ಕೈಗಾರಿಕೆ ಹಾಗೂ ಒಳಚರಂಡಿ ತ್ಯಾಜ್ಯ ಸೇರಿಕೊಂಡು ರಾಜ್ಯದಲ್ಲಿ 16 ಪ್ರಮುಖ ನದಿಗಳು ಕಲುಷಿತಗೊಂಡಿವೆ ಎಂದು ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ವಿಶೇಷವೆಂದರೆ ಆ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಜೀವ ನದಿಗಳಾದ ತುಂಗಾ ಹಾಗೂ ಭದ್ರೆಯೂ ಸೇರಿದೆ. ಸರ್ಕಾರವೇ ಕೊಟ್ಟಿರುವ ಈ ಅಧಿಕೃತ ಮಾಹಿತಿಯಿಂದಾಗಿ ಶಿವಮೊಗ್ಗದ ಒಂದಷ್ಟು ಸಹೃದಯರು ಸೇರಿ ಕೈಗೆತ್ತಿಕೊಂಡಿರುವ ‘ತುಂಗಾ ಉಳಿಸಿ’ (ನಿರ್ಮಲ ತುಂಗಾ) ಅಭಿಯಾನ, ಸ್ವಚ್ಛ ತುಂಗಾ ಸಂಘಟನೆಗಳ ಕೂಗಿಗೆ ಈಗ ಮತ್ತೆ ಜೀವ ಬಂದಿದೆ. ಪಾನಕ್ಕೆ ಅನ್ವರ್ಥವಾಗಿದ್ದ ತುಂಗೆ ಈಗ ಮಲಿನಗೊಂಡಿದ್ದು, ಗಂಟಲ ಪಸೆಯ ದಾಹ ನೀಗಿಸಲು ಯೋಗ್ಯಳಾಗಿಲ್ಲ. ಆಕೆಯನ್ನು ಮತ್ತೆ ಮಲಿನಮುಕ್ತಗೊಳಿಸುವ ದೊಡ್ಡ ಜವಾಬ್ದಾರಿ ನದಿಯನ್ನೇ ಆಶ್ರಯಿಸಿ ಬದುಕುತ್ತಿರುವ ಎಲ್ಲರ ಮೇಲೂ ಇದೆ. ಆ ನಿಟ್ಟಿನಲ್ಲಿ ಈ ವಾರದ ‘ನಮ್ಮ ಜನ ನಮ್ಮ ಧ್ವನಿ’ ಅಂಕಣ ಬೆಳಕು ಚೆಲ್ಲಿದೆ.
ಒಳಚರಂಡಿ ನೀರು ನದಿಗೆ ಹರಿಸಬೇಡಿ. ಎಸ್‌ಟಿಪಿಗಳನ್ನು ಸರಿಪಡಿಸಿ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ ನದಿ ಪಾತ್ರದ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಕೊಟ್ಟಿದ್ದೇವೆ. ಕಾಲಮಿತಿಯಲ್ಲಿ ಸರಿ ಆಗಲಿದೆ–ಎಂ.ಎಸ್. ಮಹೇಶ್ವರಪ್ಪ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ
ಗಣಿಗಾರಿಕೆಯಿಂದ ತುಂಗ–ಭದ್ರೆ ರಕ್ಷಿಸಲು ಈ ಹಿಂದೆ ಮಾಡಿದ್ದ ಜನಾಂದೋಲನ ಈಗ ಮಾಲಿನ್ಯ ಮುಕ್ತಗೊಳಿಸುವ ವಿಚಾರದಲ್ಲೂ ಮಾಡಬೇಕಿದೆ. ನದಿಯ ವಿಚಾರದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಕೈ ಜೋಡಿಸಲಿದ್ದೇವೆ–ಕೆ.ಪಿ.ಶ್ರೀಪಾಲ್ ಪೀಪಲ್ಸ್ ಲಾಯರ್ ಫೋರಂ ಶಿವಮೊಗ್ಗ
ಶಿವಮೊಗ್ಗ ನಗರದ ಬಹುತೇಕ ಎಸ್‌ಟಿಪಿಗಳು ಕೆಲಸ ಮಾಡುತ್ತಿಲ್ಲ. ಎಲ್ಲ ಕೊಳಚೆಯೂ ನದಿಗೆ ಸೇರುತ್ತಿದೆ. ಜೊತೆಗೆ ಘನ ತ್ಯಾಜ್ಯವೂ ಸೇರ್ಪಡೆ ಆಗುತ್ತಿದೆ. ತುಂಗಾ ನದಿ ಮಾಲಿನ್ಯದ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದೇವೆ– ಶ್ರೀಪತಿ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.