ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ | ವಿದ್ಯುತ್ ಸಂಪರ್ಕಕ್ಕೆ ಆಧಾರ್ ಜೋಡಣೆ ವಿರೋಧಿಸಿ ಪ್ರತಿಭಟನೆ

Published 25 ಜುಲೈ 2024, 4:26 IST
Last Updated 25 ಜುಲೈ 2024, 4:26 IST
ಅಕ್ಷರ ಗಾತ್ರ

ಪಾವಗಡ: ಕೃಷಿ ಉದ್ದೇಶಕ್ಕಾಗಿ ಪಡೆಯಲಾದ ವಿದ್ಯುತ್ ಸಂಪರ್ಕಕ್ಕೆ ಆಧಾರ್ ಜೋಡಣೆ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬೆಸ್ಕಾಂ ಕಚೇರಿ ಮುಂಭಾಗ ಬುಧವಾರ ಪ್ರತಿಭಟಿಸಿದರು.

ಆಧಾರ್ ಜೋಡಣೆಯಿಂದ ರೈತರಿಗೆ ಸಮಸ್ಯೆಯಾಗಲಿದೆ. ಮಳೆ– ಬೆಳೆ ಇಲ್ಲದೆ ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಹೊಸದಾಗಿ ವಿದ್ಯುತ್ ಶುಲ್ಕ ವಿಧಿಸುವ ಹುನ್ನಾರ ನಡೆಯುತ್ತಿದೆ. ರೈತರಿಗೆ ಅನುಕೂಲ ಮಾಡಿಕೊಡುವುದಕ್ಕೆ ಬದಲಾಗಿ ಸರ್ಕಾರಗಳು ರೈತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿದ್ಯುತ್‌ ಪರಿವರ್ತಕ ಅಳವಡಿಸುವ ಸ್ಥಿತಿಯಲ್ಲಿ ರೈತರಿದ್ದಾರೆ. ಇದೀಗ ಆಧಾರ್ ಜೋಡಣೆ ಮಾಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಕೊಳವೆ ಬಾವಿ ಕೊರೆಸಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ ರೈತರಿಗೆ ವಿದ್ಯುತ್ ಸಂಪರ್ಕ ಪಡೆಯುವುದೇ ತಲೆನೋವಾಗಿ ಪರಿಣಮಿಸಿದೆ ಎಂದು ದೂರಿದರು.

ಸರ್ಕಾರಗಳು ಈ ಕೂಡಲೇ ರೈತ ವಿರೋಧಿ ನೀತಿ ಕೈ ಬಿಡಬೇಕು. ಆಧಾರ್ ಜೋಡಣೆ ಸ್ಥಗಿತಗೊಳಿಸಬೇಕು. ಈ ಹಿಂದಿನಂತೆ ₹20 ಸಾವಿರ ಕಟ್ಟಿಸಿಕೊಂಡು ಪರಿವರ್ತಕ ಅಳವಡಿಸುವುದು ಸೇರಿದಂತೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ರೈತ ಮುಖಂಡ ಸದಾಶಿವಪ್ಪ, ವೀರಭದ್ರಪ್ಪ, ಚಿತ್ತಯ್ಯ, ರಾಮಾಂಜಿ, ಶಿವು, ಅಂಜಿನಪ್ಪ, ಹನುಮಂತರಾಯ, ಈರಣ್ಣ, ನಾಗರಾಜ, ಕೃಷ್ಣರಾವ್, ಸಿದ್ಧಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT