ಶುಕ್ರವಾರ, 5 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಹವಾಲು ಅರ್ಜಿ; ವಾರದೊಳಗೆ ಕ್ರಮಕ್ಕೆ ಸೂಚನೆ

ತಾಲ್ಲೂಕು ಕಚೇರಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಜನಸ್ಪಂದನ ಕಾರ್ಯಕ್ರಮ
Published 3 ಜುಲೈ 2024, 5:02 IST
Last Updated 3 ಜುಲೈ 2024, 5:02 IST
ಅಕ್ಷರ ಗಾತ್ರ

ರಾಮನಗರ: ‘ತಾಲ್ಲೂಕು ಕೇಂದ್ರದಲ್ಲಿ ಮೊದಲ ಸಲ ಆಯೋಜಿಸಿರುವ ಜನಸ್ಪಂದನ ಸಭೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಸಾರ್ವಜನಿಕರು ಎದುರಿಸುತ್ತಿರುವ ಹಲವು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ವಿವಿಧ ಸಮಸ್ಯೆಗಳ ಕುರಿತು ಜನರು ಸಲ್ಲಿರುವ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ವಾರದೊಳಗೆ ಇತ್ಯರ್ಥಪಡಿಸಬೇಕು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಸೂಚನೆ ನೀಡಿದರು.

ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ‘ನಮ್ಮೆಲ್ಲರ ಬದುಕು ನಿಂತಿರುವುದು ರೈತರ ಮೇಲೆ. ಅವರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕು. ನೀವು ಕೆಲಸ ಮಾಡಿ ಕೊಡದಿದ್ದರೆ ಜನ ಕೆಟ್ಟದಾಗಿ ಮಾತನಾಡುತ್ತಾರೆ. ಅಧಿಕಾರಿಗಳ ಬಗ್ಗೆ ಆ ರೀತಿ ಮಾತನಾಡಿದಾಗ ನಾನು ಅದನ್ನು ಸಹಿಸುವುದಿಲ್ಲ’ ಎಂದರು.

‘ನೀವು ಸರಿಯಾಗಿ ಮಾಡುವ ಕೆಲಸಕ್ಕೆ ನಾನು ಸದಾ ಸಹಕಾರ ಕೊಡುತ್ತೇನೆ. ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ಆಗಬೇಕು. ಅಧಿಕಾರಿಗಳು ಆ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಜನರು ತಮ್ಮ ಕೆಲಸ ಬಿಟ್ಟು ನಿತ್ಯ ನಿಮ್ಮ ಕಚೇರಿಗಳಿಗೆ ಅಲೆಯುವಂತೆ ಮಾಡಬೇಡಿ. ಅಂತಹ ವಿಷಯ ನನ್ನ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳುವೆ’ ಎಂದು ಎಚ್ಚರಿಕೆ ನೀಡಿದರು.

‘ಅಧಿಕಾರಿಗಳು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಸ್ಮಶಾನ ಮತ್ತು ನಿವೇಶನಗಳ ಹಂಚಿಕೆ ಮಾಡಲು ನಿಮ್ಮ ಕಂದಾಯ ವೃತ್ತಗಳಲ್ಲಿ ಇರುವ ಸರ್ಕಾರಿ ಜಮೀನು ಗುರುತಿಸುವ ಕೆಲಸ ಮಾಡಿ ಎಂದು ಹೇಳಿದ್ದೆ. ಆದರೆ, ಇನ್ನೂ ಮಾಡಿಲ್ಲ ಏಕೆ?’ ಎಂದು ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಕ್ಷೇತ್ರಕ್ಕೆ ಮೂರು ಸಾವಿರ ಮನೆಗಳು ಮಂಜೂರಾಗಿವೆ. ಕೆಲವರು ನಿವೇಶನವಿಲ್ಲದೆ ಮನೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಜಾಗ ಗುರುತಿಸಿ ನಿವೇಶನ ನೀಡಿದರೆ ಅವರು ಮನೆ ಕಟ್ಟುವ ಕೆಲಸಕ್ಕೆ ನಾವೆಲ್ಲರೂ ನೆರವಾಗಬಹುದಾಗಿದೆ. ನಾನು ಈ ಜಿಲ್ಲೆಯ ಮಗ. ನನಗೆ ಸಾಕಷ್ಟು ಜವಾಬ್ದಾರಿ ಇದೆ. ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಇದಕ್ಕೆ ನಿಮ್ಮ ಸಹಕಾರವಿರಲಿ’ ಎಂದರು.

‘ನಗರ ಪ್ರದೇಶ ಸೇರಿದಂತೆ ತಾಲ್ಲೂಕಿನಲ್ಲಿ 27 ಕಿ.ಮೀ. ಡಾಂಬರೀಕರಣ ಮಾಡಿಸಿದ್ದೇನೆ. ಚನ್ನಮಾನಹಳ್ಳಿ ಸೇತುವೆವರೆಗೆ, ಹಳೆ ಬಸ್ ನಿಲ್ದಾಣ, ಕೆಂಪೇಗೌಡ ವೃತ್ತ ಮತ್ತು ಮಣ್ಣಿನಿಂದ ಕೂಡಿರುವ ಪಟ್ಟಣದ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುವುದು. ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಕ್ರಮ ವಹಿಸುತ್ತೇನೆ’ ಎಂದು ತಿಳಿಸಿದರು.

ಸಭೆಯಲ್ಲಿ ಉಪ ತಹಸೀಲ್ದಾರ್ ಶಂಕರ್, ತಾಲ್ಲೂಕು ಪಂಚಾಯಿತಿ ಇಒ ಪ್ರದೀಪ್, ಎಡಿಎಲ್‍ಆರ್ ಸಚಿನ್, ರಾಜಸ್ವ ನಿರೀಕ್ಷಕರಾದ ನಾಗರಾಜು, ರಾಜಶೇಖರ್, ಪುಟ್ಟರಾಜು, ಚಂದ್ರಶೇಖರ್, ಸರ್ವೆಯರ್ ಪ್ರಭಾಕರ್, ಗ್ರಾಮ ಲೆಕ್ಕಾಧಿಕಾರಿಗಳಾದ ಮುಭಾರಕ್, ಪರಮೇಶ್, ಉಮಾ, ಮೋಹನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಅಹವಾಲುಗಳ ಸರಮಾಲೆ

ಜನಸ್ಪಂದನ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರವೇಶ ಕೊಡಿಸಿ ಜಮೀನಿಗೆ ಸಾಗುವಳಿ ಪತ್ರ ಕೊಟ್ಟಿಲ್ಲ ಜಮೀನಿನ ಖಾತೆ ಆಗಿಲ್ಲ ಪಿಂಚಣಿ ಬರುತ್ತಿಲ್ಲ ರೇಷನ್ ಕಾರ್ಡ್ ಬೇಕಿದೆ ಮನೆ ನಿರ್ಮಾಣಕ್ಕೆ ಅನುದಾನ ಕೊಡಿ ಪೌತಿ ಖಾತೆ ಆಗಿಲ್ಲ ತೊರೆ ದಾರಿ ಸ್ಕೆಚ್ ಕೊಡಿಸಿ ಎಂಬುದು ಸೇರಿದಂತೆ ವಿವಿಧ ರೀತಿಯ ಅಹವಾಲುಗಳನ್ನು ಜನರು ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT