ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಸಿ ಸಾಧಕರು | ಮಾಗಡಿ: ‘ಸೂತ್ರದ ಬೊಂಬೆ’ ಕೈಬಿಡದ ಕಲಾವಿದ

ಸುಧೀಂದ್ರ ಸಿ.ಕೆ.
Published : 27 ಸೆಪ್ಟೆಂಬರ್ 2024, 4:06 IST
Last Updated : 27 ಸೆಪ್ಟೆಂಬರ್ 2024, 4:06 IST
ಫಾಲೋ ಮಾಡಿ
Comments

ಮಾಗಡಿ: ‘ಸೂತ್ರದ ಬೊಂಬೆ’ ಎಂದರೆ ಇಲ್ಲಿನ ಜನರಿಗೆ ನೆನಪಾಗೋದು ಮಾಗಡಿ ತಾಲ್ಲೂಕಿನ ಅಗಲಕೋಟೆ ವಿನಾಯಕ ಸೂತ್ರದ ಬೊಂಬೆ ಮೇಳ.

ಇಂದಿನ ಜನರಿಗಂತೂ ಬಹುತೇಕ ಹೊಸದೇ ಎನಿಸುವ, ಮಕ್ಕಳೆಲ್ಲ ದಾವಿಸಿ ಬಂದು ಬೆರಗುಗಣ್ಣಿನಿಂದ ನೋಡುವ ವಿಶಿಷ್ಟ ಆಟ ‘ಸೂತ್ರದ ಬೊಂಬೆ’ ಒಂದು ಅಪರೂಪದ ಕಲೆ.

ಈ ಕಲೆಯನ್ನು ತಲೆತಲಾಂತರಗಳಿಂದ ನಡೆಸಿಕೊಂಡು ಬರುತ್ತಿರುವ ಎ.ಆರ್. ಸತ್ಯನಾರಾಯಣ ಹಾಗೂ ಅವರ ಕುಟುಂಬ ಇಂದಿಗೂ ಬೊಂಬೆಯಾಟವನ್ನೇ ನಂಬಿ ಬದುಕ ಬಂಡಿ ಎಳೆಯುತ್ತಿದೆ.

ಬೊಂಬೆಯಾಟದ ಕಲೆಗೆ ಸುಮಾರು ಇನ್ನೂರು ವರ್ಷಗಳ ಇತಿಹಾಸವಿದೆ. ನರ್ತನ ಶಿರೋಮಣಿ ಬಿರುದಾಂಕಿತರಾದ ದಿ. ಎ.ವಿ. ನರಸಿಂಗರಾಯರ ಮೊಮ್ಮಗನಾದ ದಿ. ಎ.ಆರ್. ರಂಗನಾಥ ರಾವ್ ಬೊಂಬೆ ಆಟದಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಅವರ ಸಹೋದರ ದಿ. ಎಂ.ಆರ್. ರಾಮಯ್ಯನವರ ಮಗನಾದ ಎ.ಆರ್. ಸತ್ಯನಾರಾಯಣ ಇದೇ ಕಲೆಯನ್ನು ನಂಬಿ ಸುಮಾರು ನಲವತ್ತು ವರ್ಷಗಳಿಂದ ಬೊಂಬೆನರ್ತನದಲ್ಲಿ ಪಳಗಿದ್ದಾರೆ.

ತಮ್ಮ ತಂಡದೊಡನೆ ಕರ್ನಾಟಕದಾದ್ಯಂತ ಮಾತ್ರವಲ್ಲದೇ, ನವದೆಹಲಿ, ಚೆನ್ನೈ, ತಿರುಪತಿ ಮೊದಲಾದ ಪ್ರಮುಖ ಸ್ಥಳಗಳಲ್ಲಿಯೂ ಪ್ರದರ್ಶನ ನೀಡಿ ವಿಮರ್ಶಕರಿಂದ ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದಾರೆ ಸತ್ಯನಾರಾಯಣ.

ಕರ್ನಾಟಕದಲ್ಲಿ ಹಿಂದೆ ರಾಜ್ಯಪಾಲರಾಗಿದ್ದ ಅಶೋಕನಾಥ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿಯೂ ಪ್ರದರ್ಶನ ನೀಡಿ ಅವರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಸೂತ್ರದ ಬೊಂಬೆ ತಯಾರಿಕೆಯಲ್ಲಿಯೂ ಸಿದ್ಧಹಸ್ತರು: ಸತ್ಯನಾರಾಯಣ ಹಾಗೂ ಅವರ ಕುಟುಂಬದವರು ಬೊಂಬೆಯಾಟದಲ್ಲಿ ಮಾತ್ರವಲ್ಲ, ಆ ಬೊಂಬೆಗಳನ್ನು ತಯಾರಿಸುವುದರಲ್ಲಿಯೂ ಸಿದ್ಧಹಸ್ತರು. ಸತ್ಯನಾರಾಯಣ ಮತ್ತು ತಂಡದ ಬಳಿ ಅತ್ಯಂತ ಪ್ರಾಚೀನವಾದ ಬೊಂಬೆಗಳಿವೆ. ಜೊತೆಗೆ ಹೊಸ ಹೊಸ ಪ್ರಸಂಗಗಳಿಗೆ ತಕ್ಕಂತೆ ಅಗತ್ಯ ಬೊಂಬೆಗಳನ್ನು ತಯಾರಿಸುವುದರಲ್ಲಿಯೂ ಅವರು ನಿಸ್ಸೀಮರು.

ಇವರ ಸಂಗ್ರಹದಲ್ಲಿರುವ ಬೊಂಬೆಗಳ ಚಿತ್ರಗಳನ್ನು ಅನೇಕ ವಿದೇಶಿಯರು ಚಿತ್ರಿಸಿಕೊಂಡು ತಮ್ಮ ಪುಸ್ತಕಗಳಲ್ಲಿ ಪ್ರಕಟಿಸಿದ್ದಾರೆ.

ಸತ್ಯನಾರಾಯಣ ಅವರ ಮಕ್ಕಳು, ಮೊಮ್ಮಕ್ಕಳನ್ನು ಒಳಗೊಂಡು ಇಡೀ ಕುಟುಂಬ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಚಿಕ್ಕಂದಿನಿಂದಲೂ ಬೊಂಬೆಗಳ ಒಡನಾಟದಲ್ಲಿಯೇ ಬೆಳೆದ ಎ.ಆರ್. ಸತ್ಯನಾರಾಯಣ 52ರ ಹರೆಯದಲ್ಲಿಯೂ ಒಂದಿನಿತೂ ಉತ್ಸಾಹ ಕುಗ್ಗದೇ ಬೊಂಬೆಯಾಟದ ಓಡಾಟದಲ್ಲಿ ನಿರತರಾಗಿದ್ದಾರೆ.

ಅವಸಾನದ ಅಂಚಿಗೆ ಬಂದಿರುವ ಅನೇಕ ಜಾನಪದ ಕಲಾ ಪ್ರಕಾರಗಳಲ್ಲಿ ಒಂದಾದ ಬೊಂಬೆ ಆಟದ ಕಲೆ ಅಳಿಸಿ ಹೋಗಬಾರದು, ಅದನ್ನು ಬೆಳೆಸಬೇಕು ಎನ್ನುವ ಎ.ಆರ್. ಸತ್ಯನಾರಾಯಣ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಲ್ಲಿಯೂ ಬೊಂಬೆ ಪ್ರೀತಿ ಮೊಳಕೆಯೊಡೆಯುವಂತೆ ನೋಡಿಕೊಂಡಿದ್ದಾರೆ.

ಕಾಲಕ್ಕೆ ತಕ್ಕಂತೆ ಬದಲಾಗಬೇಕು

ಬೊಂಬೆಯಾಟ ಹಳೆಯದಾದರೂ ತನ್ನದೇ ಆದ ಐತಿಹಾಸಿಕ ಮಹತ್ವ ಹೊಂದಿದೆ. ಇದು ಮುಂದಿನ ಪೀಳಿಗೆಯಿಂದ ಅಂತರ ಕಾಯ್ದುಕೊಳ್ಳಬಾರದು. ನಮ್ಮ ನಡುವಿನ ಶ್ರೀಮಂತ ಕಲೆಯಾಗಿ ಸದಾ ನಮ್ಮೊಂದಿಗೆ ಉಸಿರಾಡಬೇಕು.

ಈಗಿನ ಟೀವಿ, ಸಿನಿಮಾ, ಮೊಬೈಲ್‌ಗಳ ಯುಗದಲ್ಲಿ ಬೊಂಬೆಯಾಟವನ್ನು ಬೆಳೆಸುವುದು ಸವಾಲೇ ಸರಿ. ಅದಕ್ಕೆ ತಕ್ಕಂತೆ ನಮ್ಮ ಪ್ರದರ್ಶನಗಳಲ್ಲಿ ಬದಲಾವಣೆ ಮಾಡಿಕೊಂಡು, ಹಳತು ಹೊಸತರ ಸಮತೊಲನದಿಂದ ಪ್ರದರ್ಶನಗಳು ಕಳೆಗಟ್ಟುವಂತೆ ಮಾಡುತ್ತೇವೆ. ಈ ಅಪರೂಪದ ಗೊಂಬೆಯಾಟದ ಕಲೆಯ ಕೊಂಡಿ ಕಳಚದಂತೆ ಮುಂದುವರೆಸಿಕೊಂಡು ಹೋಗುವ ಕನಸು ನಮ್ಮದು. ಅದಕ್ಕಾಗಿ ಮಕ್ಕಳು–ಮೊಮ್ಮಕ್ಕಳೂ ಕೈಜೋಡಿಸುತ್ತಾರೆ. ಬೊಂಬೆಯಾಟ ಒಂದು ಕಲೆಯಾಗಿ, ಜೀವನಮಾರ್ಗವಾಗಿ ನಮ್ಮೊಂದಿಗೆ ಉಳಿದಿದೆ.

-ಎ.ಆರ್. ಸತ್ಯನಾರಾಯಣ, ಬೊಂಬೆಯಾಟ ಕಲಾವಿದ

ಸೂತ್ರದ ಬೊಂಬೆಗಳು
ಸೂತ್ರದ ಬೊಂಬೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT