ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ವಿ.ಸೋಮಣ್ಣ ಮುಂದಿರುವ ಸವಾಲಿಗೆ ಪರಿಹಾರ ಸಿಗುವುದೆ?

ಜಿಲ್ಲೆಯ ಜನರ ಋಣ ತೀರಿಸುವ ಹೊಣೆ, ಜವಾಬ್ದಾರಿ ಸಚಿವರ ಮೇಲಿದೆ
Published 12 ಜೂನ್ 2024, 7:08 IST
Last Updated 12 ಜೂನ್ 2024, 7:08 IST
ಅಕ್ಷರ ಗಾತ್ರ

ತುಮಕೂರು: ಉತ್ತರ ಗೊತ್ತಿರುವ ಪ್ರಶ್ನೆ ಕೇಳಿದರೆ ಉತ್ತರಿಸಲು ಎಷ್ಟು ಸುಲಭ ಅಲ್ಲವೆ? ಈಗ ಕೇಂದ್ರದಲ್ಲಿ ಮಂತ್ರಿಯಾಗಿರುವ ಜಿಲ್ಲೆಯ ಸಂಸದ ವಿ.ಸೋಮಣ್ಣ ಅವರಿಗೂ ಅಂತಹುದೇ ಪ್ರಶ್ನೆ, ಸವಾಲುಗಳು ಎದುರಾಗಿವೆ.

‘ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ’ ಸಚಿವರ ಮುಂದಿರುವ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬಂಧಿಸಿದ ಖಾತೆಗಳು ಅವರ ಕೈಗೆ ಸಿಕ್ಕಿವೆ. ಬಯಸದೇ ಸಚಿವ ಸ್ಥಾನ ಒಲಿದು ಬಂದಿದ್ದು, ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವರಾಗಿದ್ದಾರೆ.

ಸೋಮಣ್ಣ ಅವರ ರಾಜಕೀಯ ಜೀವನವೇ ಮುಗಿಯಿತು ಎನ್ನುವಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರು ಕೈ ಹಿಡಿದಿದ್ದಾರೆ. ತಮ್ಮದೇ ಕ್ಷೇತ್ರ ಗೋವಿಂದರಾಜ ನಗರದಲ್ಲಿ ಸ್ಪರ್ಧೆಗೆ ಅವಕಾಶ ಸಿಗಲಿಲ್ಲ. ಮೈಸೂರು, ಚಾಮರಾಜನಗರದಲ್ಲಿ ಸೋತು ಹತಾಶರಾಗಿದ್ದರು. ಜಿಲ್ಲೆಯಲ್ಲಿ ಅದೇ ಪರಿಸ್ಥಿತಿ ಮುಂದುವರಿದಿದ್ದರೆ ಅವರ ರಾಜಕೀಯ ಜೀವನಕ್ಕೆ ದೊಡ್ಡ ಪೆಟ್ಟು ಬೀಳುತಿತ್ತು. ಆದರೆ ಜಿಲ್ಲೆಯ ಜನರು ಒಂದು ರೀತಿಯಲ್ಲಿ ರಾಜಕೀಯ ಮರುಹುಟ್ಟು ನೀಡಿದ್ದಾರೆ. ಈಗ ಒಂದಷ್ಟು ಅಭಿವೃದ್ಧಿ ಕೆಲಸ ಮಾಡಿ ಜನರ ಋಣ ತೀರಿಸುವ ಹೊಣೆ, ಜವಾಬ್ದಾರಿ ಅವರ ಮೇಲಿದೆ.

ರೈಲ್ವೆ ಯೋಜನೆ: ಸಚಿವರ ಬಳಿ ರೈಲ್ವೆ ಖಾತೆ ಇದ್ದು, ಜಿಲ್ಲೆಯಲ್ಲಿ ಕುಂಟುತ್ತಾ ಸಾಗಿರುವ ರೈಲ್ವೆ ಯೋಜನೆಗಳಿಗೆ ಅಗತ್ಯ ಅನುದಾನ ನೀಡಿ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ನೋಡಿಕೊಳ್ಳಬೇಕಿದೆ.

ತುಮಕೂರು– ರಾಯದುರ್ಗ ರೈಲ್ವೆ ಯೋಜನೆಗೆ ದಶಕ ಕಳೆದಿದ್ದರೂ ಇನ್ನೂ ಮುಂದೆ ಸಾಗಿಲ್ಲ. ಆಂಧ್ರಪ್ರದೇಶದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೆ, ರಾಜ್ಯದಲ್ಲಿ ಆಮೆ ವೇಗದಲ್ಲಿ ಸಾಗಿದೆ. ಇನ್ನೂ ಸಾಕಷ್ಟು ಕಡೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯೇ ಮುಗಿದಿಲ್ಲ. ಅಲ್ಲಲ್ಲಿ ಹಳಿ ಜೋಡಿರುವ ಕೆಲಸ ನಡೆದಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ.

ತುಮಕೂರು– ದಾವಣಗೆರೆ ರೈಲು ಮಾರ್ಗದ ಯೋಜನೆ ನಿದ್ರಾವಸ್ಥೆಯಲ್ಲಿದೆ. ಈ ಯೋಜನೆ ಅಂದುಕೊಂಡಂತೆ ಮುಗಿದಿದ್ದರೆ ಈ ವೇಳೆಗಾಗಲೇ ರೈಲುಗಳ ಸಂಚಾರ ಆರಂಭವಾಗಬೇಕಿತ್ತು. ಈ ಮಾರ್ಗ ಪೂರ್ಣಗೊಂಡರೆ ಉತ್ತರ ಕರ್ನಾಟಕ ಭಾಗಕ್ಕೆ ತೆರಳುವ ಜನರಿಗೆ ಪ್ರಯಾಣ ಅವಧಿಯಲ್ಲಿ ಎರಡು ಗಂಟೆ ಉಳಿತಾಯವಾಗುತ್ತದೆ. ಆ ಕಾರಣಕ್ಕಾಗಿಯೇ ಸಾಕಷ್ಟು ಒತ್ತಾಯಗಳು ಕೇಳಿಬಂದಿದ್ದರೂ ಯಾರೊಬ್ಬರೂ ಆಸಕ್ತಿ ತೋರಿಸುತ್ತಿಲ್ಲ.

ತಕ್ಷಣ ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ರೈಲ್ವೆಗೆ ಜಮೀನು ಹಸ್ತಾಂತರಿಸಿ ಕೆಲಸ ಆರಂಭಿಸಬೇಕಿದೆ. ಯುದ್ಧೋಪಾದಿಯಲ್ಲಿ ಕೆಲಸ ನಡೆದರೂ ಪೂರ್ಣಗೊಳ್ಳಲು ನಾಲ್ಕೈದು ವರ್ಷ ತೆಗೆದುಕೊಳ್ಳುತ್ತದೆ. ತೆವಳುತ್ತಾ ಸಾಗಿರುವ ಯೋಜನೆಗೆ ಸಚಿವರು ವೇಗ ನೀಡಬೇಕಿದೆ.

ನೀರಾವರಿ: ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ಯನ್ನಾಗಿ ಘೋಷಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದ್ದರೂ ಪರಿಹಾರ ಸಿಕ್ಕಿಲ್ಲ. ಈಗ ಜಲಶಕ್ತಿ ಖಾತೆ ಸೋಮಣ್ಣ ಬಳಿ ಇದ್ದು, ಈ ಬೇಡಿಕೆ ಪರಿಗಣಿಸುವುದು ಕಷ್ಟಕರವಾಗಲಾರದು. ಈಗಾಗಲೇ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ₹5,300 ಕೋಟಿ ನೆರವು ಘೋಷಿಸಿದ್ದು, ತಕ್ಷಣ ಒತ್ತಡ ತಂದು ಹಣ ಬಿಡುಗಡೆ ಮಾಡಿಸಬೇಕಿದೆ. ಜತೆಗೆ ಇಲಾಖೆಯಿಂದ ಮತ್ತಷ್ಟು ನೆರವು ಕೊಡಿಸಿ, ಕಾಮಗಾರಿಗೆ ವೇಗ ನೀಡಿದರೆ ಜಿಲ್ಲೆಗೆ ಭದ್ರಾ ನೀರು ಹರಿಸಬಹುದಾಗಿದೆ.

ನಿಧಾನಗತಿಯಲ್ಲಿ ಸಾಗುತ್ತಿರುವ ಎತ್ತಿನಹೊಳೆ ಯೋಜನೆಗೆ ಕೇಂದ್ರದಿಂದ ಆರ್ಥಿಕ ನೆರವು ಕೊಡಿಸಿ ಕಾಮಗಾರಿ ಪೂರ್ಣಗೊಳಿಸಿ, ಜಿಲ್ಲೆಗೆ ನೀರು ಹರಿಸುವಂತೆ ಮಾಡಬೇಕಿದೆ. ಜಿಲ್ಲೆಯಲ್ಲಿ ಕಾಮಗಾರಿ ಮುಗಿದ ನಂತರ ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲೂ ಕೆಲಸ ಮುಂದುವರಿಸಬೇಕಿದೆ. ಕಳೆದ ಎರಡು ವರ್ಷದಿಂದಲೂ ‘ಜಿಲ್ಲೆಗೆ ಈ ವರ್ಷದ ಡಿಸೆಂಬರ್ ವೇಳೆಗೆ ನೀರು ಬರಲಿದೆ’ ಎಂದು ಭರವಸೆ ನೀಡುವುದು ಬಿಟ್ಟರೆ, ಕೆಲಸ ಮಾತ್ರ ಚುರುಕಾಗಿಲ್ಲ. ವರ್ಷದಿಂದ ವರ್ಷಕ್ಕೆ ವೆಚ್ಚ ಹೆಚ್ಚುತ್ತಲೇ ಸಾಗಿದ್ದು, ದಶಕಗಳಿಂದ ಕುಂಟುತ್ತಿರುವ ಯೋಜನೆಗೆ ವೇಗ ಕೊಡಿಸಬೇಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆ ಹಳ್ಳ ಹಿಡಿದಿದೆ. ಎಲ್ಲೆಡೆಯಿಂದಲೂ ಅಕ್ರಮದ ಆರೋಪದ ಸುರಿಮಳೆಯೇ ಹರಿದು ಬರುತ್ತಿದೆ. ಈ ಬಗ್ಗೆ ಸಮಗ್ರವಾದ ತನಿಖೆ ನಡೆಸಿ, ಯೋಜನೆ ಜಾರಿಮಾಡಿ, ಜನರ ಮನೆಗೆ ನೀರು ತಲುಪಿಸಬೇಕಿದೆ.

ಬೃಹತ್ ಕೈಗಾರಿಕಾ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಸಹಕಾರ ಪಡೆದು ವಸಂತನರಸಾಪುರ ಕೈಗಾರಿಕಾ ಪ್ರದೇಶದ ಪ್ರಗತಿಗೂ ವೇಗ ನೀಡಬೇಕಿದೆ. ಕೈಗಾರಿಕಾ ಪ್ರದೇಶ ವಿಸ್ತರಣೆಯಾಗಿದ್ದರೂ ಬಹುರಾಷ್ಟ್ರೀಯ ಹಾಗೂ ದೊಡ್ಡ ಮಟ್ಟದ ಕಂಪನಿಗಳು ಬಂದು ಸಾವಿರಾರು ಜನರಿಗೆ ಉದ್ಯೋಗ ಸಿಗುವಂತಹ ವಾತಾವರಣ ನಿರ್ಮಾಣವಾಗಿಲ್ಲ. ಸಾಕಷ್ಟು ಸಂಖ್ಯೆಯ ಜನರಿಗೆ ಉದ್ಯೋಗ ಕೊಡುವಂತಹ ಉದ್ಯಮಗಳ ಆರಂಭಕ್ಕೂ ಪ್ರಯತ್ನ ನಡೆಸಬೇಕಿದೆ.

ಕೊಬ್ಬರಿ: ದೊಡ್ಡ ಸವಾಲು

ತುಮಕೂರು: ರಾಜ್ಯದ ದಕ್ಷಿಣ ಭಾಗದ ರೈತರ ಜೀವನಾಡಿ ಕೊಬ್ಬರಿ ಹಾಗೂ ತೆಂಗಿನ ಕಾಯಿ ಬೆಲೆ ಕುಸಿತದಿಂದ ತೀವ್ರ ಸಂಕಷ್ಟ ಎದುರಾಗಿದೆ. ತಕ್ಷಣಕ್ಕೆ ಬೆಂಬಲ ಬೆಲೆಯನ್ನು ಕನಿಷ್ಠ ಕಿಂಟಲ್‌ಗೆ ₹3 ಸಾವಿರ ಹೆಚ್ಚಳ ಮಾಡಬೇಕು. ವರ್ಷ ಪೂರ್ತಿ ನಾಫೆಡ್ ಕೇಂದ್ರಗಳನ್ನು ತೆರೆದು ಯಾವುದೇ ಮಿತಿ ಇಲ್ಲದೆ ಕೊಬ್ಬರಿ ಖರೀದಿಸಬೇಕು ಎಂಬ ರೈತರ ಬೇಡಿಕೆಗೆ ಸ್ಪಂದಿಸಬೇಕಿದೆ. ತೆಂಗು ಪಾರ್ಕ್ ನಿರ್ಮಾಣದ ಕನಸು ನನಸಾಗಿಲ್ಲ. ತೆಂಗಿನ ಉಪ ಉತ್ಪನ್ನಗಳ ತಯಾರಿಕೆ ಹಾಗೂ ಮೌಲ್ಯವರ್ಧನೆಗೆ ಒತ್ತು ನೀಡಬೇಕಾಗಿದೆ. ಉಪ ಉತ್ಪನ್ನಗಳ ತಯಾರಿಕೆಗೆ ಅಗತ್ಯ ತಂತ್ರಜ್ಞಾನದ ನೆರವು ನೀಡಿ ಮಾರುಕಟ್ಟೆ ಜಾಲ ರೂಪಿಸಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಕಾರವೇ ಹೆಚ್ಚಿನ ಮಟ್ಟದಲ್ಲಿ ಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT