ಅತ್ತಿಬೆಲೆಯಲ್ಲಿದ್ದಾಗ ಅಮಾನತು
ಬೆಂಗಳೂರು: ಆನೇಕಲ್ ತಾಲ್ಲೂಕಿನ ಗಡಿಭಾಗವಾದ ಅತ್ತಿಬೆಲೆ ಠಾಣೆಯಲ್ಲೂ ತಿಮ್ಮೇಗೌಡ ಅವರು ಕಳೆದ ವರ್ಷ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು. ಕಳೆದ ಅ.7ರಂದು ಅಲ್ಲಿ ಪಟಾಕಿ ದುರಂತ ಸಂಭವಿಸಿ ಒಟ್ಟು 17 ಮಂದಿ ಮೃತಪಟ್ಟಿದ್ದರು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿಯವರು ಕರ್ತವ್ಯ ಲೋಪ ಆರೋಪದಡಿ ತಿಮ್ಮೇಗೌಡ ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದರು. ತನಿಖೆ ನಡೆದ ಬಳಿಕ ‘ತಿಮ್ಮೇಗೌಡ ಅವರು ಕರ್ತವ್ಯ ಲೋಪ ಎಸಗಿಲ್ಲ’ ಎಂಬುದು ಸಾಬೀತಾಗಿತ್ತು. ಆದರೂ ಅವರಿಗೆ ಬೇರೆಲ್ಲೂ ಕರ್ತವ್ಯಕ್ಕೆ ನಿಯೋಜನೆ ಮಾಡಿರಲಿಲ್ಲ. ಇದರಿಂದ ನೊಂದುಕೊಂಡಿದ್ದರು. ನಂತರ ಕುಂಬಳಗೋಡಿಗೆ ನಿಯುಕ್ತಿಗೊಂಡಿದ್ದ ಅವರನ್ನು ಬಿಡದಿಗೆ ವರ್ಗಾವಣೆ ಮಾಡಲಾಗಿತ್ತು. ಇಲ್ಲಿಂದ ಎರಡು ತಿಂಗಳ ಹಿಂದೆ ಸಿಸಿಬಿಯ ಆರ್ಥಿಕ ಅಪರಾಧ ಪತ್ತೆ ದಳಕ್ಕೆ ವರ್ಗಾವಣೆಯಾಗಿದ್ದರು ಎಂದು ಮೂಲಗಳು ಹೇಳಿವೆ. ಅಧಿಕಾರ ಸ್ವೀಕರಿಸಿದ ಮೇಲೆ ಕೆಲವು ಕಡತ ತರಿಸಿ ಪರಿಶೀಲಿಸಿದ್ದರು. ಪ್ರಕರಣವೊಂದರ ತನಿಖಾಧಿಕಾರಿ ಆಗಿಯೂ ತಿಮ್ಮೇಗೌಡ ಅವರನ್ನು ನೇಮಿಸಲಾಗಿತ್ತು. ಆ ಪ್ರಕರಣದಲ್ಲಿ ತಿಮ್ಮೇಗೌಡ ಅವರ ಮೇಲೆ ಒತ್ತಡ ಬರುತ್ತಿತ್ತು ಎಂದು ಮೂಲಗಳು ತಿಳಿಸಿವೆ.