ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದಗಲ್‌ನಲ್ಲಿ ಪ್ರಾಚ್ಯಾವಶೇಷಗಳ ಶೋಧ; ಆದಿಲ್ ಷಾಗಳ ಕಾಲದ ಶಾಸನಗಳು ಪತ್ತೆ

Published : 25 ಸೆಪ್ಟೆಂಬರ್ 2024, 7:08 IST
Last Updated : 25 ಸೆಪ್ಟೆಂಬರ್ 2024, 7:08 IST
ಫಾಲೋ ಮಾಡಿ
Comments

ಮುದಗಲ್: ಪಟ್ಟಣದ ಪ್ರಾಚ್ಯಾವಶೇಷಗಳು ಹಾಗೂ ಕುರುಹುಗಳ ಕುರಿತು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಚನ್ನಬಸಪ್ಪ ಮಲ್ಕಂದಿನ್ನಿಯವರು ಹಲವಾರು ವರ್ಷಗಳಿಂದ ಅಧ್ಯಯನ ಮಾಡಿದ್ದಾರೆ.

ಇವರಿಗಿಂತ ಪೂರ್ವದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ದೇವರಕೊಂಡಾರೆಡ್ಡಿಯವರ ನೇತೃತ್ವದಲ್ಲಿ ಅನೇಕ ಶಾಸನಗಳ ಪ್ರತಿಗಳನ್ನು ತೆಗೆದು ಪುಸ್ತಕ ರೂಪದಲ್ಲಿ ಹೊರತರಲಾಗಿದೆ.

ಆದರೂ ಇನ್ನೂ ಅನೇಕ ಅಪ್ರಕಟಿತ ಶಾಸನಗಳು ಮುದಗಲ್‌ನಲ್ಲಿ ಕಾಣಬರುತ್ತವೆ. ಇಲ್ಲಿನ ಹೊಕ್ರಾಣಿ ಹಿಂಬದಿಯ (ಪಶ್ಚಿಮ) ಕೋಟೆಗೋಡೆ ಮತ್ತು ಹಸನಸಾಬ್ ಧೂಮ್‌ರವರ (ಸರ್ವೆ ನಂಬರ-48) ಹೊಲದಲ್ಲಿ ಶಾಸನಗಳಿವೆ.

ವಿಜಯನಗರ ಸಾಮ್ರಾಜ್ಯವನ್ನು ಸದಾಶಿವ ಮಹಾರಾಯನು (ಕ್ರಿ.ಶ. 1542-1570) ಆಳ್ವಿಕೆ ಮಡುತ್ತಿರುವಾಗ ಆತನ ಕಾರ್ಯಕರ್ತ (ಮಹಾಮಂಡಳೇಶ್ವರ) ಅಳಿಯ ರಾಮರಾಯನು ಈತನ ಹೆಸರಿನಲ್ಲಿ ಸಾಮ್ರಾಜ್ಯ ನೋಡಿಕೊಳ್ಳುತ್ತಿದ್ದನು. ಈತನ ಕೈಕೆಳಗೆ ಕೃಷ್ಣಮರಾಜನು ಮುದಗಲ್‌ನ ಸುತ್ತಲಿನ ಪ್ರದೇಶವನ್ನು ಆಳುತ್ತಿದ್ದನು. ಈತನ ಅಧಿಕಾರಿಯಾಗಿ ವೆಂಗಳಪ್ಪ ನಾಯಕನಿದ್ದನು. ಈ ವೆಂಗಳಪ್ಪ ನಾಯಕನ ಅನೇಕ ಶಾಸನಗಳು ಹಿಂದೆ ಕೋಟೆಯಲ್ಲಿ ದೊರೆತಿವೆ.

ಇವುಗಳಲ್ಲದೆ ಮತ್ತೆರಡು ಅಪ್ರಕಟಿತ ಕ್ರಿ.ಶ. 16ನೇ ಶತಮಾನದ ಶಾಸನಗಳು ವೆಂಗಳಪ್ಪ ನಾಯಕನು ಕೋಟೆಯಲ್ಲಿ ಕೊತ್ತಳದ ಅಗಸಿ, ಹುಲಿ ಮುಖದ ಕೊತ್ತಳ ಕಟ್ಟಿಸಿದ ಬಗ್ಗೆ ತಿಳಿಸುತ್ತವೆ.

ವಿಜಯನಗರ ಸಾಮ್ರಾಜ್ಯವು ಅವನತಿಯಾದ ನಂತರ ರಾಯಚೂರು ದೋ-ಅಬ್ ಪ್ರದೇಶವು ವಿಜಯಪುರದ ಆದಿಲ್ ಷಾಹಿಗಳ ಆಳ್ವಿಕೆಗೆ ಸೇರಿತು. ಈ ಸಮಯದಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ್ ಷಾ (ಕ್ರಿ.ಶ.1580-1626) ಆಳ್ವಿಕೆ ಮಾಡುತ್ತಿರುವಾಗ ಈತನ ಅಧಿಕಾರಿಯಾದ ಮಲ್ಲಿಕ್ ಮುರಾದನ ಅನೇಕ ಶಾಸನಗಳು ಮುದಗಲ್‌ನಲ್ಲಿ ದೊರೆತು ಪ್ರಕಟವಾಗಿವೆ.

ಇವುಗಳಲ್ಲದೆ ಮತ್ತೆ ಐದು ಅಪ್ರಕಟಿತ ಶಾಸನಗಳಲ್ಲಿ ಈತನನನ್ನು ಶತೃ ಸೈನ್ಯಗಳಿಗೆ ಕಾಲ ಭೈರವನಂತಿರುವವನು. ಬೇರೆ ಧರ್ಮಗಳ ಜನರಿಗೆ ಆಸೆ ತೋರಿಸುವ ದೊರೆಗಳ ಗಂಡ, ಆದಿಲ್ ಷಾನ ಬಲಗೈ ಬಂಟ (ಭುಜ ಪ್ರತಾಪ), ಚಾಡಿಕೋರರ ಮಾತು ಕೇಳುವ ದೊರೆಗಳ ಗಂಡ, ಹಲಾಲಕೋರರ (ದ್ರೋಹಿಗಳ, ಮೋಸಗಾರರ) ಗಂಡನೆಂದು ಉಲ್ಲೇಖಿಸಲಾಗಿದೆ.

ಇವುಗಳೊಂದಿಗೆ ಇನ್ನೂ ನಾಲ್ಕು ಶಾಸನಗಳು ಕೋಟೆಯಲ್ಲಿದ್ದು, ಕ್ರಿ.ಶ. 16ನೇ ಶತಮಾನಕ್ಕೆ ಸೇರಿವೆ. ಇವುಗಳಲ್ಲಿ ಬಲರಾಯ ಭುಜಬಲರಾಯನೆಂಬ ವ್ಯಕ್ತಿ, ಇನ್ನೊಬಾತ ಆಗಸಿಕಟ್ಟಿಸಿದ ಬಗ್ಗೆ, ಅಳಿಯ ರಾಮರಾಯನು ನಿಟು ಮತ್ತು ಕೊತ್ತಳಗಳನ್ನು ಕಟ್ಟಿಸಿದ ಬಗ್ಗೆ ಹಾಗೂ ಕ್ರಿ.ಶ.17-18ನೇ ಶತಮಾನದ ಶಾಸನದಲ್ಲಿ ಪಬ್ದ, ಗದ್ದೆ ಇತ್ಯಾದಿ ವಿಷಯಗಳಿವೆ.

ಒಟ್ಟು ಹನ್ನೊಂದು ಅಪ್ರಕಟಿತ ಶಾಸನಗಳು ಕಣಶಿಲೆಯಲ್ಲಿವೆ. ಇವುಗಳ ಭಾಷೆ ಮತ್ತು ಲಿಪಿಯೂ ಕನ್ನಡವೇ ಆಗಿದೆ.

ಶಾಸನಗಳೊಂದಿಗೆ ಮುದಗಲ್ಲಿನ ಹಾಲಭಾವಿ ವೀರಭದ್ರೇಶ್ವರ ಬೆಟ್ಟದ ಬಂಡೆಗಲ್ಲುಗಳಲ್ಲಿ ಪಾರ್ಶ್ವನಾಥ ತೀರ್ಥಂಕರನ ಶಿಲ್ಪ, ಕುದುರೆಯ ಮೇಲೆ ಹೊರಟ ವೀರನಶಿಲ್ಪ, ಚಾಮುಂಡಿ, ಮೊದಲಾದ ಶಿಲ್ಪಗಳು ಕಾಣಬರುತ್ತವೆ. ಇವುಗಳನ್ನು ಶೋಧಿಸಲು ಕಾರಣೀಕರ್ತರಾದ ಪರಪ್ಪ ಭಂಡಾರಿ ಹಂಚಿನಾಳ, ಭೀಮಣ್ಣ ದೇವರಗುಡ್ಡ, ಮುದಗಲ್ಲಿನ ಇರ್ಫಾನ್ ಬಂದೇನವಾಜ್ ಎಲಿಪಕ್ ಮತ್ತು ನೂರಬೇಗ್ ಉಸ್ತಾದ್‌ರವರು ನೆರವಾಗಿದ್ದರೆಂದು ಸಂಶೋಧಕರು ತಿಳಿಸಿದ್ದಾರೆ.

ಹಾಲಭಾವಿ ವೀರಭದ್ರೇಶ್ವರ ಬೆಟ್ಟದ ಬಂಡೆಗಲ್ಲಿನಲ್ಲಿ ಕುದುರೆಯ ಮೇಲೆ ಕುಳಿತ ವೀರನ ಶಿಲ್ಪ
ಹಾಲಭಾವಿ ವೀರಭದ್ರೇಶ್ವರ ಬೆಟ್ಟದ ಬಂಡೆಗಲ್ಲಿನಲ್ಲಿ ಕುದುರೆಯ ಮೇಲೆ ಕುಳಿತ ವೀರನ ಶಿಲ್ಪ
ಮುದಗಲ್ ಹಾಲಭಾವಿ ವೀರಭದ್ರೇಶ್ವರ ಬೆಟ್ಟದ ಬಂಡೆಗಲ್ಲಿನಲ್ಲಿ ಪಾರ್ಶ್ವನಾಥ ತೀರ್ಥಂಕರ ವಿಗ್ರಹ
ಮುದಗಲ್ ಹಾಲಭಾವಿ ವೀರಭದ್ರೇಶ್ವರ ಬೆಟ್ಟದ ಬಂಡೆಗಲ್ಲಿನಲ್ಲಿ ಪಾರ್ಶ್ವನಾಥ ತೀರ್ಥಂಕರ ವಿಗ್ರಹ
ಮುದಗಲ್ ಹಾಲಭಾವಿ ವೀರಭದ್ರೇಶ್ವರ ಬೆಟ್ಟದಲ್ಲಿ ದೊರೆತ ಚಾಮುಂಡಿ ಶಿಲ್ಪ
ಮುದಗಲ್ ಹಾಲಭಾವಿ ವೀರಭದ್ರೇಶ್ವರ ಬೆಟ್ಟದಲ್ಲಿ ದೊರೆತ ಚಾಮುಂಡಿ ಶಿಲ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT