ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಪಟೂರು: ಡ್ರೋನ್ ಬಳಸಿ ನ್ಯಾನೊ ಯೂರಿಯಾ ಸಿಂಪಡಣೆ

ಬೆನ್ನಾಯಕನಹಳ್ಳಿ ಗ್ರಾಮದಲ್ಲಿ ಪ್ರಾತ್ಯಕ್ಷಿಕೆ
Published : 12 ಸೆಪ್ಟೆಂಬರ್ 2024, 14:08 IST
Last Updated : 12 ಸೆಪ್ಟೆಂಬರ್ 2024, 14:08 IST
ಫಾಲೋ ಮಾಡಿ
Comments

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಬೆನ್ನಾಯಕನಹಳ್ಳಿ ಗ್ರಾಮದಲ್ಲಿ ರಾಗಿ ಬೆಳೆಗೆ ಕೃಷಿ ಡ್ರೋನ್ ಬಳಸಿ ನ್ಯಾನೊ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಯಿತು.

ಇಫ್ಕೋ ಸಂಸ್ಥೆ ಸಹಯೋಗದೊಂದಿಗೆ ಆತ್ಮ ಯೋಜನೆ ಮತ್ತು ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ 34 ಕೋಟಿ ಇದ್ದು, ಆಹಾರ ಧಾನ್ಯಗಳ ಉತ್ಪಾದನೆ 51 ಮಿಲಿಯನ್ ಟನ್ ಇತ್ತು. ನಂತರದ ದಿನಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆ ಕೃಷಿಗೆ ಅಗತ್ಯ ಭೂಮಿ ಕಡಿಮೆಯಾಗಿದೆ. ಸದ್ಯ ದೇಶದ ಜನಸಂಖ್ಯೆ 141 ಕೋಟಿ ಇದೆ. ಏರುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆ ಜಾರಿಗೊಳಿಸಲಾಗಿದೆ. ಆಹಾರ ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿ. ಯೋಜನೆಯಡಿ ತಾಲ್ಲೂಕಿನ 500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದೆ ಎಂದರು.

ಇಫ್ಕೊ ಸಂಸ್ಥೆ ಪ್ರತಿನಿಧಿ ಚಿದಂಬರಮೂರ್ತಿ ಮಾತನಾಡಿ, ಯೂರಿಯಾವನ್ನು ಮೇಲುಗೊಬ್ಬರವಾಗಿ ಬೆಳೆಗಳಿಗೆ ಎರಚುವುದು ಪ್ರಸ್ತುತ ಚಾಲ್ತಿಯಲ್ಲಿದ್ದು, ಯೂರಿಯಾ ಹರಳುಗಳು ಸಸ್ಯಗಳ ಬೇರುಗಳಿಗೆ ಸೂಕ್ತವಾಗಿ ದೊರೆಯುವುದಿಲ್ಲ. ತಾಪಮಾನ ಹೆಚ್ಚಾದಂತೆ ಯೂರಿಯಾದಲ್ಲಿನ ಪೋಷಕಾಂಶವು ಆವಿಯಾಗಬಹುದು. ಹೆಚ್ಚಿನ ಮಳೆಯಿಂದ ಕೊಚ್ಚಿ ಹೋಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ನ್ಯಾನೊ ಯೂರಿಯ ಸಿಂಪಡಣೆ ಯೋಗ್ಯ ಮಾರ್ಗವಾಗಿದೆ ಎಂದು ಹೇಳಿದರು.

ಬೆನ್ನಾಯಕನಹಳ್ಳಿ ಗ್ರಾಮದಲ್ಲಿ ರಾಗಿ ಬೆಳೆಗೆ ಕೃಷಿ ಡ್ರೋನ್ ಮೂಲಕ ಯುರಿಯೂ ಸಿಂಪಡಣೆಗೆ ಚಾಲನೆ ನೀಡಿದ ಶಾಸಕ ಕೆ.ಷಡಕ್ಷರಿ
ಬೆನ್ನಾಯಕನಹಳ್ಳಿ ಗ್ರಾಮದಲ್ಲಿ ರಾಗಿ ಬೆಳೆಗೆ ಕೃಷಿ ಡ್ರೋನ್ ಮೂಲಕ ಯುರಿಯೂ ಸಿಂಪಡಣೆಗೆ ಚಾಲನೆ ನೀಡಿದ ಶಾಸಕ ಕೆ.ಷಡಕ್ಷರಿ

ಸಹಾಯಕ ಕೃಷಿ ನಿರ್ದೇಶಕ ಪವನ್ ಮಾತನಾಡಿ, ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ 50 ಹಾಗೂ ಪರಿಶಿಷ್ಟ ಜಾತಿ, ವರ್ಗದ ರೈತರಿಗೆ ಶೇ 90ರಷ್ಟು ಸಹಾಯಧನದಲ್ಲಿ ವಿವಿಧ ಕೃಷಿ ಯಾಂತ್ರೋಪಕರಣಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೃಷಿ ಉಪ ನಿರ್ದೇಶಕ ಹುಲಿರಾಜ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಸದಾಶಿವಯ್ಯ, ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜು, ಸಹಾಯಕ ಕೃಷಿ ನಿರ್ದೇಶಕ ಪವನ್ ಎಂ.ಪಿ., ಇಫ್ಕೊ ಸಂಸ್ಥೆಯ ಪ್ರತಿನಿಧಿ ಚಿದಂಬರಮೂರ್ತಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT