ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2026ರ ಡಿಸೆಂಬರ್‌ಗೆ ಎಲ್ಲ ರೈಲ್ವೆ ಯೋಜನೆ ಪೂರ್ಣ: ಸಚಿವ ವಿ. ಸೋಮಣ್ಣ ಭರವಸೆ

Published 13 ಜುಲೈ 2024, 14:20 IST
Last Updated 13 ಜುಲೈ 2024, 14:20 IST
ಅಕ್ಷರ ಗಾತ್ರ

ಮಧುಗಿರಿ: 2026ರ ಡಿಸೆಂಬರ್‌ ವೇಳೆಗೆ ರಾಜ್ಯದ ಎಲ್ಲಾ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.

ಪಟ್ಟಣದ ಒಕ್ಕಲಿಗ ಸಮುದಾಯ ಭವನದಲ್ಲಿ ಶನಿವಾರ ಜೆಡಿಎಸ್- ಬಿಜೆಪಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ರೈಲ್ವೆ ಇಲಾಖೆ ಕಾಮಗಾರಿಗಳಿಗೆ ಹಲವು ವರ್ಷಗಳಿಂದ ಜಾಗ ನೀಡುತ್ತಿಲ್ಲ. ಹಾಗಾಗಿ ರೈಲ್ವೆ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತಿದೆ. ಜಾಗ ದೊರಕಿಸಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು, ಮುಖ್ಯಮಂತ್ರಿ ಈಗಾಗಲೇ ಎಲ್ಲ ಕಂದಾಯ ಅಧಿಕಾರಿಗಳ ಸಭೆ ಕರೆದು ಜಾಗ ಒದಗಿಸಿಕೊಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಮುಂದಿನ ಎರಡು ವರ್ಷದೊಳಗೆ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಖಾತೆ ಸಚಿವರನ್ನು ಕರೆದು ಉದ್ಘಾಟನೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ ವೇ ಹಾಕಬೇಕು ಎನ್ನುವುದು ಜನರ ಬಯಕೆ. ಈ ಯೋಜನೆ ಜಾರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಮಾಜಿ ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ಸಚಿವ ಸೋಮಣ್ಣ ಒಳ್ಳೆಯ ಆಡಳಿತಗಾರ. ಈ ಭಾಗದ ಜನರ ಕಷ್ಟಕ್ಕೆ ಸ್ಪಂದಿಸುವ ವಿಶ್ವಾಸವಿದೆ. ಸಚಿವರು ರೈಲ್ವೆ, ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸಲು ಶ್ರಮಿಸಬೇಕು. ಏಕಶಿಲಾ ಬೆಟ್ಟವನ್ನು ಪ್ರವಾಸೋದ್ಯಮ ಕೇಂದ್ರ ಮಾಡಬೇಕು. ಬಿಜೆಪಿ-ಜೆಡಿಎಸ್ ಒಗ್ಗಟಾಗಿ ಕೆಲಸ ಮಾಡುವ ಮೂಲಕ ಪಕ್ಷ ಸಂಘಟಿಸಲಾಗುವುದು ಎಂದರು.

ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಬಿ.ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ನ.ಲ.ನರೇಂದ್ರಬಾಬು, ಬಿಜೆಪಿ ಜಿಲ್ಲಾ ಅಧ್ಯಕ್ಷ ಹನುಮಂತೇ ಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ. ಅಂಜಿನಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗೇಂದ್ರ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಪುರಸಭೆ ಸದಸ್ಯರಾದ ಎಂ.ಎಲ್.ಗಂಗರಾಜು, ಎಂ.ಆರ್. ಜಗನ್ನಾಥ್, ಕೆ. ನಾರಾಯಣ್, ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT