ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರಿನಲ್ಲೇ ‘ಹೆಸರಾಯಿತು ಕರ್ನಾಟಕ’

ಕ್ರಾಫರ್ಡ್‌ ಭವನದಲ್ಲಿ ನಾಮಕರಣೋತ್ಸವ; ನೆನಪಿನ ಬುತ್ತಿ ಬಿಚ್ಚಿಟ್ಟ ಹಿರಿಯರು..
Published : 1 ನವೆಂಬರ್ 2024, 6:45 IST
Last Updated : 1 ನವೆಂಬರ್ 2024, 6:45 IST
ಫಾಲೋ ಮಾಡಿ
Comments
‘ಜೀವನದ ಅಪೂರ್ವ ಕ್ಷಣ’
‘1973ರ ಅ.31ರಂದು ಹುಟ್ಟೂರು ಮೂಡಬಿದಿರೆಯಲ್ಲಿ ಅಣ್ಣನ ಮದುವೆ. ಮಾರನೆಯ ದಿನ ನವೆಂಬರ್‌ 1ಕ್ಕೆ ಮೈಸೂರಿನ ಕ್ರಾಫರ್ಡ್‌ ಭವನದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕವೆಂಬ ನಾಮಕರಣೋತ್ಸವ. ಮದುವೆ ಮುಗಿಸಿ ಬಂದವಳೇ ವೇದಿಕೆಯಲ್ಲಿ ರಾಜ್ಯದ ಸಾಂಸ್ಕೃತಿಕ ವೈಭವವನ್ನು ನಾಟ್ಯದಲ್ಲಿ ಪ್ರಸ್ತುತ ಪಡಿಸಿದೆ. ಅದು ನನ್ನ ಜೀವನದ ಅಪೂರ್ವ ಕ್ಷಣ’ ಎಂದು ಭರತನಾಟ್ಯ ಕಲಾವಿದೆ ವಸುಂಧರಾ ದೊರೆಸ್ವಾಮಿ ನೆನಪು ಮಾಡಿಕೊಂಡರು. ‘ಆಗಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಸೇರಿದಂತೆ ಮಹನೀಯರು ನೆರೆದಿದ್ದರು. ಜಯ ಕರ್ನಾಟಕ ಎಂಬ ಘೋಷಣೆಗಳು ಮೊಳಗುತ್ತಿದ್ದಾಗ ಕರ್ನಾಟಕ ವೈಭವವನ್ನು ನೃತ್ಯದ ಮೂಲಕ ಅನಾವರಣಗೊಳಿಸಿದೆ. ಸಾಂಸ್ಕೃತಿಕ ಸೇವೆ ಆಯಿತಲ್ಲ ಎಂದು ನೆನೆದಾಗ ಸಂತೋಷವಾಗುತ್ತದೆ. ಕನ್ನಡದ ಹಾಡುಗಳು ದೇವರನಾಮಗಳು ನೃತ್ಯದ ಭಾಗವಾಗಿದ್ದವು. ಮುತ್ತಯ್ಯ ಭಾಗವತಾರ್‌ ಅವರ ‘ಚಾಮುಂಡೇಶ್ವರಿ’ ಪುರಂದರದಾಸರ ಕೀರ್ತನೆಗಳು ಕುವೆಂಪು ಅವರ ‘ಎಲ್ಲಾದರೂ ಇರು’ ಗೀತೆಗಳಿದ್ದವು’ ಎಂದರು.
‘ಅರಸು ಅವರಿಗೆ ಹಾರ ಹಾಕಿದ್ದೆ’
‘ನನಗೀಗ 71 ವರ್ಷ. ನೆನಪು ಸಾಕಷ್ಟು ಮಾಸಿದೆ. ಅರಸು ಅವರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಡುವ ಬಗ್ಗೆ ಘೋಷಣೆ ಮಾಡಿದಾಗ ನಾನು ಎಂ.ಎಸ್ಸಿ ವಿದ್ಯಾರ್ಥಿ’ ಎಂದು ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ ಸ್ಮರಿಸಿದರು. ‘ಆ ದಿನಗಳಲ್ಲಿ ವಿಮರ್ಶಕ ಜಿ.ಎಚ್.ನಾಯಕರ ಅಧ್ಯಕ್ಷತೆಯಲ್ಲಿ ಚೇತನ ಕನ್ನಡ ಸಂಘ ಪ್ರಾರಂಭಿಸಿದ್ದೆವು. ನಾನು ಕಾರ್ಯದರ್ಶಿಯಾಗಿದ್ದೆ. ಕನ್ನಡ ಚಳವಳಿಗಾರರಾದ ಸಂಪತ್ ಸಿಂ.ಲಿಂ.ನಾಗರಾಜ್ ಅವರೊಡನೆ ಹೋಗಿ ಜಲದರ್ಶಿನಿಯಲ್ಲಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರನ್ನು ಕಂಡೆವು. ದೊಡ್ಡ ಹಾರ ಹಾಕಿ ಅಭಿನಂದಿಸಿದ್ದೆವು’ ಎಂದರು. ‘ಬರ್ಟ್ರಂಡ್ ರಸೆಲ್ ಅವರ ಇಂಗ್ಲಿಷ್ ಕೃತಿಯ ಕನ್ನಡಾನುವಾದದ ಕೃತಿಯನ್ನು ಕೊಟ್ಟಿದ್ದೆ. ಅದನ್ನು ತೆರೆದು ನೋಡಿದ ಅರಸು ಅವರು ‘ನಿಮಗೆ ಒಳ್ಳೆ ಅಭಿರುಚಿ ಇದೆ ಎನಿಸುತ್ತದೆ’ ಎಂದು ಮೆಚ್ಚಿದ್ದರು’ ಎಂದು ಸ್ಮರಿಸಿದರು. ‘ಮುಖ್ಯಮಂತ್ರಿ ಮೈಸೂರಿಗೆ ಬಂದರೆ ಈಗಿನಂತೆ ನೂರಾರು ಜನ ಸೇರುತ್ತಿರಲಿಲ್ಲ. ತುಂಬಾ ಸಲೀಸಾಗಿ ಆತ್ಮೀಯವಾಗಿ ಮಾತನಾಡುತ್ತಿದ್ದೆವು. ಆಗ ಮೈಸೂರು ರಾಜ್ಯದ ಹೆಸರು ಬದಲಾವಣೆಯನ್ನು ನಗರದವರು ಹೆಚ್ಚಾಗಿ ಸ್ವಾಗತಿಸಲಿಲ್ಲ’ ಎಂದರು.
ಅರಸು ಅನಾವರಣಗೊಳಿಸಿದ್ದ ಫಲಕ ಕಡೆಗಣನೆ
ಶೇಷಾದ್ರಿ ಅಯ್ಯರ್‌ ರಸ್ತೆ ಹಾಗೂ ಸಯ್ಯಾಜಿರಾವ್ ರಸ್ತೆಗಳು ಸೇರುವಲ್ಲಿ ಸ್ಥಾಪಿಸಲಾದ ಶಿಲಾಫಲಕ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕನ್ನಡ ಆಡಳಿತ ಭಾಷೆಯಾಗಿಸಿದ ದೇವರಾಜ ಅರಸು ಅವರನ್ನು ಅಭಿನಂದಿಸಲು ಮೈಸೂರು ನಾಗರಿಕರು 1979ರ ನ.1ರ ರಾಜ್ಯೋತ್ಸವದಂದು ಪ್ರತಿಷ್ಠಾಪಿಸಿದ್ದರು. ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರೇ ಅದನ್ನು ಅನಾವರಣಗೊಳಿಸಿದ್ದರು. ‘ಅರಸು ಅವರನ್ನು ಅಂದು ಎತ್ತಿ‌ನ ಬಂಡಿ ಮೂಲಕ ಜೆ.ಕೆ.ಮೈದಾನದವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗಿತ್ತು. ಅಲ್ಲಿ ಬಹುದೊಡ್ಡ ಕಾರ್ಯಕ್ರಮವೂ ನಡೆದಿತ್ತು. ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದಲ್ಲಿ ಅವರು ಸ್ಥಾಪಿಸಿದ್ದ ಶಿಲಾಫಲಕವನ್ನು ಪಾಲಿಕೆಯು ಕಡೆಗಣಿಸಿದೆ. ಕೂಡಲೇ ಕಾಯಕಲ್ಪ ನೀಡಬೇಕು’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಅರವಿಂದ ಶರ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT