ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಿದ್ದ: ಡಿಸಿಎಂ ಡಿ.ಕೆ ಶಿವಕುಮಾರ್

Published : 7 ಸೆಪ್ಟೆಂಬರ್ 2024, 16:01 IST
Last Updated : 7 ಸೆಪ್ಟೆಂಬರ್ 2024, 16:01 IST
ಫಾಲೋ ಮಾಡಿ
Comments

ರಾಮನಗರ: ಕಾವೇರಿ ನದಿ ತೀರದ ಜನರ ಬದುಕು ಹಸನುಗೊಳಿಸಲು ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುವಂತೆ ಮೇಕೆದಾಟು ಯೋಜನೆ ರಾಜ್ಯಕ್ಕೆ ಅನಿವಾರ್ಯವಾಗಿದೆ, ನ್ಯಾಯಾಲಯದಲ್ಲಿ ಹೋರಾಟ ಮಾಡಿಯಾದರೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಕನಕಪುರ ತಾಲ್ಲೂಕಿನ ಹಾರೋಬೆಲೆ ಹತ್ತಿರದ ಮೂಲೆಗುಂದಿಯಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತದಿಂದ ಅರ್ಕಾವತಿ ಜಲಾಶಯ ಬಲದಂಡೆ ಏತ ನೀರಾವರಿ ಯೋಜನೆಯ ಪುನಃಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿ ಅವರು ಮಾತನಾಡಿದರು.

ಮೇಕೆದಾಟು ಯೋಜನೆ ರಾಜ್ಯಕ್ಕೆ ಬೇಕು, ನ್ಯಾಯಾಲಯದಲ್ಲಿ ಹೋರಾಟ ಮಾಡಿಯಾದರೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧವಿದೆ ಈ ಯೋಜನೆ ಅನುಷ್ಠಾನದಿಂದ ಜಿಲ್ಲೆಯ 550 ರಿಂದ 600 ಎಕರೆ ಜಮೀನು ಮುಳುಗಡೆ ಆಗಬಹುದು. ಅವರಿಗೆ ಪರ್ಯಾಯ ಜಮೀನು ನೀಡಲಾಗುವುದು ಅಥವಾ ಕಳೆದುಕೊಳ್ಳುವ ಜಮೀನಿಗೆ ಉತ್ತಮ ಬೆಲೆ ನೀಡಲಾಗುವುದು, ಕೆಲವೆಡೆ ಅರಣ್ಯ ಪ್ರದೇಶವು ಮುಳುಗಡೆಯಾಗಬಹುದು, ಮಡಿವಾಳ ಹಾಗೂ ಸಂಗಮಕ್ಕೂ ತೊಂದರೆ ಆಗಬಹುದಾಗಿದೆ ಆದರೂ ರಾಜ್ಯದ ಹಿತ ದೃಷ್ಟಿಯಿಂದ ಈ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಅರ್ಕಾವತಿ ಜಲಾಶಯ ಬಲದಂಡೆ ಏತ ನೀರಾವರಿ ಯೋಜನೆಯ ಆರಂಭದಿಂದಲೂ ತಾವು ಸಾಕಷ್ಟು ಶ್ರಮಿಸಿರುವುದಾಗಿ ತಿಳಿಸಿದ ಉಪಮುಖ್ಯಮಂತ್ರಿಗಳು, ಈ ಯೋಜನೆಯ ಅನುಷ್ಠಾನದಲ್ಲಿ ಭೂಮಿ ಕಳೆದುಕೊಂಡವರಿಗೆ ಉತ್ತಮ ಪರಿಹಾರ ಕಲ್ಪಿಸಿಕೊಡಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಅವರು ಪ್ರಯತ್ನಿಸಿದ್ದರು, ಈ ಯೋಜನೆಯ ಲಾಭ ಪಡೆಯುತ್ತಿರುವವರು ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು. ಈ ಯೋಜನೆಯಿಂದ ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿದ್ದು, ಕೃಷಿ, ಹೈನುಗಾರಿಕೆಗೆ ಉಪಯುಕ್ತವಾಗಿದೆ ಎಂದು ಹೇಳಿದರು.

ಶಿಂಷಾದಿಂದ ಸಾತನೂರು ಹೋಬಳಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ, ಹರಿಹರದ ಕೆಂಪೇಗೌಡನ ದೊಡ್ಡಿ ಕೆರೆ, ದೊಡ್ಡಾಲಳ್ಳಿಗೆ ಕೆರೆಗೂ ಕೂಡ ನೀರು ತುಂಬಿಸಲು ಯತ್ನಿಸಲಾಗುತ್ತಿದೆ, ಕೈಲಾಂಚ ಹೋಬಳಿ ಸೇರಿದಂತೆ ಮಾಗಡಿ, ಚನ್ನಪಟ್ಟಣ ಮಾಥೂರು ಕೆರೆಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆ ಸಿ ವ್ಯಾಲಿ ಯಿಂದ ನೀರು ಪೂರೈಸಲಾಗುತ್ತಿದೆ, ಅದರಿಂದಾಗಿ ಅಲ್ಲಿನ ಜನ ಕೃಷಿ ಚಟುವಟಿಕೆ ನಿರ್ವಹಿಸುತ್ತಿದ್ದಾರೆ, ಎತ್ತಿನಹೊಳೆ ಯೋಜನೆಯಿಂದ ಅವರಿಗೆ ಕುಡಿಯುವ ನೀರು ಪೂರೈಸಲಾಗುವುದು, ಅದಕ್ಕೆ ಅದಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಇನ್ನು ಮುಂದೆ ಕನಕಪುರ ತಾಲೂಕಿಗೆ ನಿಯಮಿತವಾಗಿ ಭೇಟಿ ನೀಡುವುದಾಗಿ ತಿಳಿಸಿದ ಉಪಮುಖ್ಯಮಂತ್ರಿಗಳು, ಕನಕಪುರ ತಾಲೂಕಿನ ಹೋಬಳಿ ಹೋಬಳಿ ಕೇಂದ್ರಗಳಿಗೂ ಆಗಮಿಸಿ ಸಾರ್ವಜನಿಕರ ಅಹವಾಲು ಆಲಿಸಲಾಗುವುದು ಎಂದರು.

ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರವು ಜನ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಪ್ರತಿಯೊಂದು ಕುಟುಂಬಕ್ಕೆ 5000ಕ್ಕೂ ಹೆಚ್ಚು ಮೊತ್ತ ಪಾವತಿಯಾಗುವ ಉಚಿತ ಯೋಜನೆಗಳನ್ನು ನೀಡುತ್ತಿದೆ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 20 ಸಾವಿರ ಕೋಟಿಗಳನ್ನು ಭರಿಸುತ್ತಿದೆ, ಅದರಂತೆ ಒಟ್ಟಾರೆ ವಿವಿಧ ಯೋಜನೆಗಳಡಿ 80 ರಿಂದ 90 ಸಾವಿರ ಕೋಟಿ ರೂಗಳನ್ನು ಸರ್ಕಾರ ಉಚಿತ ಯೋಜನೆಗಳಿಗೆ ವಿನಿಯೋಗಿಸುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT