ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಎಡೆದೊರೆ ನಾಡಿಯಲ್ಲಿ ವೈವಿಧ್ಯಮ ಯುಗಾದಿ

ಮಂಗಳವಾರ ಬಣ್ಣದೋಕುಳಿ, ದೇಗುಲಗಳಲ್ಲಿ ವಿಶೇಷ ಪೂಜೆ
Published 8 ಏಪ್ರಿಲ್ 2024, 5:38 IST
Last Updated 8 ಏಪ್ರಿಲ್ 2024, 5:38 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯು ಹಲವು ಸಂಸ್ಕೃತಿ ಹಾಗೂ ಸಂಪ್ರದಾಯ ಮೇಳೈಸಿಕೊಂಡಿದೆ. ಹೀಗಾಗಿ ಇಲ್ಲಿ ಆಚರಣೆಗಳೂ ಭಿನ್ನವಾಗಿದೆ. ವೈವಿಧ್ಯತೆಯಲ್ಲಿನ ಏಕತೆಯೇ ಇಲ್ಲಿಯ ವಿಶೇಷತೆಯಾಗಿದೆ.

ಹೊಸ ಯುಗದ ಆರಂಭ ಸೂಚಿಸುವ ಯುಗಾದಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಪಡೆದಿದೆ. ಮರಾಠರು ಗುಡಿ ಪಾಡ್ವಾ, ತೆಲುಗು ಹಾಗೂ ಕನ್ನಡಿಗರು ಯುಗಾದಿ ಹೆಸರಲ್ಲೇ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಹೋಳಿ ಹುಣ್ಣಿಮೆಯ ದಿನ ಬಣ್ಣ ಆಡುವುದಿಲ್ಲ. ಆದರೆ, ಯುಗಾದಿಗೆ ಬಣ್ಣದೋಕುಳಿ ನಡೆಯುತ್ತದೆ.

ವಸಂತ ಋತುವಿನ ಚೈತ್ರ ಮಾಸ ಭೂಮಿಯಲ್ಲಿ ನವೋಲ್ಲಾಸ ನೀಡುತ್ತದೆ ಎನ್ನುವ ನಂಬಿಕೆ ರೈತರಲ್ಲಿ ಇದೆ. ಹೀಗಾಗಿ ನವ ಸಂವತ್ಸರದ ಯುಗಾದಿಗೆ ರೈತರು ಎತ್ತುಗಳಿಗೆ ಹಾಗೂ ಭೂತಾಯಿಗೆ ಪೂಜೆ ಸಲ್ಲಿಸಿ ಮುಂಗಾರಿನ ಸಿದ್ಧತೆ ಆರಂಭಿಸುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕಪತ್ರ ಆರಂಭಿಸಲು ವಹಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಇನ್ನು ದೇಗುಲಗಳಲ್ಲಿ ಹೊಸ ಪಂಚಾಂಗಕ್ಕೆ ಪೂಜೆ ಸಲ್ಲಿಸಿ, ಹಳೆಯ ಪಂಚಾಂಗ ವಿಸರ್ಜನೆ ಮಾಡಲಾಗುತ್ತದೆ. ದೇಗುಲಗಳಲ್ಲಿ ವಿಶೇಷ ಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಸಿರವಾರ ತಾಲ್ಲೂಕಿನ ಕಲ್ಲೂರಿನಲ್ಲಿರುವ ಮಾರಟೇಶ್ವರ ದೇಗುಲದಲ್ಲಿ ಯುಗಾದಿಯ ದಿನ ಸೂರ್ಯನ ಕಿರಣಗಳು ಸ್ಪರ್ಶಿಸುತ್ತವೆ. 7ನೇ ಶತಮಾನದಲ್ಲಿ ಸೂರ್ಯನ ಪಥ ಚಲನೆ ಮೇಲೆ ನಿರ್ಮಿಸಿರುವ ದೇಗುಲದಲ್ಲಿ ಯುಗಾದಿ ಹಬ್ಬದಂದು ಸೂರ್ಯ ರಶ್ಮಿ ಸ್ಪರ್ಶವಾಗುವುದು ವಿಶೇಷ. ರಾಯಚೂರು ತಾಲ್ಲೂಕಿನ ದೇವಸೂಗೂರಿನ ಸೂಗೂರೇಶ್ವರ ಸ್ವಾಮಿಯ ದೇವಸ್ಥಾನದಲ್ಲೂ ವಿಶೇಷ ಪೂಜೆ ಹಾಗೂ ಗೋಪೂಜೆ ಮಾಡಲಾಗುತ್ತದೆ.

ರೈತರಲ್ಲಿ ಹೊಸ ವರ್ಷದ ಸಂಭ್ರಮ

ಲಿಂಗಸುಗೂರು: ಯುಗಾದಿ ಪಾಡ್ಯದ ದಿನ ರೈತರು ಭೂತಾಯಿಗೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆಗೆ ಚಾಲನೆ ನೀಡುತ್ತಾರೆ. ಹಬ್ವದ ಪ್ರಯುಕ್ತ ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಸಂಭ್ರಮಿಸುತ್ತಾರೆ.
ದೇವಸ್ಥಾನ, ಮಠ, ಚಾವಡಿ ಕಟ್ಟೆಗಳಲ್ಲಿ ಗ್ರಾಮದ ಪ್ರಮುಖರ ಸಮಕ್ಷಮ ಸಭೆ ಸೇರಿ ಹಳೆ ಪಂಚಾಂಗಕ್ಕೆ ವಿದಾಯ ಹೇಳಿ ಹೊಸ ಪಂಚಾಂಗಕ್ಕೆ ಪೂಜೆ ಸಲ್ಲಿಸಿ ಮಳೆ, ಬೆಳೆ ಇತರೆ ಮಾಹಿತಿ ಹಂಚಿಕೊಳ್ಳುವುದು ರೂಢಿಗತವಾಗಿ ಬಂದಿದೆ. ಪಾಡ್ಯದ ಮರುದಿನ ಕರಿ ಆಚರಣೆ ಹೆಸರಲ್ಲಿ ಬೇಟೆಯಾಡಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ಬಣ್ಣ ಎರಚುತ್ತ ಸಂಭ್ರಮಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಾರೆ.

ಸಂಭ್ರಮದ ಹಬ್ಬಕ್ಕೆ ಭರದ ತಯಾರಿ

ದೇವದುರ್ಗ: ತಾಲ್ಲೂಕಿನಾದ್ಯಂತ ಯುಗಾದಿ ಹಬ್ಬಕ್ಕೆ ಭರದ ತಯಾರಿ ನಡೆದಿದೆ. ಮಾರುಕಟ್ಟೆಯಲ್ಲಿ ಜನರು ಪೂಜಾ ಸಾಮಗ್ರಿ, ಹಣ್ಣು ಹಂಪಲು ಖರೀದಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಅಮಾವಾಸ್ಯೆಗೆ ಮನೆಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬೇವು ಬೆಲ್ಲ ಸವಿಯಲಿದ್ದಾರೆ. ಪಾಡ್ಯದ

ಮರುದಿನ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಲಿದ್ದಾರೆ. ಅಮಾವಾಸ್ಯೆಗೆ ಹೋಳಿಗೆ, ಪಾಡ್ಯದ ದಿನ ಶ್ಯಾವಿಗೆ, ಮೂರನೇ ದಿನ ಪ್ರಕೃತಿ ಮಡಿಲಲ್ಲಿ ಸಿಕ್ಕ ಹೂವು, ಗಿಡದ ತೊಗಟೆ, ಕಾಯಿ ಬಳಸಿ ಬಣ್ಣ ಸಿದ್ಧಗೊಳಿಸಿ ರಂಗಿನಾಟದಲ್ಲಿ ತೊಡಗುತ್ತಾರೆ. ನಂತರ ಕೃಷ್ಣಾ ನದಿಗೆ ತೆರಳಿ ಸ್ನಾನ ಮಾಡುತ್ತಾರೆ.

ಯುವಕರು ಮೀನು ಹಿಡಿದು ಅಡುಗೆ ಮಾಡಿಕೊಂಡು ಊಟ ಮಾಡಿದರೆ ಇನ್ನು ಕೆಲವರು ಮನೆಯಿಂದ ಬುತ್ತಿ ತಂದು ಸಾಮೂಹಿಕವಾಗಿ ಭೋಜನ ಮಾಡುವ ಸಂಪ್ರದಾಯ ಇದೆ.

ಜಾಲಹಳ್ಳಿ ಪಟ್ಟಣದಲ್ಲಿ ಯುಗಾದಿಗೆ ಬಣ್ಣದಾಟ ಅಡುವುದೇ ವಿಶೇಷವಾಗಿದೆ. ಎಲ್ಲೆಡೆ ಹೋಳಿ ಹುಣ್ಣಿಮೆ ಬಣ್ಣ ಆಡಿದರೆ, ಜಾಲಹಳ್ಳಿಯಲ್ಲಿ ಯುಗಾದಿ ದಿನ ಬಣ್ಣದೋಕುಳಿ ನಡೆಯುತ್ತದೆ. ಹಬ್ಬದ ದಿನವೇ ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನದ ಜಾತ್ರೆ ನಡೆಸಲು ರಥೋತ್ಸವ ಕ್ಕೆ‌ ದಿನಾಂಕ ನಿಗದಿ ಪಡಿಸಲಾಗುತ್ತದೆ.

ದೊರೆಗಳ ಮನೆಯವರು, ದೇಸಾಯಿ, ಪೊಲೀಸ್ ಗೌಡರು, ಕುಲಕರ್ಣಿ, ಮಾಲಿ ಗೌಡರು ಗ್ರಾಮಸ್ಥರು ದೇವಸ್ಥಾನದಲ್ಲಿ ಸೇರಿ ಸಭೆ ನಡೆಸಿ ಜಾತ್ರೆಗೆ ಸಿದ್ಧತೆ ಆರಂಭಿಸುವ ಪದ್ಧತಿ ನಡೆದುಕೊಂಡು ಬಂದಿದೆ.

ತ್ರಯಂಭಕೇಶ್ವರ ದೇವಸ್ಥಾನ: ಗರ್ಭ ಗುಡಿ ಪ್ರವೇಶಿಸುವ ಸೂರ್ಯರಶ್ಮಿ

ಕವಿತಾಳ ಪಟ್ಟಣದಲ್ಲಿರುವ 12ನೇ ಶತಮಾನದ ಪ್ರಾಚೀನ ತ್ರಯಂಭಕೇಶ್ವರ ದೇವಸ್ಥಾನವು ಹಲವು ವಿಶೇಷತೆಗಳಿಂದ ಕೂಡಿದೆ. ಪ್ರತಿವರ್ಷ ಯುಗಾದಿ ದಿನ ಸೂರ್ಯ ರಶ್ಮಿ ನೇರವಾಗಿ ದೇವಸ್ಥಾನದ ಗರ್ಭಗುಡಿ ಪ್ರವೇಶಿಸುತ್ತದೆ.

ಈ ಕೌತುಕ ನೋಡುವುದಕ್ಕೆ ಪ್ರತಿವರ್ಷವೂ ಭಕ್ತರು ಆಗಮಿತ್ತಾರೆ. ಯುಗಾದಿ ದಿನ ತ್ರಯಂಭಕೇಶ್ವರನ ದರ್ಶನ ಪಡೆಯುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಮುಂಬರುವ ವರ್ಷವೆಲ್ಲವೂ ಒಳ್ಳೆಯದಾಗಲಿ ಎನ್ನುವ ಸಂಕಲ್ಪವನ್ನು ಭಕ್ತರು ಮಾಡುತ್ತಾರೆ.
ಈ ದೇವಸ್ಥಾನಕ್ಕೆ ಎಂಟು ನೂರು ವರ್ಷಗಳ ಇತಿಹಾಸ ಇದೆ. ಐತಿಹಾಸಿಕ ಮಹತ್ವ ಹೊಂದಿದ, ಇಡೀ ಭರತ ಖಂಡದಲ್ಲಿಯೇ ಒಂದೇ ಪಾಣಿ ಬಟ್ಟಲಿನಲ್ಲಿ ಮೂರು ಲಿಂಗುಗಳಿರುವ ದೇವಸ್ಥಾನಗಳು ಕೇವಲ ಎರಡು ಇದ್ದು ಒಂದು ಮಹಾರಾಷ್ಟ್ರದ ನಾಸಿಕದಲ್ಲಿ ಇನ್ನೊಂದು ಕವಿತಾಳದಲ್ಲಿ ಎನ್ನುತ್ತವೆ ಇತಿಹಾಸದ ಪುಟಗಳು.
ಯುಗಾದಿ ಪಾಡ್ಯದಿಂದ 9 ದಿನಗಳ ರಾಮ ನವಮಿಯಂದು ಜಾತ್ರಾ ಮಹೋತ್ಸವ ನಡೆಯುತ್ತದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ಚಾತ್ರೆಗೆ ಆಗಮಿಸುತ್ತಾರೆ. ಜಾನುವಾರು ಜಾತ್ರೆ ನಡೆಯುತ್ತದೆ.
ಯುಗಾದಿ ಹಬ್ಬದಂದು ಮಹಾ ರುದ್ರಾಭಿಷೇಕ, ಕುಂಕುಮಾರ್ಚನೆ, ಸಹಸ್ರ ಭಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆʼ ಎಂದು ಪ್ರಧಾನ ಅರ್ಚಕ ಸಿದ್ದಯ್ಯ ಸ್ವಾಮಿ ತಿಳಿಸಿದರು.

ಮೂಲಬೃಂದಾವನಕ್ಕೆ ವಿಶೇಷ ಪೂಜೆ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲೂ ಶ್ರೀರಾಘವೇಂದ್ರತೀರ್ಥರ ಮೂಲಬೃಂದಾವನಕ್ಕೆ ವಿಶೇಷ ಪೂಜೆ ಅಲಂಕಾರ ನಡೆಯುತ್ತದೆ. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಮೂಲರಾಮದೇವರ ಪೂಜೆ ವಿಶೇಷ ಪೂಜೆ ನೆರವೇರಿಸಿ ಅಖನುಗ್ರಹ ಸಂದೇಶ ನೀಡುತ್ತಾರೆ. ನಾಡಿನ ವಿವಿಧೆಡಯಿಂದ ಮಂತ್ರಾಲಯಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಈಗಾಗಲೇ ಯಾತ್ರಿ ನಿವಾಸ ಭರ್ತಿಯಾಗಿವೆ.

ಶ್ರೀಶೈಲಂನಲ್ಲಿ ರಥೋತ್ಸವ ನಾಳೆ

ಏಪ್ರಿಲ್ 9 ರಂದು ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲಂನಲ್ಲಿ ಜರುಗಲಿರುವ ರಥೋತ್ಸವದಲ್ಲಿ ಪಾಲ್ಗೊಳ್ಳಲಿರುವ

ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಂದಲೂ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ಇದಲ್ಲದೇ ಕಲಬುರಗಿ, ವಿಜಯಪುರ, ಬಾಗಲಕೋಟೆ ಹಾಗೂ ಮಹಾರಾಷ್ಟ್ರದ ಸೋಲಾಪುರದ ಜಿಲ್ಲೆಗಳಿಂದ ಪಾದಯಾತ್ರೆಯಲ್ಲಿ ಶ್ರೀಶೈಲಕ್ಕೆ ಪ್ರಯಾಣ ಬೆಳೆಸಿದ್ದು, ಏಪ್ರಿಲ್ 8ರಂದು ದೇವಸ್ಥಾನ ತಲುಪಲಿದ್ದಾರೆ.

ಸಹಕಾರ: ಬಸವರಾಜ ನಂದಿಕೋಲಮಠ, ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ,

ಮಂಜುನಾಥ ಬಳ್ಳಾರಿ, ಅಲಿಬಾಬಾ, ಡಿ.ಎಚ್‌.ಕಂಬಳಿ

ದೇವದುರ್ಗ ಪಟ್ಟಣದಲ್ಲಿ ಬಿರು ಬಿಸಿಲಿನಲ್ಲಿ ಯುಗಾದಿ ಹಬ್ಬದ ಬೇವಿನ ಹೆಚ್ಚ ಮತ್ತು ಹಣ್ಣು ಖರೀದಿಸುತ್ತಿರುವ ಜನರು
ದೇವದುರ್ಗ ಪಟ್ಟಣದಲ್ಲಿ ಬಿರು ಬಿಸಿಲಿನಲ್ಲಿ ಯುಗಾದಿ ಹಬ್ಬದ ಬೇವಿನ ಹೆಚ್ಚ ಮತ್ತು ಹಣ್ಣು ಖರೀದಿಸುತ್ತಿರುವ ಜನರು
ಲಿಂಗಸುಗೂರಿನ ದೇವರಭೂಪುರದ ಬೃಹನ್ಮಠದಲ್ಲಿ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಯುಗಾದಿ ಪಾಡ್ಯದ ದಿನ ಭಕ್ತರ ಸಮಕ್ಷಮ ಪಂಚಾಂಗಕ್ಕೆ ಪೂಜೆ ಸಲ್ಲಿಸಿ ಪಂಚಾಂಗ ಪಠಣ ಮಾಡುತ್ತಿರುವುದು (ಸಂಗ್ರಹ ಚಿತ್ರ)
ಲಿಂಗಸುಗೂರಿನ ದೇವರಭೂಪುರದ ಬೃಹನ್ಮಠದಲ್ಲಿ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಯುಗಾದಿ ಪಾಡ್ಯದ ದಿನ ಭಕ್ತರ ಸಮಕ್ಷಮ ಪಂಚಾಂಗಕ್ಕೆ ಪೂಜೆ ಸಲ್ಲಿಸಿ ಪಂಚಾಂಗ ಪಠಣ ಮಾಡುತ್ತಿರುವುದು (ಸಂಗ್ರಹ ಚಿತ್ರ)
ಯುಗಾದಿಯ ಭಕ್ಷ್ಯ ಭೋಜನ
ಯುಗಾದಿಯ ಭಕ್ಷ್ಯ ಭೋಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT