾಡಿ ಪ್ರತಿಪಾದನೆ
Published 7 ಜುಲೈ 2024, 5:22 IST
Last Updated 7 ಜುಲೈ 2024, 5:22 IST
ಅಕ್ಷರ ಗಾತ್ರ

ಮೈಸೂರು: ‘ಸಿನಿಮಾ ಮತ್ತು ಸಾಹಿತ್ಯವು ಪರಿಸರ ಪೂರಕ ಆಲೋಚನೆಗಳನ್ನು ಜಗತ್ತಿಗೆ ತಿಳಿಸುವ ವೇದಿಕೆಯಾಗಬೇಕು’

–ನಟ ಸುರೇಶ್ ಹೆಬ್ಳೀಕರ್ ಹಾಗೂ ಲೇಖಕ ಶಶಿಧರ ಹಾಲಾಡಿ ಅವರ ಪ್ರತಿಪಾದನೆಯಿದು.

ನಗರದ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ಶನಿವಾರ ನಡೆದ ಮೈಸೂರು ಸಾಹಿತ್ಯ ಸಂಭ್ರಮದ ಎಂಟನೇ ಆವೃತ್ತಿಯಲ್ಲಿ ‘ಕಾಡು–ನಾಡು–ಕಾಪಾಡು’ ಸಾಹಿತ್ಯ– ಸಿನಿಮಾ ಮತ್ತು ಪರಿಸರ ಚಿಂತನೆ’ ಸಂವಾದದಲ್ಲಿ ಅವರು ಮಾತನಾಡಿದರು.

ಸುರೇಶ್ ಹೆಬ್ಳೀಕರ್ ಮಾತನಾಡಿ, ‘ಕೋಟಿಗಟ್ಟಲೆ ಹಣ ಹಾಕಿ ಸಿನಿಮಾ ನಿರ್ಮಿಸುವುದು ಪರಿಸರಕ್ಕೆ ಪೂರಕವಾಗಿರದಿದ್ದರೆ ಅದು ನೀಡುವ ಸಂದೇಶವಾದರೂ ಏನು? ಐಷಾರಾಮಿ ಹೋಟೆಲ್‌ಗಳಿರಬಹುದು, ನಮ್ಮ ಮನೆಗಳಾಗಿರಬಹುದು, ಪರಿಸರಕ್ಕೆ ಪೂರಕವಾಗರಬೇಕು. ಅದ್ದೂರಿ ಬಜೆಟ್ ಇಲ್ಲದ ಸಿನಿಮಾಗಳೂ ಅತ್ಯುತ್ತಮ ಮನರಂಜನೆ ನೀಡಿವೆ, ಆದಾಯವನ್ನೂ ಪಡೆದಿವೆ’ ಎಂದು ಮಲಯಾಳಂನ ಚೆಮ್ಮೀನ್ ಚಿತ್ರವನ್ನು ಉದಾಹರಿಸಿದರು.

ಶಶಿಧರ ಹಾಲಾಡಿ ಮಾತನಾಡಿ, ‘ಪರಿಸರ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಲೇಖಕ ಪೂರ್ಣಚಂದ್ರ ತೇಜಸ್ವಿ ಸ್ಪಷ್ಟವಾಗಿ ಅರಿತಿದ್ದರು. ಮಿಲೆನಿಯಂ ಸರಣಿಯಂತಹ ಜನಪ್ರಿಯ ಮಾದರಿಯನ್ನು ಅನುಸರಿಸಿದ್ದರು. ಹಳ್ಳಿಗೆ ತೆರಳಿ ಪರಿಸರ ಕಥೆಗಳನ್ನು ಬರೆದಿದ್ದರು. ಇಂದು ಗಂಭೀರ ಸಾಹಿತ್ಯ ರಚನೆಗಿಂತ ಪರಿಸರದ ಬಗ್ಗೆ ಅರಿವು ಮೂಡಿಸುವುದು ಅಗತ್ಯವೆಂದಿದ್ದರು’ ಎಂದು ಸ್ಮರಿಸಿದರು.

‘ಅರಸೀಕೆರೆ, ಬಳ್ಳಾರಿಯಂಥ ಬಯಲುಸೀಮೆಯಲ್ಲೂ ಕಾಡುಗಳಿವೆ. ಬಂಡೆಗಳ ನಡುವೆ ಜೀವವೈವಿಧ್ಯವಿದೆ ಎಂಬುದು ಯಾರ ಗಮನಕ್ಕೂ ಬರುವುದಿಲ್ಲ. ಅಲ್ಲಿನ ಪರಿಸರದ ಕಥೆಯಾಗಿ ಅಬ್ಬೆ ಕಾದಂಬರಿ ಬರೆದೆ’ ಎಂದರು. ಪರಿಸರವಾದಿ ಲಕ್ಷ್ಮಿಕಾಂತ ರಾಜೇ ಅರಸ್ ಸಂವಾದ ನಡೆಸಿಕೊಟ್ಟರು.

‌‘ಗಣಿಗಾರಿಕೆ ನದಿ ತಿರುವು ಬೇಡ’

‘ಹೊಸದಾಗಿ ಕೇಂದ್ರ ಸರ್ಕಾರ ಬಂದಮೇಲೆ ಗಣಿಗಾರಿಕೆಗೆ ಆದೇಶ ನೀಡಿದೆ. ರಾಜ್ಯದಲ್ಲೂ ಎತ್ತಿನಹೊಳೆ ನದಿ ತಿರುವು ಎನ್ನುತ್ತಾ ನಾಗರಿಕತೆಯನ್ನು ಅವನತಿಯತ್ತ ದೂಡುತ್ತಿದ್ದಾರೆ’ ಎಂದು ಶಶಿಧರ ಹಾಲಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಸುರೇಶ್ ಹೆಬ್ಳೀಕರ್‌ ‘ಹುಲ್ಲುಗಾವಲನ್ನು ರಕ್ಷಿಸಿ ಎಂದರೆ ಅದೇನು ಪರಿಸರವೇ ಎಂದು ಜನಪ್ರತಿನಿಧಿಯೊಬ್ಬರು ಮಾತನಾಡಿದರು. ಅದು ವಾತಾವರಣದಲ್ಲಿರುವ ಶೇ 30ರಷ್ಟು ಇಂಗಾಲ ಹೀರುವ ಕೆಲಸ ಮಾಡುತ್ತದೆ ಎಂಬುದನ್ನು ಮರೆಯಬೇಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT