ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ವ್ಯಾಪಿಸಿರುವ ಹಳೆ ಮತ್ತು ಹೊಸ ಟ್ರ್ಯಾಕ್ಟರ್‌ಗಳ ನೋಂದಣಿ ಮಾಡುವ ಅಕ್ರಮ ಜಾಲ

ಗ್ರಂಥಾಲಯದಲ್ಲಿ ಕುಳಿತು ಆರೋಪಿಗಳಿಂದ ಅಕ್ರಮ; ಕಂದಾಯ ಇಲಾಖೆ ಅಧಿಕಾರಿಗಳು ಭಾಗಿ
Published 29 ಜೂನ್ 2024, 20:35 IST
Last Updated 29 ಜೂನ್ 2024, 20:35 IST
ಅಕ್ಷರ ಗಾತ್ರ

ರಾಮನಗರ: ಹಳೆ ಮತ್ತು ಹೊಸ ಟ್ರ್ಯಾಕ್ಟರ್‌ಗಳಿಗೆ ಅಕ್ರಮವಾಗಿ ನಕಲಿ ದಾಖಲೆ ಮತ್ತು ಬೋನಫೈಡ್ ಪ್ರಮಾಣಪತ್ರ ಸೃಷ್ಟಿಸಿ ಹೊಸ ನೋಂದಣಿ ಸಂಖ್ಯೆ ನೀಡಿ ಹಣ ಮಾಡುತ್ತಿದ್ದ ಜಾಲವು ಕೇವಲ ರಾಮನಗರವಷ್ಟೇ ಅಲ್ಲದೆ, ಇಡೀ ರಾಜ್ಯವನ್ನು ವ್ಯಾಪಿಸಿರುವುದು ಲೋಕಾಯುಕ್ತ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.

ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿರುವ ಜಾಲದಲ್ಲಿ ಆರ್‌ಟಿಒ ಇಲಾಖೆಯ ಅಧಿಕಾರಿಗಳು ಮತ್ತು ದಲ್ಲಾಳಿ ಮಾತ್ರವಲ್ಲದೆ, ಕಂದಾಯ ಇಲಾಖೆ ಅಧಿಕಾರಿಗಳು ಸಹ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ, ಪೊಲೀಸರು ತಮ್ಮ ತನಿಖೆ ವ್ಯಾಪ್ತಿಯನ್ನು ಕಂದಾಯ ಇಲಾಖೆ ಜೊತೆಗೆ ಇತರ ಜಿಲ್ಲೆಗಳಿಗೂ ವಿಸ್ತರಿಸಲು ಸಿದ್ಧತೆ ನಡೆಸಿದ್ದಾರೆ.

ವಶಕ್ಕೆ ಪಡೆಯಲು ತಯಾರಿ: ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ರಾಮನಗರ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಕುಮಾರ್, ಪ್ರಥಮ ದರ್ಜೆ ಸಹಾಯಕ ರಚಿತ್ ರಾಜ್ ಹಾಗೂ ದಲ್ಲಾಳಿ ಟ್ರಾಕ್ಟರ್‌ ಸತೀಶನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಬೇಕಿದೆ. ಅದಕ್ಕಾಗಿ, ಸೋಮವಾರ ಮೂವರನ್ನು ತಮ್ಮ ವಶಕ್ಕೆ ಪಡೆಯಲು ತಯಾರಿ ನಡೆಸಲು ತಯಾರಿ ಮಾಡಿಕೊಂಡಿದ್ದೇವೆ’ ಎಂದು ಲೋಕಾಯುಕ್ತ ಎಸ್‌ಪಿ ಡಾ. ಕೆ. ವಂಶಿಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಾಳಿ ವೇಳೆ ರಾಮನಗರ ಕಚೇರಿಯಲ್ಲಿ ರಾತ್ರಿ 2 ಗಂಟೆಯವರೆಗೆ ಶೋಧ ಕಾರ್ಯ ನಡೆಸಿದ್ದು, ಅಕ್ರಮಕ್ಕೆ ಸಂಬಂಧಿಸಿದಂತೆ ಸುಮಾರು 3 ಸಾವಿರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳ ಈ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಜಾಲದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ನಿಖರವಾಗಿ ಅಂದಾಜಿಸಲಾಗುತ್ತಿದೆ’ ಎಂದು ಹೇಳಿದರು.

ಕೃಷಿ ಬಳಕೆ ಹೆಸರಲ್ಲೇ ನೋಂದಣಿ: ಜಮೀನು ಹೊಂದಿರುವ ರೈತರಿಗೆ ಉಳುಮೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಟ್ರಾಕ್ಟರ್ ಖರೀದಿಸಿದಾಗ ಅವರಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಅದಕ್ಕಾಗಿ, ರೈತರು ತಮ್ಮ ಜಮೀನಿನ ಪಹಣಿ ಪತ್ರವನ್ನು ತಹಶೀಲ್ದಾರ್ ಕಚೇರಿಗೆ ಸಲ್ಲಿಸಿ, ಅವರಿಂದ ಬೋನಫೈಡ್ (ಕಾನೂನಾತ್ಮಕ ದೃಢೀಕರಣ) ಪ್ರಮಾಣಪತ್ರ ಸಲ್ಲಿಸಬೇಕು. ನೋಂದಣಿ ಸಮಯದಲ್ಲಿ ಈ ಪ್ರಮಾಣಪತ್ರ ಸಲ್ಲಿಸಿದರೆ ಮಾತ್ರ ತೆರಿಗೆ ವಿನಾಯಿತಿ ಸಿಗಲಿದೆ. ಇ್ಲಲದಿದ್ದರೆ, ವ್ಯವಸಾಯೇತರ ಚಟುವಟಿಕೆಗೆಂದು ನೋಂದಣಿಯಾಗುವ ಟ್ರಾಕ್ಟರ್‌ಗೆ ಅಧಿಕ ಶುಲ್ಕದ ಜೊತೆಗೆ, ಕಾಲಕಾಲಕ್ಕೆ ಇತರ ತೆರಿಗೆ ಮತ್ತು ಶುಲ್ಕ ಕಟ್ಟಬೇಕು. ಆದರೆ, ಬೋನಫೈಡ್ ಪ್ರಮಾಣಪತ್ರ ಇದ್ದರೆ ಇದ್ಯಾವುದೂ ಅನ್ವಯವಾಗುವುದಿಲ್ಲ.

ಆರೋಪಿಗಳು ಬಹುತೇಕ ಟ್ರಾಕ್ಟರ್‌ಗಳಿಗೆ ನಕಲಿ ಬೋನಫೈಡ್ ಪ್ರಮಾಣಪತ್ರ ಸೃಷ್ಟಿಸಿ ನೋಂದಣಿ ಮಾಡಿದ್ದಾರೆ. ಇದಕ್ಕಾಗಿ ತಹಶೀಲ್ದಾರ್ ಸಹಿ ಕೂಡ ನಕಲಿ ಮಾಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ಎಸಗಿರುವುದಕ್ಕೆ ಕಂದಾಯ ಇಲಾಖೆಯಲ್ಲಿರುವವರು ಸಹ ಕೈ ಜೋಡಿಸಿರುವ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ.

ದಲ್ಲಾಳಿ ಟ್ರಾಕ್ಟರ್ ಸತೀಶ್ ಜಾಲದ ಮಾಸ್ಟರ್‌ಮೈಂಡ್ ಎನ್ನಲಾಗಿದೆ. ಈತನೇ ವಿವಿಧ ಜಿಲ್ಲೆಗಳಲ್ಲಿ ಸಂಪರ್ಕ ಸಾಧಿಸಿ ಟ್ರಾಕ್ಟರ್‌ಗಳನ್ನು ರಾಮನಗರದಲ್ಲಿ ಆರ್‌ಟಿಒದಲ್ಲಿ ನೋಂದಣಿ ಮಾಡಿಸುವಂತೆ ಮನವೊಲಿಸುತ್ತಿದ್ದ. ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿರುವ ಗ್ರಂಥಾಲಯದಲ್ಲಿ ನಕಲಿ ಬೋನಫೈಡ್ ಪ್ರಮಾಣಪತ್ರ ತಯಾರಿಸವು ಜೊತೆಗೆ, ಆರ್‌ಟಿಒ ಕಚೇರಿ ಅಧಿಕಾರಿಗಳ ಲಾಗಿನ್ ಬಳಸಿ ನೋಂದಣಿ ಪೂರ್ಣಗೊಳಿಸಲಾಗುತ್ತಿತ್ತು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ರಾಮನಗರ ಆರ್‌ಟಿಒ ಕಚೇರಿಯಲ್ಲಿ ಟ್ರಾಕ್ಟರ್‌ಗಳ ಅಕ್ರಮ ನೋಂದಣಿ ಜಾಲ ಪತ್ತೆಯಾಗಿರುವ ಬೆನ್ನಲ್ಲೇ, ಲೋಕಾಯುಕ್ತ ಪೊಲೀಸರು ಬೇರೆ ಜಿಲ್ಲೆಗಳ ಆರ್‌ಟಿಒ ಕಚೇರಿಗಳಲ್ಲಿ ಪರಿಶೀಲನೆ ನಡೆಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ನೋಂದಣಿಯಾಗಿರುವ ಟ್ರಾಕ್ಟರ್‌ಗಳ ಮೊದಲ ತಾತ್ಕಾಲಿಕ ವಿಳಾಸಗಳ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Quote - ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಅಕ್ರಮ ನೋಂದಣಿ ಜಾಲವು ಸೃಷ್ಟಿಸುತ್ತಿದ್ದ ನಕಲಿ ಬೋನಫೈಡ್ ಪ್ರಮಾಣಪತ್ರದಲ್ಲಿ ಕಂದಾಯ ಇಲಾಖೆಯವರು ಸಹ ಭಾಗಿಯಾಗಿರುವ ಅನುಮಾನವಿದೆ. ಆ ದಿಕ್ಕಿನಲ್ಲೂ ತನಿಖೆ ನಡೆಸಲಾಗುವುದು – ಕೆ. ವಂಶಿಕೃಷ್ಣ ಲೋಕಾಯುಕ್ತ ಎಸ್‌ಪಿ ರಾಮನಗರ

ಒಂದೇ ಟ್ರಾಕ್ಟರ್ ಎರಡು ವಿಳಾಸದಲ್ಲಿ ನೋಂದಣಿ

ಮೊದಲಿಗೆ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಬೇರೆ ಕಡೆ ತಾತ್ಕಾಲಿಕವಾಗಿ ನೋಂದಣಿಯಾಗಿರುವ ಟ್ರಾಕ್ಟರ್‌ ಅನ್ನು ಕೆಲ ವರ್ಷಗಳ ಬಳಿಕ ರಾಮನಗರದಲ್ಲಿ ಅದೇ ವ್ಯಕ್ತಿ ಹೆಸರಿನ ನಕಲಿ ವಿಳಾಸದ ದಾಖಲೆ ಸೃಷ್ಟಿಸಿ ನೋಂದಣಿ ಮಾಡಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ಆರ್‌ಟಿಒದಲ್ಲಿ ಶಿವಾನಂದಮೂರ್ತಿ ಎಂಬಾತನ ಹೆಸರಿನಲ್ಲಿ 2018ರಲ್ಲಿ ನೋಂದಣಿಯಾಗಿದ್ದ ಟ್ರಾಕ್ಟರ್‌ ಅನ್ನು 2024ರಲ್ಲಿ ರಾಮನಗರ ತಾಲ್ಲೂಕಿನ ನಕಲಿ ವಿಳಾಸದಲ್ಲಿ ಬೇರೆ ಸಂಖ್ಯೆಯೊಂದಿಗೆ ನೋಂದಣಿ ಮಾಡಲಾಗಿದೆ. ಎಲ್ಲಾ ನೋಂದಣಿಗಳಿಗೂ ನಕಲಿ ಬೋನಫೈಡ್ ಪ್ರಮಾಣಪತ್ರ ಸೃಷ್ಟಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಇದೇ ರೀತಿ ಮಂಡ್ಯ ಮೈಸೂರು ಉತ್ತರಕನ್ನಡ ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು ಸೇರಿದಂತೆ ವಿವಿಧ ಭಾಗದಲ್ಲಿ ಮೊದಲಿಗೆ ತಾತ್ಕಾಲಿಕವಾಗಿ ನೋಂದಣಿಯಾಗಿದ್ದ ಟ್ರಾಕ್ಟರ್‌ಗಳಿಗೆ ನಂತರ ನಕಲಿ ದಾಖಲೆ ಸೃಷ್ಟಿಸಿ ಸ್ಥಳೀಯ ನಕಲಿ ವಿಳಾಸದಲ್ಲಿ ನೋಂದಣಿ ಮಾಡಿಸಲಾಗಿದೆ. ಇದಕ್ಕಾಗಿ ಟ್ರಾಕ್ಟರ್‌ ಮಾಲೀಕರಿಂದ ಆರೋಪಿಗಳು ಹಣ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT