ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌ಎಸ್‌ಎಸ್‌ ಕಾರ್ಯಕರ್ತರಿಂದ ಹಣ ವಸೂಲಿ: ಕುಮಾರಸ್ವಾಮಿ ಆರೋಪ

Published : 16 ಅಕ್ಟೋಬರ್ 2021, 12:10 IST
ಫಾಲೋ ಮಾಡಿ
Comments

ರಾಮನಗರ: ಸರ್ಕಾರವು ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಸಿಂಡಿಕೇಟ್‌ ಸದಸ್ಯರನ್ನಾಗಿ ನೇಮಿಸಿದ್ದು, ಯಾವುದೇ ಕೆಲಸ ಆಗಬೇಕಾದರೂ 1–2 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಶನಿವಾರ ಚನ್ನಪಟ್ಟಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘40 ವರ್ಷದ ಹಿಂದಿನ ಆರ್‌ಎಸ್‌ಎಸ್ ಬೇರೆ, ಈಗಿನ ಸಂಘಟನೆಯೇ ಬೇರೆ. ನಾವೇನು ಇವರಿಗೆ ದೇಶ ಒಡೆಯಲು ಗುತ್ತಿಗೆ ಕೊಟ್ಟಿಲ್ಲ. ಎಲ್ಲ ಹಿಂದು ದೇಗುಲಗಳನ್ನು ನಮ್ಮ ಸುಪರ್ದಿಗೆ ಕೊಡಿ ಎಂದು ಮೋಹನ್ ಭಾಗವತ್‌ ಕೇಳಿದ್ದಾರೆ. ಆದರೆ ಹಿಂದೆ ಹಿಂದು ಹೆಸರಿನಲ್ಲಿ ಸಂಗ್ರಹವಾದ ದೇಣಿಗೆಗಳ ಲೆಕ್ಕ ಮಾತ್ರ ಕೊಡುತ್ತಿಲ್ಲ. 1989–1991ರ ನಡುವೆ ಅಡ್ವಾಣಿಯವರು ರಥಯಾತ್ರೆ ಮಾಡಿ ಸಂಗ್ರಹಿಸಿದ ಹಣ ಏನಾಯಿತು. ಆ ಹಣ ಎಲ್ಲಿದೆ. ಈಚೆಗೆ ಸಂಗ್ರಹಿಸಿದ ಹಣದ ಲೆಕ್ಕ ಎಲ್ಲಿ’ ಎಂದು ಅವರು ಪ್ರಶ್ನಿಸಿದರು.

‘ಅವರಿವರು ಕಟ್ಟಿದ ದೇವಸ್ಥಾನಗಳ ಆದಾಯವನ್ನು ಆರ್‌ಎಸ್‌ಎಸ್ ಪಡೆಯಲು ಹುನ್ನಾರ ನಡೆಸಿದೆ. ರಾಮಮಂದಿರ ಹಣದ ವಿಚಾರದಲ್ಲಿ ಶೇ 200ರಷ್ಟು ಲೋಪ ಆಗಿದೆ. ರಾಮನ ಹೆಸರಿನಲ್ಲಿ ಅಮಾಯಕರಿಂದ ಹಣ ವಸೂಲಿ ಮಾಡಲಾಗಿದೆ’ ಎಂದು ಹೇಳಿದರು.

ಸ್ಪಷ್ಟನೆ: ಸಿದ್ದರಾಮಯ್ಯ ವಿರುದ್ಧ ತಮ್ಮ ಸರಣಿ ಟ್ವೀಟ್ ಕುರಿತು ಸ್ಪಷ್ಟನೆ ನೀಡಿದ ಕುಮಾರಸ್ವಾಮಿ ‘ನಾನು ಅಲ್ಪಸಂಖ್ಯಾತರ ಮೇಲೆ ನಡೆದ ರಾಜಕೀಯ ನರಮೇಧದ ಕುರಿತು ಹೇಳಿದ್ದೇನೆ ಹೊರತು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಹೇಳಿಲ್ಲ. ರಾಜಕೀಯ ಕಿರಾತಕ ಬುದ್ದಿ ಹೇಗೆ ನಡೆಯಿತು ಎಂಬುದರ ಬಗ್ಗೆ ಹೇಳಿದ್ದೇನೆ ಅಷ್ಟೇ ಎಂದರು.

‘ಅಲ್ಪಸಂಖ್ಯಾತರನ್ನು ಜೆಡಿಎಸ್‌ ಬಳಸಿಕೊಳ್ಳುತ್ತಿದೆ ಎನ್ನುತ್ತೀರಿ. ಆದರೆ ಕಾಂಗ್ರೆಸ್‌ನವರು ಸಿ.ಎಂ. ಇಬ್ರಾಹಿಂರನ್ನು ಕೇವಲ ಭಾಷಣಕ್ಕೆ ಸೀಮಿತ ಮಾಡಿದರು. ರೋಷನ್‌ ಬೇಗ್‌ ಇವರ ವಿರುದ್ಧ ಮಾತನಾಡಿದ್ದಕ್ಕೆ ಅಮಾನತು ಮಾಡಿದರು. ಜಾಫರ್ ಷರೀಫ್‌ ಮೊಮ್ಮಗ ಸೋಲಲು ಯಾರು ಕಾರಣ? ತನ್ವೀರ್ ಸೇಠ್ ವಿರುದ್ಧ ಇವರು ಯಾವ ಪದ ಬಳಕೆ ಮಾಡಿದ್ದರು’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT