ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಹಾರ ಮೇಳ |ಮಳಿಗೆ ಬಾಡಿಗೆ ಕಡಿಮೆ ಮಾಡಿ: ಮನವಿ

Published : 10 ಸೆಪ್ಟೆಂಬರ್ 2024, 7:25 IST
Last Updated : 10 ಸೆಪ್ಟೆಂಬರ್ 2024, 7:25 IST
ಫಾಲೋ ಮಾಡಿ
Comments

ಮೈಸೂರು: ‘ಕಳೆದ ಬಾರಿಯ ದಸರಾ ಮಹೋತ್ಸವದ ಆಹಾರ ಮೇಳದಲ್ಲಿ ಮಳಿಗೆ ಬಾಡಿಗೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಮಾರಾಟಗಾರರಿಗೆ ಅಪಾರ ನಷ್ಟವಾಗಿದ್ದು, ಈ ಬಾರಿ ಕಡಿಮೆ ಬಾಡಿಗೆಗೆ ಮಳಿಗೆ ನೀಡುವಂತೆ ಸಂಘದಿಂದ ಮುಖ್ಯಮಂತ್ರಿ‌ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ’ ಎಂದು ಮೈಸೂರು ದಸರಾ ಆಹಾರ ಮೇಳದ ತಿಂಡಿ, ತಿನಿಸುಗಳ ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜು.ಎಸ್.ಸಿದ್ದರಾಮನಹುಂಡಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2023ನೇ ಸಾಲಿನಲ್ಲಿ ಸಸ್ಯಾಹಾರಿ ಮಳಿಗೆಗೆ ₹59 ಸಾವಿರ ಹಾಗೂ ಮಾಂಸಾಹಾರಿ ಮಳಿಗೆಗೆ ₹88,500 ನಿಗದಿಪಡಿಸಿದ್ದು, ಇದರಿಂದಾಗಿ ನಷ್ಟ ಅನುಭವಿಸಬೇಕಾಯಿತು’ ಎಂದರು.

‘ಈ ಬಾರಿ ಸಸ್ಯಾಹಾರಿ ಮಳಿಗೆಯನ್ನು ₹25 ಸಾವಿರ ಹಾಗೂ ಮಾಂಸಾಹಾರಿ ಮಳಿಗೆಯನ್ನು ₹30 ಸಾವಿರಕ್ಕೆ ಜೆಎಸ್‌ಟಿ ರಹಿತವಾಗಿ ಒದಗಿಸಲಿ. 2019ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಅವರು ಕಾರ್ಯಕರ್ತರು ಮತ್ತು ಆಹಾರ ಮೇಳದ ಸಮಿತಿ ಸದಸ್ಯರ ಸಲಹೆ ಮೇರೆಗೆ ಮೇಲಿನ ದರವನ್ನೇ ನಿಗದಿಪಡಿಸಲಾಗಿತ್ತು’ ಎಂದು ತಿಳಿಸಿದರು.

‘ಈ ಬಾರಿ 175 ಮಳಿಗೆಗಳನ್ನು ಒಂದೇ ಕಡೆ ನೀಡುವುದಾಗಿ ಜಿಲ್ಲಾಡಳಿತ ತೀರ್ಮಾನಿಸಿದ್ದು, ಇದರಿಂದ ವ್ಯಾಪರಸ್ಥರಿಗೆ ಮತ್ತು ಆಹಾರ ಪ್ರಿಯರಿಗೆ ಪಾರ್ಕಿಂಗ್ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ 125 ಹಾಗೂ ಇಟ್ಟಿಗೆಗೂಡಿನ ಕಾರಂಜಿ ಕೆರೆ ಪಕ್ಕದ ಮೈದಾನದಲ್ಲಿ 50 ಮಳಿಗೆಗೆ ಅವಕಾಶ ನೀಡಬೇಕು. ಅದು ಅರಮನೆಯ ಸುಪರ್ದಿಯಲ್ಲಿ ಇರುವುದರಿಂದ ಪ್ರಮೋದ ದೇವಿ ಒಡೆಯರ್‌ ಹಾಗೂ ಯದುವೀರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.

‘ದಸರಾ ಮಹೋತ್ಸವ ಅಧಿಕಾರಿಗಳ ದಸರಾ ಆಗದೆ, ಜನ ಸಾಮಾನ್ಯರ ದಸರಾ ಆಗಬೇಕಿರುವುದರಿಂದ ದಸರಾದ ಉಪಸಮಿತಿಗಳನ್ನು ಮುಂಚಿತವಾಗಿ ನೇಮಕ ಮಾಡಿ ಅಧಿಕಾರಿಗಳು ಸಮಿತಿಯಲ್ಲಿ ಚರ್ಚಿಸಿದರೆ, ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಸಭೆ ನಡೆಸುವಾಗ ಸಂಘದವರಿಗೆ ಆಹ್ವಾನ ನೀಡಿ ಮುಕ್ತವಾಗಿ ಚರ್ಚಿಸಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಹೊರ ಜಿಲ್ಲೆ, ರಾಜ್ಯಗಳ ವ್ಯಾಪಾರಸ್ಥರಿಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಕಂಸಾಳೆ ರವಿ, ಉಪಾಧ್ಯಕ್ಷೆ ಶಾಂತಮ್ಮ, ಶಿವಸಿದ್ದು, ಬೀರೇಶ್, ಸಂತೋಷ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT