ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ನೋಂದಣಿಗೆ ನಿರಾಸಕ್ತಿ: ಖಾತ್ರಿಯಾಗದ ಆಹಾರ ಗುಣಮಟ್ಟ

Published : 6 ಜುಲೈ 2024, 5:17 IST
Last Updated : 6 ಜುಲೈ 2024, 5:17 IST
ಫಾಲೋ ಮಾಡಿ
Comments

ತುಮಕೂರು: ಹಾಸ್ಟೆಲ್‌, ನ್ಯಾಯಬೆಲೆ ಅಂಗಡಿ, ಅಂಗನವಾಡಿ ಕೇಂದ್ರಗಳು ಆಹಾರ ಗುಣಮಟ್ಟ ಪ್ರಾಧಿಕಾರದಲ್ಲಿ ನೋಂದಾಯಿಸುವುದು ಕಡ್ಡಾಯ. ಆದರೆ, ಜಿಲ್ಲೆಯಲ್ಲಿ ನೋಂದಣಿ ಕಾರ್ಯವೇ ಆಗುತ್ತಿಲ್ಲ!

‘ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯಗಳು, ಹೋಟೆಲ್‌ಗಳು, ಆಹಾರ ಸಂಸ್ಕರಣಾ ಘಟಕಗಳು ಕಡ್ಡಾಯವಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ (ಎಫ್‌ಎಸ್‌ಎಸ್‌ಐಎ) ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಇತ್ತೀಚೆಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಈ ಸೂಚನೆಯ ನಂತರವೂ ನೋಂದಣಿ ಕೆಲಸ ಆರಂಭವಾಗಿಲ್ಲ.

ವರ್ಷಕ್ಕೆ ₹12 ಲಕ್ಷ ಆದಾಯ ಬರುವ ಹೋಟೆಲ್‌, ರೆಸ್ಟೋರೆಂಟ್‌, ಅಕ್ಕಿ ಗಿರಣಿ, ಅಡುಗೆ ಎಣ್ಣೆ ತಯಾರಿಸುವ ಕಾರ್ಖಾನೆ ಸೇರಿದಂತೆ ಇತರೆ ಆಹಾರ ಸಂಸ್ಕರಣಾ ಘಟಕಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ₹12 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದವರು ಪರವಾನಗಿ ಪಡೆಯಬೇಕಿದೆ. ಆದರೆ ಜಿಲ್ಲೆಯ ಸಾಕಷ್ಟು ಮಂದಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ.

ಹೋಟೆಲ್‌, ರೆಸ್ಟೋರೆಂಟ್‌, ಬೇಕರಿಗಳ ನೋಂದಣಿಯೂ ಸರಿಯಾಗಿ ಆಗುತ್ತಿಲ್ಲ. ಹೆಚ್ಚಿನ ಸಂಖ್ಯೆಯ ಜನರು ಸೇವಿಸುವ ಆಹಾರ ಪದಾರ್ಥಗಳ ಗುಣಮಟ್ಟ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ. ಆಹಾರ ತಿನ್ನಲು ಯೋಗ್ಯವೇ? ಎಂಬುವುದನ್ನು ಯಾರೂ ಖಚಿತಪಡಿಸುತ್ತಿಲ್ಲ. ಬಹುತೇಕ ಹೋಟೆಲ್‌, ಬೇಕರಿಗಳ ಮಾಲೀಕರು ನೋಂದಣಿ, ಪರವಾನಗಿ ಪಡೆದಿಲ್ಲ.

ಜಿಲ್ಲೆಯಲ್ಲಿ ಹೋಟೆಲ್‌, ರೆಸ್ಟೋರೆಂಟ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಐಷಾರಾಮಿ ಹೋಟೆಲ್‌ಗಳಿಂದ ಹಿಡಿದು ಗೂಡಂಗಡಿಗಳ ವರೆಗೆ ವ್ಯಾಪಾರ ವಹಿವಾಟು ಜಾಸ್ತಿಯಾಗುತ್ತಿದೆ. ಗುಣಮಟ್ಟದ ಮೇಲೆ ನಿಯಂತ್ರ ಇಲ್ಲವಾಗಿದೆ.

ಹಾಸ್ಟೆಲ್‌ಗಳಲ್ಲೂ ಇದೇ ಸಮಸ್ಯೆ ಇದೆ. ಅಕ್ಕಿ, ಗೋಧಿ, ರಾಗಿ ಹಿಟ್ಟಿನಿಂದ ಹಿಡಿದು ಪ್ರತಿಯೊಂದು ಉತ್ಪನ್ನ ತಯಾರಿಸುವ ಸಂಸ್ಥೆಗಳು ಎಫ್‌ಎಸ್‌ಎಸ್‌ಎಐನಲ್ಲಿ ನೋಂದಣಿ ಮಾಡಿಸಬೇಕು. ‘ಹಾಸ್ಟೆಲ್‌ಗಳಲ್ಲಿ ಸ್ಥಳೀಯವಾಗಿ ಸಿಗುವ ಅಡುಗೆ ಎಣ್ಣೆ ಬಳಸುತ್ತಿದ್ದಾರೆ. ಇದು ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ’ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.

‘ಆಹಾರ ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕಳಪೆ ಆಹಾರ ಪೂರೈಸುವವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿಲ್ಲ. ತಪ್ಪು ಮಾಡಿದವರಿಗೆ ದಂಡ ವಿಧಿಸಿ, ಕಠಿಣ ಕ್ರಮಕೈಗೊಂಡರೆ ಎಲ್ಲರು ಸರಿಯಾಗುತ್ತಾರೆ. ಇಲ್ಲದಿದ್ದರೆ ಜನರಿಗೆ ಗುಣಮಟ್ಟದ ಆಹಾರ ಸಿಗುವುದೇ ಇಲ್ಲ’ ಎಂದು ನಗರದ ನಿವಾಸಿ ಸದಾಶಿವಯ್ಯ ಪ್ರತಿಕ್ರಿಯೆ ನೀಡಿದರು.

ಗುಣಮಟ್ಟ ಪ್ರಾಧಿಕಾರದಲ್ಲಿ ನೋಂದಣಿ ಕಡ್ಡಾಯ ನೋಂದಣಿ ಮರೆತ ಹೋಟೆಲ್‌ ಮಾಲೀಕರು ಕ್ರಮಕ್ಕೆ ಮುಂದಾಗದ ಅಧಿಕಾರಿಗಳು
5 ಸಾವಿರ ಪರವಾನಗಿ
ಜಿಲ್ಲೆಯಲ್ಲಿ 5348 ಹೋಟೆಲ್‌ ರೆಸ್ಟೋರೆಂಟ್‌ ಬೇಕರಿ ಸೇರಿದಂತೆ ಆಹಾರ ಪೂರೈಸುವ ಸಂಸ್ಥೆಗಳು ಆಹಾರ ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದಿವೆ. ಜಿಲ್ಲೆಯಲ್ಲಿ ಬೀದಿಗೆ ಒಂದರಂತೆ ಹೋಟೆಲ್‌ಗಳು ಶುರುವಾಗುತ್ತಿವೆ. ಅದರಲ್ಲಿ ಕೆಲವೇ ಕೆಲವು ನೋಂದಣಿಯಾಗಿ ಪರವಾನಗಿ ಪಡೆದುಕೊಂಡಿವೆ. ನೋಂದಣಿಯಾಗಲು ₹100 ಪರವಾನಗಿ ಪಡೆಯಲು ₹2 ಸಾವಿರ ಶುಲ್ಕ ನೀಡಬೇಕು. ಆಸಕ್ತರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಆಹಾರ ಗುಣಮಟ್ಟ ಪ್ರಾಧಿಕಾರದ ಕಚೇರಿ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದು.
ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ
ಜಿಲ್ಲಾಧಿಕಾರಿ ಸೂಚನೆ ನಂತರ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಕ್ಷರ ದಾಸೋಹ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಲಿಖಿತ ರೂಪದಲ್ಲಿ ತಿಳಿಸಲಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಪಿ.ಹರೀಶ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT