ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ ಉಪಚುನಾವಣೆ:ಸಿಪಿವೈಗೆ ಬಲ ತಂದ BJP ಸಮೀಕ್ಷೆ- ಮತ್ತೆ ಸಕ್ರಿಯನಾದ ಸೈನಿಕ

ಚನ್ನಪಟ್ಟಣ ಉಪ ಚುನಾವಣೆ: ಯೋಗೇಶ್ವರ್ ನಿಂತರಷ್ಟೇ ಮೈತ್ರಿಗೆ ಗೆಲುವೆಂದ ಕಮಲದ ಸಮೀಕ್ಷೆ
Published : 17 ಸೆಪ್ಟೆಂಬರ್ 2024, 5:21 IST
Last Updated : 17 ಸೆಪ್ಟೆಂಬರ್ 2024, 5:21 IST
ಫಾಲೋ ಮಾಡಿ
Comments

ರಾಮನಗರ: ಕೆಲ ದಿನಗಳಿಂದ ತಣ್ಣಗಾಗಿದ್ದ ಚನ್ನಪಟ್ಟಣ ಉಪ ಚುನಾವಣೆ ಬಿಜೆಪಿ–ಜೆಡಿಎಸ್ ಮೈತ್ರಿ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಸಿ.ಪಿ. ಯೋಗೇಶ್ವರ್, ಮತ್ತೆ ಸಕ್ರಿಯವಾಗಿದ್ದಾರೆ. ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಾ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಹಿತೈಷಿಗಳನ್ನು ಭೇಟಿ ಮಾಡುತ್ತಾ ಬೆಂಬಲ ಕೋರುತ್ತಿದ್ದಾರೆ.

ಟಿಕೆಟ್ ವಿಷಯಕ್ಕಾಗಿ ದೆಹಲಿ ಯಾತ್ರೆ ಮುಗಿಸಿ ಬಂದ ಬಳಿಕ, ‘ಟಿಕೆಟ್ ವಿಷಯದಲ್ಲಿ ವರಿಷ್ಠರ ನಿರ್ಧಾರಕ್ಕೆ ಬದ್ಧ’ ಎಂದು ಬೇಸರದಿಂದಲೇ ಉಪ ಚುನಾವಣೆ ಕಣದಿಂದ ಹಿಂದಕ್ಕೆ ಸರಿಯುವ ಮುನ್ಸೂಚನೆ ನೀಡಿದ್ದ ಯೋಗೇಶ್ವರ್, ಇದೀಗ ಮತ್ತೆ ಹುರುಪಿನಿಂದ ಓಡಾಡುತ್ತಿದ್ದಾರೆ. ಅಂದಹಾಗೆ, ಅವರ ನಡೆಗೆ ಕಾರಣವಾಗಿರುವುದು ಆ ಸಮೀಕ್ಷೆ ಎನ್ನುತ್ತವೆ ಬಿಜೆಪಿ ಮೂಲಗಳು.

ಸಮೀಕ್ಷೆಯ ಬಲ: ‌ಕ್ಷೇತ್ರದ ಚುನಾವಣಾ ವಾತಾವರಣ ಹಾಗೂ ಗೆಲುವಿನ ಸಾಧ್ಯತೆಯ ಕುರಿತು ಬಿಜೆಪಿ ನಡೆಸಿರುವ ಸಮೀಕ್ಷೆಯಲ್ಲಿ, ‘ಮೈತ್ರಿ’ ಅಭ್ಯರ್ಥಿಯಾಗಿ ಯೋಗೇಶ್ವರ್ ಹೊರತುಪಡಿಸಿ ಬೇರಾರೇ ನಿಂತರೂ ಗೆಲುವು ಕಷ್ಟ ಎಂಬುದು ಗೊತ್ತಾಗಿದೆ. ಕ್ಷೇತ್ರ ಮೈತ್ರಿಗೆ ಅತ್ಯಂತ ಪ್ರತಿಷ್ಠೆಯಾಗಿರುವುದರಿಂದ ಇಲ್ಲಿ ಪಕ್ಷ ಪ್ರತಿಷ್ಠೆ ಬಿಟ್ಟು, ಗೆಲುವನ್ನೇ ಮಾನದಂಡವಾಗಿ ಪರಿಗಣಿಸಿ ಅಭ್ಯರ್ಥಿ ವಿಷಯದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಜೆಪಿ ನಾಯಕರು ಸಮೀಕ್ಷೆ ಅಂಶಗಳನ್ನು ಆಧರಿಸಿ ಸಿಪಿವೈಗೆ ಟಿಕೆಟ್ ನೀಡುವ ಅಗತ್ಯದ ಕುರಿತು, ಮಿತ್ರಪಕ್ಷದವರಿಗೂ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದಾರೆ. ಕ್ಷೇತ್ರದಲ್ಲಿನ ವಾಸ್ತವಾಂಶ ಹಾಗೂ ಟಿಕೆಟ್ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಕ್ಷೇತ್ರದಲ್ಲಿ ಪಕ್ಷ ಪ್ರತಿಷ್ಠೆ ಬದಿಗಿಟ್ಟು ಗೆಲುವಿನ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಜೆಡಿಎಸ್‌ಗೆ ಎದುರಾಗಿದೆ.

ಡಿಕೆಶಿ ಹಿಮ್ಮೆಟ್ಟಿಸುವ ಸವಾಲು: ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಕ್ಷೇತ್ರದ ಮೇಲೆ ಈಗಾಗಲೇ ಅವರ ರಾಜಕೀಯ ಎದುರಾಳಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಣ್ಣಿಟ್ಟಿದ್ದಾರೆ. ‘ನಾನೇ ಅಭ್ಯರ್ಥಿ’ ಎಂದು ಹೇಳಿಕೊಂಡು ಓಡಾಡುತ್ತಿರುವ ಡಿಕೆಶಿ ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ.

ಜನಸ್ಪಂದನ ಕಾರ್ಯಕ್ರಮ, ನಿವೇಶನ ಹಂಚಿಕೆ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ, ಉದ್ಯೋಗ ಮೇಳದಂತಹ ಸರಣಿ ಕಾರ್ಯಕ್ರಮಗಳನ್ನು ಮಾಡುತ್ತಾ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಚುನಾವಣಾ ಉಸ್ತುವಾರಿಗೆ ಹೋಬಳಿಗೆ ಒಬ್ಬೊಬ್ಬ ಶಾಸಕರನ್ನು ನಿಯೋಜಿಸಿ ಗೆಲುವಿಗೆ ತಂತ್ರ ಹೆಣೆಯುತ್ತಿದ್ದಾರೆ.

ಕ್ಷೇತ್ರದಲ್ಲಿ ಕುಮಾರಸ್ವಾಮಿ ಹೊರತುಪಡಿಸಿದರೆ ಬೇರೆ ಯಾರೇ ಸ್ಪರ್ಧಿಸಿದರೂ ಗೆಲುವಿನ ಸಾಧ್ಯತೆ ಕಡಿಮೆ ಎಂಬ ಮಾತುಗಳು ಉಭಯಪಕ್ಷಗಳಲ್ಲಿ ಕೇಳಿ ಬರುತ್ತಿವೆ. ಕ್ಷೇತ್ರವನ್ನು ತನ್ನ ರಾಜಕೀಯ ಎದುರಾಳಿಗೆ ಬಿಡದೆ ತನ್ನಲ್ಲೇ ಹಿಡಿದಿಟ್ಟುಕೊಳ್ಳಬೇಕಾದರೆ ಸಿಪಿವೈ ಆಯ್ಕೆಯೊಂದೇ ಜೆಡಿಎಸ್‌ಗೆ ಅನಿವಾರ್ಯ ಎಂಬಂತಾಗಿದೆ.

ಸಮೀಕ್ಷೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಯೋಗೇಶ್ವರ್ ಅವರಲ್ಲಿ ಮತ್ತೆ ಟಿಕೆಟ್ ಆಸೆ ಚಿಗುರಿಸಿದೆ. ಎರಡು ದಿನಗಳ ಹಿಂದೆ ರಾಮನಗರದಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರ ಕಚೇರಿ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಅವರು, ‘ನೂರಕ್ಕೆ ನೂರರಷ್ಟು ನನಗೇ ಟಿಕೆಟ್ ಸಿಗಲಿದೆ. ಮಂಜುನಾಥ್ ದಂಪತಿ ಸಹ ನನ್ನ ಪರವಾಗಿದ್ದಾರೆ’ ಎಂದು ನಗುಮೊಗದಿಂದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.

ಕ್ಷೇತ್ರ ತೆರವಾದಾಗಿನಿಂದಲೂ ಉಭಯ ಪಕ್ಷಗಳಲ್ಲಿ ಟಿಕೆಟ್ ರಾಜಕೀಯವು ಹಲವು ಏರಿಳಿತಗಳನ್ನು ಕಾಣುತ್ತಲೇ ಇದೆ. ಚುನಾವಣಾ ದಿನಾಂಕ ಘೋಷಣೆಯ ಹೊತ್ತಿಗೆ ಮತ್ಯಾವ ತಿರುವುಗಳನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನಿಖಿಲ್ ಪಂಚಾಯಿತಿ ಪ್ರವಾಸ

ಟಿಕೆಟ್‌ಗೆ ಸಂಬಂಧಿಸಿದ ಬೆಳವಣಿಗೆಗಳ ಮಧ್ಯೆಯೇ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಕಳೆದ ವಾರ ಎರಡು ದಿನ ಹೋಬಳಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಕ್ಷೇತ್ರ ಸುತ್ತಿದ್ದ ನಿಖಿಲ್ ಮಂಗಳವಾರವೂ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಅಕ್ಕೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ಅಕ್ಕೂರು ಬಾಣಗಹಳ್ಳಿ ಹಾಗೂ ಸೋಗಾಲ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪಕ್ಷದ ಮುಖಂಡರೊಂದಿಗೆ ನಿಖಿಲ್ ಸಭೆ ನಡೆಸಿ ಚುನಾವಣೆಗೆ ಅಣಿಗೊಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT